An unconventional News Portal.

ಮೋದಿ ಮೇಲೆ ಲಂಚದ ಆರೋಪ: ಪ್ರಕರಣವನ್ನು ಸುಪ್ರಿಂ ಕೋರ್ಟ್ ಕೈಬಿಟ್ಟಿದ್ದು ಯಾಕೆ?

ಮೋದಿ ಮೇಲೆ ಲಂಚದ ಆರೋಪ: ಪ್ರಕರಣವನ್ನು ಸುಪ್ರಿಂ ಕೋರ್ಟ್ ಕೈಬಿಟ್ಟಿದ್ದು ಯಾಕೆ?

ಸಾಕ್ಷ್ಯಗಳ ಕೊರತೆಯ ಕಾರಣವನ್ನು ಮುಂದೊಡ್ಡಿ ಪ್ರಧಾನಿ ನರೇಂದ್ರ ಮೋದಿ ಮೇಲಿನ 25 ಕೋಟಿ ಲಂಚ ಸ್ವೀಕಾರ ಪ್ರಕರಣವನ್ನು ಸುಪ್ರಿಂ ಕೋರ್ಟ್ ಬುಧವಾರ ಕೈ ಬಿಟ್ಟಿದೆ. ಈ ಮೂಲಕ ರಾಜಕೀಯವಾಗಿ ಧೂಳೆಬ್ಬಿಸಿದ್ದ ಜನಪ್ರಿಯ ‘ಸಹರಾ ಡೈರಿ’ ಪ್ರಕರಣದಲ್ಲಿ ನರೇಂದ್ರ ಮೋದಿ ನಿರಾಳರಾಗಿದ್ದಾರೆ.

ಪ್ರಶಾಂತ್ ಭೂಷಣ್

ಪ್ರಶಾಂತ್ ಭೂಷಣ್

2014ರ ‘ಸಹರಾ ಡೈರಿ’ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಶೇಷ ತನಿಖೆಗೆ ಆದೇಶ ನೀಡುವಂತೆ ವಕೀಲ ಕಂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಬುಧವಾರ ಸರ್ವೋಚ್ಛ ನ್ಯಾಯಾಲಯಕ್ಕೆ ಮತ್ತೊಮ್ಮೆ ಅಫಿದವಿಟ್ ಸಲ್ಲಿಸಿದರು. ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರಿಂ ಕೋರ್ಟ್ ‘ವಿಶೇಷ ತನಿಖಾ ತಂಡದಿಂದ ತನಿಖೆ ಮಾಡುವಂತೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ಅದಕ್ಕೆ ಬೇಕಾದ ಸೂಕ್ತ ಸಾಕ್ಷ್ಯಾಧಾರಗಳಿಲ್ಲ,’ ಎಂದು ಹೇಳಿದೆ. ಈ ಹಿಂದೆ ಸಹರಾ ಕಂಪೆನಿಯಿಂದ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯೂ ಸೇರಿದಂತೆ ಹಲವು ಮುಖ್ಯಮಂತ್ರಿಗಳಿಗೆ ಲಂಚದ ಹಣ ಪಾವತಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

“ಈ ರೀತಿ ಸರಿಯಾದ ಸಾಕ್ಷ್ಯಾಧಾರಗಳಿಲ್ಲದ ಪ್ರಕರಣದಲ್ಲಿ ತನಿಖೆಗೆ ಆದೇಶ ನೀಡಿದರೆ, ಸಂವಿಧಾನಾತ್ಮಕ ಕಾರ್ಯಗಳು ನಡೆಯುವುದಿಲ್ಲ ಮತ್ತು ಪ್ರಾಜಾಪ್ರಭುತ್ವಕ್ಕಿದು ಸುರಕ್ಷಿತವೂ ಅಲ್ಲ,” ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಈ ಹಿಂದೆ ನವೆಂಬರ್ 2014ರಲ್ಲೇ ಸುಪ್ರಿಂ ಕೋರ್ಟ್ ಪ್ರಕರಣದಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂದು ಕೇಸನ್ನು ಕೈ ಬಿಟ್ಟಿತ್ತು. ಆದರೆ ಪ್ರಶಾಂತ್ ಭೂಷಣ್ ಹೊಸ ಅಫಿದವಿಟ್ ಸಲ್ಲಿಸಿದ್ದರಿಂದ ಮತ್ತೆ ವಿಚಾರಣೆ ನಡೆಸಲಾಯಿತು. ಈ ವೇಳೆ ಭೂಷಣ್ “ಸಹರಾ-ಬಿರ್ಲಾ ಪ್ರಕರಣದ ದಾಖಲೆಗಳಲ್ಲಿ ರಾಜಕಾರಣಿಗಳು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬುದು ಋಜುವಾತಾಗಿಲ್ಲ. ಹೀಗಿದ್ದೂ ಅಲ್ಲಿರುವ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸರಿಯಾದ ತನಿಖೆ ಸತ್ಯವನ್ನು ಹೊರಗೆ ತರಬೇಕು,” ಎಂದು ವಾದಿಸಿದರು. ಮಾತ್ರವಲ್ಲ ಸುಪ್ರಿಂ ಕೋರ್ಟಿನ ನಿಯಮಗಳ ಪ್ರಕಾರ ಯಾವುದೇ ಅಪರಾಧ ದಾಖಲಾದರೆ ಮಾತ್ರ ಎಫ್ಐಆರ್ ದಾಖಲಿಸಬೇಕು ಎಂದಿದೆ ಎಂಬುದನ್ನೂ ಈ ಸಂದರ್ಭ ಪ್ರಸ್ತಾಪಿಸಿದರು.

ಆದರೆ ಈ ವಾದವನ್ನು ತಳ್ಳಿ ಹಾಕಿದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ, “ಕಾರ್ಪೋರೇಟ್ ಕಂಪೆನಿಗಳು ಪ್ರಧಾನಿ ಮೋದಿಗೆ ಲಂಚ ನೀಡಿದ್ದಾರೆ ಎನ್ನುವುದಕ್ಕೆ ಪುರಾವೆಗಳೇ ಇಲ್ಲ. ಈ ರೀತಿಯ ದಾಖಲೆಗಳನ್ನು ಕಾನೂನು ಪುರಾವೆಗಳು ಎಂದು ಒಪ್ಪಿಕೊಂಡಿದ್ದೇ ಆದಲ್ಲಿ ದೇಶದಲ್ಲಿ ಯಾರೂ ಸುರಕ್ಷಿತರಲ್ಲ,” ಎಂದು ವಾದಿಸಿದರು. ಕೊನೆಗೆ ಸುಪ್ರಿಂ ಕೋರ್ಟ್ ಪ್ರಕರಣ ಕೈ ಬಿಟ್ಟಿತು.

ಸಹರಾ ಕಂಪೆನಿಯಿಂದ ವಶಕ್ಕೆ ಪಡೆದ ದಾಖಲೆಗಳು

ಸಹರಾ ಕಂಪೆನಿಯಿಂದ ವಶಕ್ಕೆ ಪಡೆದ ದಾಖಲೆಗಳು

ಏನಿದು ‘ಸಹರಾ ಡೈರಿ’?

2013 ಮತ್ತು 2014ರಲ್ಲಿ ಸಹರಾ ಮತ್ತು ಬಿರ್ಲಾ ಕಂಪೆನಿಗಳ ಕಚೇರಿಗಳ ಮೇಲೆ ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ದಾಖಲೆಗಳ ಗುಚ್ಛಕ್ಕೆ ಇಟ್ಟ ಹೆಸರು ‘ಸಹರಾ ಡೈರಿ’.

ಈ ದಾಖಲೆಗಳಲ್ಲಿ ಬೇರೆ ಬೇರೆ ಪಕ್ಷದ ರಾಜಕಾರಣಿಗಳಿಗೆ ಹಣ ಪಾವತಿಯಾದ ವಿವರಗಳ ಪಟ್ಟಿಯೇ ಇತ್ತು ಎನ್ನಲಾಗಿದೆ. ಇದರಲ್ಲಿ ಆವತ್ತಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸೇರಿದಂತೆ ಹಲವರ ಹೆಸರುಗಳಿತ್ತು.  ಲಂಚದ ರೂಪದಲ್ಲಿ ಇವರಿಗೆಲ್ಲಾ ಹಣ ಪಾವತಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಆದರೆ 2014ರಿಂದ ತಣ್ಣಗಾಗಿದ್ದ ಪ್ರಕರಣ ನೋಟ್ ಬ್ಯಾನ್ ವೇಳೆ ಮತ್ತೆ ಚಿಗಿತುಕೊಂಡಿತ್ತು. ಪಾವತಿಯ ವಿವರಗಳಿದ್ದ ಇ-ಮೇಲ್ ನ ಚಿತ್ರವನ್ನು ಪ್ರಶಾತ್ ಭೂಷಣ್ ಟ್ವೀಟ್ ಮಾಡಿ ಪ್ರಕರಣಕ್ಕೆ ಮರುಜೀವ ನೀಡಿದ್ದರು. ಇದೇ ವೇಳೆ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೇಲೆ ವೈಯಕ್ತಿಕ ಲಂಚ ಸ್ವೀಕಾರದ ಆರೋಪವನ್ನೂ ಮಾಡಿದ್ದರು. ವಿಪಕ್ಷಗಳು, ತೆರಿಗೆ ಅಧಿಕಾರಿಗಳು ಸಹರಾ ಗ್ರೂಪ್ ನ ತನಿಖೆ ನಡೆಸದೆ ಪ್ರಧಾನಿಯವರನ್ನು ರಕ್ಷಿಸುತ್ತಿದ್ದಾರೆ ಎಂದೂ ಆರೋಪಿಸಿದ್ದವು. 2016ರ ಆಗಸ್ಟ್ ನಲ್ಲಿ ಒಮ್ಮೆ ಸಹರಾ ಕಂಪೆನಿಯ ವಿಚಾರಣೆಗೆ ಅನುಮತಿ ನೀಡಲಾಗಿತ್ತಾರೂ ಅದನ್ನು ನವೆಂಬರಿನಲ್ಲಿ ಮರು ಆದೇಶ ನೀಡಿ ಹಿಂದಕ್ಕೆ ಪಡದುಕೊಳ್ಳಲಾಗಿತ್ತು.

ಸದ್ಯ ಸುಪ್ರಿಂ ಕೋರ್ಟ್ ತನಿಖೆ ಸಾಧ್ಯವಿಲ್ಲ ಎಂದಿರುವುದರಿಂದ ಪ್ರಧಾನಿ ನರೇಂದ್ರ ಮೋದಿಯೂ ಸೇರಿದಂತೆ ಹಲವು ರಾಜಕಾರಣಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top