An unconventional News Portal.

ಆಧಾರ್ ಕಾರ್ಡ್ ಕಡ್ಡಾಯ ನೆಪ: ಸರಕಾರಿ ಆಸ್ಪತ್ರೆಯ ಹೊರಾಂಗಣದಲ್ಲಿಯೇ ಮಗು ಜನನ

ಆಧಾರ್ ಕಾರ್ಡ್ ಕಡ್ಡಾಯ ನೆಪ: ಸರಕಾರಿ ಆಸ್ಪತ್ರೆಯ ಹೊರಾಂಗಣದಲ್ಲಿಯೇ ಮಗು ಜನನ

ಆಧಾರ್ ಕಾರ್ಡ್‌ನಿಂದಾದ ಅವಾಂತರಗಳು ಆಗಾಗ ಬೆಳಕಿಗೆ ಬರುತ್ತಲೇ ಇವೆ. ಈ ಹಿಂದೆ ಯೋಧನೊಬ್ಬನ ಪತ್ನಿಯನ್ನು ಆಧಾರ್ ಕಾರ್ಡ್ ಇಲ್ಲದೇ ಆಸ್ಪತ್ರೆಯವರು ದಾಖಲಿಸಿಕೊಳ್ಳುವುದಕ್ಕೆ ನಿರಾಕರಿಸಿದ ಹಿನ್ನಲೆಯಲ್ಲಿ  ಅವರು ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು. ಅದನ್ನು ಜನರು ಮರೆಯುವ ಮುನ್ನವೇ, ಹರ್ಯಾಣ ರಾಜ್ಯದ ಗುರುಗಾಂ (ಗುರುಗ್ರಾಮ)ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮತ್ತೊಂದು ಅವಾಂತರ ನಡೆದು ಹೋಗಿದೆ. ಆಧಾರ್ ಕಾರ್ಡ್ ಇಲ್ಲದ ಕಾರಣದಿಂದ ಆಸ್ಪತ್ರೆಯ ಸಿಬ್ಬಂಧಿ ಗರ್ಭಿಣಿಯೊಬ್ಬಳನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಆಕೆ ಆಸ್ಪತ್ರೆಯ ಹೊರಗಡೆಯೇ ಮಗುವಿಗೆ ಜನ್ಮ ನೀಡಿದ್ದಾಳೆ.

ನಡೆದಿದ್ದಾದರೂ ಏನು?:

ಈ ರೀತಿ ಆಧಾರ್‌ನಿಂದ ಸಮಸ್ಯೆ ಅನುಭವಿಸಿದ ಗರ್ಭಿಣಿಯ ಹೆಸರು ಮುನ್ನಿ ಕೇವತ್. ಇವರಿಗೆ ನಿನ್ನೆ (ಶುಕ್ರವಾರ) ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. 25 ವರ್ಷದ ಅವರನ್ನು ಪತಿ ಅರುಣ್ ಕೇವತ್ ಮತ್ತು ಕುಟುಂಬದವರು ಹತ್ತಿರದ ಗುರುಗಾಂ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಆಸ್ಪತ್ರೆಯನ್ನು ತಲುಪಿದ ನಂತರ, ಅಲ್ಲಿನ ಆಸ್ಪತ್ರೆಯ ಸಿಬ್ಬಂಧಿಗಳು ಇವರನ್ನು ಹೆರಿಗೆ ವಾರ್ಡ್‌ಗೆ ಕಳುಹಿಸಿದ್ದಾರೆ.

ಕುಟುಂಬದವರು ತುಂಬು ಗರ್ಭಿಣಿ ಮುನ್ನಿಯವರನ್ನು ಹೆರಿಗೆ ವಾರ್ಡ್‌ಗೆ ಕರೆದುಕೊಂಡು ಹೋಗಿದ್ದಾರೆ, ಅಲ್ಲಿನ ಸಿಬ್ಬಂಧಿ ಮುನ್ನಿಯವರ ಹೆಸರಿನಲ್ಲಿರುವ ಆಧಾರ್ ಕಾರ್ಡ್ ಕೇಳಿದ್ದಾರೆ. ಆದರೆ, ಕುಟುಂಬದವರು ಅವಸರದಲ್ಲಿ ಗರ್ಭಿಣಿಯ ಆಧಾರ್ ಕಾರ್ಡ್‌ನ್ನು ತಮ್ಮೊಟ್ಟಿಗೆ ತೆಗೆದುಕೊಂಡು ಹೋಗಿರಲಿಲ್ಲ. ಈ ಕಾರಣದಿಂದ, ಮುನ್ನಿಯವರ ಪತಿ ಆಧಾರ್ ಕಾರ್ಡ್ ಇಲ್ಲ, ಆಧಾರ್ ನಂಬರ್ ನೀಡುವುದಾಗಿ ಹೇಳಿದ್ದಾರೆ. ಆದರೆ ಹೆರಿಗೆ ವಾರ್ಡ್‌ ವೈದ್ಯೆ ಹಾಗೂ ಸಿಬ್ಬಂದಿ, “ಆಧಾರ್‌ ಕಾರ್ಡ್‌ ತಂದರೆ ಮಾತ್ರ ಅಡ್ಮಿಟ್‌ ಮಾಡಿಕೊಳ್ಳೋದು. ಇಲ್ಲದೇ ಇದ್ದರೆ ಇಲ್ಲಿ ಜಾಗವಿಲ್ಲ ಚಿಕಿತ್ಸೆಯೂ ಇಲ್ಲ,” ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದ್ದಾರೆ.

ಕೊನೆಗೆ ಅನಿವಾರ್ಯವಾಗಿ ಪತಿ ಅರುಣ್‌ ಕೇವತ್ ತನ್ನ ಪತ್ನಿಯನ್ನು ಸಂಬಂಧಿಕರಿಗೆ ಜೊತೆ ಬಿಟ್ಟು ಆಧಾರ್‌ ಕಾರ್ಡ್‌ ತರಲು ಹೊರಗಡೆ ಹೋಗಿದ್ದಾರೆ.  ಇತ್ತ, ಹೆರಿಗೆ ವಾರ್ಡ್‌ ಸಿಬ್ಬಂಧಿಗಳು ಗರ್ಬಿಣಿ ಮುನ್ನಿಯವರನ್ನು ಜನರಲ್ ವಾರ್ಡ್‌ಗೆ ಸ್ಥಳಾಂತರಿಸಲು ಹೇಳಿದ್ದಾರೆ. ಹೀಗಾಗಿ ಸಂಬಂಧಿಕರು ಮತ್ತೆ ಜನರಲ್ ವಾರ್ಡ್‌‌ಗೆ ಮುನ್ನಿಯನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ, ಅಲ್ಲಿಯೂ ತುಂಬು ಗರ್ಭಿಣಿ ಮುನ್ನಿಯನ್ನು ವಾರ್ಡ್‌ಗೂ ಸೇರಿಸಿಕೊಳ್ಳದೆ ಹೊರಹಾಕಿ ಅಮಾನವೀಯತೆ ಪ್ರದರ್ಶಿಸಲಾಗಿದೆ. “ಅಲ್ಲಿ ನಮ್ಮನ್ನು ನಮ್ಮನ್ನು ಕುಳಿತುಕೊಳ್ಳಲೂ ಬಿಡಲಿಲ್ಲ. ತಕ್ಷಣವೇ ಅಲ್ಲಿಂದ ಎಸೆದು ನಮ್ಮನ್ನು ಹೊರಗೆ ಹಾಕಿದರು. ಅಷ್ಟರಲ್ಲಿಯೇ ಮುನ್ನಿ ತುಂಬ ಹೆರಿಗೆ ನೋವನ್ನು ಅನುಭವಿಸುತ್ತಿದ್ದರು. ಕೊನೆಗೆ ಎಮರ್ಜೆನ್ಸಿ ವಾರ್ಡ್ ಹೊರಗೆ ಕಷ್ಟದಲ್ಲಿಯೇ ಮುನ್ನಿಯ ಹೆರಿಗೆಯೂ ಆಯಿತು. ಇದಕ್ಕೆ ಆಸ್ಪತ್ರೆಯಲ್ಲಿದ್ದ ಎಲ್ಲರೂ ಮೂಕಸಾಕ್ಷಿಯಾದರು. ಇಷ್ಟೆಲ್ಲ ನಡೆದರೂ ಆಸ್ಪತ್ರೆಯ ಯಾವುದೇ ಸಿಬ್ಬಂಧಿ ನೆರವಿಗೆ ಧಾವಿಸಲಿಲ್ಲ,” ಎಂದು ಮುನ್ನಿ ಸಂಬಂಧಿಕರೊಬ್ಬರು ಹೇಳಿದ್ದಾರೆ.

ಈ ಎಲ್ಲ ಘಟನೆ ನಂತರ, ಮುನ್ನಿಯವರ ಕುಟುಂಬದವರು ಆಸ್ಪತ್ರೆಯ ಹೊರಗಡೆ ಪ್ರತಿಭಟನೆ ಮಾಡಿದ್ದಾರೆ. ಆಸ್ಪತ್ರೆಯ ಸಿಬ್ಬಂಧಿಯ ಅಮಾನವೀಯ ನಡೆಯ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ, “ಚಿಕಿತ್ಸೆ ನಿರಾಕರಿಸಿದ ವೈದ್ಯರು ಮತ್ತು ನರ್ಸ್‌ಗಳ ವಿರುದ್ಧ ಶಿಸ್ತುಬದ್ಧ ಕ್ರಮ ಕೈಗೊಳ್ಳಬೇಕು,” ಎಂದು ಅವರು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುಗ್ರಾಮದ ಮುಖ್ಯ ಆರೋಗ್ಯಾಧಿಕಾರಿ ವೈದ್ಯ ಮತ್ತು ನರ್ಸ್‌ಗಳನ್ನು ಕರ್ತವ್ಯದಿಂದ ಸಸ್ಪೆಂಡ್ ಮಾಡಿದ್ದಾರೆ.

ಪ್ರತಿಕ್ರಿಯೆಗಳು:

“ಆಧಾರ್ ಕಾರ್ಡ್ ಇಲ್ಲ ಎಂದು ಯಾವುದೇ ರೋಗಿಗಳನ್ನಾಗಲೀ ಅಥವಾ ಗರ್ಭಿಣಿಯರನ್ನಾಗಲೀ ಆಸ್ಪತ್ರೆಯಿಂದ ಹೊರಹಾಕುವ ಅಧಿಕಾರ ಅಥವಾ ಹಕ್ಕು ಯಾವುದೇ ವೈದ್ಯರಿಗೂ ಹಾಗೂ ಆಸ್ಪತ್ರೆಯ ಸಿಬ್ಬಂಧಿಗೂ ಇಲ್ಲ. ಅದು ಅಮಾನವೀಯ ನಡೆಯಾಗಿದೆ. ಸರಕಾರದ ವಿವಿಧ ಯೋಜನೆಗಳಿಗೆ ಆಧಾರ್ ಜೋಡಣೆಯನ್ನು ಸುಪ್ರಿಂ ಕೋರ್ಟ್ 2018ರ ಮಾರ್ಚ್ 31ಕ್ಕೆ ವಿಸ್ತರಿಸಿ, ಮದ್ಯಂತರ ಆದೇಶ ನೀಡಿತ್ತು. ಆದರೆ ಬಹುತೇಕ ಕಡೆಗಳಲ್ಲಿ ಈ ಆದೇಶ ಪಾಲನೆಯಾಗುತ್ತಿಲ್ಲ. ಗುರುಗ್ರಾಮದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಅಮಾನವೀಯ ಘಟನೆಗಳು ಬೇರೆ ಕಡೆಗಳಲ್ಲಿ ಮರುಕಳಿಸದಿರಲಿ,” ಎನ್ನುತ್ತಾರೆ ಜನಾರೋಗ್ಯ ಚಳವಳಿಯ ಡಾ. ಅಖಿಲಾ.

“ಆಸ್ಪತ್ರೆಗಳಲ್ಲಿ ಸರಕಾರದ ಕೆಲವೊಂದು ಯೋಜನೆಗಳ ಸದುಪಯೋಗ ಪಡೆಯಲು ಆಧಾರ್ ನಂಬರ್ ನೀಡಬೇಕೆಂದು ಹೇಳಲಾಗಿದೆ. ಇದಕ್ಕೆ ಆಧಾರ್ ಕಾರ್ಡ್ ಬೇಕು ಎಂದೆನಿಲ್ಲ. ಆಧಾರ್ ಸಂಖ್ಯೆಯಿದ್ದರೆ ಸಾಕು. ಆಧಾರ್ ಸಂಖ್ಯೆಯಿಂದ ಅವರ ಬ್ಯಾಂಕ್ ಖಾತೆಯ ಮೂಲಕ ಅವರಿಗೆ ಸರಕಾರದ ಯೋಜನೆಗಳಿಂದ ಸೇರಬೇಕಾದ ಹಣವನ್ನು ತಲುಪಿಸುವ ವ್ಯವಸ್ಥೆಯಿದೆ. ಚಿಕಿತ್ಸೆಯಲ್ಲಿ ವಿನಾಯಿತಿಯೂ ಇದೆ. ಆದರೆ ಅವರಿಗೆ ಸೌಲಭ್ಯ ಬೇಡ ಎಂದರೆ ಆಧಾರ್ ನೀಡದೇ ಅವರು ಚಿಕಿತ್ಸೆ ತೆಗೆದುಕೊಳ್ಳಬಹುದು. ಆದರೆ ಆಧಾರ್ ಕಾರ್ಡ್ ಇಲ್ಲದೇ ಇದ್ದರೆ, ಯಾವುದೇ ಗರ್ಭಿಣಿಯನ್ನೂ ಆಸ್ಪತ್ರೆಯಿಂದ ಹೊರಗೆ ಹಾಕುವುದಿಲ್ಲ. ಹಾಕಲೂಬಾರದು. ಅಂತಹ ಯಾವುದೇ ಖಾನೂನು ಇಲ್ಲ,” ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಆರೋಗ್ಯಾಧಿಕಾರಿ ರಮೇಶ್ ತಿಳಿಸಿದ್ದಾರೆ.

“ ಆಧಾರ್ ಕಾರ್ಡ್ ಇಲ್ಲದೇ ಇದ್ದರೆ ಚಿಕಿತ್ಸೆಯನ್ನು ನೀಡುವುದಿಲ್ಲ ಎಂದು ನಿರಾಕರಣೆ ಮಾಡುವ ಹಕ್ಕು ಸರಕಾರಿ ಆಸ್ಪತ್ರೆಯ ಯಾವುದೇ ವೈದ್ಯರಿಗೂ ಇಲ್ಲ. ಮಾನವೀಯತೆ ದೃಷ್ಟಿಯಿಂದ ಚಿಕಿತ್ಸೆ ನಿಡುವುದು ಇಲ್ಲಿ ಆದ್ಯ ಕರ್ತವ್ಯ. ಅದರಲ್ಲಿಯೂ ಗರ್ಭಿಣಿಯಾದರೆ ಅಗತ್ಯವಾಗಿ ಚಿಕಿತ್ಸೆ ನೀಡಲೇಬೇಕು,” ಎಂದು ಹಾವೇರಿ ಜಿಲ್ಲಾ ಆರೋಗ್ಯಾಧಿಕಾರಿ ‘ಸಮಾಚಾರ’ಕ್ಕೆ ತಿಳಿಸಿದ್ದಾರೆ.

“ಆಸ್ಪತ್ರೆಗೆ ಬಂದಂತ ರೋಗಿಗಳಲ್ಲಿ ಆಧಾರ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಸಂಖ್ಯೆ ಇಲ್ಲದೇ ಇದ್ದರೆ ಚಿಕಿತ್ಸೆ ನಿರಾಕರಣೆ ಮಾಡಬೇಕು ಎನ್ನುವ ಯಾವುದೇ ಕಾನೂನು ಇಲ್ಲ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದಿಂದ ಅಂತಹ ಯಾವುದೇ ಸುತ್ತೋಲೆಯೂ ಬಂದಿಲ್ಲ. ರೋಗಿಗಳಿಗೆ ಮೊದಲು ಚಿಕಿತ್ಸೆ ನಿಡುವುದು ನಮ್ಮ ವೈದ್ಯಕೀಯ ಧರ್ಮ. ನಮ್ಮ ರಾಜ್ಯದಲ್ಲಿ ಆಧಾರ್ ಇಲ್ಲ ಎಂದು ಗರ್ಭಿಣಿಯನ್ನು ಆಸ್ಪತ್ರೆಯಿಂದ ಹೊರಗೆ ಹಾಕಿದ ಘಟನೆ ಬಹುಶಃ ಎಲ್ಲಿಯೂ ನಡೆದಿಲ್ಲ,” ಎಂದು ಬೆಂಗಳೂರು ನಗರ ವಿಭಾಗದ ಜಿಲ್ಲಾ ಆರೋಗ್ಯಾಧಿಕಾರಿಗಳ ಪ್ರತಿಕ್ರಿಯೆ.

Leave a comment

Top