An unconventional News Portal.

ಮಿನರಲ್ ವಾಟರ್ ಆಯ್ತು; ಈಗ ಮಾರುಕಟ್ಟೆಯಲ್ಲಿ ಶುದ್ಧ ಗಾಳಿಯ ಬಾಟೆಲ್‌ಗಳೂ ಲಭ್ಯ!

ಮಿನರಲ್ ವಾಟರ್ ಆಯ್ತು; ಈಗ ಮಾರುಕಟ್ಟೆಯಲ್ಲಿ ಶುದ್ಧ ಗಾಳಿಯ ಬಾಟೆಲ್‌ಗಳೂ ಲಭ್ಯ!

ಕೆಲವೇ ವರ್ಷಗಳ ಹಿಂದೆ ನೀರನ್ನು ಬಾಟಲಿಯಲ್ಲಿ ಮಾರಾಟ ಮಾಡುವ ವಿಚಾರ ತಮಾಷೆಯ ವಸ್ತುವಾಗಿತ್ತು. ನೈಸರ್ಗಿಕವಾಗಿ ಸಿಗುವ, ನಿತ್ಯ ಬದುಕಿನಲ್ಲಿ ಸಂಜೀವಿನಿಯಾಗಿದ್ದ ನೀರು ಕೂಡ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತದೆ ಎಂದರೆ ಬಹುತೇಕರು ನಂಬಲು ಸಿದ್ಧರಿರಲಿಲ್ಲ. ಆದರೆ 2013ರ ಹೊತ್ತಿಗೆ ಭಾರತದಲ್ಲಿ ಮಿನರಲ್ ವಾಟರ್‌ ಮಾರಕಟ್ಟೆ 6 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸಿತ್ತು. 2018ರ ಹೊತ್ತಿಗೆ ಇದು 18 ಸಾವಿರ ಕೋಟಿಗೆ ಏರಿಕೆಯಾಗುವ ಅಂದಾಜಿದೆ. ವಿಷಯ ಅದಲ್ಲ…

ಜಗತ್ತಿನಾದ್ಯಂತ ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣ ನೀರಿನಂತೆಯೇ ಶುದ್ಧ ಗಾಳಿಗೂ ಮಾರುಕಟ್ಟೆಯನ್ನು ಒದಗಿಸುತ್ತಿದೆ. ಈಗಾಗಲೇ ಆನ್‌ಲೈನ್ ಮಾರುಕಟ್ಟೆಯಲ್ಲಿ ಶುದ್ಧಗಾಳಿಯನ್ನು ತುಂಬಿರುವ ಬಾಟಲ್‌ಗಳು ಮಾರಾಟಕ್ಕೆ ಲಭ್ಯವಾಗುತ್ತಿವೆ. ಇವುಗಳಿಗೆ ಮೊದಲು ಚೈನಾ ನಂತರ ಭಾರತದಲ್ಲಿ ಬೇಡಿಕೆ ಕಂಡು ಬಂದಿದೆ.

ಅಲ್ಬರ್ಟಾದ ಎಡ್ಮಂಟನ್‌ನಲ್ಲಿರುವ ವೈಟಾಲಿಟಿ ಎಂಬ ಕಂಪನಿ ಶುದ್ಧ ಗಾಳಿಯನ್ನು ಮಾರಾಟ ಮಾಡುತ್ತಿದೆ. ಕೆನಡಾದ ಹಸಿರು ಪರಿಸರದಲ್ಲಿ ಗಾಳಿಯನ್ನು ಸಂಗ್ರಹಿಸಿ, ಅದನ್ನು ಚೆಂದದ ಬಾಟೆಲ್‌ಗಳನ್ನು ತುಂಬಿ ಚೈನಾ ಮತ್ತು ಭಾರತದ ಗ್ರಾಹಕರಿಗೆ ತಲುಪಿಸುತ್ತಿದೆ. ಇದರ ಜತೆಗೆ, ವಿಶೇಷವಾಗಿ ವಿನ್ಯಾಸ ಮಾಡಿರುವ ಮಾಸ್ಕ್‌ ಒಂದನ್ನು ಕಂಪನಿ ನೀಡುತ್ತದೆ. ಒಂದು ಬಾಟಲಿಯನ್ನು ಖರೀದಿಸಿದರೆ, ಸುಮಾರು 160 ಬಾರಿ ಶುದ್ಧ ಗಾಳಿಯನ್ನು ಉಸಿರಾಡಬಹುದಾಗಿದೆ. ಇದಕ್ಕಿರುವ ಮಾರುಕಟ್ಟೆಯ ಬೆಲೆ 24 ಡಾಲರ್. ಸದ್ಯ ಇದೇ ಕಂಪನಿಯ ಬಾಟೆಲ್‌ಗಳು ಅಮೆಝಾನ್‌ನಲ್ಲಿಯೂ ಲಭ್ಯ ಇವೆ.

ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಲಭ್ಯ ಇರುವ ಶುದ್ಧಗಾಳಿಯ ಬಾಟೆಲ್‌ಗಳು.

ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಲಭ್ಯ ಇರುವ ಶುದ್ಧಗಾಳಿಯ ಬಾಟೆಲ್‌ಗಳು.

ಕಂಪನಿಯು ಮೊದಲು ಇದನ್ನೊಂದು ತಮಾಷೆಯ ವಿಚಾರವಾಗಿಯೇ ಮಾರುಕಟ್ಟೆಗೆ ಪರಿಚಯಿಸಿತ್ತು. ಆದರೆ ಅಚ್ಚರಿ ಎಂಬಂತೆ, ಶುದ್ಧ ಗಾಳಿಯ ಬಾಟೆಲ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಂಡು ಬಂತು. ಸದ್ಯ ಚೈನಾ, ಭಾರತ ಮತ್ತು ದಕ್ಷಿಣ ಕೋರಿಯಾಗಳಲ್ಲಿ ಕಂಪನಿ ಇಂತಹ ಬಾಟೆಲ್‌ ಗಾಳಿಯನ್ನು ಮಾರಾಟ ಮಾಡುತ್ತಿದೆ. ವೈಟಾಲಿಟಿ ಏರ್‌ ಕಂಪನಿಯ ಮುಖ್ಯ ವ್ಯವಸ್ಥಾಪಕ ಮೋಸೆಸ್ ಲಾಮ್, “ಹೆಚ್ಚು ವಾಯುಮಾಲಿನ್ಯನಿಂದ ಕೂಡಿರುವ ನಗರಗಳಲ್ಲಿ ನಮ್ಮ ಉತ್ಪನ್ನಕ್ಕೆ ಬೇಡಿಕೆ ಕಂಡು ಬಂದಿದೆ. ಮೊದಲು ಇದನ್ನು ಪರಿಸರ ಮಾಲಿನ್ಯದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಮಾರುಕಟ್ಟೆಗೆ ಪರಿಚಯಿಸಿದೆವು. ಆದರೆ, ಜನ ಇದನ್ನು ನಿತ್ಯ ಬದುಕಿನಲ್ಲಿ ಬಳಸತೊಡಗಿದರು,” ಎನ್ನುತ್ತಾರೆ.

ಸದ್ಯ ಚೈನಾದಲ್ಲಿ ವರ್ಷಕ್ಕೆ 40 ಸಾವಿರ ಹಾಗೂ ಭಾರತದಲ್ಲಿ ವರ್ಷಕ್ಕೆ 10 ಸಾವಿರ ಶುದ್ಧ ಗಾಳಿಯ ಬಾಟೆಲ್‌ಗಳು ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆ ಇನ್ನಷ್ಟು ಬೆಳೆಯುವ ಸೂಚನೆ ಇದೆ.

ಹೆಚ್ಚುತ್ತಿರುವ ನಗರೀಕರಣ, ಕೈಗಾರಿಕೆಗಳು ಹಾಗೂ ವಾಹನಗಳಿಂದಾಗಿ ವಾಯು ಮಾಲಿನ್ಯ ತಡೆಯಲು ಅಸಾಧ್ಯವಾದ ಮಟ್ಟಕ್ಕೆ ಬೆಳೆಯುತ್ತಿದೆ. ಜಾಗತಿಕವಾಗಿ ಪ್ರತಿ ವರ್ಷ ಸುಮಾರು 55 ಲಕ್ಷದಿಂದ 70 ಲಕ್ಷದಷ್ಟು ಜನ ವಾಯು ಮಾಲಿನ್ಯದಿಂದಾಗಿಯೇ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೈನಾ ಹಾಗೂ ಭಾರತದ ಪಾಲು ಸುಮಾರು 30 ಲಕ್ಷ ದಾಟುತ್ತಿದೆ ಎನ್ನುತ್ತವೆ ಅಂಕಿ ಅಂಶಗಳು. ಹೀಗಾಗಿಯೇ, ಶುದ್ಧ ಬಾಟೆಲ್‌ ಗಾಳಿಗೆ ಈ ದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ.

ವೈಟಾಲಿಟಿ ಕಂಪನಿ ರೀತಿಯಲ್ಲಿಯೇ ಯುಕೆ ಹಾಗೂ ಯುರೋಪಿಯನ್‌ ದೇಶಗಳ ಹಲವು ಖಾಸಗಿ ಕಂಪನಿಗಳು ಶುದ್ಧ ಗಾಳಿಯನ್ನು ಮಾರಾಟ ಮಾಡುತ್ತಿವೆ. ಇದರ ಜತೆಗೆ,  ವಾಯು ಮಾಲಿನ್ಯದಿಂದ ರಕ್ಷಣೆಗೆ ಮಾಸ್ಕ್‌ಗಳನ್ನು ವಿನ್ಯಾಸ ಮಾಡಿ ಮಾರುಕಟ್ಟೆಗೆ ಬಿಡಲಾಗುತ್ತಿದೆ.

ಫೆಡ್ರಿಕ್ ಕೆಂಪೆ ಮತ್ತು ಅಲೆಗ್ಸಾಂಡರ್‌ ಎಂಬ ಸ್ವೀಡನ್‌ ಪ್ರಜೆಗಳಿಬ್ಬರು ಭಾರತವನ್ನು ಗುರಿಯಾಗಿಸಿಕೊಂಡು ಇಂತಹ ಮಾಸ್ಕ್‌ಗಳನ್ನು ತಯಾರಿಕೆಯಲ್ಲಿ ತೊಡಗಿದ್ದಾರೆ. ಹಿಂದೊಮ್ಮೆ ಅವರಿಬ್ಬರು ಗುಜರಾತಿನ ಅಹಮದಾಬಾದ್‌ಗೆ ಬಂದಾಗ ಅಲ್ಲಿನ ಕಲುಷಿತ ವಾಯು ಸೇವನೆಯಿಂದ ಅಸ್ತಮಾ ಸಮಸ್ಯೆಗೆ ಒಳಗಾಗಿದ್ದರು. ಈ ಸಮಯದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದ್ದ ಮಾಸ್ಕ್‌ಗಳನ್ನು ಖರೀದಿಸಲು ಮುಂದಾಗಿದ್ದರು. ಆದರೆ ಉತ್ತಮ ಗುಣಮಟ್ಟದ ಮಾಸ್ಕ್‌ಗಳು ಅವರಿಗೆ ಸಿಕ್ಕಿರಲಿಲ್ಲ. ಸ್ವದೇಶಕ್ಕೆ ಮರಳಿದವರೇ, ಗುಣಮಟ್ಟದ ಮಾಸ್ಕ್‌ ತಯಾರಿಸಿ ಭಾರತದ ಮಾರುಕಟ್ಟೆಗೆ ಬಿಟ್ಟರು.

ಹೀಗಾಗಿ, ಮಾಸ್ಕ್‌ಗಳ ಜತೆಗೆ ಶುದ್ಧ ಬಾಟೆಲ್‌ ಗಾಳಿಯ ಮಾರುಕಟ್ಟೆಯೂ ಈಗ ಬೆಳೆಯುತ್ತಿರುವುದರಿಂದ ಮುಂದೊಂದು ದಿನ ನೀರಿನಂತೆಯೇ ಜನ ಗಾಳಿಯನ್ನೂ ಖರೀದಿಸುವ ದಿನಗಳು ದೂರವೇನಿಲ್ಲ.

ಆದರೆ, ಶುದ್ಧ ಗಾಳಿಯನ್ನು ಬಾಟೆಲ್‌ನಲ್ಲಿ ಸಂಗ್ರಹಿಸಿ ನೀಡುವುದು ಬೋಗಸ್‌ ಎನ್ನುತ್ತಾರೆ ತಜ್ಞರು. ಕೆನಡಾದ ಶ್ವಾಸ ಸಂಶೋಧನಾ ಕೇಂದ್ರದ ಸ್ವಾನ್ ಆರೋನ್, “ಸುದ್ಧ ಗಾಳಿ ಎಂಬುದು ಗಿಮಿಕ್ ಅಷ್ಟೆ. ಹೆಚ್ಚುತ್ತಿರುವ ಮಾಲಿನ್ಯ ಮಾರುಕಟ್ಟೆಯನ್ನೂ ಸೃಷ್ಟಿಸುತ್ತಿದೆ. ಇದನ್ನು ಕೆಲವು ಕಂಪನಿಗಳು ಬಳಸಿಕೊಳ್ಳುತ್ತಿವೆ,” ಎಂದು ಆರೋಪಿಸುತ್ತಾರೆ.

ಸದ್ಯ ಇಂತಹ ತಜ್ಞರ ಹೇಳಿಕೆಗಳ ಆಚೆಗೂ, ಶುದ್ಧ ಗಾಳಿಗಾಗಿ ಚೈನಾ ಮತ್ತು ಭಾರತದ ನಗರ ಪ್ರದೇಶದ ಜನ ಬಾಟೆಲ್‌ ಗಾಳಿಗೆ ಮೊರೆ ಹೋಗುತ್ತಿದ್ದಾರೆ. ಅಂತವರನ್ನು ಇಟ್ಟುಕೊಂಡೇ ಮಾರುಕಟ್ಟೆಯೊಂದು ನಿಧಾನವಾಗಿ ಬೆಳೆಯುತ್ತಿದೆ. ಮಿನರಲ್‌ ಬಾಟರ್‌ ಬಾಟೆಲ್‌ ಮಾರುಕಟ್ಟೆಗೆ ಒಗ್ಗಿರುವ ಜನ, ಮುಂದೊಂದು ದಿನ  ಬಾಟೆಲ್‌ ಗಾಳಿಗೂ ಒಗ್ಗಿಕೊಂಡರೆ ಅಚ್ಚರಿ ಏನಿಲ್ಲ.

Leave a comment

Top