An unconventional News Portal.

ಅನಾಣ್ಯೀಕರಣ ಮತ್ತು 1971ರ ಇಂದಿರಾ ಗಾಂಧಿ; ಮೋದಿ ಮಾತಿಗಿಲ್ಲ ವಾಸ್ತವದ ಸ್ಪರ್ಷ

ಅನಾಣ್ಯೀಕರಣ ಮತ್ತು 1971ರ ಇಂದಿರಾ ಗಾಂಧಿ; ಮೋದಿ ಮಾತಿಗಿಲ್ಲ ವಾಸ್ತವದ ಸ್ಪರ್ಷ

ಅನಾಣ್ಯೀಕರಣ ಘೋಷಣೆಯ ನಂತರ ದಿನಕ್ಕೊಂದು ರಾಗ ಹಾಡುತ್ತಿರುವ ನರೇಂದ್ರ ಮೋದಿ ಈಗ ಇಂದಿರಾ ಗಾಂಧಿ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ‘ಅನಾಣ್ಯೀಕರಣ 1971ರಲ್ಲೇ ಮಾಡಬೇಕಿತ್ತು. ಆಗ ಮಾಡದ್ದನ್ನು ಈಗ ಮಾಡಿದ್ದೇವೆ. ಇಂದಿರಾ ಗಾಂಧಿಗೆ ಅನಾಣ್ಯೀಕರಣ ಮಾಡಲು ಧೈರ್ಯವಿರಲಿಲ್ಲ,’ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.

1971ರಲ್ಲಿ ನಡೆದಿದ್ದೇನು?

ಸದ್ಯ ನರೇಂದ್ರ ಮೋದಿ ಹೇಳಿರುವ ಪ್ರಕಾರ “1971ರಲ್ಲೇ ಅನಾಣ್ಯೀಕರಣ ಅಗತ್ಯವಾಗಿತ್ತು. 1971ರ ನಂತರ ಇದನ್ನು ಮಾಡದೇ ಹೋದುದು ನಮಗೆಲ್ಲಾ ದೊಡ್ಡ ನಷ್ಟವಾಗಿದೆ,” ಎಂದು ಹೇಳಿದ್ದಾರೆ. ಮಾತ್ರವಲ್ಲ ತಮ್ಮ ಸಂಸದರನ್ನು ಉದ್ದೇಶಿಸಿ ಮಾತನಾಡಿರುವ ನರೇಂದ್ರ ಮೋದಿ ಕಪ್ಪು ಹಣ ನಿವಾರಣೆಗೆ ಕಾಂಗ್ರೆಸ್ ಪ್ರಯತ್ನವನ್ನೇ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.

ಮಾಜಿ ಅಧಿಕಾರಿ ಮಾಧವ್ ಗೊಡ್ಬೋಲೆ ಪುಸ್ತಕವನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಿಗಳು, ಅವತ್ತಿನ ಗೃಹ ಸಚಿವ ವೈ.ಬಿ ಚವಾಣ್ ಕಳ್ಳ ಹಣ ಮತ್ತು ಬೇನಾಮಿ ಸಂಪತ್ತನ್ನು ಹೊರಗೆಳೆಯಲು ಅನಾಣ್ಯೀಕರಣವನ್ನು ಶಿಫಾರಸ್ಸು ಮಾಡಿದ್ದರು ಎಂದಿದ್ದಾರೆ. ಅವತ್ತು “ಚವಾಣ್ ಅನಾಣ್ಯೀಕರಣ ಪ್ರಸ್ತಾಪವಿಟ್ಟಾಗ ಇಂದಿರಾ ಗಾಂಧಿ, ‘ಕಾಂಗ್ರೆಸ್ ಇನ್ನು ಚುನಾವಣೆಗಳಲ್ಲಿ ಸ್ಪರ್ಧಿಸಲಿಕ್ಕಿಲ್ಲವೇ?’ ಎಂದು ಮರು ಪ್ರಶ್ನೆ ಎಸೆದಿದ್ದರು, ಎಂದು ಗೊಡ್ಬೋಲೆ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಗಾಂಧಿ ಏನು ಹೇಳಿದ್ದು ಎಂದು ಚವಾಣ್ ಅರ್ಥ ಮಾಡಿಕೊಂಡರು. ಅನಾಣ್ಯೀಕರಣ ಕೈ ಬಿಡಲಾಗಿತ್ತು” ಎಂದು ಮೋದಿ ಹೇಳಿದ್ದಾರೆ.

“1971ರಲ್ಲಿ ಇದನ್ನು (ಅನಾಣ್ಯೀಕರಣ) ಎಲ್ಲರೂ ಶಿಫಾರಸ್ಸು ಮಾಡಿದ್ದರು. ಅವತ್ತೇ ಈ ಕೆಲಸ ಮಾಡಿ ಮುಗಿಸಿದ್ದರೆ ಭಾರತ ಈ ಹೀನಾಯ ಸ್ಥಿತಿಗೆ ಬರುತ್ತಿರಲಿಲ್ಲ,” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮಾತ್ರವಲ್ಲ ಕಾಂಗ್ರೆಸ್ ದೇಶವನ್ನು ಕಡೆಗಣಿಸಿ ತನಗೇನು ಲಾಭ ಎಂದು ನೋಡುತ್ತದೆ. ಆದರೆ ಬಿಜೆಪಿಗೆ ದೇಶವೇ ಪರಮೋಚ್ಛವಾದುದು ಎಂದು ಉಚ್ಛರಿಸಿದ್ದಾರೆ.

ಈ ಸಂದರ್ಭ ಮೋದಿ, 70ರ ದಶಕದ ಆರಂಭದಲ್ಲಿ ‘ವಾಂಚೂ ಸಮಿತಿ’ಯೂ ಅನಾಣ್ಯೀಕರಣಕ್ಕೆ ಶಿಫಾರಸ್ಸು ಮಾಡಿತ್ತು. ಆಗ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು. ಅವತ್ತು ಹಿರಿಯ ಕಮ್ಯೂನಿಸ್ಟ್ ನಾಯಕ ಜೋತಿರ್ಮಾಯ್ ಬಸು ಅದನ್ನು ಶೀಘ್ರ ಜಾರಿಗೆ ಲೋಕಸಭೆಯಲ್ಲಿ ಒತ್ತಾಯಿಸಿದ್ದರು ಎಂದು ಹೇಳಿದ್ದಾರೆ. “ವಾಂಚೂ ಸಮಿತಿ ಇದು (ಅನಾಣ್ಯೀಕರಣ) ಆರ್ಥಿಕತೆಗೆ ಉತ್ತೇಜನ ನೀಡಲಿದೆ ಎಂದಿತ್ತು. ಇವತ್ತು 45 ವರ್ಷಗಳ ನಂತರ ನಾವು ಅನಾಣ್ಯೀಕರಣ ಮಾಡಿದ್ದೇವೆ. ಆದರೆ ಇದಕ್ಕೆ ಅದೇ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ. ಇವರಿಗೆ ಎಡಪಕ್ಷಗಳೂ ಕೈಜೋಡಿಸಿವೆ,” ಎಂದು ವಾಗ್ದಾಳಿ ನಡೆಸಿದ್ದಾರೆ.

‘ಕಾಂಗ್ರೆಸ್ ಭ್ರಷ್ಟಾಚಾರದ ಪರ ನಿಲ್ಲುವ ಪಕ್ಷ’ ಎಂದೂ ಈ ವೇಳೆ ಮೋದಿ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ 1988ರಲ್ಲೇ ಬೇನಾಮಿ ಆಸ್ತಿಗಳ ವಿರುದ್ಧ ಕಾನೂನು ರಚಿಸಿತ್ತು, ಆದರೆ ಅದನ್ನು ಜಾರಿಗೆ ತಂದೇ ಇಲ್ಲ ಎಂದಿದ್ದಾರೆ.

1971-ವಾಸ್ತವ ಮತ್ತು ಸುಳ್ಳು:

ಭಾರತ 1971ರಲ್ಲೇ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಪಾಲ್ಗೊಂಡಿತ್ತು. ಇನ್ನೊಂದು ಕಡೆ 1 ಕೋಟಿಗೂ ಹೆಚ್ಚು ಬಾಂಗ್ಲಾದೇಶಿಗರು ಭಾರತಕ್ಕೆ ನಿರಾಶ್ರಿತರಾಗಿ ಬಂದಿದ್ದರು. ಈ ಹಂತದಲ್ಲಿ ಅನಾಣ್ಯೀಕರಣ ಮಾಡಿದ್ದರೆ ಭಾರತ ಗಂಡಾಂತರಕಾರಿ ಪರಿಸ್ಥಿಯನ್ನು ಎದುರಿಸಬೇಕಾಗಿತ್ತು. ಇಂದಿರಾ ಗಾಂಧಿಗೆ ಸೂಕ್ಷ್ಮತೆ ಇತ್ತು ಎಂದು ಕೆಲವರು ಟ್ವಿಟ್ಟರಿನಲ್ಲಿ ಪ್ರಸ್ತಾಪಿಸಿದ್ದಾರೆ.

twitter-modi-indira

1971ರ ನಂತ ಒಮ್ಮೆಯೂ ಅನಾಣ್ಯೀಕರಣ ನಡೆದೇ ಇಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಆದರೆ ವಾಸ್ತವದಲ್ಲಿ 1971ರಲ್ಲಿ ನೋಟ್ ಬ್ಯಾನ್ ಮಾಡದೇ ಇದ್ದರೂ 1978ರಲ್ಲಿ ಮೊರಾರ್ಜಿ ದೇಸಾಯಿ ದೊಡ್ಡ ಮೊತ್ತದ ನೋಟುಗಳನ್ನು ಅಮಾನ್ಯ ಮಾಡಿದ್ದರು.

ಮೋರಾರ್ಜಿ ನೋಟ್ ಬ್ಯಾನ್-1978:

ಅವತ್ತು ಪ್ರಧಾನಿಯಾಗಿದ್ದವರು ಇನ್ನೊಬ್ಬ ಗುಜರಾತಿ ಮೊರಾರ್ಜಿ ದೇಸಾಯಿ. ಕಳೆದ ತಿಂಗಳು ಹೇಗೆ ನರೇಂದ್ರ ಮೋದಿ ರಾತೋ ರಾತ್ರಿ ದೇಶದ ಜನರಿಗೆ ಶಾಕ್ ನೀಡಿದ್ದರೋ ಅದೇ ರೀತಿ ಮೊರಾರ್ಜಿಯೂ 1,000, 5,000, ಮತ್ತು 10,000 ಮುಖ ಬೆಲೆಯ ನೋಟುಗಳಿಗೆ ತಿಲಾಂಜಲಿ ಇಟ್ಟು ಇಡೀ ದೇಶವನ್ನೇ ಅಚ್ಚರಿಯಲ್ಲಿ ಕೆಡವಿದ್ದರು. ಆದರೆ ಅವತ್ತಿಗೆ ಅಷ್ಟು ದೊಡ್ಡ ಮೊತ್ತದ ನೋಟುಗಳನ್ನು ಹೊಂದಿದವರು ಭಾರಿ ಶ್ರೀಮಂತರು ಮಾತ್ರ ಆಗಿದ್ದರಿಂದ ಬಡ ಜನರ ಬದುಕಿನಲ್ಲಿ ಹೇಳಿಕೊಳ್ಳುವಂಥ ಬದಲಾವಣೆಗಳೇನೂ ಆಗಿರಲಿಲ್ಲ.

ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ

ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ

ಇವತ್ತು ಹೇಗೆ ಮೋದಿ ಬ್ಯಾಂಕುಗಳು ಮುಚ್ಚಿದ ನಂತರ ನೋಟು ಬದಲಾವಣೆ ಘೋಷಣೆ ಮಾಡಿದರೋ ಅದೇ ರೀತಿ ಜನವರಿ 16ರಂದು ಬ್ಯಾಂಕುಗಳು ಬಾಗಿಲೆಳೆದುಕೊಂಡ ನಂತರ ಎಲ್ಲಾ ವ್ಯವಹಾರಗಳೂ ಕಾನೂನು ಬದ್ಧವಾಗಬೇಕು ಎಂದು ಘೋಷಿಸಿದರು ಪ್ರಧಾನಿ ಮೊರಾರ್ಜಿ. ಇಂದಿನ ರೀತಿಯಲ್ಲೇ ಮರುದಿನ ಎಲ್ಲಾ ಬ್ಯಾಂಕುಗಳಿಗೆ ಸಾರ್ವತ್ರಿಕ ರಜೆ ಸಾರಿ ಬಿಟ್ಟರು. ಅವತ್ತು ಅರ್ಥ ಸಚಿವರಾಗಿದ್ದವರು ಗುಜರಾತಿನವರೇ ಆದ ಎಚ್.ಎಂ ಪಟೇಲ್. ಮಾಜಿ ಹಣಕಾಸು ಇಲಾಖೆ ಕಾರ್ಯದರ್ಶಿಯೂ ಆಗಿದ್ದ ಅವರಿಗೆ ಕಪ್ಪು ಹಣದ ಆಳ ಅಗಲಗಳು ತಿಳಿದಿದ್ದವು. ಕಪ್ಪು ಹಣವನ್ನು ಸರಕಾರಿ ಖಜಾನೆಗೆ ಸೇರಿಸುವುದಷ್ಟೇ ಈ ನಿರ್ಧಾರದ ಹಿಂದಿದ್ದ ಉದ್ಧೇಶವಾಗಿತ್ತು. ಹೀಗಿದ್ದೂ ಕಾಂಗ್ರೆಸ್ ಪಕ್ಷದ ‘ಗುಪ್ತ ನಿಧಿ’ಗಳನ್ನು ಬಂದ್ ಮಾಡಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಗಾಳಿ ಸುದ್ದಿಯೂ ಹಬ್ಬಿತ್ತು.

ಅವತ್ತು ಆರ್.ಬಿ.ಐ ಗವರ್ನರ್ ಆಗಿದ್ದ ಐ.ಜಿ ಪಟೇಲ್ ಮೊರಾರ್ಜಿಗೆ ತಮ್ಮ ಬೆಂಬಲ ನೀಡಿರಲಿಲ್ಲ. ಆದರೆ ಇವತ್ತು ಉರ್ಜಿತ್ ಪಟೇಲ್ ಮಾತ್ರ ಪ್ರಧಾನಿ ಬೆನ್ನಿಗೆ ಗಟ್ಟಿಯಾಗಿ ನಿಂತಿದ್ದಾರೆ.

ತನ್ನ ಯೋಜನೆ ಜಾರಿಗೆ ತರಲು ಮೊರಾರ್ಜಿ ದೇಸಾಯಿ ‘ಹೈ ಡೆನಾಮಿನೇಷನ್ ಬ್ಯಾಂಕ್ ನೋಟ್ಸ್ (ಡಿಮೊನಟೈಸೇಷನ್) ಆಕ್ಟ್-1978’ ಜಾರಿಗೆ ತಂದರು. ಈ ಕಾಯಿದೆ ಪ್ರಕಾರ ಹೆಚ್ಚಿನ ಮುಖಬೆಲೆಯ ಹಣವನ್ನು ವರ್ಗಾವಣೆ ಮಾಡುವುದು ಮತ್ತು ಪಡೆಯುವುದು ಅಪರಾಧವಾಗಿತ್ತು. ಸುಳ್ಳು ಘೋಷಣೆಗಳನ್ನು ಮಾಡುವ ಧನಿಕರನ್ನು ಶಿಕ್ಷೆಗೆ ಒಳಪಡಿಸುವ ಅವಕಾಶ ಈ ಕಾಯಿದೆಯಲ್ಲಿತ್ತು. ಅಂಥಹವರನ್ನು ಮೂರು ವರ್ಷ ಜೈಲಿಗೂ ಕಳುಹಿಸಬಹುದಾಗಿತ್ತು.

ಸುಮಾರು 20 ವರ್ಷಗಳ ಕಾಲ ಈ ಕಾಯಿದೆ ಹಾಗೆಯೇ ಇತ್ತು.  1998ರಲ್ಲಿ ಅಧಿಕಾರಕ್ಕೆ ಬಂದ ಎನ್.ಡಿ.ಎ ಈ ಕಾಯಿದೆಯನ್ನು ಹಿಂದಕ್ಕೆ ತೆಗೆದುಕೊಂಡು ಮತ್ತೆ 1,000 ಮುಖಬೆಲೆಯ ನೋಟುಗಳನ್ನೆಲ್ಲಾ ಪರಿಚಯಿಸಿತು.

ಮೊರಾರ್ಜಿ ನಿರ್ಧಾರದಿಂದ ಜನ ಸಾಮಾನ್ಯರಿಗೇನಾಯಿತು?

ಇವತ್ತಿನಂತೆ ಅವತ್ಯಾರೂ ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಇಟ್ಟುಕೊಂಡಿರಲಿಲ್ಲ. ಇದರಿಂದ ಜನ ಸಾಮಾನ್ಯರಿಗೆ ಅಂಥಹ ಯಾವುದೇ ಪರಿಣಾಮಗಳೂ ಬೀರಲಿಲ್ಲ.  ಈ ನಿರ್ಧಾರದಿಂಧ ವಾರದೊಳಗೆ ಚಿನ್ನ ಮತ್ತು ಸ್ಥಿರಾಸ್ತಿಗಳ ಮೌಲ್ಯ ಮಾತ್ರ ಶೇಕಡಾ 5 ರಿಂದ 10 ರಷ್ಟು ಕುಸಿದು ಹೋಯಿತು.

ಕಪ್ಪು ಹಣದ ವಿಚಾರಕ್ಕೆ ಬಂದಾಗ ಮೊರಾರ್ಜಿಯ ಈ ನಿರ್ಧಾರ ನಿಷ್ಪ್ರಯೋಜಕವಾಗಿತ್ತು ಎನ್ನುತ್ತಾರೆ ‘ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸಿಟ್ಯೂಟ್’ನ ಫ್ರೊಫೆಸರ್ ಅಭಿರೂಪ್ ಸರ್ಕಾರ್. ಇದರಿಂದ ಕಪ್ಪು ಹಣದ ಚಲಾವಣೆಗೆ ಹೆಚ್ಚಿನ ತೊಂದರೆಯೇನೂ ಆಗಲಿಲ್ಲ ಎಂಬುದು ಅವರ ಅಭಿಪ್ರಾಯ.

ಆದರೆ “ಕೆಲವು ದೊಡ್ಡ ಮೊತ್ತದ ಕಫ್ಪು ಹಣ ಇದ್ದವರಿಗೆ ಇದು ಸಮಸ್ಯೆ ತಂದಿದ್ದು ನಿಜ. ಅವತ್ತು ಕಪ್ಪು ಕುಳಗಳು ಜನ ಸಾಮಾನ್ಯರಿಗೆ 1,000 ರೂಪಾಯಿಯ ನೋಟುಗಳನ್ನು 300 ರೂಪಾಯಿಗಿಂತ ಕಡಿಮೆ ದರಕ್ಕೆ ಮುಂಬೈ ಬೀದಿಗಳಲ್ಲಿ ಮಾರುತ್ತಿದ್ದರು,” ಎನ್ನುತ್ತಾರೆ ವಕೀಲ ಅನಿಲ್ ಹರೀಶ್.

ಹೀಗೆ ಅನಾಣ್ಯೀಕರಣ ಎಂಬ ಯೋಜನೆ ಅವತ್ತೇ ಹಳ್ಳ ಹಿಡಿದಿತ್ತು. ಇಂಥಹ ವಾಸ್ತವ ಉದಾಹರಣೆಗಳಿದ್ದರೂ, ನರೇಂದ್ರ ಮೋದಿ ಮಾತ್ರ ಬೇರೆಯದೇ ಮಾತನಾಡುತ್ತಿದ್ದಾರೆ. “1971ರ ನಂತರ ಅನಾಣ್ಯೀಕರಣ ನಡೆದೇ ಇಲ್ಲ. ಅದಕ್ಕೆ ದೇಶ ಇವತ್ತು ಹೀಗಿದೆ” ಎನ್ನುತ್ತಿದ್ದಾರೆ. 1978ರಲ್ಲಿ ಅನಾಣ್ಯೀಕರಣ ನಡೆದ್ದನ್ನೂ, ಅದು ನಡೆದು ಯಾವ ಬದಲವಾಣೆ ಆಗಿಯೇ ಇಲ್ಲ ಎನ್ನುವುದು ವಾಸ್ತವದ ಸಂಗತಿ. ಹಾಗೆ ನೋಡಿದರೆ ಕಪ್ಪುಹಣ ಹೊಂದಿರುವವರ ವಿರುದ್ಧ ಮೊರಾರ್ಜಿ ಜಾರಿಗೆ ತಂದಿದ್ದ ಕಠಿಣ ಕಾನೂನನ್ನು ರದ್ದುಗೊಳಿಸಿದ್ದೂ ಅವರದ್ದೇ ಅಟಲ್ ಬಿಜಾರಿ ವಾಜಪೇಯಿ ಸರಕಾರ. ಹಾಗೂ 1000 ಮುಖಬೆಲೆಯ ನೋಟುಗಳನ್ನು ಮತ್ತೆ ಚಲಾವಣೆಗೆ ತಂದವರೂ ಅವರೆ. ಇತಿಹಾಸ ಈ ಸತ್ಯಗಳನ್ನು ಮರೆಯಲು ಸಾಧ್ಯವಿಲ್ಲ.

Leave a comment

Top