An unconventional News Portal.

‘ಜುಗಾರಿ ಕ್ರಾಸ್’ನ ಸೋಲಿಲ್ಲದ ಸರದಾರ, ಸಚಿವ ಎಚ್. ಎಸ್. ಮಹದೇವ ಪ್ರಸಾದ್ ಸಾವು

‘ಜುಗಾರಿ ಕ್ರಾಸ್’ನ ಸೋಲಿಲ್ಲದ ಸರದಾರ, ಸಚಿವ ಎಚ್. ಎಸ್. ಮಹದೇವ ಪ್ರಸಾದ್ ಸಾವು

ರಾಜ್ಯ ಸಕ್ಕರೆ ಮತ್ತು ಸಹಕಾರಿ ಸಚಿವ, ಗುಂಡ್ಲುಪೇಟೆ ಎಂಬ  ‘ಜುಗಾರಿ ಕ್ರಾಸ್’ ಹೋಲುವ ವಿಧಾನಸಭಾ ಕ್ಷೇತ್ರದ ಸೋಲಿಲ್ಲದ ಸರದಾರ, ಹಳೇ ಮೈಸೂರು ಭಾಗದ ಲಿಂಗಾಯತ ರಾಜಕಾರಣಿ, ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿದ್ದ ಎಚ್. ಎಸ್. ಮಹದೇವ ಪ್ರಸಾದ್ ಮಂಗಳವಾರ ಮುಂಜಾನೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಚಿಕ್ಕಮಗಳೂರು ಸಮೀಪ, ಮಾಜಿ ಸಿಎಂ ಎಸ್. ಎಂ. ಕೃಷ್ಣಾ ಅವರ ಅಳಿಯ ಸಿದ್ಧಾರ್ಥ ಅವರಿಗೆ ಸೇರಿದ ಸೆರಾಯ್ ರೆಸಾರ್ಟಿನಲ್ಲಿ ಅವರು ಸರಕಾರಿ ಕಾರ್ಯಕ್ರಮ ನಿಮಿತ್ತ ಸೋಮವಾರ ತಂಗಿದ್ದರು. ರಾತ್ರಿ ಸ್ನೇಹಿತರ ಮನೆಯಲ್ಲಿ ಊಟ ಮುಗಿಸಿ ಬಂದು ಮಲಗಿದ್ದವರು ಹಾಸಿಗೆಯಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

“ಮುಂಜಾನೆ ಆರು ಗಂಟೆಗೆ ಏಳುವುದು ಮಹದೇವ್ ಪ್ರಸಾದ್ ಅವರ ದಿನಚರಿಯಾಗಿತ್ತು. ಆದರೆ ಮಂಗಳವಾರ ಬೆಳಗ್ಗೆ ಅವರು 8 ಗಂಟೆಯಾದರೂ ಏಳಲಿಲ್ಲ. ಈ ಸಮಯದಲ್ಲಿ ಜತೆಗಿದ್ದವರಿಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ನಕಲಿ ಕೀ ಬಳಸಿ ರೂಮಿಗೆ ಹೋಗಿ ನೋಡಿದಾಗ, ಸಚಿವರ ದೇಹ ತಣ್ಣಗಾಗಿತ್ತು. ವೈದ್ಯರು ಹೃದಯಾಘಾತ ಎಂದು ತಿಳಿಸಿದ್ದಾರೆ,” ಎಂದು ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಮಾಧ್ಯಮಗಳಿಗೆ ನೀಡಿದ ಸಂತಾಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಂಗಳವಾರ ಮಲೆನಾಡು ಭಾಗದಲ್ಲಿ ಜನಪ್ರಿಯ ಸಾರಿಗೆ ಸಂಸ್ಥೆ ‘ಸಹಕಾರ ಸಾರಿಗೆ’ಯ 25ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಎಚ್. ಎಸ್. ಮಹದೇವ ಪ್ರಸಾದ್ ಪಾಲ್ಗೊಳ್ಳಬೇಕಿತ್ತು. ನಂತರ ತಾಲೂಕು ಕಾಂಗ್ರೆಸ್ ಕಚೇರಿಯಲ್ಲಿ ಸಚಿವರಿಗೆ ಅಭಿನಂದನೆ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. “ಸಚಿವರು ಇತ್ತೀಚಿಗೆ ಸಹಕಾರ ಸಂಘಗಳ ಸಾಲ ಮನ್ನಾ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದಿಸಲು ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೆವು. ಆದರೆ, ದುರಾದೃಷ್ಟವಶಾತ್ ಸಚಿವರು ಇನ್ನಿಲ್ಲ,” ಎಂದು ಕೊಪ್ಪ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮೊರಳ್ಳಿ ‘ಸಮಾಚಾರ’ಕ್ಕೆ ಪ್ರತಿಕ್ರಿಯೆ ನೀಡಿದರು.

ಕವಯತ್ರಿಯೂ ಆಗಿರುವ ಪತ್ನಿ ಡಾ. ಗೀತಾ ಮೋಹನ್ ಕುಮಾರಿ ಹಾಗೂ ಪುತ್ರ ಗಣೇಶ್ ಪ್ರಸಾದ್ರನ್ನು ಅಗಲಿದ್ದಾರೆ.

ಸೋಲಿಲ್ಲದ ಸರದಾರ:

ಪತ್ನಿ ಡಾ. ಗೀತಾ ಜತೆ ಮಹದೇವ್ ಪ್ರಸಾದ್.

ಪತ್ನಿ ಡಾ. ಗೀತಾ ಜತೆ ಮಹದೇವ್ ಪ್ರಸಾದ್.

ಎಚ್. ಎಸ್. ಮಹದೇವ ಪ್ರಸಾದ್ ಸದ್ಯ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಗುಂಡ್ಲುಪೇಟೆ ಕೇರಳ ಮತ್ತು ತಮಿಳುನಾಡು ಗಡಿ ಭಾಗವನ್ನು ಹಂಚಿಕೊಳ್ಳುತ್ತದೆ. ಹಾಗೆಯೇ ಎರಡು ರಾಷ್ಟ್ರೀಯ ಉದ್ಯಾನವನಗಳಿಗೆ ಇಲ್ಲಿಂದಲೇ ಪ್ರವೇಶವನ್ನು ಪಡೆಯಬೇಕಿದೆ. ಇದೊಂದು ರೀತಿಯಲ್ಲಿ ತೇಜಸ್ವಿ ಅವರ ಕಾದಂಬರಿ ‘ಜುಗಾರಿ ಕ್ರಾಸ್’ನಲ್ಲಿ ಬರುವ, ಅರಣ್ಯ ಸಂಪತ್ತಿನ ಲೂಟಿ ಮಾಫಿಯಾದ ಬೇರುಗಳನ್ನು ಹೊಂದಿರುವ ಕಾಲ್ಪನಿಕ ಊರನ್ನು ಹೋಲುವ ಕ್ಷೇತ್ರ. ಗುಂಡ್ಲುಪೇಟೆಯಲ್ಲಿ ವ್ಯಾಪಕವಾದ ಮರಗಳ್ಳತನ, ಅರಣ್ಯ ಸಂಪತ್ತಿನ ಲೂಟಿ ನಡೆದುಕೊಂಡು ಬರುತ್ತಿದೆ. ಅಕ್ರಮ ರೆಸಾರ್ಟ್ಗಳು ಇಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿವೆ.

ಇಂತಹ ಕ್ಷೇತ್ರ ಸ್ವಾತಂತ್ರ್ಯ ನಂತರ ಕಂಡಿರುವುದು ಮೂವರು ಶಾಸಕರನ್ನು. 1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಇಲ್ಲಿಂದ ಆಯ್ಕೆಯಾಗಿ ಬಂದವರು ಸ್ವತಂತ್ರ ಅಭ್ಯರ್ಥಿಯಾಗಿದ್ದ ಕೆ. ಎಸ್. ನಾಗರತ್ನಮ್ಮ. ಮುಂದಿನ 7 ಚುನಾವಣೆಗಳಲ್ಲಿ ಒಮ್ಮೆ ಸೋತ ಅವರು ಉಳಿದ 6 ಸಂದರ್ಭಗಳಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1994ರಲ್ಲಿ ಮೊದಲ ಬಾರಿಗೆ ಮಹದೇವ ಪ್ರಸಾದ್ ಜನತಾ ದಳ ಪಕ್ಷದಿಂದ ಈ ಕ್ಷೇತ್ರವನ್ನು ಪ್ರತಿನಿಧಿಸಿದರು. ಅಲ್ಲಿಂದ ಮುಂದೆ ಅವರು ಪಕ್ಷವನ್ನು ಬದಲಿಸಿದರಾದರೂ ಸತತ ಐದು ಬಾರಿ ಕ್ಷೇತ್ರದ ಜನ ಅವರ ಕೈ ಹಿಡಿದಿದ್ದರು.

ಜನತಾ ಪರಿವಾರ ಒಡನಾಡಿ: 

ಸಚಿವ ಮಹದೇವ ಪ್ರಸಾದ್ ಜನತಾ ಪರಿವಾರದ ಹಲವು ನಾಯಕರ ಗರಡಿಯಲ್ಲಿ ಬೆಳೆದವರು. ಎಂ. ಪಿ. ಪ್ರಕಾಶ್, ಜೆ. ಎಚ್. ಪಟೇಲ್ ತರಹದ ನಾಯಕರ ಜತೆಯಲ್ಲಿಯೇ ರಾಜಕೀಯ ಮಾಡಿಕೊಂಡು ಬಂದವರು. ಕೆಲವು ವರ್ಷಗಳ ಹಿಂದೆ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಹಿನ್ನೆಲೆಯಲ್ಲಿ ‘ಓಪನ್ ಹಾರ್ಟ್ ಸರ್ಜರಿ’ಯೂ ಆಗಿತ್ತು. ಕನ್ನಿಂಗ್ ಹ್ಯಾಮ್ ರಸ್ತೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು.

ಪತ್ರಕರ್ತನ ಕೊಲೆ ಪ್ರಕರಣ:

ಮಹದೇವ ಪ್ರಸಾದ್ ಮಾತಿನ ವಿಚಾರಕ್ಕೆ ಬಂದರೆ ಅತ್ಯಂತ ಮೃದು ಸ್ವಭಾವದವರು ಎಂಬುದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುವ ಮಾತು. ಇಂತಹ ಮಹದೇವ ಪ್ರಸಾದ್ ರಾಜ್ಯ ಮಟ್ಟದಲ್ಲಿ ಪತ್ರಕರ್ತರೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 1995ರ ಸುಮಾರಿಗೆ ಸುದ್ದಿಯಾಗಿದ್ದರು. ಗುಂಡ್ಲುಪೇಟೆಯ ‘ಅಂತ’ ಎಂಬ ಪತ್ರಿಕೆಗೆ ವರದಿಗಾರರಾಗಿ ಕೆಲಸ ಮಾಡುತ್ತಿದ್ದ ಸತ್ಯ ಎಂಬುವವರ ಕೊಲೆ ನಡೆದಿತ್ತು. ಇದರ ಮಾಹಿತಿ ಪೊಲೀಸರಿಗೂ ಮೊದಲ ಮೈಸೂರಿನ ಆಂದೋಲನ ಪತ್ರಿಕೆ ಸಿಕ್ಕಿತ್ತು. ಸ್ಥಳಕ್ಕೆ ಆಂದೋಲನ ಸಂಪಾದಕ ರಾಜಶೇಖರ್ ಕೋಟಿ ಮತ್ತು ವರದಿಗಾರರೊಬ್ಬರು ತೆರಳಿದ್ದರು. ನಂತರ ಪೊಲೀಸರ ಆಗಮನವಾಗಿತ್ತು. ನಂತರ ಅದು ರಾಜ್ಯಮಟ್ಟದಲ್ಲಿಯೂ ಸದ್ದು ಮಾಡಿತ್ತು.

ಇದೇ ಪ್ರಕರಣದಲ್ಲಿ ಮಹದೇವ್ ಪ್ರಸಾದ್ ಆಪ್ತ, ಅವತ್ತಿನ ಗುಂಡ್ಲುಪೇಟೆಯ ಪುರಸಭೆಯ ಅಧ್ಯಕ್ಷರೊಬ್ಬರ ಬಂಧನವಾಗಿತ್ತು. ಈತನನ್ನು ಗುಂಡ್ಲುಪೇಟೆಯ ಉಪ ಬಂಧೀಖಾನೆಯಲ್ಲಿ ‘ಏಷಿಯನ್ ಏಜ್’ ಪತ್ರಿಕೆಯ ಮಹಿಳಾ ವರದಿಗಾರ್ತಿಯೊಬ್ಬರು ಸಂದರ್ಶನ ನಡೆಸಿದ್ದರು. ‘ತಾವೇ ಕೊಲೆಯನ್ನು ಮಾಡಿಸಿದ್ದಾಗಿ’ ಆತ ಒಪ್ಪಿಕೊಂಡಿದ್ದ. ಆದರೆ, ನ್ಯಾಯಾಲಯ ಇದನ್ನು ಪುರಾವೆಯಾಗಿ ಅಂಗೀಕರಿಸದ ಹಿನ್ನೆಲೆಯಲ್ಲಿ ಕೊಲೆ ಪ್ರಕರಣದಲ್ಲಿ ಆರೋಪಿ ಖುಲಾಸೆಯಾಗಿದ್ದ. ಮಹದೇವ್ ಪ್ರಸಾದ್ ಒಂದಷ್ಟು ದಿನ ತಲೆಮರೆಸಿಕೊಂಡಿದ್ದರು.

ಸಂತಾಪ: 

ಸಚಿವರ ಸಾವಿನ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ.

Leave a comment

Top