An unconventional News Portal.

‘ನೀಟ್’ ಆಗಿ ಪರೀಕ್ಷೆ ನಡೆಸಿ: ಕೇಂದ್ರದ ಮನವಿ ತಳ್ಳಿಹಾಕಿದ ಸುಪ್ರಿಂ ಕೋರ್ಟ್

‘ನೀಟ್’ ಆಗಿ ಪರೀಕ್ಷೆ ನಡೆಸಿ: ಕೇಂದ್ರದ ಮನವಿ ತಳ್ಳಿಹಾಕಿದ ಸುಪ್ರಿಂ ಕೋರ್ಟ್

ಎರಡು ಹಂತಗಳಲ್ಲಿ ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್) ನಡೆಸುವ ಆದೇಶದ ಮರು ಪರಿಶೀಲನೆಗೆ ಸಲ್ಲಿಸಿದ್ದ ಕೇಂದ್ರ ಸರಕಾರದ ಮನವಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಲು ಶುಕ್ರವಾರ ಸೂಚಿಸಿದೆ.

‘ನೀಟ್’ ಪರೀಕ್ಷೆಯನ್ನು ಒಂದೇ ಹಂತದಲ್ಲಿ ಜು.24ರಂದು ನಡೆಸಬೇಕೆಂಬ ಕೇಂದ್ರ ಸರಕಾರದ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಮಾತ್ರವಲ್ಲ, ಈ ಸಂಬಂಧ ತಾನಿನ್ನು ಯಾವುದೇ ಆದೇಶವನ್ನು ಹೊರಡಿಸುವುದಿಲ್ಲ ಎಂದು ಅದು ಕೇಂದ್ರ ಸರಕಾರಕ್ಕೆ ಸ್ಪಷ್ಟಪಡಿಸಿದೆ.

ಎರಡು ಹಂತಗಳಲ್ಲಿ ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಮರು ಪರಿಶೀಲಿಸಲು ಕೇಂದ್ರ ಸರಕಾರ ಶುಕ್ರವಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ಆಲಿಸಲಿಲ್ಲ.

ವೈದ್ಯಕೀಯ (ಎಂಬಿಬಿಎಸ್) ಮತ್ತು ದಂತ ವೈದ್ಯಕೀಯ (ಎಂಡಿಎಸ್) ಕೋರ್ಸುಗಳ ಪ್ರವೇಶಕ್ಕೆ ಮೊದಲ ಹಂತದ ನೀಟ್ (ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ) ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್ ಮೆಟ್ಟಲೇರಿತ್ತು.

“ವಿಷಯವನ್ನು ಈ ದಿನವೇ ಆಲಿಸಲು ಯಾವುದೇ ಪೀಠಕ್ಕೆ ನಾವು ವಹಿಸುವುದಿಲ್ಲ. ಸಂಬಂಧಪಟ್ಟ ಕಕ್ಷಿದಾರರು ಆದೇಶ ಮರುಪರಿಶೀಲನೆ ಕೋರಿ ಅರ್ಜಿಗಳನ್ನು ಸಲ್ಲಿಸಿದ ಬಳಿಕ ಸೂಕ್ತ ಕಾಲದಲ್ಲಿ ಅರ್ಜಿಯನ್ನು ಆಲಿಸಲಾಗುವುದು,” ಎಂದು ಕೇಂದ್ರ ಸರ್ಕಾರದ ಮನವಿಗೆ ಉತ್ತರವಾಗಿ ನ್ಯಾಯಾಲಯ ತಿಳಿಸಿತು.

ವೈದ್ಯಕೀಯ ಕೋರ್ಸ್‍ಗಳು ಪ್ರವೇಶ ಸಂಬಂಧಿಸಿದಂತೆ ರಾಜ್ಯಗಳ ಅಹವಾಲುಗಳನ್ನೂ ಆಲಿಸಬೇಕು ಮತ್ತು ಆಯಾ ರಾಜ್ಯಗಳಿಗೇ ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ ನಡೆಸುವ ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಗೆ ಮನವಿ ಸಲ್ಲಿಸಿತ್ತು.

ಸಿಬಿಎಸ್‍ಇ ಮತ್ತು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ಎರಡು ಹಂತಗಳಲ್ಲಿ ಪರೀಕ್ಷೆ ನಡೆಸುವುದಾಗಿ ಜಂಟಿ ಪ್ರಮಾಣಪತ್ರ ಸಲ್ಲಿಸಿದ ಬಳಿ ಸುಪ್ರೀಂಕೋರ್ಟ್ ಗುರುವಾರ ಏಕರೂಪ ಪ್ರವೇಶ ಪರೀಕ್ಷೆಗೆ ತನ್ನ ಅಂಗೀಕಾರ ಮುದ್ರೆ ಒತ್ತಿ ಆದೇಶ ಹೊರಡಿಸಿತ್ತು.

ಎರಡು ಹಂತಗಳಲ್ಲಿ ನೀಟ್ ಪರೀಕ್ಷೆ ನಡೆಸುವ ಸಂಬಂಧ ರಾಜ್ಯಗಳು ಮತ್ತು ಖಾಸಗಿ ಕಾಲೇಜುಗಳ ವಿರೋಧವನ್ನು ಗುರುವಾರ ತಳ್ಳಿ ಹಾಕಿದ್ದ ಸುಪ್ರೀಂಕೋರ್ಟ್, ಮೇ 1 ರಂದು ಮೊದಲ ಹಂತ ಮತ್ತು ಜುಲೈ 24ರಂದು ಎರಡನೇ ಹಂತದ ಪ್ರವೇಶ ಪರೀಕ್ಷೆ ನಡೆಸಲು ಅನುಮತಿ ನೀಡಿತ್ತು.

ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು ಎರಡು ಹಂತಗಳ ನೀಟ್ ಬದಲಿಗೆ ಜುಲೈ 24ರಂದು ಒಂದೇ ದಿನ ನೀಟ್ ಪರೀಕ್ಷೆ ನಡೆಸುವಂತೆ ಸುಪ್ರೀಂಕೋರ್ಟ್ ಗೆ ಮನವಿ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ ರಾಜ್ಯ ವೈದ್ಯಕೀಯ ಪರೀಕ್ಷೆಯನ್ನು ರದ್ದುಗೊಳಿಸಬಾರದೆಂದು ಈ ಸಂದರ್ಭದಲ್ಲಿ ಮನವಿ ಮಾಡಿದ್ದರು.

Top