An unconventional News Portal.

ಗುರ್‌ಮೆಹರ್ ವಿರುದ್ಧ ಅಪಪ್ರಚಾರಕ್ಕಿಳಿದ ‘ನಮೋ ಬ್ರಾಂಡ್’ ನ್ಯೂಸ್‌ ಮೇಕರ್ಸ್; ಯಾರಿವರು?

ಗುರ್‌ಮೆಹರ್ ವಿರುದ್ಧ ಅಪಪ್ರಚಾರಕ್ಕಿಳಿದ ‘ನಮೋ ಬ್ರಾಂಡ್’ ನ್ಯೂಸ್‌ ಮೇಕರ್ಸ್; ಯಾರಿವರು?

“ಒಂದು ಸುಳ್ಳನ್ನು ಒಮ್ಮೆ ಹೇಳಿದರೆ ಸುಳ್ಳಾಗಿಯೇ ಇರುತ್ತದೆ; ಅದೇ ಸುಳ್ಳನ್ನು ಸಾವಿರ ಬಾರಿ ಹೇಳಿದರೆ ಸತ್ಯವಾಗುತ್ತದೆ…” ಹೀಗಂತ ಹೇಳಿದ್ದು ಜರ್ಮನಿ ಮೂಲದ ಮನುಷ್ಯ ವಿರೋಧಿ ಸರ್ವಾಧಿಕಾರಿ ಹಿಟ್ಲರ್‌ನ ಪ್ರಚಾರ ಸಚಿವ ಜೋಸೆಫ್ ಗೋಬೆಲ್ಸ್.

ಇದೀಗ ಅಂತರ್ಜಾಲ ಎಂಬ ತಂತ್ರಜ್ಞಾನವನ್ನು ಬಳಸಿಕೊಂಡು ಸುಳ್ಳುಗಳನ್ನು ಸತ್ಯವಾಗಿಸಲು ಒಂದು ದೊಡ್ಡ ಪಡೆಯೇ ಎದ್ದು ನಿಂತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಿಗರು ಎಂಬ ಬಾಗಿಲ ಮರೆಯಲ್ಲಿ ಸುಳ್ಳುಗಳನ್ನು ಸಾವಿರ ಬಾರಿ ಪುನರುಚ್ಚರಿಸುವ ಕೆಲಸ ಇವರಿಂದ ನಡೆಯುತ್ತಿದೆ. ಬಿಜೆಪಿಯನ್ನು ಹೊರತು ಪಡಿಸಿ ಉಳಿದ ರಾಜಕೀಯ ಪಕ್ಷಗಳ ನಾಯಕರ ವಿರುದ್ಧ ಇವರ ವಿಷಕಾರಿ ಬರವಣಿಗೆಯ ಪ್ರಯೋಗ ನಡೆಯುತ್ತಿದೆ. ವೈಯಕ್ತಿಕ ತೇಜೋವಧೆಗಳು ಇಲ್ಲಿ ನಿತ್ಯನಿರಂತರವಾಗಿವೆ. ಧಾರ್ಮಿಕ ಸಾಮರಸ್ಯವನ್ನು ಕದಡುವ ಅಕ್ಷರ ಮಾಲೆಗಳು ಇಲ್ಲಿ ಯಥೇಚ್ಚವಾಗಿ ಸಿಗುತ್ತವೆ. ವಿದ್ಯಾರ್ಥಿಗಳಿಗೆ ಹಾಗೂ ದಿಲ್ಲಿಯ ಪ್ರಾಧ್ಯಾಪಕರಿಗೆ ‘ನಗರ ಕೇಂದ್ರಿತ ನಕ್ಸಲೀಯರು’ ಎಂದು ಹಣೆಪಟ್ಟಿಯನ್ನು ಇಲ್ಲಿ ಕಟ್ಟಲಾಗುತ್ತಿದೆ. ಜಾತಿ ಆಧಾರಿತ ಮೀಸಲಾತಿಯ ವಿರುದ್ಧ ತಲೆಬುಡವಿಲ್ಲದ ಬರಹಗಳನ್ನು ಇಲ್ಲಿ ಹರಿಯ ಬಿಡಲಾಗುತ್ತಿದೆ. ವಿಶೇಷ ಎಂದರೆ, ಇಂತಹ ವಿಷಕಾರಿಯಾದ ಪ್ರಕ್ರಿಯೆ ನಡೆಯುತ್ತಿರುವುದು ಪತ್ರಿಕೋದ್ಯಮದ ಹೆಸರಿನಲ್ಲಿ. ನಡೆಸುತ್ತಿರುವವರು, ‘ನಮೋ ಬ್ರಾಂಡ್’ನ ನ್ಯೂಸ್ ಮೇಕರ್ಸ್ ಆಫ್ ಇಂಡಿಯಾ.

‘ಸಮಾಚಾರ’ದ ಓದುಗರು, ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ದರ್ಶನ್ ಜೈನ್ ಕಳೆದ ಒಂದು ತಿಂಗಳಿನಿಂದ ಇಂತಹ ಸುದ್ದಿಗಳನ್ನು ತಯಾರಿಸುತ್ತಿರುವವರ ಜಾಡು ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಸುಳ್ಳುಗಳನ್ನು ಪೋಣಿಸಿ, ಅದಕ್ಕೆ ಸುದ್ದಿಯ ರೂಪ ಹೊದಿಸಿ, ಪ್ರಚೋದನಕಾರಿಯಾದ ತಲೆಬರಹ ನೀಡಿ, ಅಂತರ್ಜಾಲಕ್ಕೆ ಹರಿಯ ಬಿಡುವ ಇವರು ನಡೆಸುವ ಸೋ ಕಾಲ್ಡ್ ನ್ಯೂಸ್ ಪೋರ್ಟಲ್‌ಗಳನ್ನು ದರ್ಶನ್ ಜಾಲಾಡಿದ್ದಾರೆ. ಅವುಗಳ ನೋಂದಣಿಯನ್ನು ಪರೀಕ್ಷಿಸಿದ್ದಾರೆ. ನ್ಯೂಸ್‌ ಪೋರ್ಟಲ್ ಮಾಲೀಕರಿಗೂ, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಇವರು ‘ಟ್ವಿಟರ್ ಸಂಬಂಧ’ವನ್ನು ಇವರು ಪರೀಕ್ಷಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದಲ್ಲಿ ಭಾರತೀಯ ಜನತಾ ಪಕ್ಷ ಬೆಂಬಲಿತ ಟ್ರಾಲರ್‌ಗಳು ನಡೆಸುತ್ತಿರುವ ದಾಳಿ, ತೇಜೋವಧೆಗಳ ಮಾಹಿತಿ ಚರ್ಚೆಯ ಕೇಂದ್ರದಲ್ಲಿದೆ. ಈ ವರದಿ, ಟ್ರಾಲಿಂಗ್ ಆಚೆಗೆ ಕೇಸರಿ ಪಡೆಯ ಕಾಲಾಳುಗಳು ಅಂತರ್ಜಾಲದಲ್ಲಿ ಹರಡುತ್ತಿರುವ ಸುದ್ದಿ ರೂಪದ ಸುಳ್ಳುಗಳನ್ನು ಬಯಲಿಗೆಳೆಯಲಿದೆ.

ಇದು ಪೋಸ್ಟ್ ಕಾರ್ಡ್ ಡಾಟ್ ನ್ಯೂಸ್:

ದಿಲ್ಲಿಯ ರಾಮ್ಜೀಸ್ ಕಾಲೇಜಿನ ವಿದ್ಯಾರ್ಥಿನಿ, ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಗುರ್‌ಮೆಹರ್ ಕೌರ್ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುಮಾಡುತ್ತಿದ್ದಂತೆ ಆಕೆಯ ವಿರುದ್ಧ ದಾಳಿಗಳು ಶುರುವಾದವು. ಅದರಲ್ಲಿ ಪ್ರಮುಖವಾಗಿದ್ದು ಪೋಸ್ಟ್ ಕಾರ್ಡ್ ಡಾಟ್ ನ್ಯೂಸ್ ಎಂಬನ ಪೋರ್ಟಲ್.

ಈ ಸುದ್ದಿತಾಣದಲ್ಲಿ ಗುರ್‌ಮೆಹರ್ ತಂದೆ ಮಂದೀಪ್ ಸಿಂಗ್ ಕಾರ್ಗಿಲ್ ಯುದ್ಧದಲ್ಲಿ ಸಾವನ್ನಪ್ಪಿಲ್ಲ ಎಂದು ಪ್ರತಿಪಾದಿಸಲಾಯಿತು. ಇದನ್ನೇ ಮೈಸೂರು ಮೂಲದ ಸಂದಸ ಪ್ರತಾಪ್ ಸಿಂಗ್ ಕೂಡ ನ್ಯೂಸ್ ಚಾನಲ್‌ಗಳ ಚರ್ಚೆಗಳಲ್ಲಿ ಪುನರುಚ್ಚರಿಸಿದರು.

ಗುರ್‌ಮೆಹರ್ ತಂದೆಯ ಸಾವಿನ ಕುರಿತು ಸಂಸಯ ಹುಟ್ಟು ಹಾಕುವ ಪ್ರಯತ್ನ ಇದು.

ಗುರ್‌ಮೆಹರ್ ತಂದೆಯ ಸಾವಿನ ಕುರಿತು ಸಂಶಯ ಹುಟ್ಟು ಹಾಕುವ ಪ್ರಯತ್ನ ಇದು. (ಪೋಸ್ಟ್ ಕಾರ್ಟ್ ಡಾಟ್ ನ್ಯೂಸ್)

ಫೆ. 27ರಂದು ಈ ವರದಿ ಪ್ರಕಟವಾದ ಬೆನ್ನಿಗೇ ಇದೇ ನ್ಯೂಸ್ ಪೋರ್ಟಲ್ ಕೌರ್ ವಿರುದ್ಧ ಸರಣಿ ವರದಿಗಳನ್ನು ಪ್ರಕಟಿಸಿತು.

ಕೌರ್ ವಿರುದ್ಧ ಬಂದ ಸರಣಿ ವರದಿಗಳು. (ಪೋಸ್ಟ್ ಕಾರ್ಡ್ ಡಾಟ್ ನ್ಯೂಸ್)

ಕೌರ್ ವಿರುದ್ಧ ಬಂದ ಸರಣಿ ವರದಿಗಳು. (ಪೋಸ್ಟ್ ಕಾರ್ಡ್ ಡಾಟ್ ನ್ಯೂಸ್)

ಹೀಗೆ, ಮಾಧ್ಯಮಗಳ ವಿರುದ್ಧ, ಗುರ್‌ಮೆಹರ್ ಕೌರ್ ವಿರುದ್ಧ ವರದಿಗಳನ್ನು ಪ್ರಕಟಿಸಿದ ಪೋಸ್ಟ್ ಕಾರ್ಡ್‌ ಡಾಟ್ ನ್ಯೂಸ್‌ನಲ್ಲಿ ಜಾತಿ ಪದ್ಧತಿ ಹೇಗೆ ಸೃಷ್ಟಿಯಾಯಿತು ಎಂಬ ಬರಹವೊಂದಿದೆ. ಬ್ರಹ್ಮನಿಂದ ಜಾತಿ ಸೃಷ್ಟಿಯಾಯಿತು ಎಂದು ಅದು ಹೇಳುವ ಮೂಲಕ ದೇಶದ ಜಾತಿ ಆಧಾರಿಯ ವ್ಯವಸ್ಥೆಯ ಸೃಷ್ಟಿಯ ಕುರಿತು ಅತ್ಯಂತ ತೆಳುವಾದ ಗ್ರಹಿಕೆಯನ್ನು ಓದುಗರಲ್ಲಿ ಮೂಡಿಸುವ ಪ್ರಯತ್ನ ಮಾಡಿರುವುದು ಗೊತ್ತಾಗುತ್ತದೆ.

ಬ್ರಹ್ಮನಿಂದ ಜಾತಿಗಳು ಹುಟ್ಟಿದವು ಎನ್ನುತ್ತದೆ ಈ ಪೋಸ್ಟ್ ಕಾರ್ಡ್ ಪೋರ್ಟಲ್‌ನ ಈ ಬರಹ (ಪೋಸ್ಟ್ ಕಾರ್ಡ್ ಡಾಟ್ ನ್ಯೂಸ್)

ಬ್ರಹ್ಮನಿಂದ ಜಾತಿಗಳು ಹುಟ್ಟಿದವು ಎನ್ನುತ್ತದೆ ಈ ಪೋಸ್ಟ್ ಕಾರ್ಡ್ ಪೋರ್ಟಲ್‌ನ ಈ ಬರಹ (ಪೋಸ್ಟ್ ಕಾರ್ಡ್ ಡಾಟ್ ನ್ಯೂಸ್)

ಹೀಗೆ, ಏಕಮುಖವಾದ ಸುದ್ದಿಗಳನ್ನು ಹರಡುತ್ತಿರುವ ಜಾಲತಾಣಗಳನ್ನು ಹುಡುಕಿಕೊಂಡು ಹೊರಟರೆ ಪೋಸ್ಟ್ ಕಾರ್ಡ್ ನ್ಯೂಸ್‌ನಂತೆಯೇ ಇರುವ ಇನ್ನೂ ಅನೇಕ ಪೋರ್ಟಲ್‌ಗಳು ಕಣ್ಣಿಗೆ ಬೀಳುತ್ತವೆ. ಅವುಗಳಲ್ಲಿ ‘ಓಪ್‌ಇಂಡಿಯಾ’ ಕೂಡ ಒಂದು.

ಈ ‘ನಮೋ ಬ್ರಾಂಡ್’ ನ್ಯೂಸ್‌ ಮೇಕರ್ಸ್‌ಗಳಲ್ಲಿ ಒಂದು ಸಾಮ್ಯತೆ ಕಂಡು ಬರುತ್ತದೆ. ಮಾಧ್ಯಮಗಳನ್ನು ಅವುಗಳ ನಿಲುವುಗಳ ಆಧಾರದ ಮೇಲೆ ಟೀಕೆ ಮಾಡುವುದು, ಪತ್ರಕರ್ತರನ್ನು ವೈಯಕ್ತಿಕ ಮಟ್ಟದಲ್ಲಿ ಟೀಕೆ ಮಾಡುವುದು ಇವು ನಡೆಸಿಕೊಂಡು ಬಂದಿರುವ ಪ್ರಚಾರ ತಂತ್ರವಾಗಿದೆ. ಇದಕ್ಕೆ ಕೆಳಗಿರುವ ಓಪ್‌ಇಂಡಿಯಾದ ಒಂದು ಸ್ಕ್ರೀನ್ ಶಾಟ್ ಸಾಕ್ಷಿ ಒದಗಿಸುತ್ತದೆ. 

ಓಪ್‌ಇಂಡಿಯಾದ ವರದಿಗಳ ಮಾಲೆ. (ಓಪ್ ಇಂಡಿಯಾ)

ಓಪ್‌ಇಂಡಿಯಾದ ವರದಿಗಳ ಮಾಲೆ. (ಓಪ್ ಇಂಡಿಯಾ)

ಇದೇ ಮಾದರಿಯಲ್ಲಿರುವ ಮತ್ತೊಂದು ಪೋರ್ಟಲ್ ಹೆಸರು ಫ್ರಸ್ಟ್ರೇಟೆಡ್ ಇಂಡಿಯನ್. ಈ ಹಿಂದೆ ಇದ್ದ ಈ ಪೋರ್ಟಲ್‌ಗೆ ಈಗ ಲಾಗಿನ್‌ ಆಗುವ ಪ್ರಯತ್ನ ಮಾಡಿದರೆ ನೇರವಾಗಿ ‘ರೈಟ್ ಲಾಗ್’ ಎಂಬ ಪೋರ್ಟಲ್ ತೆರೆದುಕೊಳ್ಳುತ್ತದೆ. ಈ ಕುರಿತು ಹೇಳುವುದಕ್ಕಿಂತ ಅದರ ಒಂದು ಸ್ಕ್ರೀನ್ ಶಾಟ್ ಎಲ್ಲವನ್ನೂ ವಿವರಿಸುತ್ತದೆ.

ರೈಟ್ ಲಾಗ್ ಪೋರ್ಟಲ್ ಸ್ಕ್ರೀನ್ ಶಾಟ್. (ರೈಟ್ ಲಾಗ್)

ರೈಟ್ ಲಾಗ್ ಪೋರ್ಟಲ್ ಸ್ಕ್ರೀನ್ ಶಾಟ್. (ರೈಟ್ ಲಾಗ್)

‘ಇಂಟರ್‌ನೆಟ್ ಹಿಂದೂ’ ಹೆಸರಿನ ಇನ್ನೊಂದು ಪೋರ್ಟಲ್‌ನಲ್ಲಿ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತರಬಹುದಾದ ಬರಹಗಳ ದೊಡ್ಡ ಸಂಗ್ರಹವೇ ಸಿಗುತ್ತದೆ. ವಿಶೇಷ ಅಂದರೆ, ಈ ಪೋರ್ಟಲ್‌ಗೆ ಜಾಹೀರಾತುಗಳ ವಿಚಾರದಲ್ಲಿ ಯಾವ ಮಡಿವಂತಿಕೆಯ ಅಥವಾ ಸಂಸ್ಕೃತಿಯೂ ಇದ್ದಂತೆ ಕಾಣಿಸುವುದಿಲ್ಲ. ಅದಕ್ಕೊಂದು ಉದಾಹರಣೆಯಂತಿದೆ ಕೆಳಗಿನ ಚಿತ್ರ.

ಇಂಟರ್‌ನೆಟ್ ಹಿಂದೂ ವರದಿ ಮತ್ತು ಜಾಹೀರಾತು. (ಇಂಟರ್‌ನೆಟ್ ಹಿಂದೂ)

ಇಂಟರ್‌ನೆಟ್ ಹಿಂದೂ ವರದಿ ಮತ್ತು ಜಾಹೀರಾತು. (ಇಂಟರ್‌ನೆಟ್ ಹಿಂದೂ)

ಇದೇ ಕೆಟಗರಿಯಲ್ಲಿರುವ ಮತ್ತೊಂದು ಪೋರ್ಟಲ್ ಹೆಸರು ‘ದಿ ಲಾಟ್ ಪಾಟ್’. ಇದರಲ್ಲಿನ ಒಂದು ವರದಿ ಕುತೂಹಲಕಾರಿಯಾಗಿದೆ. ಹುತಾತ್ಮ ಯೋಧನ ಮಗಳು ಗುರ್‌ಮೆಹರ್ ಕೌರ್ ಎಬಿವಿಪಿ ವಿರುದ್ಧ ಅಭಿಯಾನಕ್ಕೆ ಕಡೆ ಕೊಟ್ಟ ಮಾತ್ರ ‘ನಗರ ಕೇಂದ್ರಿಕ ನಕ್ಸಲೀಯ’ಳಾಗಿದ್ದಾಳೆ.

ಇವರ ಪ್ರಕಾರ ಹುತಾತ್ಮ ಯೋಧನ ಮಗಳು ಗುರ್‌ಮೆಹರ್ ನಗರ ಕೇಂದ್ರಿತ ನಕ್ಸಲ್! (ಲಾಟ್ ಪಾಟ್)

ಇವರ ಪ್ರಕಾರ ಹುತಾತ್ಮ ಯೋಧನ ಮಗಳು ಗುರ್‌ಮೆಹರ್ ನಗರ ಕೇಂದ್ರಿತ ನಕ್ಸಲ್! (ಲಾಟ್ ಪಾಟ್)

ಹೀಗೆ, ತಮ್ಮ ವಿಚಾರಗಳನ್ನು ಒಪ್ಪದವರನ್ನು, ವಿರೋಧಿಸುವವರನ್ನು ಹಣಿಯುವುದಕ್ಕಾಗಿಯೇ ಸುದ್ದಿಯ ಹೆಸರಿನಲ್ಲಿ ಪ್ರಚಾರದಲ್ಲಿ ತೊಡಗಿರುವ ಹಲವು ಪೋರ್ಟಲ್‌ಗಳು ಈ ತನಿಖೆಯ ವೇಲೆ ಬಯಲಿಗೆ ಬಂದಿವೆ. ‘ಇಂಡಿಯಾ ಅರೈಸಿಂಗ್’, ‘ಸತ್ಯ ವಿಜಯಿ’, ‘ಇನ್ಸಿಸ್ಟ್ ಪೋಸ್ಟ್’, ‘ಸ್ವರಾಜ್ಯಮ್ಯಾಗ್’, ‘ದೈನಿಕ್ ಭಾರತ್’, ಶಂಖನಾದ್’, ‘ಫಿಯರ್‌ಲೆಸ್ ಇಂಡಿಯನ್’ ಸೇರಿದಂತೆ ಅನೇಕ ಸುದ್ದಿ ತಾಣಗಳು ಇಂತಹದ್ದೇ ಕೆಲಸದಲ್ಲಿ ತೊಡಗಿಸಿಕೊಂಡಿವೆ.

ವಿಶೇಷ ಎಂದರೆ, ಇವುಗಳನ್ನು ನೋಂದಣಿ ಮಾಡಿಸಿದವರಲ್ಲಿ ಬಹುತೇಕರನ್ನು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ಇದಕ್ಕೆ ಪೊರಕ ಎಂಬಂತೆ ಈ ಪೋರ್ಟಲ್‌ಗಳಲ್ಲಿ ಮೋದಿ ಪರವಾದ ಸುದ್ದಿಗಳು ಮತ್ತು ಬರಹಗಳು ಯಥೇಚ್ಚವಾಗಿ ಸುಗುತ್ತಿವೆ.


ಎಲ್ಲಾ ಪೋರ್ಟಲ್‌ಗಳಲ್ಲಿಯೂ ಕಂಡು ಬರುವ ಸಾಮಾನ್ಯ ಸಂಗತಿಗಳು ಎಂದರೆ, ಬಿಜೆಪಿ ಹೊರತು ಪಡಿಸಿ ಉಳಿದ ಎಲ್ಲಾ ರಾಜಕೀಯ ವಿರೋಧಿಗಳ ಮೇಲೆ ಅಕ್ಷರಗಳ ‘ಸರ್ಜಿಕಲ್ ದಾಳಿ’ಗಳು ನಡೆಯುತ್ತವೆ. ಮಾಧ್ಯಮಗಳ ಮತ್ತು ಪತ್ರಕರ್ತರ ಮೇಲೆ ಹೀನಾಯವಾಗಿ ಬರೆಯಲಾಗುತ್ತದೆ. ಧಾರ್ಮಿಕತೆ ವಿಚಾರದಲ್ಲಿ ಪ್ರಚೋದನಾತ್ಮಕ ಬರಹಗಳನ್ನು ಪ್ರಕಟಿಸಲಾಗುತ್ತದೆ. ಅವುಗಳ ಜತೆಗೆ, ಆಧಾರ ಇಲ್ಲದಿದ್ದರೂ ಸುಳ್ಳಿಗಳ ಕಂತೆಗಳನ್ನು ಹರಿಯ ಬಿಡಲಾಗುತ್ತಿದೆ. 


ಸಾಮಾಜಿಕ ಜಾಲತಾಣಗಳು ವಿಶ್ವಾಸಾರ್ಹತೆಯ ಪ್ರಶ್ನೆಯನ್ನು ಎದುರಿಸುತ್ತಿರುವಾಗ ಹಲವರಿಗೆ ನ್ಯೂಸ್‌ ಪೋರ್ಟಲ್‌ಗಳು ನಿಜ ಸುದ್ದಿಯನ್ನು ಪ್ರಕಟಿಸುತ್ತವೆ ಎಂಬ ನಂಬಿಕೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಈ ತಾಣಗಳು ನಿರಂತರವಾಗಿ ಏಕಮುಖವಾದ ವಿಚಾರವನ್ನು ಪ್ರಚೋದನಾತ್ಮಕ ಶೈಲಿಯಲ್ಲಿ ಹರಿಯ ಬಿಡುತ್ತಿವೆ. ಇದು ಪತ್ರಿಕೋದ್ಯಮದ ಹೆಸರಿನಲ್ಲಿ ನಡೆಯುತ್ತಿರುವುದು ಅಪಾಯಕಾರಿ ಪ್ರಕ್ರಿಯೆಗೆ ಸಾಕ್ಷಿ ಒದಗಿಸುತ್ತಿದೆ.

 

Top