An unconventional News Portal.

ಅವಧಿ ವಿಸ್ತರಣೆಯ ಬೇಡಿಕೆ ಮುಂದಿಟ್ಟ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರು!

ಅವಧಿ ವಿಸ್ತರಣೆಯ ಬೇಡಿಕೆ ಮುಂದಿಟ್ಟ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರು!

ಸಮಾನ ಮನಸ್ಕ ಶಾಸಕರ ಅಸಮಾಧಾನ ಮಡುಗಟ್ಟಿರುವ ನಡುವೆಯೇ, ನಿಗಮ ಮಂಡಳಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಅಪಸ್ವರ ತೆಗೆದಿದ್ದಾರೆ.

ತಮ್ಮ ಅಧಿಕಾರಾವಧಿಯನ್ನು 6 ತಿಂಗಳವರೆಗೆ ವಿಸ್ತರಿಸಿ, ಇಲ್ಲವಾದರೆ ಮುಖ್ಯಮಂತ್ರಿ ಸೇರಿದಂತೆ ಸಂಪುಟದ ಎಲ್ಲಾ ಸಚಿವರ ಬದಲಾವಣೆಯಾಗಲಿದೆ ಎಂದು ಸವಾಲು ಹಾಕಿದ್ದಾರೆ.

ನವೆಂಬರ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ 83 ನಿಗಮ ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರನ್ನು 18 ತಿಂಗಳ ಅವಧಿಗೆ ನೇಮಿಸಿತ್ತು. ಆದರೆ, ಸದಸ್ಯರು, ನಿರ್ದೇಶಕರನ್ನು ಈವರೆಗೂ ನೇಮಿಸಿರಲಿಲ್ಲ. ಅಧ್ಯಕ್ಷ-ಉಪಾಧ್ಯಕ್ಷರ ಆಡಳಿತಾವಧಿ ಯಾವುದೇ ಅಧಿಕಾರವಧಿ ಇಲ್ಲದೆ 16 ತಿಂಗಳು ಕಳೆದು ಹೋಗಿದೆ. ಸರ್ಕಾರಕ್ಕೆ ಮೂರು ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ಸುಮಾರು 700 ಮಂದಿ ಸದಸ್ಯರು, ನಿರ್ದೇಶಕರನ್ನು 83 ನಿಗಮ ಮಂಡಳಿಗಳಿಗೆ ನೇಮಿಸಲಾಗಿದೆ.

ಈವರೆಗೂ ಸದಸ್ಯರಿಲ್ಲದೆ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಚಲಾಯಿಸಲಾಗದೆ ನೆಪಮಾತ್ರಕ್ಕೆ ಅಧ್ಯಕ್ಷ-ಉಪಾಧ್ಯಕ್ಷರಾಗಿದ್ದವರು ತಮ್ಮ ಅಧಿಕಾರವಧಿಯನ್ನು ಇನ್ನು 6 ತಿಂಗಳ ಕಾಲ ವಿಸ್ತರಣೆ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.

ಆದರೆ, ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‍ಸಿಂಗ್ ಅವರು ಅಧ್ಯಕ್ಷ-ಉಪಾಧ್ಯಕ್ಷರ ಆಡಳಿತಾವಧಿಯನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಕೂಡ ಅದಕ್ಕೆ ಬದ್ಧರಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಅರಣ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, “ಮೊದಲು ಪಕ್ಷ ಉಳಿಯಬೇಕು. ಈಗಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸಿದರೆ ಸೋಲು ಕಾಣುವುದು ನಿಶ್ಚಿತ. ದಲಿತರಿಗೆ ಅವಕಾಶ ಬೇಕೆಂದು ಸಮುದಾಯಗಳು ಬೇಡಿಕೆ ಇಟ್ಟಿವೆ. ಅದಕ್ಕೆ ಬೆಲೆ ನೀಡದಿದ್ದರೆ ಕಾಂಗ್ರೆಸ್ ಸೋಲು ಕಾಣುವುದು ನಿಶ್ಚಿತ. ನಿಗಮ ಮಂಡಳಿ ಅಧ್ಯಕ್ಷರನ್ನು ಬದಲಾವಣೆ ಮಾಡುವಂತೆ ಮುಖ್ಯಮಂತ್ರಿ ಹಾಗೂ ಸಂಪುಟದ ಸಚಿವರನ್ನು ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ನೀಡಬೇಕು,” ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ನಿಗಮ ಮಂಡಳಿಗಳ ಅಧ್ಯಕ್ಷರ ನಿಯೋಗ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮನವಿ ಮಾಡಲಿದೆ. “ವೈಯಕ್ತಿಕವಾಗಿ ನನಗೆ ನಿಗಮದ ಅಧ್ಯಕ್ಷ ಸ್ಥಾನ ಸಿಗಬೇಕು ಎಂಬ ಆಸೆ ಇಲ್ಲ. ಮೊದಲು ಪಕ್ಷ ಉಳಿದರೆ ಮುಂದೆ ನಾವು ಅಧಿಕಾರಕ್ಕೆ ಬರಲು ಸಾಧ್ಯ. ಈಗಿನ ಪರಿಸ್ಥಿತಿಯಲ್ಲಿ ಪಕ್ಷ ದುರ್ಬಲವಾಗಿದೆ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ತೊರೆದು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ನಾನು ಸಿದ್ಧ. ಅದೇ ರೀತಿ ಮುಖ್ಯಮಂತ್ರಿ ಹಾಗೂ ಸಚಿವರು ತಮ್ಮ ಸ್ಥಾನ ತೊರೆದು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು,” ನಾರಾಯಣ ಸ್ವಾಮಿ ಹೇಳಿದ್ದಾರೆ. ಅವರು ಪಕ್ಷದ ಹಿರಿಯ ನಾಯಕ ಮಲ್ಲಿಖಾರ್ಜುನ ಖರ್ಗೆ ಅವರ ಪರಮಾಪ್ತರು.

ಈ ಮೊದಲು ಸುಮಾರು 40ಕ್ಕೂ ಹೆಚ್ಚು ಸಮಾನ ಮನಸ್ಕ ಶಾಸಕರು ಸಭೆ ಸೇರಿ ಸಂಪುಟದ 25ಕ್ಕೂ ಹೆಚ್ಚು ಸಚಿವರ ಬದಲಾವಣೆಯಾಗಬೇಕು, ಹೊಸಬರಿಗೆ ಅವಕಾಶ ಸಿಗಬೇಕೆಂದು ಒತ್ತಡ ಹಾಕಿದ್ದರು. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರು, ಮುಖ್ಯಮಂತ್ರಿ ಸೇರಿದಂತೆ ಸಂಪುಟದ ಎಲ್ಲಾ ಸಚಿವರು ಬದಲಾವಣೆಯಾಗಬೇಕೆಂದು ಬೇಡಿಕೆ ಇಟ್ಟಿದ್ದು, ಇದಕ್ಕಾಗಿ ಹೈಕಮಾಂಡ್ ಕದ ತಟ್ಟಲು ಮುಂದಾಗಿದ್ದಾರೆ. ಇದಕ್ಕೆ ಅಧಿಕಾರವಧಿ ವಿಸ್ತರಿಸುವ ಮೂಲಕ ಮುಲಾಮು ಹಚ್ಚುವ ಕೆಲಸ ನಡೆಯಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

Top