An unconventional News Portal.

ಜಾಗತಿಕ ತೈಲ ಮಾರುಕಟ್ಟೆ ಕುಸಿತಕ್ಕೆ ಕೊಡುಗೆ ನೀಡಿದ ವೆನಿಜುವೆಲಾದ ‘ಪ್ರತಿಭಟನೆಗಳ ತಾಯಿ’!

ಜಾಗತಿಕ ತೈಲ ಮಾರುಕಟ್ಟೆ ಕುಸಿತಕ್ಕೆ ಕೊಡುಗೆ ನೀಡಿದ ವೆನಿಜುವೆಲಾದ ‘ಪ್ರತಿಭಟನೆಗಳ ತಾಯಿ’!

ದಕ್ಷಿಣಾ ಅಮೆರಿಕಾ ಖಂಡದ ದೇಶವೊಂದರಲ್ಲಿ ರಾಜಕೀಯ ಬಿಕ್ಕಟ್ಟು ಆರಂಭವಾಗಿದೆ. ಅಲ್ಲಿನ ಅಧ್ಯಕ್ಷರ ವಿರುದ್ಧ ಜನ ಬೀದಿಗಿಳಿದಿದ್ದಾರೆ. ಮಧ್ಯ ಪೂರ್ವ ದೇಶಗಳಲ್ಲಿ ನಡೆಯುತ್ತಿದ್ದ ಸರಕಾರ ವಿರೋಧಿ ಹೋರಾಟವೊಂದು ದಕ್ಷಿಣಾ ಅಮೆರಿಕಾ ಖಂಡಕ್ಕೂ ವ್ಯಾಪಿಸಿದೆ. ಹಲವು ಸರಕಾರಗಳನ್ನು ಅಸ್ಥಿರಗೊಳಿಸಿದ ಶ್ರೇಯಸ್ಸಿಗೆ ಪಾತ್ರವಾಗಿರುವ ಅಮೆರಿಕಾ ಹೆಸರು ಇಲ್ಲಿನ ಹೋರಾಟದ ಹಿನ್ನಲೆಯಲ್ಲಿ ಕೇಳಿ ಬರುತ್ತಿದೆ.

ದಕ್ಷಿಣ ಅಮೆರಿಕಾದ ತೈಲ ಸಂಪದ್ಭರಿತ, ಒಂದು ಕಾಲದ ಶ್ರೀಮಂತ ದೇಶ ವೆನಿಜುವೆಲಾದಲ್ಲೀಗ ದಿನ ಬೆಳಗಾದರೆ ಪ್ರತಿಭಟನೆಗಳದ್ದೇ ಸುದ್ದಿ. ವಿರೋಧ ಪಕ್ಷಗಳು ಮದರ್ ಆಫ್ ಆಲ್ ಮಾರ್ಚಸ್‘ (ಪ್ರತಿಭಟನೆಗಳ ಮಹಾತಾಯಿ) ಹೆಸರಿನಲ್ಲಿ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಗೆ ಇಳಿದಿವೆ. ಇದನ್ನು ವಿರೋಧಿಸಿ ತಮ್ಮ ಬೆಂಬಲಿಗರೂ ಬೀದಿಗೆ ಬರುವಂತೆ ಕರೆ ನೀಡಿದ್ದಾರೆ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮದುರೋ. ಉಭಯ ಬಣಗಳ ಪ್ರತಿಭಟನೆಗಳಿಗೆ ದಿನ ಕಳೆದಂತೆ ಹೆಚ್ಚೆಚ್ಚು ಜನ ಬಂದು ಸೇರುತ್ತಿದ್ದಾರೆ. ಸದ್ಯದ ಲಕ್ಷಣಗಳನ್ನು ನೋಡಿದರೆ ದೇಶದಲ್ಲಿ ರಾಜಕೀಯ ಬಿಕ್ಕಟ್ಟ ಆರಂಭವಾಗಿ, ದೇಶ ನಾಗರಿಕ ಸಂಘರ್ಷದತ್ತ ಹೆಜ್ಜೆ ಹಾಕುವ ಸೂಚನೆಗಳಿವು. 

ಅಧ್ಯಕ್ಷ ಮದುರೋ ರ್ಥ ವ್ಯವಸ್ಥೆಯನ್ನು ಅವ್ಯವಸ್ಥೆಗೆ ದೂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಶಿಥಿಲಗೊಳಿಸಿದ್ದಾರೆ,’ ಎಂದು ಆರೋಪಿಸಿ ಈಗಾಗಲೇ ರಾಜಧಾನಿ ಕರಾಕಸ್ ನಲ್ಲಿ ಕಳೆದೆರಡು ದಿನಗಳಿದಂದ ಭಾರಿ ಪ್ರತಿಭಟನೆ ನಡೆದಿದೆ. ಈ ವೇಳೆ ನಡೆದ ಹಿಂಸಾಚಾರಕ್ಕೆ ಇಬ್ಬರು ವಿದ್ಯಾರ್ಥಿಗಳು ಹಾಗೂ ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದಾರೆ.

ಪ್ರತಿಭಟನೆ ನಿರತರ ಮೇಲೆ ಬಂದೂಕುದಾರಿಯೊಬ್ಬ ಬಂದು ಗುಂಡು ಹಾರಿಸಿ, ಅಶ್ರುವಾಯು ಕ್ಯಾನ್ ಗಳನ್ನು ಎಸೆದ ಪರಿಣಾಮ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ್ದಾನೆ. ಇನ್ನೊಂದು ಕಡೆ ಸೇನಾ ಪಡೆಯ ಯೋಧನ ಗುಂಡಿಗೆ ವಿದ್ಯಾರ್ಥಿಯೋರ್ವ ಬಲಿಯಾಗಿದ್ದಾನೆ. ಪ್ರತಿಭಟನೆ ಹತ್ತಿಕ್ಕಲು ಹೋದ ಭದ್ರತಾ ಪಡೆಯ ಸಿಬ್ಬಂದಿ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದರೆ, ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.

ದೇಶದ ಸೇನಾಪಡೆ, ಸರಕಾರಿ ವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಹೊರಟಿದೆ.

ಸಿಡಿದೆದ್ದ ಜನಸ್ತೋಮ:

ದೇಶದ ಧ್ವಜ ಹಿಡಿದ ಲಕ್ಷಾಂತರ ಜನ ಬುಧವಾರ ಕರಾಕಸ್ ನ 26 ಭಾಗಗಳಿಂದ ಪ್ರತಿಭಟನಾ ಮೆರವಣಿಗೆ ಹೊರಟು ದೇಶದ ಅಧಿಕಾರ ಕೇಂದ್ರ ಒಂಬುಡ್ಸ್ ಮನ್ ನಲ್ಲಿ ನೆರೆದಿದ್ದರು. ಬುಧವಾರದ ಹಿಂಸಾತ್ಮಕ ಪ್ರತಿಭಟನೆಯ ನಂತರ ಗುರುವಾರ ಮತ್ತೆ ಹೊಸ ಪ್ರತಿಭಟನೆಗೆ ವಿರೋಧ ಪಕ್ಷದ ನಾಯಕ ಹೆನ್ರಿಕ್ ಕ್ಯಾಪ್ರಿಲ್ಸ್ ಕರೆ ನೀಡಿದ್ದರಿಂದ ನಿನ್ನೆ ಕೂಡಾ ರಾಜಧಾನಿಯ ಬೀದಿಗಳಲ್ಲಿ ಬಾರಿ ಜನಸ್ತೋಮ ನೆರೆದಿತ್ತು. ‘ನೋ ಮೋರ್ ಡಿಕ್ಟೇಟರ್ ಶಿಪ್’, ‘ಮದುರೋ ಔಟ್ಎನ್ನುವ ಘೋಷಣೆಗಳುಪ್ರತಿಭಟನಾಕಾರರ ಬಾಯಲ್ಲಿ ಮೊಳಗುತ್ತಿವೆ.

ಇಂಥಹದ್ದೊಂದು ಪ್ರತಿಭಟೆನೆಗಳು ಆರಂಭವಾಗಿ ಹಲವು ದಿನಗಳೇ ಕಳೆದಿವೆ. ಪ್ರತಿಭಟನೆ ನಿಧಾನಕ್ಕೆ ಬೆಳೆಯುತ್ತಿದ್ದುದನ್ನು ನೋಡಿ ಮದುರೋ, ದೇಶದ ಭದ್ರತಾ ಪಡೆಗಳ ನಾಗರಿಕ ಸದಸ್ಯರಿಗೆ ಶಸ್ತ್ರಾಸ್ತ್ರಗಳನ್ನು ನೀಡುವುದಾಗಿ ಹೇಳಿದ್ದರು. ಮೂಲಕ ಪ್ರತಿಭಟನೆ ಹತ್ತಿಕ್ಕಲು 5,00,000 ಜನರ ಕೈಗೆ ಬಂದೂಕು ಕೊಡಲು ಮುಂದಾಗಿದ್ದರು. ಇದಕ್ಕೆ ತೀವ್ರ ವಿರೋಧ ಕೇಳಿ ಬಂದಿದ್ದರಿಂದ ಬುಧವಾರ ಮತ್ತು ಗುರುವಾರ ತೀವ್ರ ಪ್ರತಿಭಟನೆ ನಡೆದಿತ್ತು.

ಇದಕ್ಕೆ ವಿರುದ್ಧವಾಗಿ ಅಧ್ಯಕ್ಷರ ಬೆಂಬಲಿಗರೂ ಪ್ರತಿಭಟನೆ ನಡೆಸುತ್ತಿದ್ದಾರೆ. 1999ರಲ್ಲಿ ಹ್ಯೂಗೋ ಶಾವೆಜ್ ನೇತೃತ್ವದಲ್ಲಿ ನಡೆದ ಸಮಾಜವಾದಿ ಕ್ರಾಂತಿಯನ್ನು ಉಳಿಸುವಂತೆ ಅವರು ಕರೆ ನೀಡಿದ್ದಾರೆ. ವಿರೋಧ ಪಕ್ಷಗಳು ಹಿಂಸಚಾರದಲ್ಲಿ ತೊಡಗಿವೆ. ಮತ್ತು ಸಂಚುಕೋರರನ್ನು ಆಯಕಟ್ಟಿನ ಜಾಗದಲ್ಲಿ ತಂದು ಕೂರಿಸು ಹೊರಟಿವೆ ಎಂದು ಅವರು ಆರೋಪಿಸಿದ್ದಾರೆ. ಮಾತ್ರವಲ್ಲದೆ ತನ್ನನ್ನು ಕಿತ್ತೊಗೆಯುವ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಠಿಸುವ ಅಮೆರಿಕಾ ಪ್ರೇರಿತ ಸಂಚುಇದು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಪ್ರತಿಭಟನೆಯ ಒಂದು ಝಲಕ್.

ಪ್ರತಿಭಟನೆಯ ಒಂದು ಝಲಕ್.

ಆದರೆ ಈ ಆರೋಪಗಳನ್ನು ಸರಾಸಗಟಾಗಿ ವಿರೋಧ ಪಕ್ಷಗಳು ತಳ್ಳಿ ಹಾಕಿದ್ದು, ಕಾನೂನಾತ್ಮಕವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿವೆ.

ಇನ್ನು ಬಿಕ್ಕಟ್ಟು ತೀವ್ರವಾಗುತ್ತಿದ್ದಂತೆ ಎಲ್ಲಾ ಗೊಂದಲಗಳಿಗೂ ಕೊನೆ ಹಾಡುವ ಸಲುವಾಗಿ 11 ಲ್ಯಾಟಿನ್ ಅಮೆರಿಕಾ ದೇಶಗಳು ಈ ವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು , ಅಧಿಕಾರಿಗಳು ಚುನಾವಣಾ ದಿನಾಂಕವನ್ನು ಈಗಲೇ ಘೋಷಣೆ ಮಾಡಬೇಕುಈ ಮೂಲಕ ಬಿಕ್ಕಟ್ಟಿಗೆ ಕೊನೆ ಹಾಡಬೇಕು ಎಂದು ಹೇಳಿವೆ.

ನಡೆಯುತ್ತಿರುವುದೇನು?:

ರಾಜಧಾನಿ ಕರಾಕಸ್ ನಲ್ಲಿ ಪ್ರತಿಭಟನೆಗಳು ಆರಂಭವಾಗಿ ವಾರಗಳು ಕಳೆದಿವೆ. ಕೆಲವು ಪ್ರತಿಭಟನೆಗಳು ಶಾಂತವಾಗಿ ನಡೆದಿದ್ದರೆ ಇನ್ನು ಕೆಲವು ಹಿಂಸಾಚಾರಕ್ಕೆ ತಿರುಗಿವೆ. ಅಧ್ಯಕ್ಷ ನಿಕೋಲಸ್ ಮದುರೋ ನಿಧಾನಕ್ಕೆ ಸರ್ವಾಧಿಕಾರಿಯಾಗುತ್ತಿದ್ದಾರೆ ಎಂಬುದು ಅಲ್ಲಿನ ಪ್ರತಿಭಟನಾಕಾರರ ಆರೋಪ. ಹೀಗಾಗಿ ಮದುರೋ ಕೆಳಗಿಳಿಯಬೇಕು ಎಂಬುದು ಪ್ರತಿಭಟನಾಕಾರರ ಒಂದು ಸಾಲಿನ ಬೇಡಿಕೆ.

ಆದರೆ ಅಧಿಕಾರಕ್ಕೇರಿದವರು ಅಷ್ಟು ಸುಲಭಕ್ಕೆ ಇಳಿಯುತ್ತಾರೆಯೇ? ಇಲ್ಲ. ಮದುರೋ ಇಳಿಯಲು ಒಪ್ಪುತ್ತಿಲ್ಲ. ಇದು ಅಮೆರಿಕಾ ಬೆಂಬಲಿಗರಿಂದ ದೇಶವನ್ನು ಅಸ್ಥಿತರಗೊಳಿಸುವ ಹುನ್ನಾರ ಎಂದು ಅವರು ಹೇಳುತ್ತಿದ್ದಾರೆ. ಪರಿಣಾಮ ಪರ ಮತ್ತು ವಿರೋಧ ಪ್ರತಿಭಟನೆಗಳಿಗೆ ರಾಜಧಾನಿ ಸಾಕ್ಷಿಯಾಗಿದೆ. ವಿಶೇಷ ಎಂದರೆ ಎರಡೂ ಬಣಗಳ ಪ್ರತಿಭಟನೆ, ರ್ಯಾಲಿ,ಪ್ರದರ್ಶನಗಳಿಗೆ ಲಕ್ಷಾಂತರ ಜನ ನೀರಿನಂತೆ ಹರಿದು ಬರುತ್ತಿದ್ದಾರೆ; ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ.

ಪ್ರತಿಭಟನೆಯ ಮೂಲ:

ಅಧ್ಯಕ್ಷ ಮುದರೋ ವಿರುದ್ಧ ಬೂದಿ ಮುಚ್ಚಿದ ಕೆಂಡದಂತಿದದ ಆಕ್ರೋಶ ಸ್ಪೋಟಗೊಂಡಿದ್ದು ಮಾರ್ಚ್ 30ರಂದು. ಅವತ್ತು ಅಲ್ಲಿನ ಸುಪ್ರೀಂ ಕೋರ್ಟ್ ಅಧ್ಯಕ್ಷ ಮದುರೋ ಜತೆ ಸೇರಿ ವಿರೋಧ ಪಕ್ಷಗಳಿಗಿದ್ದ ಸಾಂವಿಧಾನಿಕ ಅಧಿಕಾರಗಳನ್ನು ಕಿತ್ತುಕೊಂಡಿತು. ತಕ್ಷಣ ವಿರೋಧ ಪಕ್ಷಗಳು ದೇಶದಲ್ಲಿ ಸರ್ವಾಧಿಕಾರ ಆಡಳಿತ ಜಾರಿಗೆ ತರುವ ಪ್ರಯತ್ನ ಇದು ಎಂದು ವಿರೋಧ ವ್ಯಕ್ತಪಡಿಸಿದವು.

ಆದರೆ ಈ ತೀರ್ಮಾನ ರಾತೋರಾತ್ರಿ ಹುಟ್ಟಿಕೊಂಡಿದ್ದೇನೂ ಅಲ್ಲ. ಇದಕ್ಕೂ ಮೊದಲೂ ಅಲ್ಲಿನ ರಾಜಕೀಯದಲ್ಲಿ ಒಂದಷ್ಟು ವಿಕ್ಷಿಪ್ತ ತೀರ್ಮಾನಗಳು ಕಳೆದ ಮೂರು ವರ್ಷಗಳಲ್ಲಿ ನಡೆದಿದ್ದವು. ಚುನಾವೆಯಲ್ಲಿ ಅಕ್ರಮಗಳಾಗಿವೆ ಎಂದು ಮೂವರು ವಿರೋಧ ಪಕ್ಷಗಳ ಸಂಸತ್ ಸದಸ್ಯರು ಹಾಗೂ ಓರ್ವ ಆಡಳಿತ ಪಕ್ಷದ ಸದಸ್ಯರ ಚುನಾವಣೆಯನ್ನೇ ಸುಪ್ರೀಂ ಕೋರ್ಟ್ 2016ರಲ್ಲಿ ರದ್ದು ಮಾಡಿತ್ತು. ಈ ಹಂತದಲ್ಲಿ ನ್ಯಾಯಾಂಗ ಮತ್ತು ಶಾಸಕಾಂಗದ ಮಧ್ಯೆ ತಿಕ್ಕಾಟ ಆರಂಭವಾಯಿತು.ನ್ಯಾಯಾಂಗ ಒಂದು ಹೆಜ್ಜೆ ಮುಂದೆ ಹೋಗಿ ಇಡೀ ಸಂಸತ್ ಮೇಲೆಯೇ ನ್ಯಾಯಾಂಗ ನಿಂದನೆ ಜಾರಿಗೊಳಿಸಿತು. ಮಾತ್ರವಲ್ಲ ಅದು ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೂ ಬೆಲೆ ಇಲ್ಲ ಎಂದು ಹೇಳಿತು. ಮುಂದಿನ ನಿರ್ಧಾರದಲ್ಲಿ ಚುಣಾವಣಾಧಿಕಾರಿಗಳನ್ನು ಸಸ್ಪೆಂಡ್ ಮಾಡಿತು. ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು 2017ರವರೆಗೆ ಮುಂದೂಡಲಾಯಿತು.

ಈ ಹಂತದಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆಯಿತು. ತೈಲ ಸಂಪತ್ತನ್ನೇ ನಂಬಿರುವ ವೆನಿಜುವೆಲಾದ ಸರಕಾರಿ ತೈಲ ಉತ್ಪಾದಕ ಸಂಸ್ಥೆ ಪಿಡಿವಿಸಿಎ ಖಾಸಗಿ ಕಂಪೆನಿಗಳ ಜತೆ ಕೈಜೋಡಿಸಲು ಮುಂದಾದಾಗ ಸಂಸತ್ತು ಈ ತೀರ್ಮಾನವನ್ನು ತಳ್ಳಿ ಹಾಕಿತು. ಸರಕಾರ ಯಥಾ ಪ್ರಕಾರ ಸುಪ್ರೀಂ ಕೋರ್ಟಿಗೆ ಮೊರೆ ಕೊಂಡೊಯ್ದಿತು. ಮರು ಕ್ಷಣವೇ ಕೋರ್ಟ್ ವಿರೋಧ ಪಕ್ಷಗಳ ಹಕ್ಕನ್ನೇ ಕಿತ್ತುಕೊಂಡಿತು. ಹೀಗೆ ಅಲ್ಲಿ ರಾಜಕೀಯದ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿತು.

ಮರು ದಿನವೇ ಪ್ರತಿಭಟನೆ ಆರಂಭವಾಯಿತು. ಸರಕಾರಿ ಪಡೆಗಳು ಪ್ರತಿಭಟನೆ ಹತ್ತಿಕ್ಕಲು ಮುಂದಾದವು. ವಿಚಿತ್ರ ಎಂದರೆ ಪ್ರತಿಭಟನೆಯ ಬೆನ್ನಿಗೆ ಕೋರ್ಟ್ ತನ್ನ ತೀರ್ಮಾನ ಹಿಂತೆಗೆದುಕೊಂಡಿತು. ಆದರೆ ಪ್ರತಿಭಟನೆ ಮಾತ್ರ ಮುಂದುವರಿಯಿತು.

ಉಳಿದ ಸಮಸ್ಯೆಗಳೇನು?:

ಅಧ್ಯಕ್ಷರ ಪರ ಪ್ರತಿಭಟನೆ.

ಅಧ್ಯಕ್ಷರ ಪರ ಪ್ರತಿಭಟನೆ.

ಮೇಲ್ನೋಟಕ್ಕೆ ಇದೊಂದು ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗದ ನಡುವಿನ ತಿಕ್ಕಾಟದಂತೆ ಕಂಡು ಬಂದರೂ ಆಳದಲ್ಲಿ ಬೇರೆಯೇ ಕಾರಣಗಳಿವೆ.

ಮುಖ್ಯವಾಗಿ ಮಧ್ಯ ಪೂರ್ವ ಏಷ್ಯಾ ದೇಶಗಳಲ್ಲಿ ಸಂಘರ್ಷ ಆರಂಭವಾದ ನಂತರ ಅಂತರಾಷ್ಟ್ರೀಯ ತೈಲ ಬೆಲೆಗಳಲ್ಲಿ ವಿಪರೀತ ಕುಸಿತವಾಗಿವೆ. ಪರಿಣಾಮ ವೆನಿಜುವೆಲಾದ ತೈಲಗಳನ್ನು ಕೇಳುವವರಿಲ್ಲ. ಹೀಗಾಗಿ ದೇಶದ ಆದಾಯ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿದೆ. ದೇಶದ ಹಣದುಬ್ಬರ ದರ ಶೇಕಡಾ 679.73 ರಷ್ಟು ತಲುಪಿದೆ. 2018ರ ಅಂತ್ಯಕ್ಕೆ ಇದು ಶೇಕಡಾ 2,068.5 ಮುಟ್ಟಬಹುದು ಎಂದು ವಿಶ್ವಸಂಸ್ಥೆ ಅಂದಾಜು ಮಾಡಿದೆ.

ಹಣವಿಲ್ಲದೆ, ಆಹಾರ ಔಷಧಿಗಳಂಥ ಅಗತ್ಯ ವಸ್ತುಗಳನ್ನೇ ಆಮದು ಮಾಡಿಕೊಳ್ಳಲಾಗುತ್ತಿಲ್ಲ. ಸಾರ್ವಜನಿಕ ಆರೋಗ್ಯ ಸೇವೆ ಬಿದ್ದು ಹೋಗಿದೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸೇವೆ ಸಿಗುತ್ತಿಲ್ಲ. ಔಷಧಿ ವೈದ್ಯಕೀಯ ಉಪಕರಣಗಳು ಕೈಗೆಟುಕದ ಅರಾಜಕ ಸ್ಥಿತಿ ನಿರ್ಮಾಣವಾಗಿದೆ. ಆರ್ಥಿಕ ಪರಿಸ್ಥಿತಿ ಯಾವ ಮಟ್ಟಕ್ಕೆ ಹಳ್ಳ ಹಿಡಿದಿದೆ ಎಂದರೆ ಬಡತನದಿಂದ ಸಾಮಾಜಿಕ ಸಮಸ್ಯೆಗಳು ಹುಟ್ಟಿಕೊಂಡಿವೆ. ಅಪರಾಧ ಚಟುವಟಿಕೆಗಳು ಏಕಾಏಕಿ ಹೆಚ್ಚಾಗಿವೆ. ಒಂದು ಕಾಲದಲ್ಲಿ ಎಲ್ಲರೂ ಹಾಡಿ ಹೊಗಳುತ್ತಿದ್ದ ಭಾರಿ ಜನಪ್ರಿಯ ನಾಯಕ ಮದುರೊ ಜನಪ್ರಿಯತೆ ಕಳೆದ ಮೂರು ವರ್ಷಗಳಲ್ಲಿ ಪಾತಳಕ್ಕಿಳಿದಿದೆ. ಇಂಥಹ ಸಂದರರ್ಭದಲ್ಲೇ ಮಾನವ ಹಕ್ಕುಗಳನ್ನು, ಮೂಲಭೂತ ಹಕ್ಕುಗಳನ್ನು ಮದುರೋ ಹತ್ತಿಕ್ಕುತ್ತಿದ್ದಾರೆ ಎಂಬ ಆರೋಪ ಬೇರೆ ಕೇಳಿ ಬಂದಿದೆ.

ಹೀಗೆ ಪಾಪದ ಕೊಡ ತುಂಬುವಂತೆ ಎಲ್ಲಾ ವಿಷಯಗಳೂ ಸೇರಿಕೊಂಡು ವಿರೋಧ ಪಕ್ಷಗಳೆಲ್ಲಾ ಬೀದಿಗಿಳಿದಿವೆ. ಪಕ್ಷಗಳೆಲ್ಲಾಮೈತ್ರಿ ಮಾಡಿಕೊಂಡು ಸರಕಾರದ ವಿರುದ್ಧ ಹೋರಾಡುತ್ತಿದ್ದಾರೆ.

ಸರಕಾರದ ವಾದ:

ದೇ ಸಂದರ್ಭದಲ್ಲಿ ಮದುರೋ ಸೇನೆಯನ್ನು ಬೀದಿಗಿಳಿಸಿ ತನ್ನ ಗುರು, ವಿಶ್ವದ ಅಗ್ರಗಣ್ಯ ನಾಯಕ ಹ್ಯೂಗೋ ಶಾವೆಜ್ 1999 ನಡೆಸಿದ ಬೊಲಿವೇರಿಯನ್ ಕ್ರಾಂತಿ’ಯನ್ನು ಉಳಿಸುವಂತೆ ಮಿಲಿಟರಿಗೆ ಆದೇಶ ನೀಡಿದ್ದಾರೆ. ಪರಿಣಾಮ ಆಕ್ರೋಶ ಮತ್ತೂ ಹೆಚ್ಚಾಗಿದೆ. ಇದಕ್ಕೆ ತುಪ್ಪ ಸುರಿಯುವಂತೆ ಮದುರೋ ವಿರೋಧಿಗಳನ್ನು ‘ಕಳ್ಳರು’ ಎಂದೂ, ಸೇನೆಯನ್ನು ಕ್ರಾಂತಿಕಾರಿ ಬದ್ಧತೆಇರುವವರು ಎಂದಿದ್ದಾರೆ. ದೇಶದಲ್ಲಿ ಬಿಕ್ಕಟ್ಟು ಜಾಸ್ತಿಯಾಗುತ್ತಿದ್ದಂತೆ ಅಲ್ಲಿನ ಆಡಳಿತ ವರ್ಗ ವಿರೋಧ ಪಕ್ಷದ ನಾಯಕ ಹೆನ್ರಿಕ್ ಕ್ಯಾಪ್ರಿಲ್ ರನ್ನು 15 ವರ್ಷಗಳ ಕಾಲ ಅಧಿಕಾರದಿಂದ ನಿಷೇಧ ಮಾಡಿದೆ.

ಹಾಗೆ ನೋಡಿದರೆ ವಿರೋಧ ಪಕ್ಷಗಳಲ್ಲೇ ಬಲು ಜನಪ್ರಿಯ ನಾಯಕ ಕ್ಯಾಪ್ರಿಲ್; ಅವರಿಗಿನ್ನೂ 44 ವರ್ಷ. ಎರಡು ಬಾರಿ ಅಧ್ಯಕ್ಷ ಹುದ್ದೆಯ ಸಮೀಪಕ್ಕೆ ಬಂದು ಸೋಲು ಕಂಡಿರುವವರು. ಅವರ ಹಿಂಬಾಲಕರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಸದ್ಯ ಅವರೆಲ್ಲಾ ಬೀದಿಗೆ ಬಂದಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಸಮಬಲದ ಹೋರಾಟ ನೀಡಿದ್ದ ಕ್ಯಾಪ್ರಿಲ್ ಈಗ ಬೀದಿ ಹೋರಾಟ ಸಂಘಟಿಸುತ್ತಿದ್ದಾರೆ. ಆಡಳಿತ ವರ್ಗ ಕ್ಯಾಪ್ರಿಲ್ ಹೋರಾಟಕ್ಕೆ ತತ್ತರಿಸಿದೆ. ಮುಂದೇನಾಗುತ್ತೋ ಗೊತ್ತಿಲ್ಲ.

ಇದೂ ತೈಲ ಬಾವಿಗೆ ಕನ್ನ ತೋಡುವ ಅಮೆರಿಕಾದ ಪ್ರಯತ್ನವೋ ಅದೂ ಅರ್ಥವಾಗುತ್ತಿಲ್ಲ. ಬಹುಶಃ ಮುಂದಿನ ದಿನಗಳಲ್ಲಿ ಇದಕ್ಕೆಲ್ಲಾ ಸ್ಪಷ್ಟ ಉತ್ತರಗಳು ಸಿಗಬಹುದು. ಆದರೆ ರಾಷ್ಟ್ರೀಯತೆಯ ಗಾಳಿ ಬೀಸುತ್ತಿರುವ ಹೊತ್ತಿಗೆ ಪ್ರಪಂಚದ ಹಲವು ದೇಶಗಳಲ್ಲಿ ಆಡಳಿತ ವಿರೋಧಿ ಅಲೆಯೂ ದೊಡ್ಡ ಪ್ರಮಾಣದಲ್ಲಿ ಏರುತ್ತಿದೆ ಎಂಬುದು ಗಮನಿಸಬೇಕಾದ ಅಂಶ. 

Leave a comment

Top