An unconventional News Portal.

ನಿತೀಶ್ ಕುಮಾರ್ ನಿರ್ಗಮನ: ಪರ್ಯಾಯ ರಾಜಕೀಯ ನಾಯಕನ ಸ್ಥಾನ ಖಾಲಿ ಇದೆ; ಗಮನಿಸಿ!

ನಿತೀಶ್ ಕುಮಾರ್ ನಿರ್ಗಮನ: ಪರ್ಯಾಯ ರಾಜಕೀಯ ನಾಯಕನ ಸ್ಥಾನ ಖಾಲಿ ಇದೆ; ಗಮನಿಸಿ!

ಬಿಹಾರದ ಮಹಾ ಘಟ್ಬಂಧನದಿಂದ ನಿತೀಶ್ ಕುಮಾರ್ ‘ನಿರ್ಗಮನ’ದ ನಂತರ ರಾಷ್ಟ್ರ ರಾಜಕೀಯದಲ್ಲಿ ಪರ್ಯಾಯ ನಾಯಕತ್ವ ಸ್ಥಾನ ಖಾಲಿ ಬಿದ್ದಿದೆ.

1.3 ಬಿಲಿಯನ್ ಪ್ರಜೆಗಳನ್ನು ಹೊಂದಿರುವ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳು ಮಂಕಾಗಿವೆ. ಪ್ರಧಾನಿ ಮೋದಿ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಸಮರ್ಥ ಎದುರಾಳಿಗಳಿಲ್ಲದೆ ಚುನಾವಣೆಯ ಅಖಾಡಕ್ಕೆ ಇಳಿಯುವ ಸ್ಪಷ್ಟ ಸೂಚನೆ ಸಿಕ್ಕಿದೆ. ನೆಹರೂ ಮತ್ತು ಇಂದಿರಾ ಗಾಂಧಿ ನಂತರ ಮತ್ತೆ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಆರೋಗ್ಯಕರ ಪ್ರತಿರೋಧ ಇಲ್ಲದ ಸ್ಥಿತಿ ತಲುಪಿದೆ.

ಸಂವಿಧಾನದಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಇರುವಷ್ಟೆ ಅಧಿಕಾರ ವಿರೋಧ ಪಕ್ಷದ ನಾಯಕರಿಗೂ ಇರುತ್ತದೆ. ಹೀಗಾಗಿಯೇ ಅವರನ್ನು ‘ಶ್ಯಾಡೋ ಸಿಎಂ’ ಎಂದು ಕರೆಯಲಾಗುತ್ತದೆ. ಅದೇ ಮಾದರಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಕೂಡ ಪ್ರಧಾನಿ ಮಂತ್ರಿಯಷ್ಟೆ ಅಧಿಕಾರವನ್ನು ಹಂಚಿಕೊಳ್ಳುತ್ತಾರೆ. ಇದು ಪ್ರಜಾಪ್ರಭುತ್ವದಲ್ಲಿ ಅಧಿಕಾರದ ಕೇಂದ್ರಿಕರಣವನ್ನು ತಪ್ಪಿಸಲು ಹೆಣದ ಸೂತ್ರಗಳು.

ಆದರೆ, ಸ್ವಾತಂತ್ರ್ಯ ನಂತರ ನೆಹರೂ ಸಮರ್ಥ ವಿರೋಧ ಪಕ್ಷಗಳನ್ನು ಬೆಳೆಸಲು ಅವಿರತವಾಗಿ ಶ್ರಮಿಸಬೇಕಾದ ಸ್ಥಿತಿ ಇತ್ತು. ಅವರೇ ವಿರೋಧ ಪಕ್ಷಗಳಿಗೆ ಚುನಾವಣೆ ವೇಳೆಯಲ್ಲಿ ಆರ್ಥಿಕ ಸಹಾಯ ನೀಡಿದ್ದರು ಕೂಡ. ಇಂದಿರಾ ಗಾಂಧಿ ಸಮಯದಲ್ಲಿಯೂ ದೇಶದಲ್ಲಿ ಸಮರ್ಥ ವಿರೋಧ ಪಕ್ಷಗಳಿಲ್ಲದೆ ಪ್ರಜಾಪ್ರಭುತ್ವ ಸೊರಗಿತ್ತು. ಕೊನೆಗೆ, ಅಧಿಕಾರದ ಕೇಂದ್ರಿಕರಣದ ಪರಿಣಾಮ ತುರ್ತು ಪರಿಸ್ಥಿತಿಯ ಹೇರಿಕೆಯೂ ನಡೆದಿತ್ತು. ಇದೀಗ, ಅಂತಹದೊಂದು ನಿರ್ವಾತ ಮತ್ತೆ ಸೃಷ್ಟಿಯಾಗಿದೆ. ಪ್ರಧಾನಿ ಮೋದಿ ಅವರಿಗೆ ಪೈಪೋಟಿ ನೀಡಬಲ್ಲ ಮತ್ತೊಬ್ಬ ನಾಯಕನಿಗಾಗಿ ದೇಶ ಕಾಯುವಂತಾಗಿದೆ. ಸದ್ಯದ ಸ್ಥಿತಿಯಲ್ಲಿ ಅಂತಹ ಮುಖಗಳು ಯಾವ ಪಕ್ಷಗಳಲ್ಲಿಯೂ ಕಾಣಿಸುತ್ತಿಲ್ಲ.

ಗುಜರಾತ್‌ ಅಖಾಡ: 

ಇಡೀ ದೇಶ ಮುಂಬರುವ ಗುಜರಾತ್‌ ವಿಧಾನ ಸಭಾ ಚುನಾವಣೆ ವೇಳೆಗೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರ ಕಾರ್ಯತಂತ್ರಗಳಿಗೆ ಪರ್ಯಾಯ ಸೃ‍ಷ್ಟಿಯಾಗುತ್ತದೆ ಎಂಬ ನಂಬಿಕೆಯಲ್ಲಿತ್ತು. ಕೇಸರಿ ಪಾಳಯದ ಇಬ್ಬರು ನಾಯಕರನ್ನು ಅವರ ಅಖಾಡದಲ್ಲಿಯೇ ಕಟ್ಟಿ ಹಾಕುವಂತಹ ಫಲಿತಾಂಶವನ್ನು ಗುಜರಾತ್‌ ನೀಡಲಿದೆ ಎಂಬ ನಂಬಿಕೆ ಇತ್ತು. ಪಾಟೀದಾರ್‌ ಮೀಸಲಾತಿ ಹೋರಾಟ, ಊನಾದಿಂದ ಆರಂಭವಾದ ದಲಿತ ಚಳವಳಿ ಹಾಗೂ ಹಿಂದೆ ಬಿಜೆಪಿಯಲ್ಲಿದ್ದ ಶಂಕರ್‌ ಸಿನ್ಹಾ ವಘೇಲಾ ಕಾಂಗ್ರೆಸ್ ಬ್ಯಾನರ್ ಅಡಿಯಲ್ಲಿ ನೀಡುಬದಾದ ಸ್ಪರ್ಧೆಗಳು ಪರ್ಯಾಯದ ಸೂಚನೆಗಳಿಂತದ್ದವು. ಆದರೆ ಇವತ್ತಿಗೆ ಗುಜರಾತ್‌ ಪರಿಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿದೆ.

ಅಲ್ಲೀಗ ವಘೇಲಾ ಕಾಂಗ್ರೆಸ್ ತೊರೆದಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಗುಜರಾತ್‌ ಕಾಂಗ್ರೆಸ್ ಶಾಸಕರು ಬಿಜೆಪಿಗೇ ಮತ ನೀಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಮೂವರು ಕಾಂಗ್ರೆಸ್ ಶಾಸಕರು ಪಕ್ಷ ತೊರೆದಿದ್ದಾರೆ. ಅಮಿತ್‌ ಶಾ ರಾಜ್ಯಸಭೆಗೆ ಗುಜರಾತ್‌ನಿಂದ ಆಯ್ಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ. “ಡಿಸೆಂಬರ್‌ ವೇಳೆಗೆ ಇಲ್ಲಿ ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ಪ್ರತಿಸ್ಪರ್ಧೆ ನೀಡುವ ಸಾಧ್ಯತೆಗಳು ಕ್ಷೀಣಿಸಿವೆ. ಮೋದಿ ಮತ್ತು ಅಮಿತ್‌ ಶಾ ಕಾರ್ಯತಂತ್ರಗಳು ಸಫಲವಾಗುವ ಸಾಧ್ಯತೆಗಳಿವೆ. ಇದು ದೇಶದ ಪರ್ಯಾಯ ರಾಜಕೀಯದ ಮೇಲೆ ಭಾರಿ ಪರಿಣಾಮ ಬೀರಬಲ್ಲದು,” ಎನ್ನುತ್ತಾರೆ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕ ಡಿ. ಎಚ್. ಸತ್ಯನಾರಾಯಣ್.

ನಿತೀಶ್ ನಡೆ:

2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ನಡೆದ ರಾಜ್ಯವಾರು ಚುನಾವಣೆಗಳಲ್ಲೂ ಬಿಜೆಪಿ ಜಯ ಸಾಧಿಸುತ್ತಲೇ ಬಂತು. ಅದಕ್ಕೆ ಒಂದು ಹಂತದಲ್ಲಿ ಅದಕ್ಕೆ ತಡೆ ಹಾಕಿದ್ದು ದಿಲ್ಲಿ ಮತ್ತು ಬಿಹಾರ ರಾಜ್ಯಗಳು. ದಿಲ್ಲಿಯಲ್ಲಿ ಆಮ್‌ ಆದ್ಮಿ ಪಕ್ಷ (ಎಎಪಿ) ಬಿಜೆಪಿಯ ಜೈತ್ರಯಾತ್ರೆಗೆ ಬ್ರೇಕ್‌ ಹಾಕಿತಾದರೂ, ರಾಷ್ಟ್ರಮಟ್ಟದಲ್ಲಿ ಪರ್ಯಾಯ ರಾಜಕೀಯ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಗಳಿಂದ ದೂರ ಸರಿದಿದೆ. ಹೀಗಿರುವಾಗಲೇ, ಬಿಹಾರದಲ್ಲಿನ ಮೈತ್ರಿಯನ್ನು ಧಿಕ್ಕರಿಸಿ ನಿತೀಶ್ ಕುಮಾರ್ ಬಿಜೆಪಿ ಜತೆ ಹೊಂದಾಣಿಕೆಗೆ ಮುಂದಾಗಿದ್ದಾರೆ.

ಇತ್ತೀಚೆಗಷ್ಟೆ ಇತಿಹಾಸಕಾರ, ಅಂಕಣಕಾರ ರಾಮಚಂದ್ರ ಗುಹಾ, ನಿತೀಶ್ ನಾಯತ್ವದಲ್ಲಿ ಪರ್ಯಾಯ ರಾಜಕೀಯ ವೇದಿಕೆ ನಿರ್ಮಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ನಿತೀಶ್‌ ಕುಮಾರ್, ರಾಷ್ಟ್ರಮಟ್ಟದಲ್ಲಿ ಪರ್ಯಾಯಕ್ಕಿಂತ ಹೆಚ್ಚಾಗಿ ತಮ್ಮ ರಾಜ್ಯದ ಅಧಿಕಾರಕ್ಕೆ ಅಂಟಿಕೊಳ್ಳುವ ನಿಟ್ಟಿನಲ್ಲಿ ನಿಲುವು ತೆಗೆದುಕೊಂಡಿದ್ದಾರೆ. ಹೀಗಾಗಿ, ಅವರಿಂದ ಹೆಚ್ಚಿನ ನಿರೀಕ್ಷೆಗಳನ್ನು ಬಿಜೆಪಿ ಹೊರತಾದ ಪಕ್ಷಗಳು ಇಟ್ಟುಕೊಳ್ಳುವ ಹಾಗಿಲ್ಲ ಎಂಬ ಸಂದೇಶ ಸ್ಪಷ್ಟವಾಗಿದೆ.

ಇವರನ್ನು ಪಕ್ಕಕ್ಕಿಟ್ಟು ನೋಡಿದರೆ, “ಕಾಂಗ್ರೆಸ್‌ನಲ್ಲಿ ಇವತ್ತು ನಾಯಕತ್ವದ ನಿರ್ವಾತ ಸೃಷ್ಟಿಯಾಗಿದೆ. ಅವರು ತಮ್ಮ ಕಾರ್ಯತಂತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಿಕೊಳ್ಳದಿದ್ದರೆ ಹೊಸತೇನನ್ನೂ ನಿರೀಕ್ಷೆ ಮಾಡುವುದು ಕಷ್ಟ,” ಎನ್ನುತ್ತಾರೆ ಸತ್ಯನಾರಾಯಣ್. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಇವತ್ತು ಇಡುತ್ತಿರುವ ಹೆಜ್ಜೆಗಳನ್ನು ಗಮನಿಸಿದರೆ, ಅವರಲ್ಲಿ ಹೊಸ ಬದಲಾವಣೆಗಳನ್ನು ಸದ್ಯಕ್ಕೆ ನಿರೀಕ್ಷಿಸುವುದು ಕಷ್ಟ.

ಇತರೆ ಸಾಧ್ಯತೆಗಳು:

ಉಳಿದಂತೆ, ಕರ್ನಾಟಕದ ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್‌. ಡಿ. ದೇವೇಗೌಡ ತೃತೀಯ ರಂಗದ ಮಾತುಗಳನ್ನಾಡುತ್ತಿದ್ದರಾದರೂ, ರಾಜಕೀಯ ಅನುಕೂಲಗಳ ವಿಚಾರಕ್ಕೆ ಬಂದರೆ ಅವರಿಂದಲೂ ಹೆಚ್ಚಿನ ನಿರೀಕ್ಷೆಗಳಿಲ್ಲ. ಅತ್ತ ಉತ್ತರ ಪ್ರದೇಶದ ಮಾಯಾವತಿ ರಾಷ್ಟ್ರಮಟ್ಟದ ಪರ್ಯಾಯಕ್ಕಿಂತ ಹೆಚ್ಚಾಗಿ, ತಮ್ಮ ನೆಲೆಯನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಪರಿಸ್ಥಿತಿ ಇದೆ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರನ್ನು ತಮ್ಮದೇ ರಾಜ್ಯದ ಸಮಸ್ಯೆಗಳಲ್ಲಿ ಕಟ್ಟಿಹಾಕುವ ಪ್ರಯತ್ನ ನಡೆದಿದೆ. ಎಡ ಪಕ್ಷಗಳನ್ನು ಈ ಸಮಯದಲ್ಲಿ ಮೋದಿ ರಾಜಕಾರಣಕ್ಕೆ ಪರ್ಯಾಯ ನೆಲೆಯಲ್ಲಿ ಇಟ್ಟು ನೋಡುವುದು ಯಾವ ಆಯಾಮದಲ್ಲೂ ಸೂಕ್ತವಾಗಿ ಕಾಣಿಸುತ್ತಿಲ್ಲ.

ಪರಿಸ್ಥಿತಿ ಹೀಗಿರುವಾಗಲೇ, 2019ರಲ್ಲಿ ದೇಶದಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದೆ. ಈ ಸಮಯದಲ್ಲಿ ಪ್ರಜಾಪ್ರಭುತ್ವದ ಅಗತ್ಯವಾದ ಪ್ರಬಲದ ವಿರೋಧ ಪಕ್ಷ, ಪ್ರಬಲ ಪರ್ಯಾಯ ನಾಯಕತ್ವ ಮರೀಚಿಕೆಯಾಗಿ ಕಾಣಿಸುತ್ತಿದೆ.

ದೇಶದಲ್ಲಿ ನಿರುದ್ಯೋಗಗಳು ಹೆಚ್ಚುತ್ತಿರುವ ದಿನಗಳಲ್ಲಿ ‘ಪರ್ಯಾಯ ನಾಯಕತ್ವ’ದ ಸ್ಥಾನವೊಂದು ಖಾಲಿ ಬಿದ್ದಿದೆ. ಅದನ್ನು ತುಂಬಲು ಸೂಕ್ತ ವ್ಯಕ್ತಿಯ ಅಗತ್ಯವಿದೆ. ಆದರೆ ಸಾಧ್ಯತೆಗಳ ಆಯ್ಕೆ ಶೂನ್ಯವಾಗಿದೆ. “ಹಿಂದೆ ಎರಡು ಸ್ಥಾನ ಗೆಲ್ಲಲು ಒದ್ದಾಡಿದ್ದ ಬಿಜೆಪಿ ಈ ಪ್ರಮಾಣದಲ್ಲಿ ಬೆಳೆಯಬಹುದು ಎಂದು ಯಾರಿಗೂ ಅನ್ನಿಸರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೂ ಶಾಶ್ವತ ಅಲ್ಲ. ಬದಲಾವಣೆ ಹೇಗೆ ಬರುತ್ತದೆ ಎಂದು ಹೇಳುಲಾಗದು. ಆದರೆ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಅದನ್ನು ನಿರೀಕ್ಷಿಸುವುದು ಸದ್ಯಕ್ಕೆ ಕಷ್ಟ,” ಎಂದು ವಿಶ್ಲೇಷಿಸುತ್ತಾರೆ ಸತ್ಯನಾರಾಯಣ್.

Leave a comment

Top