An unconventional News Portal.

‘ಬಾಕ್ಸಿಂಗ್ ರಿಂಗ್’ ಹೊರಗೆ ಔಷಧಿ ಇಲ್ಲದ ಖಾಯಿಲೆ ವಿರುದ್ಧ ಹೋರಾಡುತ್ತಲೇ ಇದ್ದ ಅಪರೂಪದ ಕ್ರೀಡಾಪಟು ಮಹಮದ್ ಅಲಿ ಇನ್ನಿಲ್ಲ

‘ಬಾಕ್ಸಿಂಗ್ ರಿಂಗ್’ ಹೊರಗೆ ಔಷಧಿ ಇಲ್ಲದ ಖಾಯಿಲೆ ವಿರುದ್ಧ ಹೋರಾಡುತ್ತಲೇ ಇದ್ದ ಅಪರೂಪದ ಕ್ರೀಡಾಪಟು ಮಹಮದ್ ಅಲಿ ಇನ್ನಿಲ್ಲ

ಜಗತ್ತು ಕಂಡು ಅಪರೂಪದ ಕ್ರೀಡಾಪಟು, ವ್ಯವಸ್ಥೆ ಜತೆ ರಾಜೀ ಮಾಡಿಕೊಳ್ಳದ ಹೋರಾಟಗಾರ, ಅನ್ನಿಸಿದ್ದನ್ನು ನೇರವಾಗಿ ಹೇಳುತ್ತಿದ್ದ ಮಾತುಗಾರ, ಔಷಧಿ ಇಲ್ಲದ ನರರೋಗದ ವಿರುದ್ಧ ನಾಲ್ಕು ದಶಕಗಳ ಕಾಲ ಒಳಗೆ ಬಡಿದಾಡುತ್ತಲೇ, ಸಾಮಾಜಿಕವಾಗಿ ಜಾಗೃತಿ ಮೂಡಿಸಿದ್ದ ‘ದಿ ಗ್ರೆಟೆಸ್ಟ್’ ಬಾಕ್ಸರ್ ಮಹಮದ್ ಅಲಿ ಇನ್ನಿಲ್ಲ.

ಅಮೆರಿಕಾ ಕಾಲಮಾನ ಶುಕ್ರವಾರ ರಾತ್ರಿ ಫೀನಿಕ್ಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ ಅಲಿಗೆ 74 ವರ್ಷ ವಯಸ್ಸಾಗಿತ್ತು. 1960ರಲ್ಲಿ ಬಾಕ್ಸಿಂಗ್ ಅಖಾಡಕ್ಕಿಳಿದ ಅಲಿ, ತನ್ನ ಬದುಕಿನುದ್ದಕ್ಕೂ ಗಳಿಸಿದ ಕೀರ್ತಿ, ಅನುಭವಿಸಿದ ಅವಮಾನಗಳು ಹಾಗೂ ಎಲ್ಲವನ್ನೂ ಪಕ್ಕಕ್ಕಿಟ್ಟು ಕೊನೆ ಕಾಲದಲ್ಲಿ ತನ್ನನ್ನು ಒಳಗೇ ಕೊಂದು ಹಾಕುತ್ತಿದ್ದ ಪಾರ್ಕಿನ್ಸನ್ ಎಂಬ ಔಷಧಿ ಇಲ್ಲದ ಖಾಯಿಲೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಹೊತ್ತಿನಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಇದು ಆತನ ರೋಚಕ ಕ್ರೀಡಾ ಬದುಕನ್ನು, ವ್ಯವಸ್ಥೆ ವಿರುದ್ಧ ಕಾಲಕಾಲಕ್ಕೆ ಗಟ್ಟಿ ದನಿಯಲ್ಲಿ ಮಾತನಾಡಿದ ನೇರವಂತಿಕೆಗಳನ್ನು ನೆನಪಿಸಿಕೊಳ್ಳುವ ಸಮಯ. ಅದಕ್ಕಿಂತ ಹೆಚ್ಚಾಗಿ ಕಳೆದ ನಾಲ್ಕು ದಶಕಗಳ ಕಾಲ ಪಾರ್ಕಿನ್ಸನ್ ಖಾಯಿಲೆ ಬಗ್ಗೆ ಮಹಮದ್ ಅಲಿ ಮೂಡಿಸಿದ್ದ ಜಾಗೃತಿಗೆ ಮತ್ತಷ್ಟು ಬಲ ನೀಡುವ ಕಾಲ ಕೂಡ.

ಬದುಕು:

mahamud-ali-2

1960ರಲ್ಲಿ ಅಮೆರಿಕಾದ ಎಲ್ಲಾ ಕಪ್ಪು ಜನಾಂಗದವರಂತೆ ಅವಮಾನದಲ್ಲಿಯೇ ಹುಟ್ಟಿ ಬೆಳೆದ ಅಲಿಯ ಮೂಲ ಹೆಸರು ಕ್ಯಾಸಿಯಸ್ ಕ್ಲೇ. 12 ವರ್ಷವಿದ್ದಾಗ ತನ್ನ ಕುಟುಂಬದ ದ್ವಿಚಕ್ರ ವಾಹನ ಕದ್ದವನ ವಿರುದ್ಧ ರೊಚ್ಚಿಗೇಳುವ ಬಾಲಕ ಕ್ಲೇ ಒಳಗಿನ ಕಿಚ್ಚು ಆತನನ್ನು ಬಾಕ್ಸಿಂಗ್ ಅಖಾಡಕ್ಕೆ ತಂದು ಬಿಟ್ಟಿತು. ಮುಂದೆ, ಆತ ಜಗತ್ತಿನ ಹೆವಿ ವೈಟ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆದ್ದಾಗ ಸಹಜವಾಗಿಯೇ ಕೀರ್ತಿ ಹಾಗೂ ಹಣ ಆತನನ್ನು ಹಿಂಬಾಲಿಸಿಕೊಂಡು ಬಂದಿತು. ಆದರೆ, ಸಮಾಜದ ಮುಖ್ಯವಾಹಿನಿಯಲ್ಲಿ ಉನ್ನತ ವರ್ಗಕ್ಕೆ ಸೇರಿ ಹೋದ ಆತ ತನ್ನ ಹಿನ್ನೆಲೆಯನ್ನು ಮಾತ್ರ ಮರೆಯಲಿಲ್ಲ. ಮುಂದೊಂದು ದಿನ ಆತ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ. ತನ್ನ ಹುಟ್ಟು ಹೆಸರು ಕ್ಯಾಸಿಯಸ್ ಕ್ಲೇ ಬದಲು ಮಹಮದ್ ಅಲಿ ಎಂದು ಕರೆದುಕೊಂಡ. ಆತನೊಳಗೆ ಆಧ್ಯಾತ್ಮಿಕ ಚಿಂತನೆಗಳು ತೀವ್ರವಾಗಿ ಕಾಡುತ್ತಿದ್ದ ಸಮಯವದು.

“ನನಗೆ ನನ್ನ ಮೂಲ ಹೆಸರು ಸರಿ ಬರುವುದಿಲ್ಲ. ಅದು ನನಗೆ ಇಷ್ಟ ಇಲ್ಲ. ನಾನಿನ್ನು ಮಹಮದ್ ಅಲಿ, ಅಂದರೆ ದೇವರ ಪ್ರೀತಿಯ ಶಿಶು ನಾನು. ಜನ ನನ್ನನ್ನು ಹೀಗೆ ಕರೆಯಬೇಕು,” ಎಂದು ಆತ ಹೇಳಿಕೊಂಡಿದ್ದ.

ವ್ಯವಸ್ಥೆ ವಿರೋಧಿ:

ಮಹಮದ್ ಅಲಿ ಒಳಗೆ ಆಧ್ಯಾತ್ಮಿಕ ಚಿಂತನೆಗಳು ಹುಟ್ಟುವ ಸಮಯದಲ್ಲಿಯೇ ಮೂಲ ಕಿಚ್ಚುಗಳೂ ಇನ್ನಷ್ಟು ಸ್ಪಷ್ಟತೆ ಪಡೆದುಕೊಂಡಿದ್ದವು ಅನ್ನಿಸುತ್ತದೆ. ಅಮೆರಿಕಾ ವಿಯಟ್ನಾಂ ಯುದ್ಧಕ್ಕೆ ಅಣಿಯಾಗುವ ಸಮಯದಲ್ಲಿ ಈತನಿಗೆ ಮಿಲಿಟರಿ ಸೇರಬೇಕು ಎಂಬ ಷರತ್ತು ಹಾಕಲಾಯಿತು. ಇದನ್ನು ಬಹಿರಂಗವಾಗಿ ವಿರೋಧಿಸಿದ ಮಹಮದ್ ಅಲಿ, ” ನನಗೆ ಯಾಕೆ ಅವರು ಮಿಲಿಟರಿ ಸಮವಸ್ತ್ರ ಧರಿಸುವಂತೆ ಹೇಳುತ್ತಿದ್ದಾರೆ. ನಾನು ಮನೆ ಬಿಟ್ಟು 10 ಸಾವಿರ ಕಿಲೋಮೀಟರ್ ದೂರದಲ್ಲಿರುವ ಕಂದು ಬಣ್ಣದ ಜನರ ಮೇಲೆ ಗುಂಡು ಹಾರಿಸಲು, ಬಾಂಬು ಎಸೆಯಲು ಹೋಗಲು ಸಾಧ್ಯವಿಲ್ಲ. ಇಲ್ಲಿ ನೆರೆಹೊರೆಯಲ್ಲಿ ಕಪ್ಪು ಬಣ್ಣದ ನನ್ನ ಸಂಗಾತಿಗಳು ನಾಯಿಗಳಂತೆ ಬದುಕು ಬದುತ್ತಿರುವ ಈ ಸಮಯದಲ್ಲಿ ಇದೆಂತಹ ಹುಚ್ಚಾಟ,” ಎನ್ನುವ ಮೂಲಕ ಭಾರಿ ವಿವಾದವನ್ನು ಹುಟ್ಟು ಹಾಕಿದ್ದ. ಮಾನವ ಹಕ್ಕುಗಳ ಕುರಿತು ಅವನ ಕಟು ಮಾತುಗಳನ್ನು ಅವತ್ತಿನ ಅಮೆರಿಕಾದ ರಾಜಕಾರಣ ಭರಿಸುವುದು ಒಮ್ಮೊಮ್ಮೆ ಕಷ್ಟವಾಗುತ್ತಿತ್ತು. ಹೀಗಾಗಿ, ಅಲಿ ವಿರುದ್ಧ ಕೇಸುಗಳನ್ನೂ ಹಾಕಲಾಗಿತ್ತು.

ರೋಗದ ಜತೆ ಹೋರಾಟ:

mahamud-ali-parkinson-1

ಹೀಗೆ, ಬಾಕ್ಸಿಂಗ್ ರಿಂಗ್ ಒಳಗೂ, ಹೊರಗೂ ಹೋರಾಡುತ್ತಿದ್ದ ಮಹಮದ್ ದೇಹದಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳಲಾರಂಭಿಸಿದ್ದು 1984ರ ಸುಮಾರಿಗೆ. ಅಲಿಯನ್ನು ಪರೀಕ್ಷಿಸಿದ್ದ ವೈದ್ಯರು ಔಷಧಿಯೇ ಇಲ್ಲದ ನರರೋಗ ಪಾರ್ಕಿನ್ಸನ್ ಖಾಯಿಲೆಗೆ ಆತ ತುತ್ತಾಗಿರುವುದನ್ನು ದೃಢಪಡಿಸಿದರು. ಇದಾದ ನಂತರ ಬಾಕ್ಸಿಂಗ್ ಕಣದಿಂದ ದೂರವೇ ಉಳಿದ ಅಲಿ ಖಾಯಿಲೆ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸವನ್ನು ಆರಂಭಿಸಿದ್ದ.

ದೇಹದ ಚಲನೆಯನ್ನು ಹಂತಹಂತವಾಗಿ ಕಡಿಮೆ ಮಾಡುವ ವಿಚಿತ್ರ ಖಾಯಿಲೆ ಪಾರ್ಕಿನ್ಸನ್. ನಮ್ಮ ದೈನಂದಿನ ಚಲನೆಗಳಿಗೆ ಬೇಕಾಗುವ ರಾಸಾಯನಿಕಗಳನ್ನು ಮೆದುಳು ಉತ್ಪತಿ ಮಾಡುವುದನ್ನು ನಿಲ್ಲಿಸಿ ಬಿಡುವುದು ಇದರ ರೋಗ ಲಕ್ಷಣ. ಹೀಗಾಗಿ, ಚಲನೆ ನಿಧಾನವಾಗುತ್ತಾ ಹೋಗುತ್ತದೆ. ಮಾಂಸಖಂಡಗಳು ಬಿಗಿದುಕೊಳ್ಳಲು ಶುರು ಮಾಡುತ್ತದೆ. ಇದಕ್ಕೆ ಈವರೆಗೂ ಸ್ಪಷ್ಟವಾದ ಔಷಧಿಗಳಾಗಾಲೀ, ಶಸ್ತ್ರ ಚಿಕಿತ್ಸೆಯಾಗಲೀ ವೈದ್ಯ ವಿಜ್ಞಾನ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ಅಲಿ ಕೂಡ ತನಗೆ ಬಂದ ಖಾಯಿಲೆಯಿಂದ ಬಚಾವಾಗುವುದು ಸಾಧ್ಯವಾಗಲಿಲ್ಲ. ಬದಲಿಗೆ, ಆತ ವಿಶ್ವದಾದ್ಯಂತ ಪಾರ್ಕಿನ್ಸನ್ ಖಾಯಿಲೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ. ಇದು ಆತ ಬಾಕ್ಸಿಂಗ್ ಕ್ಷೇತ್ರದಲ್ಲಿ ಸಂಪಾದಿಸಿದ ಯಶಸ್ಸು ಮತ್ತು ಕೀರ್ತಿ ಆಚೆಗೆ ಸಮಾಜಕ್ಕೆ ಸಲ್ಲಿಸಿದ ಅಪ್ರತಿಮ ಸೇವೆ ಎಂದು ಅಮೆರಿಕನ್ ಪಾರ್ಕಿನ್ಸನ್ ಸೊಸೈಟಿ ಹೇಳಿಕೆ ನೀಡಿದೆ.

ಇಂತಹದೊಂದು ವಿಭಿನ್ನ ವ್ಯಕ್ತಿತ್ವವವನ್ನು ಹೊಂದಿದ್ದ ಮಹಮದ್ ಅಲಿ ಶುಕ್ರವಾರ ನಮ್ಮನ್ನು ಅಗಲಿದ್ದಾನೆ. ಆತನ ಅಂತಿಮ ಸಂಸ್ಕಾರ ಹುಟ್ಟೂರು ಕೆಂಟುಕಿಯಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ಹೇಳಿವೆ. ಈ ಸಮಯದಲ್ಲಿ ಆತನ ಕ್ರೀಡಾ ಸಾಧನೆ ಹಾಗೂ ಪಾರ್ಕಿನ್ಸನ್ ಖಾಯಿಲೆ ಕುರಿತು ಮೂಡಿಸಿದ ಸಾಮಾಜಿಕ ಜಾಗೃತಿಗೆ ‘ಸಮಾಚಾರ’ ಸಲ್ಲಿಸುತ್ತಿರುವ ನುಡಿ ನಮನ ಇದು.

Leave a comment

Top