An unconventional News Portal.

ವಿನಾಯಕ್ ಬಾಳಿಗ ಕೊಲೆ ಪ್ರಕರಣಕ್ಕೆ ಹೊಸ ತಿರುವು: ನರೇಶ್ ಶೆಣೈ ಜಾಮೀನು ಅರ್ಜಿಗೆ ಮುನ್ನವೇ ಆಪ್ತನ ಬಂಧನ

ವಿನಾಯಕ್ ಬಾಳಿಗ ಕೊಲೆ ಪ್ರಕರಣಕ್ಕೆ ಹೊಸ ತಿರುವು: ನರೇಶ್ ಶೆಣೈ ಜಾಮೀನು ಅರ್ಜಿಗೆ ಮುನ್ನವೇ ಆಪ್ತನ ಬಂಧನ

ಮಂಗಳೂರು ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ಹಾಗೂ ಪೊಲೀಸರ ನಡುವೆ ನಡೆಯುತ್ತಿರುವ ಕಣ್ಣಾ ಮುಚ್ಚಾಲೆ ಆಟಕ್ಕೆ ಭಾನುವಾರ ಹೊಸ ತಿರುವೊಂದು ಸಿಕ್ಕಿದೆ.

ಮಂಗಳೂರಿನಲ್ಲಿ ಫೊಟೋ ಸ್ಟುಡಿಯೋ ನಡೆಸುತ್ತಿದ್ದ ಮಂಜು ನೀರೇಶ್ವಲ್ಯಾ ಎಂಬಾತನ್ನು ಪ್ರಕರಣದ ಆರೋಪಿಗೆ ಅಡಗುತಾಣ ಹಾಗೂ ಧನ ಸಹಾಯ ನೀಡಿದ ಆರೋಪದ ಮೇಲೆ ಬಂಧಿಸಿದ್ದಾರೆ. ಸೋಮವಾರ ನರೇಶ್ ಶೆಣೈ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಹೈ ಕೋರ್ಟ್ ಮುಂದೆ ಬರಲಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರ ಈ ನಡೆ ತಣ್ಣಗಾದಂತಾಗಿದ್ದ ಪ್ರಕರಣಕ್ಕೆ ಹೊಸ ತಿರುವೊಂದನ್ನು ನೀಡಿದೆ.

ಏನಿದು ಪ್ರಕರಣ?:

ಮಾಹಿತಿ ಹಕ್ಕು ಕಾರ್ಯಕರ್ತರಾಗಿದ್ದ ವಿನಾಯಕ್ ಬಾಳಿಗ ಅವರನ್ನು ಮನೆಯ ಸಮೀಪದಲ್ಲಿಯೇ ಮಾ. 21ರಂದು ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಇರಿದು ಕೊಲೆ ಮಾಡಿದ್ದರು. ಪ್ರಕರಣದಲ್ಲಿ ಸುಫಾರಿ ಹಂತಕರ ಪಾತ್ರವನ್ನು ಪೊಲೀಸರು ಬಯಲಿಗೆಳೆದಿದ್ದರು. ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರೂ ಆಗಿದ್ದ ಬಾಳಿಗ ಅವರ ಕೊಲೆಗೆ ಸುಫಾರಿ ನೀಡಿದ ಆರೋಪದ ಮೇಲೆ ‘ನಮೋ ಬ್ರಿಗೇಡ್’ ಸ್ಥಾಪಕ ನರೇಶ್ ಶೆಣೈ ಬಂಧನಕ್ಕೆ ವಾರೆಂಟ್ ಹೊರಡಿಸಲಾಗಿತ್ತು. ಆದರೆ, ಪೊಲೀಸರು ಅಖಾಡಕ್ಕೆ ಇಳಿಯುವ ಮುನ್ನವೇ ಕೋಡಿಯಾಲ್ ಬೈಲಿನ ಮನೆಯಿಂದ ನರೇಶ್ ಶೆಣೈ ನಾಪತ್ತೆಯಾಗಿದ್ದ.

ಇದೀಗ ತಲೆ ಮರೆಸಿಕೊಂಡಿರುವ ನರೇಶ್ ಶೆಣೈಗೆ ಅಡಗು ತಾಣಗಳನ್ನು ವ್ಯವಸ್ಥೆ ಮಾಡಿಕೊಟ್ಟ ಹಾಗೂ ಹಣ ಸಹಾಯ ಮಾಡಿದ ಆರೋಪದ ಮೇಲೆ ಮಂಜು ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ. “ಈತ ಗೋವಾ ಮತ್ತಿತರ ಕಡೆಗಳಲ್ಲಿ ನರೇಶ್ ಶೆಣೈಗೆ ತಲೆಮರೆಸಿಕೊಳ್ಳಲು ನೆರವು ನೀಡಿದ್ದಕ್ಕೆ ದಾಖಲೆಗಳು ಲಭ್ಯವಾಗಿವೆ. ನಾಲ್ಕು ದಿನಗಳ ಹಿಂದೆ ವಿಚಾರಣೆಗೆ ಕರೆದುಕೊಂಡು ಹೋದ ಪೊಲೀಸರು ಈ ಸಂಬಂಧ ಇನ್ನಷ್ಟು ಮಾಹಿತಿ ಕಲೆ ಹಾಕಿದ್ದಾರೆ,” ಎಂದು ಮೂಲಗಳು ತಿಳಿಸಿವೆ. ಭಾನುವಾರ ಮಂಜು ಬಂಧನವನ್ನು ಅಧಿಕೃತಗೊಳಿಸಲಾಗಿದೆ.

ಜಾಮೀನಿಗೆ ನಕಲಿ ಸಹಿ:

ಈ ನಡುವೆ ತಲೆ ಮರೆಸಿಕೊಂಡಿರುವ ನರೇಶ್ ಶೆಣೈ ಎರಡನೇ ಬಾರಿ ನಿರೀಕ್ಷಣಾ ಜಾಮೀನು ಕೋರಿ ಹೈ ಕೋರ್ಟ್ ಮೆಟ್ಟಿಲೇರಿದ್ದಾನೆ. ಜಾಮೀನಿಗಾಗಿ ಸಲ್ಲಿಸುವ ವಕಾಲತ್ತಿನಲ್ಲಿ ಆರೋಪಿಯ ಸಹಿ ಇರಬೇಕು ಎಂಬುದು ನಿಯಮ. ಆದರೆ, ಮಂಗಳೂರು ಪೊಲೀಸರು ಆರೋಪಿಗೆ ಸಹಾಯ ಮಾಡುತ್ತಿದ್ದ ಆರೋಪದ ಮೇಲೆ ಮಂಜುವನ್ನು ಬಂಧಿಸಿದ ಹಿನ್ನೆಲೆಯಲ್ಲಿ ನರೇಶ್ ಆಪ್ತರಲ್ಲಿ ಭಯ ಹುಟ್ಟಿಸುವ ತಂತ್ರ ಅನುಸರಿಸಿದ್ದಾರೆ. ಜತೆಗೆ, “ಸೋಮವಾರ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗುವ ಜಾಮೀನು ಪತ್ರಕ್ಕೆ ನರೇಶ್ ಶೆಣೈ ಹೆಸರಿನಲ್ಲಿ ನಕಲಿ ಸಹಿ ಮಾಡಲಾಗಿದೆ ಎಂದು ಪೊಲೀಸರು ಅರ್ಜಿ ಸಲ್ಲಿಸಲಿದ್ದಾರೆ,” ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ, ಪ್ರಕರಣದ ತನಿಖೆಯನ್ನು ಸಡಿಲಗೊಳಿಸುವಂತೆ ದಕ್ಷಿಣ ಕನ್ನಡ ಮೂಲದ, ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಸ್ವಾಮಿಜಿಯೊಬ್ಬರು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ‘ಸಮಾಚಾರ’ ವರದಿಯೊಂದನ್ನು ಪ್ರಕಟಿಸಿತ್ತು. 

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top