An unconventional News Portal.

ಐಟಿ ಕಂಪನಿಗಳಲ್ಲಿ ಸಂಬಳದ ಅಸಮಾನತೆ: ಇನ್ಫಿ ಮೂರ್ತಿ ಬರೆದ ಪತ್ರ ಬಹಿರಂಗ

ಐಟಿ ಕಂಪನಿಗಳಲ್ಲಿ ಸಂಬಳದ ಅಸಮಾನತೆ: ಇನ್ಫಿ ಮೂರ್ತಿ ಬರೆದ ಪತ್ರ ಬಹಿರಂಗ

ದೇಶದ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್‍ನ ಆಂತರಿಕ ಬಿಕ್ಕಟ್ಟು ಮತ್ತೊಮ್ಮೆ ಸದ್ದು ಮಾಡಿದೆ.

ಸಂಸ್ಥೆಯ ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಭಾನುವಾರ ಪತ್ರವೊಂದನ್ನು ಬರೆಯುವ ಮೂಲಕ ಕಂಪನಿಯ ಹೂಡಿಕೆದಾರರ ಮಂಡಳಿಯ ಹೊಸ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಓಓ) ಪ್ರವೀಣ್ ರಾವ್ ಸಂಬಳ ಹೆಚ್ಚಳದ ವಿಚಾರವೀಗ ಸಂಸ್ಥಾಪಕ ಮತ್ತು ಹೂಡಿಕೆದಾರರ ನಡುವೆ ಮತ್ತೊಂದು ಸುತ್ತಿನ ಬಿಕ್ಕಟ್ಟಿಗೆ ಕಾರಣವಾಗಿದೆ. ಎರಡು ತಿಂಗಳ ಹಿಂದೆ ಇಂತಹದ್ದೇ ವಿಚಾರವೂ ಸೇರಿದಂತೆ ಕೆಲವೊಂದು ವಿಷಯಗಳಲ್ಲಿ ಸಂಸ್ಥಾಪಕರು ಮತ್ತು ಆಡಳಿತ ಮಂಡಳಿ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಈ ಸಮಯದಲ್ಲಿ ಅಧ್ಯಕ್ಷ ಆರ್. ಸೇಶಸಾಯಿ, ಆಂತರಿಕ ಬಿಕ್ಕಟ್ಟನ್ನು ಕಂಪನಿಯ ಒಳಗೇ ಬಗೆಹರಿಸಿಕೊಳ್ಳುವುದಾಗಿ ತಿಳಿಸಿದ್ದರು. ಅವುಗಳು ಯಾವುದೇ ಕಾರಣಕ್ಕೂ ಮಾಧ್ಯಮಗಳಿಗೆ ಸೋರಿಕೆಯಾದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.

ಆರ್ಥಿಕ ವರ್ಷ ಕೊನೆಯಾಗುವ ವೇಳೆಗೆ ಸಿಓಓ ಸಂಬಳದಲ್ಲಿ ಶೇ. 35ರಷ್ಟು ಕಂಪನಿಯ ಆಡಳಿತ ಮಂಡಳಿ ತೀರ್ಮಾನದಂತೆ ಹೆಚ್ಚಿಸಲಾಯಿತು. ಈ ಮೂಲಕ ಮೂರು ದಶಕಗಳಿಂದ ಇನ್ಫೋಸಿಸ್‍ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ರಾವ್ ಸಂಬಳವನ್ನು 12. 5 ಕೋಟಿಗೆ ಏರಿಸಲಾಗಿತ್ತು. ಈ ತೀರ್ಮಾನಕ್ಕೆ ಹೂಡಿಕೆದಾರರಲ್ಲಿ ಹಲವರು ಅನುಮತಿಯನ್ನೂ ನೀಡಿದ್ದರು. ಆದರೆ ಕಂಪನಿಯಲ್ಲಿ ತಮ್ಮ ಕುಟುಂಬದ ಶೇ. 12.5 ಶೇರುಗಳನ್ನು ಹೊಂದಿರುವ ಸಂಸ್ಥಾಪಕ ನಾರಾಯಣ ಮೂರ್ತಿ ವಿರೋಧ ವ್ಯಕ್ತಪಡಿಸಿ ಪತ್ರವೊಂದನ್ನು ಬರೆದಿದ್ದಾರೆ. ಭಾನುವಾರ ಸಂಜೆ ಬರೆದಿರುವ ಪತ್ರ, ಸೋಮವಾರ ಮುಂಜಾನೆ ವೇಳೆಗೆ ಮಾಧ್ಯಮಗಳಿಗೆ ಸೋರಿಕೆಯಾಗಿದೆ.

ನಾರಾಯಣ ಮೂರ್ತಿ ಮೂರು ದಶಕಗಳ ಹಿಂದೆ ಪ್ರವೀಣ್ ರಾವ್ ನೇಮಕಾತಿ ಮಾಡಿಕೊಂಡಿದ್ದರು. ಅವರನ್ನು ಸಿಓಓ ಸ್ಥಾನಕ್ಕೆ ತಂದು ಕೂರಿಸಿದವರೂ ಅವರೇ. “ಕಂಪನಿಯ ಹಿರಿಯ ಅಧಿಕಾರಿಗಳಿಗೆ ಶೇ. 60-70ರಷ್ಟು ವೇತನ, ಭತ್ಯೆಗಳ ಹೆಚ್ಚಳ ಮಾಡಲಾಗಿದೆ. ಅದೇ ವೇಳೆ ಕೆಳ ಹಂತದ ನೌಕರರಿಗೆ ಶೇ. 6-8ರಷ್ಟು ಹೆಚ್ಚಳ ಮಾಡಲಾಗಿದೆ. ನನ್ನ ಪ್ರಕಾರ ಇದು ಸರಿಯಲ್ಲ,” ಎಂದು ನಾರಾಯಣ ಮೂರ್ತಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಕಂಪನಿಯ ಬೆಳವಣಿಗೆಗಾಗಿ ಕೆಲಸ ಮಾಡುತ್ತಿರುವ ಕೆಳ ಹಂತದ ನೌಕರರು ಇಂತಹ ನಿರ್ಧಾರಗಳಿಂದಾಗಿ ಆಡಳಿತ ಮಂಡಳಿ ಬಗ್ಗೆ ತಮಗಿರುವ ಅಭಿಮಾನ ಮತ್ತು ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಕೂಡ ಕಂಪನಿಯಲ್ಲಿ ಇಂತಹದ್ದೇ ವಿಚಾರಕ್ಕೆ ಬಿಕ್ಕಟ್ಟು ತಲೆದೋರಿತ್ತು. ಸಿಇಓ ವಿಶಾಲ್ ಸಿಕ್ಕಾ ಅವರ ಸಂಬಳದಲ್ಲಿ ಶೇ. 60ರಷ್ಟು ಹೆಚ್ಚಳ ಮಾಡುವ ಮೂಲಕ ಸಂಸ್ಥಾಪಕ ನಾರಾಯಣ ಮೂರ್ತಿ ಗರಂ ಆಗಿದ್ದರು. ‘ಎಕನಾಮಿಕ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಇನ್ಫಿ ನಾರಾಯಣ ಮೂರ್ತಿ ಕೆಲವು ಸಂದೇಹಗಳನ್ನು ವ್ಯಕ್ತಪಡಿಸಿದ್ದರು. ಕಂಪನಿಯಿಂದ ಹೊರಹೋಗಿರುವ ಇಬ್ಬರು ಅಧಿಕಾರಿಗಳಿಗೆ ದೊಡ್ಡ ಮೊತ್ತದ ಹಣವನ್ನು ನೀಡಿರುವುದು ನೋಡಿದರೆ, ಕಂಪನಿಯ ಆಗುಹೋಗುಗಳನ್ನು ಮರೆಮಾಚಲು ಈ ತಂತ್ರ ಅನುಸರಿಸಿರಬಹುದು ಎಂದು ಅವರು ಹೇಳಿದ್ದರು. ಜೊತೆಗೆ ಆಡಳಿತ ನೀತಿಯ ವಿರುದ್ಧ ಅವರು ತೀವ್ರ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

“ಕಾರ್ಪೊರೇಟ್ ಸಂಸ್ಥೆಗಳಲ್ಲಿ ಸಂಬಳ ಹಾಗೂ ಭತ್ಯೆ ವಿಚಾರದಲ್ಲಿ ಅಸಮಾನತೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ನಾನು ನಂಬಿದ್ದೇನೆ. ನಾನು ಕೆಲಸಕ್ಕೆ ಸೇರುವಾಗ ನನ್ನ ಹಳೆಯ ಸಂಬಳಕ್ಕಿಂತ ಶೇ. 10ರಷ್ಟು ಹೆಚ್ಚಿನ ಸಂಬಳವನ್ನು ಪಡೆದುಕೊಂಡಿದ್ದೆ. ಅದೇ ವೇಳೆ ನನ್ನ ಸಹೋದ್ಯೋಗಿಗಳು ಮತ್ತು ಸಹ ಹೂಡಿಕೆದಾರರಿಗೆ ಶೇ. 20ರಷ್ಟು ಹೆಚ್ಚಳ ನೀಡಿದ್ದೆ,” ಎಂದು ಮೂರ್ತಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಇದರ ಜೊತೆಗೆ ಕಂಪನಿಯ ಆಡಳಿತಾತ್ಮಕ ವಿಚಾರಗಳಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

More on this:

‘ಇನ್ಫೋಸಿಸ್ ಒಳಗೆ ಎಲ್ಲವೂ ಸರಿ ಇಲ್ಲ’: ಐಟಿ ದಿಗ್ಗಜ ಕಂಪನಿಯೊಳಗಿನ 8 ಬೆಳವಣಿಗೆಗಳು

Top