An unconventional News Portal.

ಮತ್ತೂರು ಸೋಮಯಾಗ ಪ್ರಕರಣ: ಬೆಟ್ಟ ಅಗೆದು ‘ಮೇಕೆ’ ಹಿಡಿದ TV9!

ಮತ್ತೂರು ಸೋಮಯಾಗ ಪ್ರಕರಣ: ಬೆಟ್ಟ ಅಗೆದು ‘ಮೇಕೆ’ ಹಿಡಿದ TV9!

ಪಿಕೆ ಸಿನಿಮಾದಲ್ಲಿ ಅನುಷ್ಕಾ ಶರ್ಮ ಸುದ್ದಿ ವಾಹಿನಿಯೊಂದರ ಸ್ಟುಡಿಯೋದೊಳಗೆ ನಾಯಿಮರಿ ಹಿಡಿದುಕೊಂಡು ನಿರೂಪಣೆ ಮಾಡಿದ್ದನ್ನು ನೋಡಿದ್ದ ಪ್ರೇಕ್ಷಕರು, ಕನ್ನಡದಲ್ಲಿ ಇಂಥದನ್ನೆಲ್ಲಾ ನೋಡುವುದು ಯಾವಾಗ ಎನ್ನುವ ನಿರೀಕ್ಷೆಯಲ್ಲಿದ್ದರು. ಅವರ ನಿರೀಕ್ಷೆಯನ್ನು ಕನ್ನಡದ ನಂಬರ್ 1 ಸುದ್ದಿ ವಾಹಿನಿ ನಿನ್ನೆ ಪೂರೈಸಿದ್ದು, ಸ್ಟುಡಿಯೋದಲ್ಲಿ ಪ್ರೇಕ್ಷಕರಿಗೆ ಮೇಕೆ ದರ್ಶನ ಮಾಡಿಸಿದೆ.

ಮೇಕೆಗೆ ಸ್ವಾಗತ:

ಈ ಬಾರಿ ಕರ್ನಾಟಕದಲ್ಲಿ ಬರಗಾಲ. ಕನ್ನಡ ಸುದ್ದಿ ವಾಹಿನಿಗಳಿಗೂ ಸುದ್ದಿ ಬರ. ಇದೇ ಸಮಯಕ್ಕೆ ಪ್ರಜಾವಾಣಿ ಎರಡು ದಿನಗಳ ಹಿಂದೆ ಶಿವಮೊಗ್ಗ ಹೊರವಲಯದ ಮತ್ತೂರಿನಲ್ಲಿ ಸಂಕೇತಿ ಬ್ರಾಹ್ಮಣರು ಸೋಮಯಾಗದಲ್ಲಿ ಮೇಕೆ ಬಲಿಕೊಟ್ಟ ಸುದ್ದಿ ಪ್ರಕಟಿಸಿತ್ತು. ಹಸಿವಿನಿಂದ ಕಾಯುತ್ತಿದ್ದ ಸುದ್ದಿ ಮಾಧ್ಯಮಗಳಿಗೆ ಇದು ಭೂರಿ ಭೋಜನವಾಯ್ತು.

ಈ ಸುದ್ದಿಯ ಬೆನ್ನಿಗೆ ಬಿದ್ದ ಟಿವಿ9 ಶುಕ್ರವಾರ ಮಧ್ಯಾಹ್ನ ವಿಶೇಷ ಪ್ಯಾನಲ್ ಚರ್ಚೆ ಆರಂಭಿಸಿತು. ಕನ್ನಡದ ಹಿರಿಯ ನಿರೂಪಕಿ ರಾಧಿಕಾ ಈ ಪ್ಯಾನಲ್ ಚರ್ಚೆ ನಡೆಸಿಕೊಡಲು ಕೂತಿದ್ದರು.

Untitled 6

‘ಬಕ್ರಿ ಪುರಾಣ’ ಅಂತ ಚರ್ಚೆಯ ಹೆಸರು. ಇಡೀ ಸೋಮಯಾಗದ ಸುತ್ತ ಎದ್ದಿರುವ ವಿವಾದಗಳು ಮತ್ತು ತನಿಖೆಯಿಂದ ಹೊರ ಬಂದ ಮಾಹಿತಿಗಳ ಸಣ್ಣ ಸುದ್ದಿಯ ತುಣುಕೊಂದು ಚರ್ಚೆಯ ಆರಂಭದಲ್ಲಿ ಪ್ರಸಾರವಾಯಿತು.

ಇದಾದ ನಂತರ ಎಂದಿನಂತೆ ರಾಧಿಕಾ ಚರ್ಚೆ ಕೈಗೆತ್ತಿಕೊಂಡರು. “ಮತ್ತೂರಿನಲ್ಲಿ ನಡೆದ ಸೋಮಯಾಗ ವಿವಾದಕ್ಕೆ ಕಾರಣವಾಗಿದೆ. ಯಾಗದಲ್ಲಿ ನಿಜವಾಗಿಯೂ ಮೇಕೆ ಬಲಿ ನಡೆದಿತ್ತಾ ಎನ್ನುವ ಅಂಶಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ಉತ್ತರ ಬರಬೇಕಾಗಿದೆ. ಆದರೂ ಕೂಡಾ ಕೆಲವೊಂದು ಅಂಶಗಳನ್ನು ಇಟ್ಟುಕೊಂಡು ನಾವೂ ಕೂಡಾ ‘ಇನ್ವೆಸ್ಟಿಗೇಷನ್’ ಮಾಡ್ತಾ ಇದ್ದೀವಿ. ಈ ಮುಖಾಂತರ ಅಲ್ಲಿ ನಿಜಕ್ಕೂ ಬಲಿ ನಡೆದಿತ್ತಾ? ಬಲಿ ನಡೆದಿಲ್ಲ ಅನ್ನುವುದಾದರೆ ಮೇಕೆಯನ್ನು ಯಾಕೆ ಕಟ್ಟಿ ಹಾಕಿದ್ದರು? ಆ ಮೇಕೆಯ ಹಾಲು ಸೋಮಯಾಗಕ್ಕೆ ಬಳಸ್ತಾರಾ? ಈ ಎಲ್ಲಾ ಪ್ರಶ್ನೆಗಳನ್ನು ನಾವು ಇಟ್ಟುಕೊಂಡಿದ್ದೀವಿ. ಸುಮಾರು ಜನ ಅತಿಥಿಗಳು ನಮ್ಮ ಜೊತೆಗೆ ಇದ್ದಾರೆ. ಅವರೆಲ್ಲರೂ ಕೂಡಾ ಮಾತಾಡ್ತಾರೆ ಅದಕ್ಕೂ ಮೊದಲು ಕೆಲವೊಂದು ಪಾಯಿಂಟ್ಸ್ ನೋಡೋಣ ..” ಅಂತ ಚರ್ಚೆ ಆರಂಭಿಸಿದರು.

ಇಷ್ಟೇ ಆಗಿ ಚರ್ಚೆ ನಡೆದಿದ್ದರೆ ನಾವು ಆ ವಿಷಯವನ್ನು ಇಲ್ಲಿಗೆ ಎಳೆದುಕೊಂಡು ಬರುತ್ತಿರಲಿಲ್ಲ. ಆದರೆ ನಡೆದ ಚರ್ಚೆಯಲ್ಲಿ ಭಾಗವಹಿಸಲು ಸ್ಟುಡಿಯೋದಲ್ಲಿ ಓರ್ವ ವಿಶೇಷ ಅತಿಥಿ ಇದ್ದರು.

ರಾಧಿಕಾ ಅತಿಥಿಗಳನ್ನು ಪರಿಚಯಿಸಲು ಆರಂಭಿಸುತ್ತಿದ್ದಂತೆ ಒಂದು ಕ್ಷಣ ವೀಕ್ಷಕರು ಹೌಹಾರಿದರು. “ಈ ಬಗ್ಗೆ ನಮ್ಮ ಜೊತೆ ಮಾತಾಡ್ಲಿಕ್ಕೋಸ್ಕರ ಜಯಕುಮಾರ್ ಶಿವಮೊಗ್ಗ ಸ್ಟುಡಿಯೋದಲ್ಲಿ ಇರ್ತಾರೆ. ಇವರೇ ಮೇಕೆಯನ್ನು ಬಾಡಿಗೆಗೆ ಕೊಟ್ಟಿದ್ದು ಅಂತ ಹೇಳ್ತಿದ್ದಾರೆ. ನಾನು ಯಾಗದ ಸಂದರ್ಭದಲ್ಲಿ ಮೇಕೆಯನ್ನು ಬಾಡಿಗೆಗೆ ಕೊಟ್ಟಿದ್ದೆ. ಆ ಮೇಕೆ ನನ್ನ ಹತ್ರ ಇದೆ ಅಂತ ಹೇಳಿ ಶಿವಮೊಗ್ಗ ಸ್ಟುಡಿಯೋದಲ್ಲಿ, ಜಯಕುಮಾರ್ ಅವರು ಮೇಕೆಯನ್ನೇ ಕರೆದುಕೊಂಡು ಬರ್ತಿದ್ದಾರೆ. ಶಿವಮೊಗ್ಗ ಸ್ಟುಡಿಯೋದಲ್ಲಿ ಮೇಕೆ ಜತೆಗೆ ಜಯಕುಮಾರ್ ಅವರು ಇರ್ತಾರೆ,” ಅಂತ ಮೇಕೆ ಮತ್ತು ಜಯಕುಮಾರ್ ಅವರನ್ನು ಚರ್ಚೆಗೆ ಸ್ವಾಗತಿಸಿದರು. ವೇಣುಗೋಪಾಲಾಚಾರ್ಯ ಅಗ್ನಿಹೋತ್ರಿ, ಮಂಗಳೂರಿನಿಂದ ಎ. ಹರಿದಾಸ್ ಭಟ್, ಮೈಸೂರು ಸ್ಟುಡಿಯೋದಿಂದ ಡಾ. ಎಂ. ಕೆ. ನರಸಿಂಹನ್ ಅವರು ಮೇಕೆ ಜತೆ ಪ್ಯಾನಲ್ ಹಂಚಿಕೊಂಡ ಮತ್ತಿತರರು.

ಇಡೀ ಪ್ಯಾನಲ್ ಚರ್ಚೆ ಮೇಕೆಯ ಸುತ್ತವೇ ಕೇಂದ್ರೀಕೃತವಾಗಿತ್ತು. ಮೇಕೆಯ ಬಣ್ಣ ಯಾವುದು? ಗಂಡೋ ಹೆಣ್ಣೋ? ಬಾಡಿಗೆ ಕೊಟ್ಟಿದ್ದಾರೆ? ಎಷ್ಟು ಬಾಡಿಗೆಗೆ? ಅಂತ ಅತೀ ಗಂಭೀರ ಚರ್ಚೆ ನಡೆಯಿತು. ಮಧ್ಯೆ ಮೇಕೆ ಸೊಪ್ಪು ಮೆಲ್ಲುತ್ತಿತ್ತು. ಅದಕ್ಕೆ ಸೋಮಯಾಗ, ಟಿವಿ9 ಯಾವುದರ ಗೊಡವೆಯೂ ಇರಲಿಲ್ಲ. ಬಹುಶಃ ಪ್ರೇಕ್ಷಕರೂ ಮೇಕೆಯ ವರ್ತನೆಯನ್ನೇ ಅನುಸರಿಸುವ ದಿನಗಳು ದೂರವಿಲ್ಲ.

ಹೀಗೆ, ಮಾಧ್ಯಮವೊಂದು 10ವರ್ಷಗಳ ಯಶಸ್ವೀ ಪಯಣದ ನಂತರವೂ ಇಂಥಹದ್ದೊಂದು ಹೈಡ್ರಾಮಾಕ್ಕೆ ಸಾಕ್ಷಿಯಾಗಬೇಕಾಯ್ತು. ಇದು ಇವತ್ತಿನ ಕನ್ನಡ ಪತ್ರಿಕೋದ್ಯಮದ ದುರಂತ.

ಈ ಚರ್ಚೆ ಟಿವಿ9 ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಬಂದ ಪ್ರತಿಕ್ರಿಯೆಗಳಲ್ಲಿ ಒಂದು ಸ್ಯಾಂಪಲ್ ಇಲ್ಲಿದೆ.

tv9-panel-reaction-1

Top