An unconventional News Portal.

ಸುಪ್ರಿಂ ‘ನೀಟ್’ಗೆ ಸೆಡ್ಡು ಹೊಡೆದ ಕೇಂದ್ರ ಸರಕಾರ: ಸುಗ್ರೀವಾಜ್ಞೆಗೆ ಸಂಪುಟ ಒಪ್ಪಿಗೆ

ಸುಪ್ರಿಂ ‘ನೀಟ್’ಗೆ ಸೆಡ್ಡು ಹೊಡೆದ ಕೇಂದ್ರ ಸರಕಾರ: ಸುಗ್ರೀವಾಜ್ಞೆಗೆ ಸಂಪುಟ ಒಪ್ಪಿಗೆ

ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್ ಗಳ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದ ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ( ನೀಟ್)ಯನ್ನು ಒಂದು ವರ್ಷ ಮುಂದೂಡಲು ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿಸಿದೆ.

ಸುಪ್ರೀಂಕೋರ್ಟ್ ಆದೇಶದ ಅಡಿಯಲ್ಲಿ ನಡೆಸಬೇಕಾಗಿರುವ ನೀಟ್ ಪರೀಕ್ಷೆಯಿಂದ ರಾಜ್ಯ ಸರ್ಕಾರಗಳು ಮತ್ತು ಅವುಗಳ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಿಗೆ ಒಂದು ವರ್ಷದವರೆಗೆ ವಿನಾಯ್ತಿ ನೀಡಲಾಗಿದೆ. ಈ ಕುರಿತು ವಿಶೇಷ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಒಪ್ಪಿಗೆ ನೀಡಿರುವುದರಿಂದ ಸದ್ಯಕ್ಕೆ ವಿದ್ಯಾರ್ಥಿಗಳು ತಾತ್ಕಾಲಿಕ ನಿಟ್ಟಿಸಿರು ಬಿಟ್ಟಿದ್ದಾರೆ.

ಇದೀಗ ಚೆಂಡು ರಾಷ್ಟ್ರಪತಿಗಳ ಅಂಗಳದಲಿದ್ದು, ಸಚಿವ ಸಂಪುಟ ತೆಗೆದುಕೊಂಡಿರುವ ತೀರ್ಮಾನಕ್ಕೆ ರಾಷ್ಟ್ರಪತಿ ಅಂಕಿತ ಹಾಕಬೇಕಾಗಿದೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ವಿದ್ಯಾರ್ಥಿಗಳು ಎದುರಿಸುತ್ತಿರುವ ಒತ್ತಡವನ್ನು ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರಗಳು ಮನವಿ ಸಲ್ಲಿಸಿದ ಬಳಿಕ ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಸೋಮವಾರ ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಸುತ್ತಿನ ಮಾತುಕತೆ ನಡೆಸಿ ಸುಗ್ರೀವಾಜ್ಞೆ ಹೊರಡಿಸುವ ಮುನ್ನ ಸಹಮತ ಸಾಧಿಸಲು ಯತ್ನಿಸಲಾಗಿತ್ತು. 14 ರಾಜ್ಯಗಳ ಆರೋಗ್ಯ ಸಚಿವರ ಜೊತೆಗೆ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಮೊದಲು ಮಾತುಕತೆ ನಡೆಸಿದ್ದರು. ಬಳಿಕ ಕಾಂಗ್ರೆಸ್, ಐಎನ್‍ಎಲ್‍ಡಿ ನಾಯಕರು ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ನಡುವೆ ಸಭೆಗಳು ನಡೆದಿದ್ದವು.

ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಸಾಕಷ್ಟು ಸಮಯ ಸಿಗದ ಕಾರಣ ನೀಟ್‍ನ್ನು ಮುಂದೂಡಬೇಕು ಎಂದು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದವು.

ಸುಗ್ರೀವಾಜ್ಞೆಯ ಪ್ರಕಾರ ರಾಜ್ಯ ಸರ್ಕಾರಗಳು ಮತ್ತು ರಾಜ್ಯ ಶಿಕ್ಷಣ ಮಂಡಳಿಗಳನ್ನು ನೀಟ್ ವ್ಯಾಪ್ತಿಯಿಂದ ಒಂದು ವರ್ಷದವರೆಗೆ ಹೊರಗಿಡಲಾಗುವುದು. ವೈದ್ಯಕೀಯ ಮತ್ತು ದಂತ ವಿಜ್ಞಾನ ಕೋರ್ಸ್‍ಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ನಡೆಸಬೇಕಾಗಿರುವ ಸಾಮಾನ್ಯ ಪರೀಕ್ಷೆ ಇದಾಗಿದ್ದು, ವಿದ್ಯಾರ್ಥಿಗಳು ಏಕೈಕ ರಾಷ್ಟ್ರೀಯ ಪ್ರವೇಶ ಪರೀಕ್ಷೆಗೆ ಹಾಜರಾಗಬೇಕು ಎಂದು ಸುಪ್ರಿಂಕೋರ್ಟ್ ತೀರ್ಪು ನೀಡಿತ್ತು.

ಈಗಾಗಲೇ ಮೇ.1 ರಂದು ನಡೆದ ಮೊದಲ ಹಂತದ ನೀಟ್ ಪರೀಕ್ಷೆಯಲ್ಲಿ 6.5 ಲಕ್ಷ ಮಂದಿ ಪರೀಕ್ಷೆ ಬರೆದಿದ್ದು, ಎರಡನೇ ಹಂತದ ಪರೀಕ್ಷೆ ಜುಲೈ 24 ರಂದು ನಡೆಯಲಿದೆ. ರಾಜ್ಯಗಳು ಹಾಗೂ ಖಾಸಗಿ ಕಾಲೇಜುಗಳು ನಡೆಸುವ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದೊಡ್ಡ ಸಂಖ್ಯೆಯಲ್ಲಿ ದೂರು ಬಂದ ಕಾರಣ ಕಳೆದ ತಿಂಗಳು ಸುಪ್ರೀಂ ಕೋರ್ಟ್ ದೇಶಾದ್ಯಂತ ಏಕರೂಪದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಬೇಕೆಂದು ಮಹತ್ವರ ಆದೇಶ ಹೊರಡಿಸಿತ್ತು.

ಆದರೆ ಆದೇಶ ಬಂದ ನಂತರ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಒಳಗೊಂಡು ಹಲವು ರಾಜ್ಯಗಳು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಒಂದು ವರ್ಷ ಮುಂದೂಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದವು.

ಯಾರು ನಿರಾಳ? ಯಾರಿಗೆ ಸಮಸ್ಯೆ?

ಕೇಂದ್ರ ಸುಗ್ರೀವಾಜ್ಞೆ ಹೊರಡಿಸಿರುವುದರಿಂದ ರಾಜ್ಯ ಸರ್ಕಾರದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಮಹತ್ವ ದೊರೆಯಲಿದೆ. ಈಗಾಗಲೇ ಮೊದಲ ವಾರ ಸಿಇಟಿಯಲ್ಲಿ ಜೀವಶಾಸ್ತ್ರದ ಪರೀಕ್ಷೆ ನಡೆದಿರುವುದರಿಂದ ವೈದ್ಯ ಹಾಗೂ ದಂತ ವೈದ್ಯಕೀಯ ಪದವಿ ಕೋರ್ಸ್‍ಗಳಿಗೆ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುವ ಅಗತ್ಯವಿಲ್ಲ.

ಈಗ ನಡೆದಿರುವ ಸಿಇಟಿ ಅಂಕ ಬಳಸಿ ರ್ಯಾಂಕ್ ನೀಡಿದರಾಯಿತು. ಈ ಮೂಲಕ ರಾಜ್ಯದ ವಿದ್ಯಾರ್ಥಿಗಳ ನೀಟ್, ಸಿಇಟಿ ಗೊಂದಲಕ್ಕೆ ತೆರೆ ಬೀಳಲಿದೆ. ಈ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಒಪ್ಪಿಗೆ ಸೂಚಿಸಿದರೆ, ಜುಲೈನಲ್ಲಿ ನಡೆಯಬೇಕಿದ್ದ 2ನೇ ಹಂತದ ನೀಟ್ ಸ್ಥಗಿತಗೊಳ್ಳಲಿದೆ.

ಆದರೆ, ಕಾಮೆಡ್- ಕೆ, ಯುಜಿ ಸಿಇಟಿ ಮೂಲಕ ಪ್ರವೇಶ ಪಡೆಯಬಯಸುವ ವಿದ್ಯಾರ್ಥಿಗಳಿಗೆ ಸಂಕಟ ಎದುರಾಗುವ ಸಾಧ್ಯತೆಯಿದೆ. ಏಕೆಂದರೆ, ಸುಪ್ರೀಂಕೋರ್ಟ್ ನಿರ್ದೇಶನದಂತೆ ಕಾಮೆಡ್-ಕೆ ವೈದ್ಯ ಹಾಗೂ ದಂತ ವೈದ್ಯ ಕೋರ್ಸ್ಗಳ ಪ್ರವೇಶ ಪರೀಕ್ಷೆ ನಡೆಸಿರಲಿಲ್ಲ. ಮತ್ತೊಮ್ಮೆ ಒಂದೂವರೆ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಜೀವಶಾಸ್ತ್ರ ಪರೀಕ್ಷೆ ಎದುರಿಸಬೇಕಾಗಬಹುದು.

Top