An unconventional News Portal.

ಜಿಲ್ಲಾಸ್ಪತ್ರೆಗಳ ಆವರಣದಲ್ಲಿಯೇ ಖಾಸಗಿ ಆಸ್ಪತ್ರೆ: ಸಾರ್ವಜನಿಕ ಆರೋಗ್ಯ ಸೇವೆಯ ಬುಡಕ್ಕೆ ‘ಖಾಸಗಿ ಏಟು’?

ಜಿಲ್ಲಾಸ್ಪತ್ರೆಗಳ ಆವರಣದಲ್ಲಿಯೇ ಖಾಸಗಿ ಆಸ್ಪತ್ರೆ: ಸಾರ್ವಜನಿಕ ಆರೋಗ್ಯ ಸೇವೆಯ ಬುಡಕ್ಕೆ ‘ಖಾಸಗಿ ಏಟು’?

ಜಿಲ್ಲಾ ಮಟ್ಟದ ಸರಕಾರಿ ಆಸ್ಪತ್ರೆಗಳನ್ನು ಖಾಸಗಿಯವರ ತೆಕ್ಕೆಗೆ ನೀಡುವ ನಿಟ್ಟಿನಲ್ಲಿ ಪರೋಕ್ಷ ಪ್ರಯತ್ನವೊಂದು ಆರಂಭವಾಗಿದೆ.

ನೀತಿ ಆಯೋಗ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಈ ನಿಟ್ಟಿನಲ್ಲಿ ಜಂಟಿಯಾಗಿ ಸಿದ್ಧಪಡಿಸಿರುವ ‘ಮಾದರಿ ಒಪ್ಪಂದ’ವನ್ನು ಎಲ್ಲಾ ರಾಜ್ಯಗಳಿಗೂ ಕಳುಹಿಸಿಕೊಡಲಾಗಿದೆ. ಇದರಲ್ಲಿ, ಸಾಂಕ್ರಾಮಿಕವಲ್ಲದ ರೋಗಗಳಿಗೆ ಚಿಕಿತ್ಸೆ ನೀಡಲು 30 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡು, ಜಿಲ್ಲಾ ಕೇಂದ್ರದಲ್ಲಿರುವ ಸರಕಾರಿ ಆಸ್ಪತ್ರೆಗಳ ಜಾಗದಲ್ಲಿಯೇ ಖಾಸಗಿಯವರಿಗೆ ಸ್ಥಳಾವಕಾಶ ನೀಡುವ ಕುರಿತು ರಾಜ್ಯಗಳ ಅಭಿಪ್ರಾಯವನ್ನು ಕೇಳಲಾಗಿದೆ.

50- 100 ಬೆಡ್‌ ಆಸ್ಪತ್ರೆ ನಿರ್ಮಿಸಲು ಖಾಸಗಿಯವರಿಗೆ ಜಾಗ ನೀಡುವ ಜತೆಗೆ, ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿರುವ ಇತರೆ ಸೇವೆಗಳನ್ನು ಖಾಸಗಿಯವರ ಜತೆ ಹಂಚಿಕೊಳ್ಳುವ ಕುರಿತು ಮಾದರಿ ಒಪ್ಪಂದದಲ್ಲಿ ಪ್ರಸ್ತಾಪಿಸಲಾಗಿದೆ. ರಾಜ್ಯ ಸರಕಾರಗಳು ಸ್ಥಳ ಹಾಗೂ ಸವಲತ್ತುಗಳ ಜತೆಗೆ ಖಾಸಗಿಯವರಿಗೆ ಆಸ್ಪತ್ರೆಗಳನ್ನು ನಿರ್ಮಿಸಲು ಧನ ಸಹಾಯವನ್ನೂ ನೀಡುವ ಕುರಿತು ನೀತಿ ಆಯೋಗದ ಈ ‘ಮಾದರಿ ಒಪ್ಪಂದ’ದಲ್ಲಿ ಪ್ರಸ್ತಾಪ ಮಾಡಲಾಗಿದೆ.

ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳು ಬರುವುದನ್ನು ಖಾತರಿಪಡಿಸಿಕೊಳ್ಳುವ ಸಂಬಂಧ, ಕಳೆದ ಎರಡು ವರ್ಷಗಳಲ್ಲಿ 1 ಸಾವಿರಕ್ಕಿಂತ ಹೆಚ್ಚು ರೋಗಿಗಳಿಗೆ ಆರೋಗ್ಯ ಸೇವೆ ನೀಡಿದ ಜಿಲ್ಲಾ ಆಸ್ಪತ್ರೆಗಳಲ್ಲಿ ಮಾತ್ರವೇ ಹೊಸ ಮಾದರಿ ಒಪ್ಪಂದಕ್ಕೆ ಅವಕಾಶ ನೀಡಲು ನೀತಿ ಆಯೋಗ ಮತ್ತು ಆರೋಗ್ಯ ಇಲಾಖೆಗಳು ಸಿದ್ಧತೆ ಮಾಡಿಕೊಂಡಿವೆ. ಈ ಮಾದರಿಯನ್ನು ರೂಪಿಸಲು ವಿಶ್ವಸಂಸ್ಥೆಯು ‘ತಾಂತ್ರಿಕ ಸಹಭಾಗಿತ್ವ’ವನ್ನೂ ನೀಡಿದೆ. ಈ ಕರಡನ್ನು ಸಿದ್ದಪಡಿಸುವ ಮುಂಚೆಯೇ ದೇಶಾದ್ಯಂತ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ ಎಂದು ನೀತಿ ಆಯೋಗ ಹೇಳಿಕೊಂಡಿದೆ.

ಒಪ್ಪಂದಲ್ಲಿ ಏನಿದೆ?: 

ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಖಾಸಗಿಯವರಿಗೆ ಆಸ್ಪತ್ರೆ ನಿರ್ಮಿಸಲು ಸ್ಥಳಾವಕಾಶ ನೀಡುವುದು ಮಾದರಿ ಒಪ್ಪಂದದ ಪ್ರಮುಖ ಭಾಗ. ಇದರ ಜತೆಗೆ, ಬ್ಲಡ್‌ಬ್ಯಾಂಕ್‌, ಆಂಬ್ಯುಲೆನ್ಸ್‌ ಸೇರಿದಂತೆ ಶವಾಗಾರ, ಜೈವಿಕ ತ್ಯಾಜ್ಯ ವಿಲೇವಾರಿ ವ್ಯವಸ್ಥೆ, ಫಿಜಿಯೋಥೆರಪಿ, ವಿದ್ಯುತ್‌, ಪಾರ್ಕಿಂಗ್‌ ವ್ಯವಸ್ಥೆಗಳನ್ನು ಹಂಚಿಕೊಳ್ಳಬೇಕಿದೆ. ಇಷ್ಟೆಲ್ಲಾ ಪಡೆದ ಖಾಸಗಿ ಆಸ್ಪತ್ರೆಗಳು ಕ್ಯಾನ್ಸರ್‌, ಹೃದಯ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಹೊಂದಲಿವೆ. ಸರಕಾರಿ ವಿಮೆ ಯೋಜನೆಗಳ ಅಡಿಯಲ್ಲಿ ಬರುವ ರೋಗಿಗಳಿಂದ ಮಾತ್ರವೇ ಸರಕಾರ ನಿಗದಿಪಡಿಸಿದ ಶುಲ್ಕವನ್ನು ಪಡೆದುಕೊಳ್ಳಲಿವೆ. ಇತರೆ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ವಿಧಿಸುವ ಶುಲ್ಕವನ್ನೇ ಇವೂ ಕೂಡ ವಿಧಿಸಲಿವೆ.

ಒಂದು ವೇಳೆ, ಹೆಚ್ಚಿನ ಚಿಕಿತ್ಸೆಯ ಅಗತ್ಯ ಕಂಡುಬಂದಲ್ಲಿ, ಈ ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಸರಕಾರಿ ಆಸ್ಪತ್ರೆಗೆ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲು ಅವಕಾಶ ನೀಡಲಾಗಿದೆ. ಆದರೆ ಇದಕ್ಕೆ ಜಿಲ್ಲಾ ವೈದ್ಯಾಧಿಕಾರಿಗಳಿಂದ ಅನುಮತಿಯನ್ನು ಪಡೆದುಕೊಳ್ಳಬೇಕಿರುತ್ತದೆ.

ಜಿಲ್ಲಾ ಸರಕಾರಿ ಆಸ್ಪತ್ರೆಗಳ ಜಾಗದಲ್ಲಿ ಖಾಸಗಿ ಆಸ್ಪತ್ರೆಗಳ ನಿರ್ಮಿಸಲು ತಾಂತ್ರಿಕ ಹಾಗೂ ಹಣಕಾಸು ಬಿಡ್‌ಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಬಿಡ್‌ನಲ್ಲಿ ಪಾಸಾದವರಿಗೆ ಆಸ್ಪತ್ರೆಯ ಜತೆಗೆ, ಮೆಡಿಕಲ್ ಸ್ಟೋರ್ಸ್, ಕ್ಯಾಂಟೀನ್‌ಗಳನ್ನು ನಡೆಸಲು ಅವಕಾಶ ನೀಡಲಾಗುತ್ತದೆ. 50 ಬೆಡ್‌ ಆಸ್ಪತ್ರೆ ನಿರ್ಮಾಣ ಮಾಡಲು 30 ಸಾವಿರ ಚದರ ಅಡಿ ಜಾಗವನ್ನೂ, 100 ಬೆಡ್‌ ಆಸ್ಪತ್ರೆ ನಿರ್ಮಿಸಲು 60 ಸಾವಿರ ಚದರ ಅಡಿ ಜಾಗವನ್ನು ನೀಡಬೇಕು ಎಂದು ಮಾದರಿ ಒಪ್ಪಂದ ಹೇಳುತ್ತದೆ.

ಈ ಹಿಂದಿನಿಂದಲೂ ಸರಕಾರಿ ಆರೋಗ್ಯ ಸೇವೆಯನ್ನು ಖಾಸಗಿಕರಣ ಮಾಡುವ ಪ್ರಯತ್ನಗಳು ನಡೆದುಕೊಂಡು ಬಂದಿವೆ. ಆದರೆ ಇದು, ದೇಶಾದ್ಯಂತ ಏಕಕಾಲಕ್ಕೆ ಆರೋಗ್ಯ ಸೇವೆಯನ್ನು ಖಾಸಗಿಯವರ ತೆಕ್ಕೆಗೆ ನೀಡುವ ಪ್ರಯತ್ನದಂತೆ ಕಾಣಿಸುತ್ತಿದೆ.

ಕರ್ನಾಟಕ ಎಚ್ಚರಾಗಬೇಕು: 

ನೀತಿ ಆಯೋಗ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಈ ಮಾದರಿ ಒಪ್ಪಂದದ ಕುರಿತು ಆತಂಕವನ್ನು ವ್ಯಕ್ತಪಡಿಸುವ ಜನಾರೋಗ್ಯ ಚಳುವಳಿಯ ಡಾ. ಅಖಿಲಾ, “ಈಗಲಾದರೂ ಕರ್ನಾಟಕ ಎಚ್ಚರಾಗಬೇಕು. 2015ರಲ್ಲಿ ಬಂದ ರಾಷ್ಟ್ರೀಯ ಆರೋಗ್ಯ ನೀತಿಯ ಕರಡಿನಲ್ಲಿಯೇ ಆರೋಗ್ಯ ಸೇವೆಯನ್ನು ಖಾಸಗಿಕರಣ ಮಾಡುವ ಪ್ರಕ್ರಿಯೆ ಆರಂಭವಾಗಿತ್ತು. ಇದೀಗ ಅದು ವೇಗ ಪಡೆದುಕೊಂಡಿದೆ. ಕರ್ನಾಟಕದಲ್ಲಿ ಆರೋಗ್ಯ ಸೇವೆಯನ್ನು ಖಾಸಗಿಯವರಿಗೆ ವಹಿಸಿಕೊಡುವ ಪರಿಪಾಠ ನಾನಾ ರೀತಿಯಲ್ಲಿ ನಡೆದುಕೊಂಡು ಬಂದಿದೆ. ವಿಮೆ ಹಣವನ್ನು ಖಾಸಗಿಯವರಿಗೆ ದೊಡ್ಡ ಮಟ್ಟದಲ್ಲಿ ನೀಡಲಾಗುತ್ತಿದೆ. ಇವತ್ತು ಬಹುತೇಕ ಖಾಸಗಿ ಆಸ್ಪತ್ರೆಗಳು ಉದ್ಧಾರ ಆಗಿರುವುದೇ ನಮ್ಮ ಹಣದಿಂದ,” ಎನ್ನುತ್ತಾರೆ.

ಕರ್ನಾಟಕದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ದತ್ತು ನೀಡುವ ಮೂಲಕ ಖಾಸಗಿಯವರಿಗೆ ಆರೋಗ್ಯ ಸೇವೆಯಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಇದು ದೊಡ್ಡಮಟ್ಟದಲ್ಲಿ ವಿಫಲವಾಗಿತ್ತು. ನಂತರ ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆಗಳನ್ನು ನಡೆಸುವ ಪ್ರಯತ್ನಗಳು ನಡೆದಿದ್ದವು. ಅದೂ ಕೂಡ ವಿಫಲತೆಯನ್ನು ಕಂಡಿತ್ತು. ಕೊನೆಗೆ, ಉದ್ಯಮಿಗಳಿಗೇ ದೊಡ್ಡ ಆಸ್ಪತ್ರೆಗಳನ್ನು ವಹಿಸಿಕೊಡುವ ನಿಟ್ಟಿನಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಮುಂದಾಗಿತ್ತು.

“ಕರ್ನಾಟಕದಲ್ಲಿ ನಾನಾ ರೂಪಗಳಲ್ಲಿ ಖಾಸಗಿಯವರಿಗೆ ಆರೋಗ್ಯ ಸೇವೆಯನ್ನು ವಹಿಸುವ ಕೆಲಸವನ್ನು ಎಲ್ಲಾ ಸರಕಾರಗಳೂ ಮಾಡಿಕೊಂಡು ಬಂದಿದ್ದವು. ಸಿಟಿ ಸ್ಕ್ಯಾನಿಂಗ್‌, ರಕ್ತ ಪರೀಕ್ಷೆಯಂತಹ ಸೇವೆಗಳನ್ನು ಖಾಸಗಿಯವರಿಗೆ ನೀಡಲಾಗಿತ್ತು. ಇದೀಗ ಸರಕಾರಿ ಆಸ್ಪತ್ರೆಯ ಜಾಗದಲ್ಲಿಯೇ ಖಾಸಗಿ ಆಸ್ಪತ್ರೆಗಳನ್ನು ನಿರ್ಮಿಸಲು ದೇಶದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದೆ. ಇದು ಆತಂಕಕಾರಿ ನಡೆ,” ಎನ್ನುತ್ತಾರೆ ಜನಶಕ್ತಿಯ ಡಾ. ವಾಸು.

ಆರೋಗ್ಯ ಸೇವೆ ಎಂಬುದು ಮೂಲಭೂತ ಹಕ್ಕು. ಒಂದು ಕಾಲದಲ್ಲಿ ಸೇವೆ ಎನ್ನಿಸಿಕೊಂಡು ಬಂದ ವೈದ್ಯಕೀಯ ಕ್ಷೇತ್ರ ಇವತ್ತು ಉದ್ಯಮವಾಗಿ ಬೆಳೆಯುತ್ತಿದೆ. ಉದ್ಯಮ ಬೆಳೆದಂತೆಲ್ಲಾ ಸರಕಾರದ ಪಾತ್ರವನ್ನು ಕಡಿಮೆ ಮಾಡುತ್ತಿದೆ. ಇದೀಗ ದೇಶಾದ್ಯಂತ ಜಿಲ್ಲಾ ಸರಕಾರಿ ಆಸ್ಪತ್ರೆಗಳ ಜಾಗದಲ್ಲಿಯೇ ಖಾಸಗಿಯವರಿಗೆ ಅವಕಾಶ ನೀಡುವ ಕುರಿತು ಎಲ್ಲಾ ರಾಜ್ಯಗಳ ಅಭಿಪ್ರಾಯವನ್ನು ಕೇಳಲಾಗಿದೆ. ಪಕ್ಕದ ತಮಿಳುನಾಡಿನ ಮಾದರಿಯನ್ನು ಮುಂದಿಟ್ಟುಕೊಂಡು ಕರ್ನಾಟಕ ಸರಕಾರ ಖಾಸಗಿಕರಣದ ಈ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಬೇಕಿದೆ.

ಈ ವರದಿಗಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಸಚಿವ ರಮೇಶ್ ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಸಂಪರ್ಕಿಸಲು ಪ್ರಯತ್ನ ಮಾಡಲಾಯಿತಾದರೂ, ಪ್ರತಿಕ್ರಿಯೆ ಪಡೆಯಲು ಸಾಧ್ಯವಾಗಲಿಲ್ಲ.

Top