An unconventional News Portal.

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಸಿಐಡಿಯಿಂದ ತನಿಖೆ ಚುರುಕು

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಸಿಐಡಿಯಿಂದ ತನಿಖೆ ಚುರುಕು

ಆತ್ಮಹತ್ಯೆಗೆ ಶರಣಾದ ಡಿವೈಎಸ್‍ಪಿ ಗಣಪತಿ ಪ್ರಕರಣದಲ್ಲಿ ಸಿಐಡಿ ತಂಡ ತನ್ನ ತನಿಖೆಯನ್ನು ಚುರುಕುಗೊಳಿಸಿದೆ.

ಸತ್ಯಾಸತ್ಯತೆಗಳನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಸಿಐಡಿ ಕಾರ್ಯಪ್ರವೃತ್ತವಾಗಿದ್ದು, ಕುಟುಂಬ ಸದಸ್ಯರ ವಿಭಿನ್ನ ಹೇಳಿಕೆಗಳಿಂದ ಏರ್ಪಟ್ಟಿದ್ದ ಗೊಂದಲಗಳನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ.

ಐಜಿಪಿ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ಇಡೀ ದಿನ ಮಂಗಳೂರು, ಮಡಿಕೇರಿ ಸೇರಿದಂತೆ ಹಲವೆಡೆ ಶೋಧ ಕಾರ್ಯವನ್ನು ಕೈಗೊಳ್ಳಲಾಗಿದೆ. ಇದರ ನಡುವೆ ಎಸ್‍ಪಿ ಕುಮಾರಸ್ವಾಮಿ ತಂಡ ಶನಿವಾರ ಗಣಪತಿಯವರ ಪತ್ನಿ ಪಾವನಾ ಮತ್ತು ಮಕ್ಕಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಸಾಧ್ಯತೆ ಇದೆ.

ಇದಲ್ಲದೆ, ಗಣಪತಿಯವರ ತಂದೆ ಕುಶಾಲಪ್ಪ ಅವರಿಂದಲೂ ಮಾಹಿತಿ ಪಡೆಯಲಿದೆ. ಮೊದಲು ಮಡಿಕೇರಿ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಘಟನೆಗೆ ಸಂಬಂಧಿಸಿದಂತೆ ಸಂಕ್ಷಿಪ್ತ ಮಾಹಿತಿ ಕಲೆ ಹಾಕಿ ನಂತರ ತನ್ನ ಕಾರ್ಯಾಚರಣೆಯನ್ನು ಸಿಐಡಿ ಆರಂಭಿಸಿದೆ ಎಂದು ಹೇಳಲಾಗಿದೆ.

ಲಾಡ್ಜ್ನಲ್ಲಿ ಯಾವುದೇ ರೀತಿಯ ಡೆತ್‍ನೋಟ್ ಸಿಕ್ಕಿಲ್ಲ ಎಂದು ಮತ್ತೊಮ್ಮೆ ಖಾತರಿ ಪಡಿಸಿರುವ ಪೊಲೀಸರು ಕೇವಲ ಹರಿದು ಹಾಕಿರುವ ವೈದ್ಯರ ಭೇಟಿಯ ಚೀಟಿ ಮಾತ್ರ ಪತ್ತೆಯಾಗಿದೆ ಎಂದಿದ್ದಾರೆ.

ಶನಿವಾರ ಬೆಳಗ್ಗೆ ಲಾಡ್ಜ್ ನೌಕರರಿಂದಲೂ ಮಾಹಿತಿ ಕಲೆ ಹಾಕಲಾಗಿದೆ. ಮಂಗಳೂರಿನಿಂದ ಮಡಿಕೇರಿಗೆ ಬಂದ ನಂತರ ಗಣಪತಿಯವರು ತಮ್ಮ ಕಾರು ಬಿಟ್ಟು ಆಟೋದಲ್ಲಿ ಓಡಾಟ ನಡೆಸಿದ್ದು, ಆ ಚಾಲಕನನ್ನು ಪತ್ತೆ ಹಚ್ಚಿ ಎಲ್ಲೆಲ್ಲಿ ಭೇಟಿ ನೀಡಿದ್ದರು ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗಿದೆ.

ನಂತರ ಖಾಸಗಿ ಸುದ್ದಿವಾಹಿನಿಗೂ ಭೇಟಿ ನೀಡಿ ಸಂದರ್ಶನ ನಡೆಸಿದ ವರದಿಗಾರರು, ಕ್ಯಾಮೆರಾಮೆನ್ ಮತ್ತಿತರರ ಬಳಿ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.  ದೂರವಾಣಿ ಕರೆಗಳು ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.

Top