An unconventional News Portal.

ಈ ಟಿವಿ ನ್ಯೂಸ್ ಕನ್ನಡಕ್ಕೆ ಹೊಸ ಸಾರಥಿ: ಹೊರಬೀಳ್ತಾರಾ ರಂಗನಾಥ್ ಭಾರಧ್ವಾಜ್?

ಈ ಟಿವಿ ನ್ಯೂಸ್ ಕನ್ನಡಕ್ಕೆ ಹೊಸ ಸಾರಥಿ: ಹೊರಬೀಳ್ತಾರಾ ರಂಗನಾಥ್ ಭಾರಧ್ವಾಜ್?

ಈ ಟಿವಿ ನ್ಯೂಸ್ ಕನ್ನಡ ವಾಹಿನಿಯ ಸಾರಥ್ಯ ಗುರುವಾರ ಬದಲಾಗಿದೆ.

‘ಈಟಿವಿ ನ್ಯೂಸ್ ಕನ್ನಡ’ ವಾಹಿನಿಯ ಮುಖ್ಯಸ್ಥರ ಸ್ಥಾನಕ್ಕೆ ಕರ್ನಾಟಕದವರೇ ಆದ ಡಿ. ಪಿ. ಸತೀಶ್ ರನ್ನು ದೆಹಲಿಯಿಂದ ಕರೆ ತರಲಾಗಿದೆ. ರಂಗನಾಥ್ ಭಾರಧ್ವಾಜ್ ಸಂಪಾದಕ ಸ್ಥಾನದ ಮೇಲಿನ ಕುರ್ಚಿಯಲ್ಲಿ ಸತೀಶ್ ಆಸೀನರಾಗಿದ್ದಾರೆ.

ಈಟಿವಿ ವಾಹಿನಿಯ ಡೆಸ್ಕ್ ನಲ್ಲಿ ಅನೌಪಚಾರಿಕವಾಗಿ ಮಾತನಾಡಿರುವ ‘ನೆಟ್ವರ್ಕ್-18’ ಸಂಸ್ಥೆಯ ‘ನ್ಯೂಸ್ ಸಿಇಒ ಮತ್ತು ಗ್ರೂಪ್ ಎಡಿಟರ್ ಇನ್ ಚೀಫ್’ ರಾಹುಲ್ ಜೋಶಿ ಡಿ. ಪಿ. ಸತೀಶ್ ರನ್ನು ಸಿಬ್ಬಂದಿಗಳಿಗೆ ಪರಿಚಯಿಸಿದ್ದಾರೆ. “ಸದ್ಯ ಉತ್ತರ ಪ್ರದೇಶ ಚುನಾವಣೆ ನಮ್ಮ ಮುಂದಿದೆ. ನಾವು ಆ ಕಡೆ ಹೆಚ್ಚು ಗಮನ ಕೊಡಬೇಕಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿಯೂ ವಿಧಾನಸಭೆ ಚುನಾವಣೆ ಬರಲಿದೆ. ಅದಕ್ಕೂ ಮೊದಲು ಈಟಿವಿ ನಂಬರ್ ವನ್ ಚಾನಲ್ ಆಗಬೇಕು,” ಎಂದಿದ್ದಾರೆ. “ತಕ್ಷಣದಿಂದ ಜಾರಿಯಾಗುವಂತೆ ಚಾನಲಿನ ಹೊಣೆಯನ್ನು ಡಿ. ಪಿ. ಸತೀಶ್ ಗೆ ವಹಿಸಲಾಗಿದೆ. ರಂಗನಾಥ್ ಭಾರಧ್ವಾಜ್, ಸತೀಶ್ ಅವರಿಗೆ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ,” ಎಂದೂ ತಿಳಿಸಿದ್ದಾರೆ.

ಈ ಮೂಲಕ ರಿಲಯನ್ಸ್ ಒಡೆತನಕ್ಕೆ ಸೇರಿದ ‘ನೆಟ್ವರ್ಕ್ 18’ ಸಂಸ್ಥೆಯ ಕನ್ನಡ ವಾಹಿನಿಯಲ್ಲಿ ಮೂರನೇ ಬಾರಿಗೆ ಮುಖ್ಯಸ್ಥರ ಸ್ಥಾನ ಬದಲಾಗಿದೆ. ಈ ಹಿಂದೆ ಚಾನಲ್ ಆರಂಭವಾದಾಗ ಜಿ. ಎನ್. ಮೋಹನ್ ಸಂಪಾದಕರಾಗಿದ್ದರು. ನಂತರ ಈ ಸ್ಥಾನಕ್ಕೆ ಬಂದವರು ರಂಗನಾಥ್ ಭಾರಧ್ವಾಜ್. ಇದೀಗ ಡಿ. ಪಿ. ಸತೀಶ್ ಚಾನಲ್ ಸಾರಥ್ಯ ವಹಿಸಿದ್ದಾರೆ. ಕಾಕತಾಳೀಯ ಎಂದರೆ ಎಲ್ಲರೂ ಹಿಂದಿನ ಆಂಧ್ರ ಮೂಲಕ ರಾಮೋಜಿರಾವ್ ಕನಸಿನ ಈ ಟಿವಿ ವಾಹಿನಿಯಲ್ಲಿ ಕೆಲಸ ಮಾಡಿದವರೇ ಆಗಿದ್ದಾರೆ.

ಯಾರು ಈ ಡಿ.ಪಿ ಸತೀಶ್?:

joga-dp-sathishಕಳೆದ 17 ವರ್ಷಗಳಿಂದ ಪತ್ರಕರ್ತರಾಗಿರುವ ಸತೀಶ್ ಮೂಲತಃ ಶಿವಮೊಗ್ಗದ ಜೋಗದವರು. ಇಂಗ್ಲೀಷ್ ಸಾಹಿತ್ಯದಲ್ಲಿ ಪದವಿ ಪಡೆದ ಅವರು, ‘ಏಷಿಯನ್ ಕಾಲೇಜ್ ಆಫ್ ಜರ್ನಲಿಸಂ’ನಿಂದ (ಈಗ ಚೆನ್ನೈನಲ್ಲಿದೆ) ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಪದವಿ ಮುಗಿಸಿ ನೇರವಾಗಿ ವೃತ್ತಿ ಬದುಕಿಗೆ ಕಾಲಿಟ್ಟ ಸತೀಶ್ ‘ಇಂಡಿಯನ್ ಎಕ್ಸ್ ಪ್ರೆಸ್’ ಸಂಸ್ಥೆಯಲ್ಲಿ ಒಂದಷ್ಟು ವರ್ಷ ಕೆಲಸ ಮಾಡಿದ್ದರು. ನಂತರ ಟಿವಿ ಪತ್ರಿಕೋದ್ಯಮದತ್ತ ಒಲವಾಗಿ ಈ ಟಿವಿ ವಾಹಿನಿಗೆ ಬಂದಿದ್ದರು. ಈ ಟಿವಿ ವಾಹಿನಿಯ ದೆಹಲಿ ಪ್ರತಿನಿಧಿಯಾಗಿದ್ದರು. ಇದಾದ ಬಳಿಕ ಮತ್ತೆ ಇಂಗ್ಲೀಷ್ ಪತ್ರಿಕೋದ್ಯಮದತ್ತ ಹೊರಳಿದ ಸತೀಶ್ ಅಮೆರಿಕಾದ ‘ಇಮೇಜ್’ ಮ್ಯಾಗಜೀನ್ ನಲ್ಲಿ ಸೇವೆ ಸಲ್ಲಿಸಿದ್ದರು.

ಮುಂದೆ ಅವರ ವೃತ್ತಿ ಬದುಕು ಬೆಳೆದಿದ್ದೆಲ್ಲಾ ಸಿಎನ್ಎನ್-ಐಬಿಎನ್ (ಈಗಿನ ಸಿಎನ್ಎನ್- ನ್ಯೂಸ್ 18) ವಾಹಿನಿಯಲ್ಲಿ. ದೆಹಲಿ ಸೇರಿದ ಸತೀಶ್ ರಾಜ್ದೀಪ್ ಸರ್ದೇಸಾಯಿ ಗರಡಿಯಲ್ಲಿ ಪಳಗಿದವರು. ಅಲ್ಲೇ ಹಿರಿಯ ಸಂಪಾದಕ ಹುದ್ದೆ ಅವರನ್ನು ಅರಸಿ ಬಂತು.

2009ರಲ್ಲಿ ಕರಾವಳಿಯ ಖ್ಯಾತ ಪತ್ರಿಕೆ, ‘ಕರಾವಳಿ ಅಲೆ’ಯ ಸಂಪಾದಕ ಬಿ.ವಿ.ಸೀತಾರಾಂ ಬಂಧನವಾದಾಗ ಅವರ ಬೆಂಬಲಕ್ಕೆ ನಿಂತವರು ಇದೇ ಸತೀಶ್. “2009ರಲ್ಲಿ ನನ್ನ ಬಂಧನವಾದಾಗ ಅವರು ಮಾಹಿತಿ ತೆಗೆದುಕೊಂಡು ಅದನ್ನು ರಾಷ್ಟ್ರೀಯ ಸುದ್ದಿ ಮಾಡಿದ್ದರು. ನನಗೆ ಅವರ ಮುಖತಃ ಪರಿಚಯವಿರಲಿಲ್ಲ. ರಾಜದೀಪ್ ಸರ್ದೇಸಾಯಿ ಮನೆಗೆ ಹೋಗಿದ್ದಾಗ ಅವರು ನನಗೆ ಸತೀಶ್ ಪರಿಚಯ ಮಾಡಿಸಿದರು. ಅದು ನಮ್ಮ ಮೊದಲ ಭೇಟಿ,” ಎಂದು ನೆನಪಿಸಿಕೊಳ್ಳುತ್ತಾರೆ ಬಿ.ವಿ ಸೀತಾರಾಂ. ಅವತ್ತು ನನ್ನ ಬಂಧನದ ಸಮಯದಲ್ಲಿ ಸುದ್ದಿ ಮಾಡಿದ್ದರಿಂದ ಉಪಯೋಗವಾಯಿತು ಎನ್ನುತ್ತಾರೆ ಸೀತಾರಾಂ.

ಬಿ. ವಿ. ಸೀತಾರಂ ಬಂಧನದ ಸುದ್ದಿ ವರದಿ ಮಾಡಿದ್ದ ಸತೀಶ್ ವರದಿಯಲ್ಲಿ ತಪ್ಪುಗಳಿವೆ ಎಂಬ ಆರೋಪ ಕೇಳಿ ಬಂದಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ಸತೀಶ್ ಬೆದರಿಕೆ ಹಾಕುತ್ತಿದ್ದಾರೆ ಎಂದು ಉಡುಪಿಯ ಭೋಜರಾಜ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿಯೂ ದೂರಿದ್ದರು.

ತಮ್ಮ ಗುರು ರಾಜ್ದೀಪ್ ಸರ್ದೇಸಾಯಿ ಜತೆ ಪಿ.ಡಿ ಸತೀಶ್

ತಮ್ಮ ಗುರು ರಾಜ್ದೀಪ್ ಸರ್ದೇಸಾಯಿ ಜತೆ ಡಿ. ಪಿ. ಸತೀಶ್

ರಾಜಕೀಯ ತಜ್ಞ:

ತನ್ನನ್ನು ತಾನು ಮಧ್ಯಪಂಥೀಯ (ಎಡವೂ ಅಲ್ಲ- ಬಲವೂ ಅಲ್ಲ) ಎಂದು ಕರೆದುಕೊಳ್ಳುವ ಸತೀಶ್, ವಿಶ್ವದ ರಾಜಕೀಯ ವಿದ್ಯಮಾನಗಳತ್ತ ಯಾವತ್ತೂ ಒಂದು ಕಣ್ಣು ಇಟ್ಟಿರುತ್ತಾರೆ ಎನ್ನುತ್ತದೆ ಅವರ ನೆಟ್ವರ್ಕ್ 18 ಪ್ರೊಫೈಲ್. ಇಂಗ್ಲೀಷ್ ಸಾಹಿತ್ಯ, ಶಾಸ್ತ್ರೀಯ ಸಂಗೀತ, ಸಿನಿಮಾ, ಫೋಟೋಗ್ರಫಿ, ಕ್ರಿಕೆಟ್, ಇತಿಹಾಸದತ್ತ ಸತೀಶ್ ಒಲವು ಹೊಂದಿದ್ದಾರೆ.

ಅವರ ನೇಮಕದ ವಾರ್ತೆಯನ್ನು ಫೇಸ್ಬುಕ್ ಮೇಲೆ ಹಂಚಿಕೊಂಡಿರುವ ಈ ಟಿವಿ ನ್ಯೂಸ್ ಕನ್ನಡ ಮಾಜಿ ಸಂಪಾದಕ ಜಿ. ಎನ್. ಮೋಹನ್ “ದೆಹಲಿಯ ರಾಜಕೀಯವನ್ನೂ, ಸಾಂಸ್ಕೃತಿಕ ಸೂಕ್ಷ್ಮಗಳನ್ನೂ, ಸುದ್ದಿ ಮನೆಯ ಆಳವನ್ನೂ ಅರಿತಿರುವ ಸತೀಶ್ ಈಗ ಹೊಸ ಜವಾಬ್ದಾರಿ ಹೊತ್ತಿದ್ದಾರೆ. ಅವರಿಗೆ ಶುಭಾಷಯ ಹೇಳುತ್ತಾ.. ಕನ್ನಡಕ್ಕೆ ಒಂದು ಒಳ್ಳೆಯ ಮನಸ್ಸಿನ ಚಾನಲ್ ಕಟ್ಟಲಿ ಎಂದು ಹಾರೈಸುತ್ತೇನೆ,” ಎಂದಿದ್ದಾರೆ.

‘ಪತ್ರಿಕೋದ್ಯಮ ಕೈ ಬೀಸಿ ಕರೆದಾಗ ಪತ್ರಕರ್ತರೆನಿಸಿಕೊಂಡವರು ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ,’ ಎಂದು ನಂಬಿರುವವರು ಡಿ. ಪಿ ಸತೀಶ್. ಇದೀಗ ಅವರೇ ನಂಬಿದ ಪತ್ರಿಕೋದ್ಯಮ ಅವರಿಷ್ಟದ ಕರ್ನಾಟಕದತ್ತ ಕರೆ ತಂದಿದೆ. ಅಂಬಾನಿ ಒಡೆತನದ ಈ ಟಿವಿಯಲ್ಲಿ ಸತೀಶ್ ಏನೇನು ಮಾಡಲಿದ್ದಾರೆ? ಅವರ ಇಂಗ್ಲೀಷ್ ಪತ್ರಿಕೋದ್ಯಮದ ವೃತ್ತಿ ಕೌಶ್ಯಲ್ಯಗಳು ಕನ್ನಡದಲ್ಲಿ ಯಾವ ಮಟ್ಟಿನ ಬದಲಾವಣೆಗಳನ್ನು ತರಲಿದೆ ಕಾದು ನೋಡಬೇಕು.

ಒಂದೂವರೆ ತಿಂಗಳ ಹಿಂದೆ ಬೆಂಗಳೂರಿಗೆ ಭೇಟಿ ನೀಡಿದ್ದ ರಾಹುಲ್ ಜೋಷಿ ಈ ಟಿವಿ ನ್ಯೂಸ್ ಕನ್ನಡದ ಸಂಪಾದಕ ರಂಗನಾಥ್ ಭಾರಧ್ವಾಜ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು ಎಂದು ಸುದ್ದಿಯಾಗಿತ್ತು. ಆಗ ವಾಹಿನಿ 5ನೇ ಸ್ಥಾನದಲ್ಲಿತ್ತು. ವಾರದ ಹಿಂದಷ್ಟೆ ದಿಲ್ಲಿಯಲ್ಲಿ ನಡೆದ ನೆಟ್ವರ್ಕ್ 18 ಸಮೂಹದ ಸಭೆಯಲ್ಲಿ ಕರ್ನಾಟಕದ ವಾಹಿನಿಗೆ ತಮ್ಮಲ್ಲಿಂದಲೇ ಒಬ್ಬರನ್ನು ಮುಖ್ಯಸ್ಥರನ್ನಾಗಿ ಕಳುಹಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಸದ್ಯ ಗುರುವಾರ ಡಿ. ಪಿ. ಸತೀಶ್ ಅವರ ನೇಮಕದ ಮೂಲಕ ವಾಹಿನಿಯ ಸಾರಥ್ಯ ಅಧಿಕೃತವಾಗಿ ಬದಲಾಗಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ರಂಗನಾಥ್ ಭಾರಧ್ವಾಜ್ ಸ್ಥಾನ ಬದಲಾದರೂ ಅಚ್ಚರಿ ಇಲ್ಲ ಎನ್ನುತ್ತಿವೆ ವಾಹಿನಿಯ ಮೂಲಗಳು.

ಈ ನಡುವೆ ಕನ್ನಡದಲ್ಲಿ ಎರಡು ಹೊಸ ಸುದ್ದಿ ವಾಹಿನಿಗಳು ಆರಂಭವಾಗುವ ನಿರೀಕ್ಷೆ ಇದೆ. ಉದ್ಯಮಿ ವಿಜಯ್ ಸಂಕೇಶ್ವರ್ ಮಾಲೀಕತ್ವದ ವಾಹಿನಿಯ ಕೆಲಸ ಭರದಿಂದ ಸಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜನವರಿ ಮಧ್ಯಭಾಗದಲ್ಲಿ ವಾಹಿನಿ ತೆರೆಗೆ ಬರಲಿದೆ. ಜತೆಗೆ, ರಾಮೋಜಿರಾವ್ ಕೂಡ ಕನ್ನಡದಲ್ಲಿ ತಮ್ಮ ಹಳೆಯ ಈಟಿವಿ ಬ್ರಾಂಡ್ ಅಡಿಯಲ್ಲಿ ವಾಹಿನಿಯೊಂದನ್ನು ಆರಂಭಿಸುವ ಕುರಿತು ಸದ್ಯದಲ್ಲಿಯೇ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ. ಹೀಗೇನಾದರೂ ಆದರೆ, ಈಗಿರುವ ಈಟಿವಿ ಕನ್ನಡದಿಂದ ಒಂದಷ್ಟು ಜನ ವಲಸೆ ಹೋಗುವ ಸಾಧ್ಯತೆಗಳಿವೆ. ಇಂತಹ ಸಮಯದಲ್ಲಿ ಡಿ. ಪಿ. ಸತೀಶ್ ಕನ್ನಡ ವಾಹಿನಿಯೊಂದರ ಸಾರಥ್ಯ ವಹಿಸಿಕೊಂಡಿದ್ದಾರೆ. ಜತೆಗೆ, ವಾಹಿನಿಯನ್ನು ನಂಬರ್ ವನ್ ಸ್ಥಾನಕ್ಕೆ ತರುವ ಆಡಳಿತ ಮಂಡಳಿಯ ಗುರಿಯನ್ನು ಅವರು ತಲುಪಬೇಕಿದೆ.

ಮುಂದಿನ ಕೆಲವು ತಿಂಗಳುಗಳಲ್ಲಿ ಸುದ್ದಿ ವಾಹಿನಿಗಳ ಒಳಗೆ ನಡೆಯುವ ಬದಲಾವಣೆಗಳು ಹಾಗೂ ಬೆಳವಣಿಗೆಗಳು ಸಹಜವಾಗಿಯೇ ಕುತೂಹಲ ಮೂಡಿಸಿವೆ.

Leave a comment

Top