An unconventional News Portal.

ಕಾಲ್ತುಳಿತಕ್ಕೆ 22 ಬಲಿ: ಮಳೆಯಿಂದ ಮುಂಬೈ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ದುರಂತ

ಕಾಲ್ತುಳಿತಕ್ಕೆ 22 ಬಲಿ: ಮಳೆಯಿಂದ ಮುಂಬೈ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ದುರಂತ

ಮಹಾಮಳೆಯಿಂದ ಮೊದಲೇ ತತ್ತರಿಸಿದ್ದ ಮುಂಬೈ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಕಾಲ್ತುಳಿತವೊಂದು ಸಂಭವಿಸಿದೆ. ಘಟನೆಯಲ್ಲಿ ಈವರೆಗೆ ಸಾವನ್ನಪ್ಪಿರುವ ಸಂಖ್ಯೆ 22ಕ್ಕೇರಿದೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇಲ್ಲಿನ ಎಲ್ಫಿಸ್ಟೋನ್ ರೈಲ್ವೆ ನಿಲ್ದಾಣದ ಪಾದಾಚಾರಿ ಮೇಲ್ಸೇತುವೆ ಮೇಲೆ ನಿಂತಿದ್ದ ಜನರಲ್ಲಿ 10.45ರ ಸುಮಾರಿಗೆ ಗೊಂದಲ ಉಂಟಾಯಿತು. ಈ ಸಮಯದಲ್ಲಿ ಮಳೆ ಬೀಳುತ್ತಿದ್ದ ಹಿನ್ನೆಲೆಯಲ್ಲಿ ನೂರಾರು ಜನ ಮೇಲ್ಸೇತುವೆ ಮೇಲೆ ಆಸರೆ ಪಡೆದುಕೊಂಡಿದ್ದರು. ಸೇತುವೆ ಕುಸಿಯುತ್ತಿದೆ ಎಂಬ ಜನ ಗಾಬರಿಗೊಂಡು ಅಡ್ಡಾದಿಡ್ಡಿ ಓಡಲು ಶುರುಮಾಡಿದರು. ಈ ಸಮಯದಲ್ಲಿ ನಡೆದ ಕಾಲ್ತುಳಿತದಿಂದಾಗಿ 22 ಜನ ಸಾವನ್ನಪ್ಪಿದ್ದಾರೆ. ಸೇತುವೆ ಮೇಲಿನಿಂದ ಕೆಳಗೆ ಹಾರಿದ ಕಾರಣ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಪ್ರತ್ಯಕ್ಷ ಸಾಕ್ಷಿಗಳು ಹೇಳುವ ಪ್ರಕಾರ, 10. 30ರ ಸುಮಾರಿಗೆ ನಾಲ್ಕು ಸ್ಥಳೀಯ ರೈಲುಗಳು ಒಟ್ಟಿಗೆ ನಿಲ್ದಾಣಕ್ಕೆ ಬಂದವು. ಈ ಸಮಯದಲ್ಲಿ ಪಾದಚಾರಿ ಮೇಲ್ಸೇತುವೆಯ ಮೇಲೆ ನಿಂತಿದ್ದ ಕೆಲವರು ರೈಲುಗಳಿಗಾಗಿ ಓಡಲು ಆರಂಭಿಸಿದರು. ಈ ಸಮಯದಲ್ಲಿ ಸೇತುವೆ ಕುಸಿಯುತ್ತಿದೆ ಎಂದು ಕೆಲವು ಗಾಬರಿ ಹುಟ್ಟಿಸಿದರು. ಜೀವಭಯದಲ್ಲಿ ಜನ ಓಡಲು ಆರಂಭಿಸುತ್ತಿದ್ದಂತೆ ಕೆಲವರು ಕೆಳಗೆ ಬಿದ್ದರು. ಅವರನ್ನು ತುಳಿದುಕೊಂಡೇ ನೂರಾರು ಜನ ಸೇತುವೆಯಿಂದ ಹೊರಬರಲು ಪ್ರಯತ್ನ ನಡೆಸಿದರು. ಈ ಸಮಯದಲ್ಲಿ ಕಾಲಡಿಗೆ ಸಿಕ್ಕವರ ಆಕ್ರಂದನ ಮುಗಿಲು ಮುಟ್ಟಿತ್ತು.

ಇದನ್ನು ರೈಲ್ವೆ ಅಧಿಕಾರಿಗಳೂ ಖಾತ್ರಿ ಪಡಿಸಿದ್ದು, ಮಳೆ ಮತ್ತು ನಾಲ್ಕು ರೈಲುಗಳು ಒಂದೇಟಿಗೆ ನಿಲ್ದಾಣಕ್ಕೆ ಬಂದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ ಎಂದಿದ್ದಾರೆ.

mumbai-stampade-2

ಮುಂಬೈನಲ್ಲಿ ಸ್ಥಳೀಯ ಜನರ ನಿತ್ಯ ಓಡಾಟಕ್ಕೆ ಜೀವನಾಡಿಗಳಾಗಿರುವುದು ಇಲ್ಲಿನ ರೈಲುಗಳು. ಅದರಲ್ಲೂ ಎಲ್ಫಿಸ್ಟೋನ್ ನಿಲ್ದಾಣದ ಸುತ್ತಮುತ್ತ ವಾಣಿಜ್ಯ ವಹಿವಾಟುಗಳು ದೊಡ್ಡ ಮಟ್ಟದಲ್ಲಿ ಇರುವುದರಿಂದ ಇಲ್ಲಿ ಪ್ರತಿದಿನ ಸಾವಿರಾರು ಜನ ನಿಲ್ದಾಣವನ್ನು ಬಳಸುತ್ತಿದ್ದರು. ”ಇಂತಹದೊಂದು ಘಟನೆ ಹಿಂದೆಯೇ ನಡೆಯುವ ನಿರೀಕ್ಷೆ ಇತ್ತು,” ಎಂದು ಸ್ಥಳೀಯರೊಬ್ಬರು ಟಿವಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಘಟನೆಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಟ್ವಿಟ್‌ ಮಾಡುವ ಮೂಲಕ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್‌ ಅವರಿಗೆ ಅಗತ್ಯ ನೆರವು ನೀಡವಂತೆ ತಿಳಿಸಿದ್ದಾರೆ. ಸದ್ಯ ಗೋಯಲ್ ಮುಂಬೈಗೆ ಹೊರಟಿದ್ದು ಘಟನಾ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ.

ಘಟನೆಯಲ್ಲಿ ಗಾಯಗೊಂಡವರನ್ನು ಸಮೀಪದ ಕೆಇಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಮುಂದೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ತಮ್ಮ ಸಂಬಂಧಿಕರನ್ನು ಹಾಗೂ ಸ್ನೇಹಿತರನ್ನು ಹುಡುಕುತ್ತಿರುವ ದೃಶ್ಯಗಳು ಮನಮಿಡಿಯುವಂತಿವೆ. “ಆಸ್ಪತ್ರೆಗೆ ತರುವ ಮುನ್ನವೇ ಸುಮಾರು 15 ಜನ ಮೃತಪಟ್ಟಿದ್ದಾರೆ,” ಎಂದು ಕೆಇಎಂ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಮುಂಬೈನಲ್ಲಿ ಭಾರಿ ಮಳೆಯಾಗುತ್ತಿದೆ. 2005ರ ನಂತರ ಮುಂಬೈ ನೋಡುತ್ತಿರುವ ಭಾರಿ ಮಳೆ ಇದು. ಈಗಾಗಲೇ ವಾಣಿಜ್ಯ ನಗರಿಯ ವಹಿವಾಟು ಮಳೆಯ ಕಾರಣಕ್ಕೆ ಸ್ಥಗಿತಗೊಂಡಿತ್ತು. ಹೀಗಿರುವಾಗಲೇ ನಡೆದಿರುವ ಈ ದುರಂತ ಸ್ಥಳೀಯ ಆಡಳಿತದ ನಿರ್ಲಕ್ಷತೆಗೆ ಸಾಕ್ಷಿಯಂತಿದೆ.

ಘಟನೆ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ವಾಣಿ ಎಂಬುವವರು, ಮುಂಬೈನಲ್ಲಿ ನಡೆದಿರುವ ದೊಡ್ಡ ದುರಂತ ಇದು. ಆದರೆ ಸರಕಾರ ಸಂತಾಪ ಹಾಗೂ ಪರಿಹಾರವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಘೋಷಣೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ಷಯ್ ಬಾಬು ಎಂಬುವವರು ರಾಜಕಾರಣಿಗಳೇ ನೀವು ಕ್ರಮ ಕೈಗೊಳ್ಳಿ, ಇಲ್ಲದಿದ್ದರೆ ನಾವು ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

Top