An unconventional News Portal.

ಕುಮಾರಣ್ಣ, ಕಸ್ತೂರಿ ಸುದ್ದಿ ವಾಹಿನಿಯ ಸಿಬ್ಬಂದಿಗಳಿಗೇಕೆ ಸಂಬಳ ನೀಡುತ್ತಿಲ್ಲ?

ಕುಮಾರಣ್ಣ, ಕಸ್ತೂರಿ ಸುದ್ದಿ ವಾಹಿನಿಯ ಸಿಬ್ಬಂದಿಗಳಿಗೇಕೆ ಸಂಬಳ ನೀಡುತ್ತಿಲ್ಲ?

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಡೆತನದ ಸುದ್ದಿ ವಾಹಿನಿ ‘ಕಸ್ತೂರಿ ನ್ಯೂಸ್- 24’ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆಯಾ?

ವಾಹಿನಿಯೊಳಗೆ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಹೀಗೊಂದು ಅನುಮಾನವನ್ನು ಹುಟ್ಟುಹಾಕಿವೆ. ಕಳೆದ 2 ತಿಂಗಳಿನಿಂದ ಇಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಸಂಬಳವನ್ನು ಆಡಳಿತ ಮಂಡಳಿ ನೀಡಿಲ್ಲ. ಜತೆಗೆ, ವಾಹಿನಿಯಿಂದ ಒಂದಷ್ಟು ಜನ ಪತ್ರಕರ್ತರನ್ನು ಹೊರಗೆ ಹಾಕುವ ಪ್ರಕ್ರಿಯೆಗಳು ತೆರೆಮರೆಯಲ್ಲಿ ಆರಂಭವಾಗಿವೆ ಎಂದು ಮೂಲಗಳು ತಿಳಿಸಿವೆ. ಒಂದು ಕಾಲದಲ್ಲಿ ಅಚ್ಚ ಕನ್ನಡದ ವಾಹಿನಿ ಎಂದು ತೆರೆಗೆ ಬಂದಿದ್ದ ಕಸ್ತೂರಿ ಟಿವಿ ಇತ್ತೀಚಿಗೆ ಆರಕ್ಕೂ ಏರದೆ, ಮೂರಕ್ಕೂ ಇಳಿದಿದೆ. ಇದರ ಮುಂದುವರಿದ ಭಾಗವಾಗಿ, ವಾಹಿನಿಯ ಸಿಬ್ಬಂದಿಗಳಿಗೆ ಸಂಬಳ ನೀಡುತ್ತಿಲ್ಲ ಎಂದು ಮೂಲಗಳು ಹೇಳಿವೆ.

ಏನಿದು ಆಂತರಿಕ ಬೆಳವಣಿಗೆ?:

ಕಳೆದ ಎರಡು ತಿಂಗಳಿನಿಂದ ‘ಕಸ್ತೂರಿ ನ್ಯೂಸ್-24’ ಸಿಬ್ಬಂದಿಗಳಿಗೆ ಸಂಬಳ ನೀಡಿಲ್ಲ ಎಂಬ ಮಾಹಿತಿಯನ್ನು ಮೂಲಗಳು ‘ಸಮಾಚಾರ’ಕ್ಕೆ ನೀಡಿವೆ. ಇದರಿಂದಾಗಿ ಇಲ್ಲಿ ಕೆಲಸ ಮಾಡುವ ಬಹುತೇಕರ ಆರ್ಥಿಕತೆ ಸಂಕಷ್ಟದ ಸ್ಥಿತಿಯನ್ನು ತಲುಪಿದೆ. “ನಾವು ಇಲ್ಲಿಗೆ ಬಂದ ದಿನದಿಂದಲೂ ಇದೆ ಕತೆ. ಸರಿಯಾಗಿ ಸಂಬಳ ನೀಡುತ್ತಿಲ್ಲ. ಇತ್ತೀಚೆಗೆ ಕುಮಾರಸ್ವಾಮಿ ಅವರ ಮಗ ನಿಖಿಲ್ ಅಭಿನಯದ ಜಾಗ್ವಾರ್ ಸಿನೆಮಾ ಕನ್ನಡದ ಅತಿ ದೊಡ್ಡ ಬಜೆಟ್ ಸಿನೆಮಾ ಎಂದು ಬಿಂಬಿತವಾಯಿತು. ನಮ್ಮ ವಾಹಿನಿಯೂ ಸೇರಿದಂತೆ ಎಲ್ಲಾ ಮಾಧ್ಯಮಗಳಲ್ಲೂ ಈ ಕುರಿತು ವರದಿಗಳು ಬಂದವು. ಆದರೆ ನಮಗೆ ಮಾತ್ರ ಎರಡು ತಿಂಗಳಿನಿಂದ ಸಂಬಳ ಆಗುತ್ತಿಲ್ಲ. ಹೊರಗೆ ಹೇಳಿಕೊಳ್ಳಲು ತಳಕು; ಆದರೆ ಒಳಗೆ ಇಂತಹ ಹಲವು ಹುಳುಕುಗಳಿವೆ,” ಎಂದು ವಾಹಿನಿಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ಅಳಲು ತೋಡಿಕೊಳ್ಳುತ್ತಾರೆ.

ಈ ಕುರಿತು ವಾಹಿನಿಯ ಸುದ್ದಿ ವಿಭಾಗದ ಮುಖ್ಯಸ್ಥರನ್ನು ‘ಸಮಾಚಾರ’ ಸಂಪರ್ಕಿಸಿದಾಗ, “ಸಂಬಳ ಆಗುತ್ತಿಲ್ಲ ಅಂತೇನಿಲ್ಲ. ಎರಡು- ಮೂರು ತಿಂಗಳಿಗೊಮ್ಮೆ ಸಂಬಳ ನೀಡಲಾಗುತ್ತಿದೆ. ಇದು ಇವತ್ತಿನ ಸಮಸ್ಯೆ ಏನಲ್ಲ. ಮೊದಲಿನಿಂದಲೂ ಕಸ್ತೂರಿಯಲ್ಲಿ ಇಂತಹ ಸಂಸ್ಕೃತಿ ಇದೆ,” ಎಂದರು.

ವಾಹಿನಿಯ ನಿರ್ದೇಶಕರಲ್ಲಿ ಒಬ್ಬರಾದ ಅನಿತಾ ಕುಮಾರಸ್ವಾಮಿಯವರ ಪ್ರತಿಕ್ರಿಯೆಗಾಗಿ ಕಳೆದ ಎರಡು ದಿನಗಳಿಂದ ‘ಸಮಾಚಾರ’ ಸಂಪರ್ಕಿಸಿತಾದರೂ, “ಮೇಡಂ ಬ್ಯುಸಿ ಇದ್ದಾರೆ,” ಎಂಬ ಪ್ರತಿಕ್ರಿಯೆ ಅವರ ಆಪ್ತ ಸಹಾಯಕರಿಂದ ಬಂತು. ನಂತರ ಇಂದು (ಮಂಗಳವಾರ) ಸಂಜೆ 5 ಗಂಟೆ ಒಳಗೆ ಪ್ರತಿಕ್ರಿಯೆ ನೀಡುತ್ತೀವಿ ಎಂಬ ಹುಸಿ ಆಶ್ವಾಸನೆಯೊಂದು ಸಿಕ್ಕಿತು.

ಈ ಹಿಂದೆ, ಮೇ 2015ರಲ್ಲಿ ಇದೇ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ಶರತ್ ಅನಾರೋಗ್ಯದಿಂದ ಸಾವನ್ನಪ್ಪಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಕಸ್ತೂರಿಯಲ್ಲಿ ಸಂಬಳ ನೀಡಲಾಗುತ್ತಿಲ್ಲ ಎಂಬ ವಿಚಾರ ಪ್ರಸ್ತಾಪವಾಗಿತ್ತು.

ಪತ್ರಕರ್ತ ಶರತ್ ಸಾವಿರ ವಿಚಾರ- ಎಫ್ಬಿಯಲ್ಲಿ.

ಪತ್ರಕರ್ತ ಶರತ್ ಸಾವಿರ ವಿಚಾರ- ಎಫ್ಬಿಯಲ್ಲಿ.

ಕನ್ನಡದ ವಾಹಿನಿ:

ಮಾಜಿ ಪ್ರಧಾನಿ ದೇವೇಗೌಡರ ಪುತ್ರ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೂಲತಃ ಸಿನೆಮಾ ಕ್ಷೇತ್ರದಲ್ಲಿದ್ದವರು. ಈ ಹಿಂದೆ ಸಿನೆಮಾ ವಿತರಕರಾಗಿದ್ದರು. ನಂತರ ಸಿನೆಮಾ ನಿರ್ಮಾಣಕ್ಕೂ ಕೈ ಹಾಕಿದರು. ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಅವಧಿಯಲ್ಲಿ ಟಿವಿ ಉದ್ಯಮಕ್ಕೆ ಕಾಲಿಟ್ಟವರು.

ಮೇ. 23, 2014ರಲ್ಲಿ ‘ಅಮೋಘ್ ಬ್ರಾಂಡ್ ಬ್ಯಾಂಡ್’ ಹೆಸರಿನಲ್ಲಿ ಕಂಪನಿಯೊಂದನ್ನು ಹುಟ್ಟು ಹಾಕಲಾಯಿತು. ಇದಕ್ಕೆ ಅನಿತಾ ಕುಮಾರಸ್ವಾಮಿ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದರು ಎಂದು ಕಂಪನಿ ದಾಖಲೆಗಳು ಹೇಳುತ್ತವೆ. ಅವರ ಕುಟುಂಬದ ಅನಸೂಯ ಮಂಜುನಾಥ್, ಆಶಾ ಚಂದ್ರಶೇಖರ್ ನಿರ್ದೇಶಕ ಸ್ಥಾನದಲ್ಲಿದ್ದರು. ಕಬ್ಬಡಿ ಬಾಬು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

ಮುಂದೆ 6 ತಿಂಗಳ ಅಂತರದಲ್ಲಿ  ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ತಲಾ 1 ಕೋಟಿ ಹೂಡಿಕೆ ಬಂಡವಾಳ ಹಾಕುವ ಮೂಲಕ ‘ಕಸ್ತೂರಿ ಟಿವಿ’ಯನ್ನು ಶುರುಮಾಡಿದರು. ಈ ಸಮಯುದಲ್ಲಿ ಅವರಿಗೆ ವಿಜಯ ಬ್ಯಾಂಕ್ 30 ಕೋಟಿ ಸಾಲ ನೀಡಿತು ಎಂದು ಸ್ವತಃ ಕುಮಾರಸ್ವಾಮಿಯವರೇ ಟಿವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಕಸ್ತೂರಿ ಮನೋರಂಜನಾ ವಾಹಿನಿ ಜತೆ ನಂತರ ದಿನಗಳಲ್ಲಿ ಸುದ್ದಿ ವಾಹಿನಿಯನ್ನೂ ಶುರುಮಾಡಿದರು.

ಇದರ ಜತೆಗೆ, 2011ರಲ್ಲಿ ಕುಮಾರಸ್ವಾಮಿ ‘ಸಮಯ ಟಿವಿ’ಯನ್ನು ಖರೀದಿಸಲಿದ್ದಾರೆ ಎಂಬ ಗಾಳಿಸುದ್ದಿಯೂ ಹಬ್ಬಿತ್ತು.

ಜೆಡಿಎಸ್ ಪ್ರತಿಧ್ವನಿ: 

ಮನೋರಂಜನಾ ವಾಹಿನಿಯಾಗಿ ಕಸ್ತೂರಿ ಟಿವಿ ಆರಂಭದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಅದಕ್ಕೆ ಬೇಕಾದ ಹೂಡಿಕೆಯೂ ಚೆನ್ನಾಗಿಯೇ ಇತ್ತು. ಆದರೆ ನಂತರದ ದಿನಗಳಲ್ಲಿ ಅದು ಸೊರಗಲಾರಂಭಿಸಿತು. ಈ ಸಮಯದಲ್ಲಿ ಅದನ್ನು ಮಾರುವ ಆಲೋಚನೆಗೂ ಕುಮಾರಸ್ವಾಮಿ ಕುಟುಂಬ ಬಂದಿತ್ತು. ಒಮ್ಮೆ ‘ಕೊಟ್ಟು- ವಾಪಾಸ್ ತೆಗೆದುಕೊಂಡರು’ ಕೂಡ. ಇದೇ ವೇಳೆಗೆ, ವರ್ಷಗಟ್ಟಲೆ ಅಳೆದು ತೂಗಿ ಸುದ್ದಿವಾಹಿನಿಯನ್ನೂ ಆರಂಭಿಸಿದರಾದರೂ, ಹೇಳಿಕೊಳ್ಳುವ ಮಟ್ಟಕ್ಕೆ ವಾಹಿನಿ ಸದ್ದು ಮಾಡಲಿಲ್ಲ. “ಜಿಡಿಎಸ್ ಸುದ್ದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು ಎಂಬ ನಿಯಮವಿದೆ. ಇದೇ ವಾಹಿನಿಯ ಬೆಳವಣಿಗೆಗೆ ಸಮಸ್ಯೆಯಾಯಿತು,” ಎನ್ನುತ್ತಾರೆ ಕಸ್ತೂರಿ ನ್ಯೂಸ್ನ ಹಳೆಯ ಉದ್ಯೋಗಿಯೊಬ್ಬರು.

ಹೀಗೆ, ಪಕ್ಷದ ಮುಖವಾಣಿಯಂತೆಯೇ ಗುರುತಿಸಿಕೊಂಡಿದ್ದ ವಾಹಿನಿ ಹಲವು ಮುಖ್ಯಸ್ಥರನ್ನು ದಾಟಿಕೊಂಡು ಈ ಹಂತಕ್ಕೆ ಬಂದು ತಲುಪಿದೆ. ಕಸ್ತೂರಿ ಟಿವಿಯ ಮುಖ್ಯಸ್ಥರಾಗಿದ್ದ ರಾಜೇಶ್ ರಾಜಘಟ್ಟ ಕೆಲವು ತಿಂಗಳ ಹಿಂದೆ ಸುದ್ದಿಯಾಗಬಾರದ ವೈಯುಕ್ತಿಕ ಕಾರಣವೊಂದಕ್ಕೆ ಸುದ್ದಿಯಾದರು. ನಂತರ ಅವರನ್ನು ವಾಹಿನಿಯಿಂದ ಹೊರಕ್ಕೆ ಕಳುಹಿಸಲಾಗಿತ್ತು. “ಇದೀಗ ಅವರನ್ನೇ ಮತ್ತೆ ಕರೆತರುವ ಆಲೋಚನೆ ಅನಿತ ಮೇಡಂಗೆ ಇದ್ದಂತಿದೆ,” ಎನ್ನುವುದು ವಾಹಿನಿಯ ಮೂಲಗಳು ನೀಡುವ ಹೇಳಿಕೆ.

ಈ ಎಲ್ಲಾ ಬೆಳವಣಿಗೆಗಳು ಎಲ್ಲಿಗೆ ಹೋಗಿ ನಿಲ್ಲುತ್ತವೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ, ಸಂಬಳ ಇಲ್ಲದೆ ವಾಹಿನಿಯ ಸಿಬ್ಬಂದಿಗಳು ಕಾಯುವುದು ಕಷ್ಟವಿದೆ. ಮುಂದಿನ ಚುನಾಚಣೆಗೆ ಭರದ ಸಿದ್ಧತೆ ನಡೆಸುತ್ತಿರುವ ಕುಮಾರಸ್ವಾಮಿ ಈ ಕುರಿತು ಗಮನ ಹರಿಸುವುದು ಒಳ್ಳೆಯದು.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top