An unconventional News Portal.

ಗ್ಯಾರೇಜ್‌ನಲ್ಲಿ ಹುಟ್ಟಿದ ಎನ್‌ಡಿಟಿವಿಯೂ; ಸಂಸ್ಥಾಪಕ ಪ್ರಣಯ್ ರಾಯ್ ಮೇಲಿನ ಸಿಬಿಐ ದಾಳಿಯೂ

ಗ್ಯಾರೇಜ್‌ನಲ್ಲಿ ಹುಟ್ಟಿದ ಎನ್‌ಡಿಟಿವಿಯೂ; ಸಂಸ್ಥಾಪಕ ಪ್ರಣಯ್ ರಾಯ್ ಮೇಲಿನ ಸಿಬಿಐ ದಾಳಿಯೂ

ಐಸಿಐಸಿಐ ಬ್ಯಾಂಕ್‌‍ಗೆ ಕೋಟ್ಯಂತರ ರೂಪಾಯಿ ನಷ್ಟವನ್ನುಂಟು ಮಾಡಿದ ಆರೋಪದ ಮೇಲೆ ನ್ಯೂ ಡೆಲ್ಲಿ ಟೆಲಿವಿಜ್ಹನ್ (ಎನ್‍ಡಿಟಿವಿ) ಸಂಸ್ಥಾಪಕ ಪ್ರಣಯ್ ರಾಯ್ ಹಾಗೂ ಪತ್ನಿ ರಾಧಿಕಾ ಅವರ ವಿರುದ್ಧ ಸಿಬಿಐ ಕೇಸು ದಾಖಲಿಸಿದೆ. ಸೋಮವಾರ ಬೆಳಗ್ಗೆ ನವದೆಹಲಿಯ ಗ್ರೇಟರ್ ಕೈಲಾಶ್ ನಲ್ಲಿರುವ ಪ್ರಣಯ್ ರಾಯ್ ಅವರ ನಿವಾಸದ ಮೇಲೆ ದಾಳಿಯನ್ನೂ ನಡೆಸಲಾಗಿದೆ.

ಬ್ಯಾಂಕ್‍ನಿಂದ ಪಡೆದ ಸಾಲವನ್ನು ಪಾವತಿಸಿಲ್ಲ ಮತ್ತು ರಿಸರ್ವ್ ಬ್ಯಾಂಕ್ ನಿಯಮಗಳನ್ನು ಉಲ್ಲಂಘಿಸಿ ವಿದೇಶದಿಂದ ಹಣ ಸ್ವೀಕರಿಸಿದ್ದಾರೆ ಎಂಬ ಆರೋಪ ಪ್ರಣಯ್ ಮೇಲೆ ಹೊರಿಸಲಾಗಿದೆ. ಐಸಿಐಸಿಐ ಬ್ಯಾಂಕ್‍ಗೆ ₹ 48 ಕೋಟಿ ನಷ್ಟವುಂಟು ಮಾಡಿದ್ದಾರೆ ಎಂಬ ಆರೋಪವೂ ಇದರಲ್ಲಿ ಸೇರಿದೆ.

“ಸಿಬಿಐ ಮತ್ತು  ಇತರ ತನಿಖಾ ಸಂಸ್ಥೆಗಳು ನಮ್ಮ ವಿರುದ್ಧ ಹೂಡಿರುವ ಸಾಮೂಹಿಕ ಬೇಟೆ ವಿರುದ್ಧ ಹೋರಾಡುತ್ತೇವೆ. ಭಾರತದಲ್ಲಿ  ಪ್ರಜಾಸತ್ತೆ ಮತ್ತು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯಾವುದೇ ರೀತಿಯ ಪ್ರಯತ್ನಗಳಿಗೆ ಹೆದರುವುದಿಲ್ಲ” ಎಂದು ಸಿಬಿಐ ದಾಳಿಗೆ ಎನ್‍ಡಿಟಿವಿ ಪ್ರತಿಕ್ರಿಯೆ ನೀಡಿದೆ.

ದಾಳಿ ಹಿನ್ನೆಲೆ: 

ಪ್ರಣಯ್ ರಾಯ್ ಮೇಲೆ ಆರೋಪಗಳು ಕೇಳಿಬರುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ, 1998ರಲ್ಲಿಯೇ ಸರಕಾರಿ ಸ್ವಾಮ್ಯದ ದೂರದರ್ಶನವನ್ನು ತಾಂತ್ರಿಕವಾಗಿ ಮೇಲ್ದೆರ್ಜೆಗೆ ಏರಿಸುವ ಸಂಬಂಧಪಟ್ಟ ಹಾಗೆ ಸಿಬಿಐ ದೂರು ದಾಖಲಿಸಿಕೊಂಡಿತ್ತು. ವಂಚನೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲುಗೊಂಡು ವಿಚಾರಣೆ ನಡೆದಿತ್ತು. ಆದರೆ ಅಂತಿಮವಾಗಿ ಆರೋಪಗಳು ನಿರಾಧಾರ ಎಂದು ನ್ಯಾಯಾಲಯದಲ್ಲಿ ತೀರ್ಪು ಹೊರಬಿದ್ದಿತ್ತು.

ಕಳೆದ ವಾರವಷ್ಟೆ ಭಾರತೀಯ ಜನತಾ ಪಕ್ಷದ ವಕ್ತಾರ ಸಂಬೀತ್ ಪಾತ್ರರನ್ನು ತನ್ನ ಚರ್ಚಾ ಕಾರ್ಯಕ್ರಮದಿಂದ ಎನ್‌ಡಿಟಿವಿಯ ನಿರೂಪಕಿ ನಿಧಿ ರಾಜ್ದಾನ್ ಹೊರಹಾಕಿದ್ದರು. ವಾಹಿನಿಯ ಮೇಲೆಯೇ ‘ಅಜೆಂಡಾ’ಗಳ ಆರೋಪ ಮಾಡಲು ಹೋದ ಸಂಬಿತ್‌ ಅವರನ್ನು ಎನ್‌ಡಿಟಿವಿ ನೇರಪ್ರಸಾರದ ನಡುವೆಯೇ ಬೀಳ್ಕೊಟ್ಟಿತ್ತು.

“ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ನಂತರ ಇಂಗ್ಲಿಷ್ ಸುದ್ದಿ ವಾಹಿನಿಗಳು ಕೇಂದ್ರ ಸರಕಾರದ ತುತ್ತೂರಿಗಳಾಗಿವೆ. ಉತ್ತರ ಪ್ರದೇಶ ಚುನಾವಣೆಯ ನಂತರವಂತೂ ದೊಡ್ಡ ಮಟ್ಟದ ಬದಲಾವಣೆ ಇವುಗಳ ಸಂಪಾದಕೀಯ ನಿಲುವುಗಳಲ್ಲಿ ಕಂಡು ಬರುತ್ತಿದೆ. ಆದರೆ ಎನ್‌ಡಿಟಿವಿ ಮಾತ್ರವೇ ತಟಸ್ಥ ನಿಲುವು ಹೊಂದಿತ್ತು. ಇದೇ ಅದರ ಸಂಸ್ಥಾಪಕರ ಮನೆ ಮೇಲೆ ದಾಳಿಗೆ ಕಾರಣವಾಗಿರಬಹುದು,” ಎನ್ನುತ್ತಾರೆ ಹಿರಿಯ ಪತ್ರಕರ್ತರೊಬ್ಬರು.

ಅದು ಎನ್‌ಡಿಟಿವಿ:

ದೇಶದಲ್ಲಿ ಖಾಸಗಿ ಟಿವಿ ಸುದ್ದಿವಾಹಿನಿಗಳಿಗೆ, ಸರಕಾರದಿಂದ ಹೊರತಾದ ಟಿವಿ ಮಾಧ್ಯಮಕ್ಕೆ ಮುನ್ನಡಿ ಬರೆದವರು ಪ್ರಣಯ್ ರಾಯ್. ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾನಿಲಯದಲ್ಲಿ ಪದವಿ, ದಿಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಸ್ನಾತ್ತಕೋತ್ತರ ಪದವಿ ಪಡೆದ ರಾಯ್, ಚುನಾವಣಾ ವಿಶ್ಲೇಷಣೆಗಳ ಕಾರಣಕ್ಕೆ ಪ್ರಸಿದ್ಧಿಗೆ ಬಂದವರು. 1988ರಲ್ಲಿ ಮೊದಲ ಬಾರಿಗೆ ಸರಕಾರಿ ಸ್ವಾಮ್ಯದ ದೂರದರ್ಶನದ ಜತೆಗಿನ ಸಹಯೋಗದೊಂದಿಗೆ ಅರ್ಧಗಂಟೆ ‘ವರ್ಲ್ಡ್‌ ದಿಸ್ ವೀಕ್’ ಎಂಬ ಕಾರ್ಯಕ್ರಮ ಶುರುಮಾಡಿದರು. ಇದು ದೇಶದ ಸ್ವಾತಂತ್ರ್ಯೋತ್ತರ ಇತಿಹಾಸದಲ್ಲಿ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದು ದೂರದರ್ಶನದಲ್ಲಿ ಸುದ್ದಿಗೆ ಸಂಬಂಧಪಟ್ಟಂತೆ ಪ್ರಸ್ತುತಪಡಿಸಿದ ಕಾರ್ಯಕ್ರಮವಾಗಿತ್ತು.

ಮುಂದೆ, 1995ರಲ್ಲಿ ರಾತ್ರಿ ಎಂಟು ಗಂಟೆಗೆ ದೂರದರ್ಶನದಲ್ಲಿ ಪ್ರಣಯ್ ರಾಯ್ ನಿರೂಪಣೆಯಲ್ಲಿ ಮೊದಲ ಬಾರಿಗೆ ‘ನ್ಯೂಸ್ ಟು ನೈಟ್’ ಹೆಸರಿನ ಸುದ್ದಿ ಸಂಚಿಕೆಯ ನೇರ ಪ್ರಸಾರ ಭಿತ್ತರಗೊಂಡಿತು. “ಅವತ್ತು ಮೊದಲ ಬಾರಿಗೆ ಲೈವ್ ನ್ಯೂಸ್‌ಗೆ ಸ್ವಾಗತ ಎಂಬ ಪದ ಕಿವಿಗೆ ಬೀಳುತ್ತಲೆ ಪ್ರಧಾನಿ ಕಚೇರಿಯಿಂದ ಮಾಹಿತಿ ತಂತ್ರಜ್ಞಾನ ಇಲಾಖೆಗೆ ಕರೆ ಹೋಯಿತು. ಯಾವುದೇ ಕಾರಣಕ್ಕೂ ನೇರ ಪ್ರಸಾರವನ್ನು ಖಾಸಗಿಯವರು ನಡೆಸಿಕೊಡಲು ಅವಕಾಶ ನೀಡಬಾರದು ಎಂದು ಫರ್ಮಾನು ಹೊರಡಿಸಿದರು. ಹೀಗಾಗಿ ನಾವು ರಾತ್ರಿ ಎಂಟು ಗಂಟೆಗೆ ಹತ್ತು ನಿಮಿಷ ಮೊದಲು ಸುದ್ದಿಯನ್ನು ಎನ್‌ಡಿಟಿವಿ ಸ್ಟುಡಿಯೋದಲ್ಲಿ ರೆಕಾರ್ಡ್‌ ಮಾಡಿ, ನಂತರ ದೂರದರ್ಶನದಲ್ಲಿ ಪ್ರಸಾರ ಮಾಡಲು ಶುರುಮಾಡಿದೆವು. ತಾಂತ್ರಿಕವಾಗಿ ಅದು ನೇರ ಪ್ರಸಾರ ಅಲ್ಲದಿದ್ದರೂ, ದೇಶದ ಸುದ್ದಿ ನೀಡುವ ಬಗೆಯನ್ನೇ ಬದಲಿಸಿತು” ಎಂದು ಸ್ವತಃ ಪ್ರಣಯ್ ರಾಯ್ ಮುಂಬೈ ಪ್ರೆಸ್‌ ಕ್ಲಬ್ ಕಾರ್ಯಕ್ರಮವೊಂದರಲ್ಲಿ ನೆನಪಿಸಿಕೊಂಡಿದ್ದರು.

ಇವತ್ತು ಸುಮಾರು 400ಕ್ಕೂ ಹೆಚ್ಚು ವಾಹಿನಿಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ಕೇವಲ ಮೂರು ದಶಕಗಳ ಮೊದಲು ಈ ದೇಶದಲ್ಲಿ ನ್ಯೂಸ್ ಚಾನಲ್ ಎಂಬುದು ಗಗನ ಕುಸುಮಗಳಾಗಿದ್ದವು. ಅಲ್ಲೀವರೆಗೆ ಬಿಬಿಸಿ ಕೇಂದ್ರಿಯ ಸುದ್ದಿ ಬಿಟ್ಟರೆ ಸರಕಾರದ ಅಡಿಯಲ್ಲಿರುವ ದೂರದರ್ಶನ ನೀಡುವುದೇ ಜನರಿಗೆ ಮಾಹಿತಿ ಅಂತಾಗಿತ್ತು. ಅಂತಹ ಸಮಯದಲ್ಲಿ ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಖಾಸಗಿ ಸುದ್ದಿವಾಹಿನಿಯನ್ನು ದೇಶದಲ್ಲಿ ಆರಂಭಿಸಿದವರು ಪ್ರಣಯ್ ರಾಯ್. 2003ರಲ್ಲಿ ಎನ್‌ಡಿಟಿವಿ ಅಸ್ಥಿತ್ವಕ್ಕೆ ಬಂತು. ಅಲ್ಲಿಂದ ಇಲ್ಲೀವರೆಗೆ ಬದಲಾಗದೆ ಉಳಿದ ಏಕೈಕ್ ‘ನಾನ್ ಟ್ಯಾಬ್ಲಾಯ್ಡ್ ನ್ಯೂಸ್ ಚಾನಲ್’ ಎಂಬ ಹೆಗ್ಗಳಿಕೆ ಅದರದ್ದು.

ಸ್ಟೀವ್ ಜಾಬ್ಸ್ ಕನಸಿನ ಆಪಲ್ ಕಂಪನಿ ಶುರುವಾಗಿದ್ದು ಪುಟ್ಟ ಗ್ಯಾರೇಜ್‌ನಲ್ಲಿ ಎಂಬುದು ಜನಪ್ರಿಯ ಕತೆ. ಈ ದೇಶದ ಮೊದಲ ಸುದ್ದಿವಾಹಿನಿ ಎನ್‌ಡಿಟಿವಿ ಕೂಡ ಶುರುವಾಗಿದ್ದು ಕೂಡ ಗ್ಯಾರೇಜ್‌ನಲ್ಲಿಯೇ ಎಂಬುದು ಗಮನಾರ್ಹ. ಇದೀಗ ಕೇಂದ್ರ ಸರಕಾರ ಸಿಬಿಐ ಮೂಲಕ ಅದರ ಸಂಸ್ಥಾಪಕ ಮನೆ ಮೇಲೆ ದಾಳಿ ನಡೆಸಿದೆ. ಸಹಜವಾಗಿಯೇ, ಇದು ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆದ ದಾಳಿ ಎಂಬ ಮಾತುಗಳು ಕೇಳಿಬರುತ್ತಿವೆ.

Leave a comment

Top