An unconventional News Portal.

‘ಸಂತೆ’ ಮದರ್ ತೆರೆಸಾ ಪವಾಡ ಮಾಡಿದ್ರಾ?: CNN ಬಿಚ್ಚಿಟ್ಟ ಜಿಜ್ಞಾಸೆ ಕತೆ!

‘ಸಂತೆ’ ಮದರ್ ತೆರೆಸಾ ಪವಾಡ ಮಾಡಿದ್ರಾ?: CNN ಬಿಚ್ಚಿಟ್ಟ ಜಿಜ್ಞಾಸೆ ಕತೆ!

ಭಾರತೀಯ ಕಾಲಮಾನ ಭಾನುವಾರ ರಾತ್ರಿ, ವ್ಯಾಟಿಕನ್ ನಗರದಲ್ಲಿ ಪೋಪ್ ಫ್ರಾನ್ಸಿಸ್, ದಿವಂಗತ ಮದರ್ ತೆರೆಸಾಗೆ ಸಂತ ಪದವಿ ಪ್ರಧಾನ ಮಾಡಲಿದ್ದಾರೆ.

ಆಕೆಯ ಅಭಿಮಾನಿಗಳಿಗಿದು ಸಂಭ್ರಮದ ವಿಚಾರವಾದರೆ, ಇನ್ನು ಕೆಲವರು ‘ಸೇವೆ’ ನೀಡಿದಾಕೆಗೆ ಸಂತ ಪದವಿ ನೀಡುವುದಕ್ಕೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಇದರಾಚೆಗೆ ಮದರ್ ತೆರೆಸಾ ಏನು? ಆಕೆ ಯಾರು? ಅವರು ನೀಡಿದ ಜನ ಸೇವೆಗಳು ಹೇಗಿದ್ದವು? ಎಂಬುದನ್ನು ಅವರ ಆಶ್ರಮದಲ್ಲೇ ಸ್ವಯಂ ಸೇವಕರಾಗಿದ್ದ ಹೆಮ್ಲೇ ಗೊನ್ಜಾಲೆಜ್ ‘ಸಿಎನ್ಎನ್’ಗೆ ವಿವರವಾಗಿ ಬರೆದಿದ್ದಾರೆ. ಸೆ. 5 ಮದರ್ ತೆರೆಸಾ ಸಾವನ್ನಪ್ಪಿದ ದಿನ. ಈ ಹಿನ್ನೆಲೆಯಲ್ಲಿ ಸಿಎನ್ಎನ್ ವರದಿಯ ಸಂಗ್ರಹ ರೂಪವನ್ನು ‘ಸಮಾಚಾರ’ ಇಲ್ಲಿ ನೀಡುತ್ತಿದೆ.

ಗೊನ್ಜಾಲೆಜ್ ಮದರ್ ತೆರೆಸಾರನ್ನು ಎಂದೂ ನೇರಾ ನೇರ ಭೇಟಿಯಾದವರಲ್ಲ. 2008ರಲ್ಲಿ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ತನ್ನ ರಿಯಲ್ ಎಸ್ಟೇಟ್ ಉದ್ಯಮದಿಂದ ವಿರಾಮ ತೆಗೆದುಕೊಂಡು ಕೊಲ್ಕತ್ತಾದ ಕಾಲಿಘಟ್ ಪ್ರದೇಶದಲ್ಲಿರುವ ತೆರೆಸಾರ ‘ನಿರ್ಮಲ್ ಹೃದಯ್’ ಆಶ್ರಮದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡಲು ಹೋಗಿದ್ದರು.

ಆ ಸಂದರ್ಭ ಗೊನ್ಜಾಲೆಜ್ ಅಲ್ಲಿ ಕಂಡ ವೈದ್ಯಕೀಯ ವ್ಯವಸ್ಥೆಗಳು ಮತ್ತು ಸ್ವಚ್ಛತೆಯ ವಿಚಾರಗಳನ್ನು ವರದಿಯಲ್ಲಿ ತೆರೆದಿಟ್ಟಿದ್ದಾರೆ. ಗೊನ್ಜಾಲೆಜ್, ಪ್ರಕಾರ ಮದರ್ ತೆರೆಸಾ ಸೇರಿದಂತೆ, ಅವರ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಸ್ವಯಂ ಸೇವಕರಿಗೆ ವೈದ್ಯಕೀಯ ತರಬೇತಿಗಳೇನೂ ಇರಲಿಲ್ಲ.

ಗೊನ್ಜಾಲೆಜ್ ಅಲ್ಲಿನ ದೃಶ್ಯಗಳನ್ನು ಕಂಡು ದಂಗಾಗಿ ಹೋದರಂತೆ. ಸಾಮಾನ್ಯ ವೈದ್ಯಕೀಯ ನಿಯಮಗಳಾವುದನ್ನೂ ಅಲ್ಲಿ ಪಾಲನೆ ಮಾಡುತ್ತಿರಲಿಲ್ಲ. ಇಂಜಕ್ಷನ್ ಸೂಜಿಯನ್ನು ನಲ್ಲಿ ನೀರಿನಲ್ಲಿ ತೊಳೆದು ದಾದಿಯರು ಮತ್ತೆ ಬಳಸುತ್ತಿದ್ದರು. ಉಪಯೋಗಿಸುತ್ತಿದ್ದ ಬಟ್ಟೆ ಕೆಲವು ಸಂದರ್ಭ ಉಚ್ಚೆಯಲ್ಲಿಯೂ ಮುಳುಗಿರುತ್ತಿತ್ತು. ಕೈ ತೊಳೆಯುವಲ್ಲಿಯೇ ಅಡುಗೆ ಮಾಡುತ್ತಿದ್ದರು. ಹೀಗೆ ಅವರು ‘ನಿರ್ಮಲ್ ಹೃದಯ್’ ಆಶ್ರಮದ ಅಂತರಾಳದ ಕತೆಯನ್ನು ಬಿಚ್ಚಿಡುತ್ತಾರೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ರೋಗಿಗಳು ಅಲ್ಲಿ ತಣ್ಣಿರಿನಿಂದಲೇ ಸ್ನಾನ ಮಾಡಬೇಕಾಗಿತ್ತು. ಅಲ್ಲಿದ್ದ ಒಂದು ಹೀಟರಿನಲ್ಲಿ ಇದ್ದವರಿಗೆಲ್ಲಾ ನೀರು ಬಿಸಿ ಮಾಡಲು ಸಾಲುತ್ತಿರಲಿಲ್ಲ. ಅಲ್ಲಿ ವೈದ್ಯರಾಗಲೀ, ವೈದ್ಯಕೀಯ ತರಬೇತಿ ಪಡೆದ ಒಂದೇ ಒಂದು ಸನ್ಯಾಸಿಗಳಾಗಲೀ ಇರಲಿಲ್ಲ ಎಂದು ಪ್ರತಿಪಾದಿಸುತ್ತಾರೆ ಗೊನ್ಜಾಲೆಜ್.

ಕಾನ್ಸಂಟ್ರೇಷನ್ ಕ್ಯಾಂಪ್:

ಕೊಲ್ಕತ್ತಾದಲ್ಲಿರುವ ಮದರ್ ತೆರೆಸಾ ಕಟ್ಟಿದ ನಿರ್ಮಲ್ ಹೃದಯ್

ಕೊಲ್ಕತ್ತಾದಲ್ಲಿರುವ ಮದರ್ ತೆರೆಸಾ ಕಟ್ಟಿದ ನಿರ್ಮಲ್ ಹೃದಯ್

“ಅಲ್ಲಿನ ದೃಶ್ಯಗಳು ಎರಡನೇ ವಿಶ್ವಯುದ್ಧ ಕಾಲದ ‘ಕಾನ್ಸಂಟ್ರೇಷನ್ ಕ್ಯಾಂಪ್’ನಂತೆ ಇತ್ತು,” ಎನ್ನುತ್ತಾರೆ ಗೊನ್ಜಾಲೆಜ್.

ಅಲ್ಲಿನ ವ್ಯವಸ್ಥೆ ವಿರುದ್ಧ ಗೊನ್ಜಾಲೆಜ್ ಬಂಡೆದ್ದು, ವಾಟರ್ ಹೀಟರ್ ಸ್ಥಾಪಿಸಲು ಮುಂದಾದಾಗ ಆಶ್ರಮದ ಸನ್ಯಾಸಿನಿಯರು ನಿರಾಕರಿಸಿದರಂತೆ. “ನಾವು ಇಲ್ಲಿ ಅದನ್ನೆಲ್ಲಾ ಮಾಡುವುದಿಲ್ಲ. ಜೀಸಸ್ ಇದೇ ರೀತಿ ಬಯಸುವುದು,” ಎಂದು ಅಲ್ಲಿದ್ದ ವ್ಯವಸ್ಥೆಯನ್ನೇ ಸಮರ್ಥಿಸಿಕೊಂಡರು ಎಂದು ಹೇಳುತ್ತಾರೆ ಗೊನ್ಜಾಲೆಜ್.

ಆದರೆ “ಮೂಲಭೂತ ಸೇವೆ ಎಷ್ಟು ಬೇಕೋ ಅಷ್ಟನ್ನು ಬಡವರಿಗೆ ಇಲ್ಲಿ ನೀಡುತ್ತೇವೆ,” ಎನ್ನುತ್ತಾರೆ ಕೊಲ್ಕತ್ತಾದಲ್ಲಿ ಮಿಷನರಿಗಳ ಚಾರಿಟಿಗಳ ಜತೆ ಕಳೆದ 25 ವರ್ಷಗಳಿಂದ ಸಂಬಂಧ ಹೊಂದಿರುವ ಚಂದ ಚಕ್ರವರ್ತಿ. ಇವರೂ ಒಂದು ಕಾಲದಲ್ಲಿ ‘ನಿರ್ಮಲ್ ಹೃದಯ್’ನಲ್ಲಿ ಸೇವೆ ಮಾಡಿದವರು.

ಗೊನ್ಜಾಲೆಜ್ ಆರೋಪಗಳನ್ನು ನಿರಾಕರಿಸುವ ಅವರು, “ಇದೆಲ್ಲಾ ಸತ್ಯಕ್ಕೆ ದೂರವಾದುದು. ಈ ಟೀಕೆಗಳೆಲ್ಲಾ ನಿಜವಾಗಿಯೂ ಸುಳ್ಳು,” ಎನ್ನುತ್ತಾರೆ. “ನೀವು ಕಾಲಿಘಟ್ಗೆ ಹೋಗಿ ನೋಡಿ, ಅಲ್ಲಿಗೆ ಸಾಯಲು ಸಿದ್ಧವಾದ ಜನರು ಬರುತ್ತಾರೆ. ಹೆಚ್ಚಿನವರು ತಮ್ಮ ಜೀವನವನ್ನು ಮರಳಿ ಪಡೆದಿದ್ದಾರೆ. ಆರೋಗ್ಯದ ಜತೆ ಕಾಳಜಿ ವಹಿಸದಿದ್ದಲ್ಲಿ ಸಾಯುತ್ತಿರುವವರಿಗೆ ಪುನರ್ಜನ್ಮ ನೀಡಲು ಹೇಗೆ ಸಾಧ್ಯ,” ಎಂದು ಚಕ್ರವರ್ತಿ ಪ್ರಶ್ನಿಸುತ್ತಾರೆ.

ಈ ಬಗ್ಗೆ ಪ್ರತಿಕ್ರೀಯೆ ನೀಡುವ ಮದರ್ ತೆರೆಸಾ ಸಂಸ್ಥೆಯ ವಕ್ತಾರೆ ಮತ್ತು ತೆರೆಸಾ ಆಪ್ತ ಗೆಳತಿ ಸುನಿತಾ ಕುಮಾರ್, “ನಾವು ಮೂಲ ಕಾಳಜಿ ಮತ್ತು ಸೇವೆಯನ್ನು ಬಡವರಿಗೆ ನೀಡುತ್ತೇವೆ,” ಎನ್ನುತ್ತಾರೆ.

“ಅವರು (ತೆರೆಸಾ) ಯಾವುದೇ ಫೈವ್ ಸ್ಟಾರ್ ಆಸ್ಪತ್ರೆ ತೆರೆಯಲು ಹೊರಟಿರಲಿಲ್ಲ,” ಎನ್ನುವುದು ಸುನಿತಾ ಸಮಜಾಯಿಷಿ.

ಅವ್ಯವಹಾರ ಆರೋಪಗಳು:

ಟೀಕಾಕಾರರ ಮಾತುಗಳು ಇಲ್ಲಿಗೇ ಕೊನೆಯಾಗುವುದಿಲ್ಲ.

ಇಡೀ ಸಂಸ್ಥೆಗೆ ವಿಶ್ವದಾದ್ಯಂತ ಕೋಟ್ಯಾಂತರ ಡಾಲರ್ ಹಣ ಹರಿದು ಬರುವಾಗ ಅದನ್ನು ಆಸ್ಪತ್ರೆ ನಿರ್ಮಾಣ, ಶಾಲೆ ನಿರ್ಮಾಣ, ಸೌಕರ್ಯಗಳನ್ನು ಹೆಚ್ಚಿಸಲು ವಿನಿಯೋಗಿಸಬಾರದೇಕೆ ಎಂಬ ಪ್ರಶ್ನೆಗಳನ್ನು ಅವರು ಮುಂದಿಡುತ್ತಾರೆ.

ಅವರ ಆರೋಪಕ್ಕೆ ಸರಿಯಾಗಿ ಸಂಸ್ಥೆಯ ವ್ಯವಹಾರದ ಬಗ್ಗೆ ಅಂತಹ ಯಾವುದೇ ಪಾರದರ್ಶಕತೆಗಳಿಲ್ಲದಿರುವುದು ಕಣ್ಣಿಗೆ ರಾಚುತ್ತದೆ. ಹುಡುಕಿದರೆ ಇಡೀ ಸಂಸ್ಥೆಯ ಬಗ್ಗೆ ಮೇಲ್ಮಟ್ಟದ ಮಾಹಿತಿಗಳಷ್ಟೇ ಸಿಗುತ್ತವೆ. ಸಂಸ್ಥೆಯ ಈಗಿನ ಮುಖ್ಯಸ್ಥರ ಜೊತೆ ಮಾತನಾಡಲು ಸಿಎನ್ಎನ್ ಕೇಳಿಕೊಂಡ ಮನವಿಯನ್ನೂ ತಿರಸ್ಕರಿಸಲಾಯಿತು.

“ಫಂಡ್ ಬರುತ್ತದೆ,” ಎನ್ನುತ್ತಾರೆ ಕೊಲ್ಕೊತ್ತಾದ ಮಕ್ಕಳ ಆಶ್ರಮದ ಮುಖ್ಯಸ್ಥರಾದ ಸಿಸ್ಟರ್ ಜಾನ್. “ನಾವು ಹಸಿದ ಎಲ್ಲರ ಹೊಟ್ಟೆಯನ್ನೂ ಪ್ರತಿದಿನ ತುಂಬಿಸಬಲ್ಲೆವು. ಇದು ಪ್ರೀತಿಯ ಪವಾಡ,” ಎನ್ನುವುತ್ತಾರೆ ಅವರು. ಹೀಗಿದ್ದಾಗ “ಅಷ್ಟೆಲ್ಲಾ ದೇಣಿಗೆ ಬಂದರೂ ಈ ರೀತಿ ಅವರಿಗೆ ಯಾಕೆ ಮಾಡಲು ಸಾಧ್ಯವಿಲ್ಲ,” ಎಂದು ಅವರು ಪ್ರಶ್ನೆ ಮಾಡುತ್ತಾರೆ.

ಆದರೆ ಆಕೆ ಇಲ್ಲಿಗೇ ನಿಲ್ಲುವುದಿಲ್ಲ. 100 ದೇಶಗಳಲ್ಲಿ ಕಾರ್ಯನಿರ್ವಹಿಸುವ ಸೇವಾ ಸಂಸ್ಥೆಯೊಂದು ರೆಡ್ ಕ್ರಾಸ್ ಅಥವಾ ಆಕ್ಸಮ್ ನಂತೆ ಉತ್ತರದಾಯಿತ್ವ ಯಾಕೆ ಹೊಂದಿರಬಾರದು ಎನ್ನುತ್ತಾರೆ.

“ಅವುಗಳ (ರೆಡ್ ಕ್ರಾಸ್) ಮಟ್ಟಕೆ ಯಾಕೆ ಈ ಸಂಸ್ಥೆ ಇಲ್ಲ,” ಎಂಬ ಪ್ರಶ್ನೆಯನ್ನು ಗೊನ್ಜಾಲೆಜ್ ಕೂಡಾ ಎತ್ತುತ್ತಾರೆ. “ಧರ್ಮದ ಕಾರಣಕ್ಕೆ ಅವರು ಉಚಿತ ಪಾಸ್ ಪಡೆಯುತ್ತಾರೆ; ವ್ಯಾಟಿಕನಿನ ಲಾಬಿಯಿಂದ ಅವರು ಉಪಯೋಗ ಗಿಟ್ಟಿಸುತ್ತಾರೆ,” ಎಂದು ಅವರು ದೂರುತ್ತಾರೆ.

ಕ್ರಿಶ್ಚಿಯನ್ಗೆ ಮತಾಂತರ:

ಗರ್ಭಪಾತ, ಗರ್ಭ ನಿರೋಧಕ ಮತ್ತು ವಿಚ್ಚೇದನದ ವಿಚಾರದಲ್ಲಿ ತೆರೆಸಾರನ್ನು ವ್ಯಾಟಿಕನ್ ಒಪ್ಪುತ್ತದೆ. ಆದರೆ ಆಕೆಯ ವಿಪರೀತ ಮಹಿಳಾವಾದಿ ಹೋರಾಟಗಳನ್ನು ವ್ಯಾಟಿಕನ್ ಕೂಡಾ ಖಂಡಿಸುತ್ತದೆ. 1979ರಲ್ಲಿ ಆಕೆಗೆ ನೊಬೆಲ್ ಬಹುಮಾನ ಸಂದರ್ಭ ಮಾತನಾಡಿದ ಆಕೆ “ಗರ್ಭಪಾತ ಮಾಡುವವರು ಶಾಂತಿಯ ವಿಧ್ವಂಸಕರು,” ಎಂದು ಕರೆಯುತ್ತಾರೆ.

ಡಿಸೆಂಬರ್ 10, 1979ರಲ್ಲಿ ಓಸ್ಲೋದಲ್ಲಿ ನೊಬೆಲ್ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿರುವ ಮದರ್ ತೆರೆಸಾ

ಡಿಸೆಂಬರ್ 10, 1979ರಲ್ಲಿ ಓಸ್ಲೋದಲ್ಲಿ ನೊಬೆಲ್ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿರುವ ಮದರ್ ತೆರೆಸಾ

ಇದಿಷ್ಟೇ ಅಲ್ಲ ಮದರ್ ತೆರೆಸಾ ವಿರುದ್ಧ ಟೀಕೆ ಮಾಡುವವರು ಮತ್ತಷ್ಟು ಕಾರಣಗಳನ್ನು ಮುಂದಿಡುತ್ತಾರೆ ಅದು ಮತಾಂತರದ ಕುರಿತಾದದ್ದು. ಆಕೆ ಯಾರಿಗೆ ಸೇವೆ ನೀಡುತ್ತಿದ್ದರೋ ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು ಯತ್ನಿಸುತ್ತಿದ್ದರು ಎನ್ನುವ ಗಂಭೀರ ಆರೋಪ ತೆರೆಸಾ ಮೇಲಿದೆ.

ಆದರೆ ಇದನ್ನು ಹೆಚ್ಚಿನವರು ಒಪ್ಪುವುದಿಲ್ಲ. “ಆಕೆ ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ನೋಡುತ್ತಿದ್ದರು. ಮುಸ್ಲಿಮ್, ಹಿಂದೂ ಅಥವಾ ಸಿಖ್ ಎಂದು ನೋಡುತ್ತಿರಲಿಲ್ಲ,” ಎನ್ನುತ್ತಾರೆ ಹಿಂದುವೇ ಆಗಿರುವ ಸುನಿತಾ ಕುಮಾರ್.

“ನಾನು ಆಕೆಯೊಂದಿಗೆ  ಪ್ರಾರ್ಥನೆಗೆ ಹೋಗುತ್ತಿದ್ದಾಗ, ‘ಸುನಿತಾ ಚಾಪೆಲಿಗೆ ಬಾ. ಅಲ್ಲಿಯೂ ನೀನೇನು ಪ್ರಾರ್ಥನೆ ಮಾಡ್ತಿಯೋ ಅದನ್ನೇ ಮಾಡು ಎನ್ನುತ್ತಿದ್ದರು. ನಾವು ಅಲ್ಲಿ ನಮ್ಮ ನಮ್ಮ ಪ್ರಾರ್ಥನೆ ಮಾಡುತ್ತಿದ್ದೆವು,” ಎನ್ನುತ್ತಾರೆ ಸುನಿತಾ.

ಪವಾಡದ ಕತೆಗಳು:

ಇದೆಲ್ಲಾ ಒಂದು ಕತೆಯಾದರೆ ಆಕೆ ಸತ್ತ ನಂತರ ನಡೆಯುತ್ತಿರುವ ಸಂತ ಪದವಿ ಪ್ರಧಾನದ ಬಗ್ಗೆಯೂ ಎಲ್ಲೆಡೆಯಿಂದ ಟೀಕೆಗಳು ಕೇಳಿ ಬರುತ್ತಿವೆ.

ಯಾರಿಗೇ ಆದರೂ ಸಂತ ಪದವಿ ನೀಡಬೇಕೆಂದರೆ, ಅವರು ಎರಡು ಪವಾಡಗಳನ್ನು ಮಾಡಿದ್ದಾರೆ ಎಂಬುದನ್ನು ಪೋಪ್ ಅನುಮೋದಿಸಬೇಕು. ತೆರೆಸಾ ವಿಚಾರದಲ್ಲಿ ಒಂದು ಪವಾಡ ಹಳ್ಳಿಯ ಮಹಿಳೆ ಮೊನಿಖಾ ಬೆಸ್ರಾರದ್ದು. ಆಕೆ ಮದರ್ ತೆರೆಸಾರನ್ನು ಪ್ರಾರ್ಥನೆ ಮಾಡಿಕೊಂಡ ನಂತರ ಆಕೆಯ ಕ್ಯಾನ್ಸರ್ ಗುಣವಾಯಿತು ಎಂದು ಹೇಳುತ್ತಾರೆ.

ಮೊನಿಖಾ ಹೇಳುವ ಪ್ರಕಾರ ಆಕೆಯ ರೋಗ ತೆರೆಸಾ ಪ್ರಾರ್ಥನೆಯಿಂದ ಗುಣವಾಗಿದ್ದೇ ಹೊರತು ವೈದ್ಯರ ಚಿಕಿತ್ಸೆಯಿಂದ ಅಲ್ಲವಂತೆ. “ನಾನು ವೈದ್ಯರ ಬಳಿ ಹೋಗಿದ್ದೆ. ಔಷಧಿಗಳನ್ನು ಕೊಟ್ಟರು. ಆದರೆ ನೋವಿನಿಂದ ಔಷಧಿಯನ್ನು ಎಸೆದು ಮದರ್ ತೆರೆಸಾರನ್ನು ಪ್ರಾರ್ಥನೆ ಮಾಡಿದೆ. ತೆರೆಸಾ ನನಗೆ ಆಶೀರ್ವಾದ ಮಾಡಿದರು. ನಾನು ಈಗ ಆರೋಗ್ಯವಾಗಿದ್ದೇನೆ,” ಎಂದು ಆಕೆ ಸಿಎನ್ಎನ್ ಜೊತೆ ಮಾತನಾಡಿದ್ದಾರೆ. “ನಾನು ಮತ್ತು ನಮ್ಮ ಇಡೀ ಗ್ರಾಮ ಆಕೆಗೆ ಸಂತ ಪದವಿ ನೀಡುತ್ತಿರುವುದಕ್ಕೆ ಸಂಭ್ರಮದಲ್ಲಿದೆ,” ಎನ್ನುತ್ತಾರೆ ಆಕೆ.

“ಇದು ಆಧುನಿಕ ಚಿಕಿತ್ಸೆ ಅಲ್ಲಿ ಪವಾಡವೇನೂ ಸಂಭವಿಸಿಲ್ಲ” ಎನ್ನುತ್ತಾರೆ ವೈದ್ಯರು. ಆಕೆಗೆ ಇದ್ದಿದು ಕ್ಯಾನ್ಸರ್ ಗಡ್ಡೆಯಲ್ಲ. ಅದು ಬೇರೆಯದೇ (ಟ್ಯೂಬೆರ್ಕೊಲೋಸಿಸ್) ಎನ್ನುತ್ತಾರೆ ವೈದ್ಯರು.

“ನಮ್ಮ ಸಂಸ್ಥೆ ಪವಾಡಗಳಲ್ಲಿ ನಂಬಿಕೆ ಇಟ್ಟಿಲ್ಲ,” ಎನ್ನುತ್ತಾರೆ ಭಾರತೀಯ ವಿಜ್ಞಾನ ಮತ್ತ ಪ್ರಗತಿಪರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪ್ರಬೀರ್ ಘೋಷ್. ಆಕೆಗೆ ಔಷಧಿಯಿಂದಲೇ ರೋಗ ಕಡಿಮೆಯಾಗಿದ್ದು ಪವಾಡದಿಂದಲ್ಲ ಎಂದು ಆಕೆಯ ಗಂಡ ಹೇಳುವ ವೀಡಿಯೋ ಘೋಷ್ ಬಳಿ ಇದೆ.  ಇದೇ ಹೇಳಿಕೆಯನ್ನು ಬೆಸ್ರಾ ಗಂಡ 2002ರಲ್ಲಿ ಟೈಮ್ ಮ್ಯಾಗಜಿನ್ಗೂ ಹೇಳಿದ್ದರು. ಆದರೆ ಬೆಸ್ರಾ ಇದನ್ನು ನಿರಾಕರಿಸುತ್ತಾರೆ.

ಬಡತನದ ಸಂಗ್ರಹಾಲಯ:

ಇಷ್ಟೆಲ್ಲಾ ಟೀಕೆಗಳು ಕೇಳಿ ಬಂದರೂ ತೆರೆಸಾ ಮನೆಯೊಳಗೇನೂ ಬದಲಾವಣೆಯಾಗಿಲ್ಲ. ಅದೇ ಸರಳತೆ ಮತ್ತು ಪರಂಪರೆ ದಶಕಗಳಿಂದಲೂ ಅಲ್ಲಿ ಪಾಲನೆಯಾಗುತ್ತಿದೆ.

ಇಡೀ ಆಶ್ರಮವನ್ನು ಗೊನ್ಜಾಲೆಜ್ “ಬಡತನದ ವಸ್ತು ಸಂಗ್ರಹಾಲಯ,” ಎಂದು ಕರೆಯುತ್ತಾರೆ. ಇನ್ನು ಕೆಲವರಿಗೆ ಮಾತ್ರ ಇದು ಸ್ವಂತಕ್ಕೇನೂ ಮಾಡದ ಸೇವೆ.

ಒಂದಷ್ಟು ಸನ್ಯಾಸಿಗಳು ಈಗಾಗಲೇ ವ್ಯಾಟಿಕನ್ ತಲುಪಿದ್ದಾರೆ. ಉಳಿದವರು ಕೊಲ್ಕೊತ್ತಾದ ಆಶ್ರಮದಲ್ಲೇ ಇದ್ದು ಪ್ರಾರ್ಥನೆ ಮೂಲಕ ಸಂತ ಪದವಿಗೇರಿದ್ದಕ್ಕೆ ಧನ್ಯವಾದ ಸಮರ್ಪಿಸಲಿದ್ದಾರೆ. ಅವರ ಪಾಲಿಗೆ ಮತ್ತು ತೆರೆಸಾ ಭಕ್ತರ ಪಾಲಿಗೆ ಟೀಕೆಗಳಾಚೆಗೂ ಆಕೆ ಯಾವತ್ತಿಗೂ ‘ಸಂತ’ರೇ.

ENTER YOUR E-MAIL

Name
Email *
May 2017
M T W T F S S
« Apr    
1234567
891011121314
15161718192021
22232425262728
293031  

Top