An unconventional News Portal.

‘ನೋಡಲು ಮರೆಯದಿರಿ…’: ಇಂದು ರಾತ್ರಿ ಆಕಾಶದಲ್ಲಿ ‘ಸೂಪರ್ ಮೂನ್’ ಚಮಾತ್ಕಾರ!

‘ನೋಡಲು ಮರೆಯದಿರಿ…’: ಇಂದು ರಾತ್ರಿ ಆಕಾಶದಲ್ಲಿ ‘ಸೂಪರ್ ಮೂನ್’ ಚಮಾತ್ಕಾರ!

ಇಂದು (ನವೆಂಬರ್ 14) ರಾತ್ರಿ ಕಾಣಿಸಿಕೊಳ್ಳುವ ಹುಣ್ಣಿಮೆಯ ಚಂದ್ರ ತುಂಬಾ ವಿಶೇಷವಾದುದು.

ರಾತ್ರಿ ಚಂದ್ರ ಎಂದಿಗಿಂತ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಉದಯಿಸಲಿದೆ. ಚಂದ್ರ ಭೂಮಿಗೆ ಅತೀ ಸಮೀಪ ಬರುತ್ತಿರುವುದೇ ಇದಕ್ಕೆ ಕಾರಣ. 68 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಸಮೀಪದಲ್ಲಿ ಚಂದ್ರ ಕಾಣಿಸಿಕೊಳ್ಳುತ್ತಿದ್ದು, ಮಿಸ್ ಮಾಡಿದ್ರೆ ‘ಸೂಪರ್ ಮೂನ್’ ನೋಡಲು ಮತ್ತೆ 2034 ನವೆಂಬರ್ 25ರ ವರೆಗೆ ಕಾಯಬೇಕಾಗುತ್ತದೆ.

ಈ ಹಿಂದೆ 1948ರ ಜನವರಿಯಲ್ಲಿ ಚಂದ್ರ ಇಷ್ಟೇ ಹತ್ತಿರದಲ್ಲಿ ಕಾಣಿಸಿಕೊಂಡಿತ್ತು.

ಸೋಮವಾರ ರಾತ್ರಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದಕ್ಕಿಂತ ಶೇಕಡಾ 14ರಷ್ಟು ದೊಡ್ಡದಾಗಿ ಚಂದ್ರ ನೋಡಲು ಸಿಗಲಿದೆ. ಮಾತ್ರವಲ್ಲ ಶೇಕಡಾ 30ರಷ್ಟು ಪ್ರಕಾಶಮಾನವಾಗಿಯೂ ಚಂದ್ರ ಕಾಣಿಸಲಿದೆ.

‘ಸೂಪರ್ ಮೂನ್’ ಏನದು?

ಭೂಮಿಯ ಉಪಗ್ರಹ ಚಂದ್ರ ಭೂಮಿಯ ಸುತ್ತ ಅಂಡಾಕಾರದ ಕಕ್ಷೆಯಲ್ಲಿ ಸುತ್ತುತ್ತದೆ. ಹೀಗೆ ಸುತ್ತುವಾಗ ಕೆಲವು ಭಾಗಗಳಲ್ಲಿ ಚಂದ್ರ ಭೂಮಿಗೆ ತೀರಾ ಹತ್ತಿರದಲ್ಲಿ ಬಂದರೆ, ಇನ್ನು ಕೆಲವೊಮ್ಮೆ ತುಂಬಾ ದೂರದಲ್ಲಿಯೂ ಕಾಣಸಿಗುತ್ತದೆ. ತನ್ನ ಕಕ್ಷೆಯಲ್ಲಿ ಭೂಮಿಗೆ ಸಮೀಪ ಬರುವುದನ್ನು ‘ಪೆರಿಜಿ’ ಎಂದು ಕರೆಯುತ್ತಾರೆ. ‘ಪೆರಿಜಿ’ ಭಾಗದಲ್ಲಿ ಚಂದ್ರ ಸಾಮಾನ್ಯವಾಗಿ ಇರುವುದಕ್ಕಿಂತ 48,280 ಕಿಲೋಮೀಟರ್ ಸಮೀದಲ್ಲಿರುತ್ತದೆ. ಅದೇ ‘ಅಪೋಜಿ’ ಎಂದು ಕರೆಯುವ ಇನ್ನೊಂದು ಧ್ರುವದಲ್ಲಿ ಭೂಮಿಗೂ ಚಂದ್ರನಿಗೂ ಅತೀ ಹೆಚ್ಚಿನ ದೂರವಿದೆ.

ಸೂಪರ್ ಮೂನ್ ಮತ್ತು ಸಾಮಾನ್ಯ ಚಂದ್ರಗೂ ಇರುವ ವ್ಯತ್ಯಾಸ

ಸೂಪರ್ ಮೂನ್ ಮತ್ತು ಸಾಮಾನ್ಯ ಚಂದ್ರಗೂ ಇರುವ ವ್ಯತ್ಯಾಸ

ನಮಗೆಲ್ಲಾ ಗೊತ್ತಿರುವ ಹಾಗೆ, ಚಂದ್ರ ಭೂಮಿಯ ಸುತ್ತ ಸುತ್ತಿದರೆ, ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ. ಈ ಸುತ್ತುವ ವ್ಯವಸ್ಥೆಯೊಳಗೆ ‘ಭೂಮಿ-ಚಂದ್ರ-ಸೂರ್ಯ’ ಮೂರೂ ನೇರ ರೇಖೆಯಲ್ಲಿ ಬರುವುದಕ್ಕೆ ‘ಸಿಝಿಗಿ’ ಎಂದು ಕರೆಯುತ್ತಾರೆ. ಈ ‘ಸಿಝಿಗಿ –ಅಪೋಜಿ’ ಒಂದಾದಾಗ ‘ಸೂಪರ್ ಮೂನ್’ ಸೃಷ್ಟಿಯಾಗುತ್ತದೆ. ಇದನ್ನು ವಿಜ್ಞಾನದ ಭಾಷೆಯಲ್ಲಿ ‘ಪೆರಿಜಿ ಮೂನ್’ ಎಂದು ಕರೆಯುತ್ತಾರೆ.

ಸೂಪರ್ ಮೂನ್ ಹೊಸದಲ್ಲ:

ಹಾಗಂಥ ಸೂಪರ್ ಮೂನ್ ಹೊಸದೇನೂ ಅಲ್ಲ. ಅಕ್ಟೋಬರ್ 16ರಲ್ಲಿ ಇದೇ ರೀತಿ ಚಂದ್ರ ದೊಡ್ಡದಾಗಿ ಕಾಣಿಸಿಕೊಂಡಿದ್ದ; ಅದನ್ನು ಹಂಟರ್ ಮೂನ್ ಎನ್ನುತ್ತಾರೆ. ಇದಾದ ನಂತರ ಇದೀಗ ನವೆಂಬರ್ 14ರಲ್ಲಿ ಮತ್ತೆ ಸೂಪರ್ ಮೂನ್ ಕಾಣಿಸಿಕೊಳ್ಳಲಿದೆ. ಬಳಿಕ ಡಿಸೆಂಬರ್ 14ರಂದು ಚಂದ್ರ ಹೀಗೆಯೇ ದೊಡ್ಡದಾಗಿ ಕಾಣಿಸಿಕೊಳ್ಳಲಿದ್ದಾನೆ; ಅದಕ್ಕೆ ‘ಕೋಲ್ಡ್ ಮೂನ್’ ಎಂದು ಕರೆಯುತ್ತಾರೆ. ಆದರೆ ವಿಶೇಷ ಎಂದರೆ ಸೋಮವಾರ ಕಾಣಿಸಿಕೊಳ್ಳುವ ಚಂದ್ರ ಮಾತ್ರ ಕಳೆದ 70 ವರ್ಷಗಳಲ್ಲಿ ಕಾಣಿಸಿಕೊಳ್ಳದಷ್ಟು ದೊಡ್ಡದಾಗಿ ಕಾಣಿಸಿಕೊಳ್ಳಲಿದೆ. ಸುಮಾರು ಎರಡು ಗಂಟೆಗಳ ದೀರ್ಘ ಕಾಲ ಈ ದೊಡ್ಡ ಚಂದ್ರ ತನ್ನ ದರ್ಶನ ನೀಡಲಿದ್ದಾನೆ.

ಆದರೆ ಗಮನಿಸಬೇಕಾದ ವಿಚಾರ ಎಂದರೆ ಇದೇ ರೀತಿ ‘ಸೂಪರ್ ಮೂನ್’ ಭೂಮಿಯ ಎಲ್ಲಾ ಭಾಗಗಳಲ್ಲೂ ಕಾಣಿಸಿಕೊಳ್ಳುವುದಿಲ್ಲ. ಎಲ್ಲಿಂದ ನೋಡುತ್ತೀರಿ ಎನ್ನುವುದು ನೀವು ನೋಡುವ ಚಂದ್ರನ ಗಾತ್ರವನ್ನು ನಿರ್ಧರಿಸುತ್ತದೆ.

“ಒಂದೊಮ್ಮೆ ಭೂ ಮಧ್ಯ ರೇಖೆಗೆ ಸಮೀಪದಿಂದ ಚಂದ್ರನನ್ನು ನೋಡಿದ್ದೇ ಆದಲ್ಲಿ ಅಸಹಜವಾಗಿ ಚಂದ್ರ ದೊಡ್ಡದಾಗಿ ಕಾಣಿಸುತ್ತದೆ,” ಎಂದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಹೇಳಿದೆ.

ಒಂದೊಮ್ಮೆ ನೀವು ‘ಸೂಪರ್ ಮೂನ್’ ನೋಡಲೇ ಬೇಕೆಂದು ನಿರ್ಧರಿಸಿದಲ್ಲಿ ಆದಷ್ಟು ಕತ್ತಲೆ ಇರುವ ಪ್ರದೇಶವನ್ನು ಆಯ್ದುಕೊಳ್ಳಿ. ನಗರದಿಂದ ಹೊರಗೆ ಬೆಳಕಿಲ್ಲದ ಜಾಗದತ್ತ ಪ್ರಯಾಣಿಸಿ ಎಂದು ಖಗೋಳ ವಿಜ್ಞಾನಿಗಳು ಸಲಹೆ ನೀಡಿದ್ದಾರೆ. ಭಾರತದಲ್ಲಿ ಸಂಜೆ 7.22ರಿಂದ ಸೂಪರ್ ಮೂನ್ ಕಣ್ತುಂಬಿಕೊಳ್ಳಬಹುದು. ಯಾವುದಕ್ಕೂ ಮಿಸ್ ಮಾಡಿಕೊಳ್ಳಬೇಡಿ..

ಚಿತ್ರ ಕೃಪೆ: ಹಫಿಂಗ್ಟನ್ ಪೋಸ್ಟ್

Leave a comment

Top