An unconventional News Portal.

ಜಾರ್ಖಂಡ್ ಕಲ್ಲಿದ್ದಲು ಗಣಿಯಲ್ಲಿ ದುರಂತ: ಐವರ ಸಾವು, 40 ಜನ ಸಿಲುಕಿರುವ ಶಂಕೆ

ಜಾರ್ಖಂಡ್ ಕಲ್ಲಿದ್ದಲು ಗಣಿಯಲ್ಲಿ ದುರಂತ: ಐವರ ಸಾವು, 40 ಜನ ಸಿಲುಕಿರುವ ಶಂಕೆ

ಜಾರ್ಖಂಡ್ ಕಲ್ಲಿದ್ದಲು ಗಣಿ ಕುಸಿದು 5 ಜನ ಸಾವನ್ನಪ್ಪಿದ್ದಾರೆ. ಇನ್ನೂ 40 -45 ಜನ ಗಣಿಯಡಿಯಲ್ಲಿ ಸಿಲುಕಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.

ಜಾರ್ಖಂಡ್ ರಾಜ್ಯದ ಗೊಡ್ಡಾ ಜಿಲ್ಲೆಯ ಲಾಲ್ ಮಟಿಯಾ ಪ್ರದೇಶದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಇದು ಈಸ್ಟೆರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಇಸಿಎಲ್) ಕಂಪೆನಿಗೆ ಸೇರಿದೆ. “ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇಲ್ಲಿವರೆಗೆ ನಾಲ್ಕು ಮೃತ ದೇಹಗಳು ಸಿಕ್ಕಿವೆ. ಒಂದು ದೇಹ ಕಾಣಿಸುತ್ತಿದೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ,” ಎಂದು ಇಸಿಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಂಜನ್ ಮಿಶ್ರಾ ಹೇಳಿದ್ದಾರೆ.

coal-mining-2

ರಾತ್ರಿ ವೇಳೆ ಘಟನೆ ನಡೆದಿದ್ದು ಕಾರ್ಯಾಚರಣೆ ನಡೆಸಲು ಸ್ಥಳದಲ್ಲಿ ಬೆಳಕು ಇರಲಿಲ್ಲ. ನಂತರ ಮೂರು ಗಂಟೆಯೊಳಗೆ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಸ್ಥಳದಲ್ಲಿ ಒಟ್ಟು ಮೂರು ರಾಷ್ಟ್ರೀಯ ವಿಕೋಪ ನಿರ್ವಹಣಾ ತಂಡಗಳು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದು, ಗಣಿಯಡಿಯಲ್ಲಿ ಸಿಲುಕಿಕೊಂಡವರನ್ನು ಹೊರತೆಗೆಯುವ ಕಾರ್ಯದಲ್ಲಿ ನಿರತವಾಗಿವೆ.

“ಕುಸಿದ ಅದಿರಿನ ಅಡಿಯಲ್ಲಿ ಹತ್ತಾರು ವಾಹನಗಳು ಸಿಲುಕಿಕೊಂಡಿವೆ,” ಎಂದು ಜಾರ್ಖಂಡ್ ಮುಖ್ಯಮಂತ್ರಿ ರಘುವರ್ ದಾಸ್ ಹೇಳಿದ್ದಾರೆ. ಅವರು ಪೊಲೀಸ್ ಮಹಾನಿರ್ದೇಶಕ ಮತ್ತು ಮುಖ್ಯ ಕಾರ್ಯದರ್ಶಿಗೆ ಘಟನೆಯ ಬಗ್ಗೆ ಗಮನ ಹರಿಸುವಂತೆ ಸೂಚನೆ ನೀಡಿದ್ದಾರೆ. ಇನ್ನು ಘಟನೆಯ ಬಗ್ಗೆ ತನಿಖೆಗೆ ಕೇಂದ್ರ ಕಲ್ಲಿದ್ದಲು ಮಂತ್ರಿ ಪಿಯೂಷ್ ಗೋಯಲ್ ಆದೇಶ ನೀಡಿದ್ದಾರೆ.

ಕಲ್ಲಿದ್ದಲ ಕೂಪ ಜಾರ್ಖಂಡ್:

ಜಾರ್ಖಂಡ್ ಕಲ್ಲಿದ್ದಲಿನ ಭರಪೂರ ನಿಕ್ಷೇಪಗಳನ್ನು ಹೊಂದಿರುವ ರಾಜ್ಯ. ಇಲ್ಲಿ ಎಲ್ಲೆಲ್ಲೂ ಕಲ್ಲಿದ್ದಲಿನ ಗಣಿಗಳಿವೆ. ಇಲ್ಲಿನ ದಾನ್ಬಾದ್ ಜಿಲ್ಲೆಯನ್ನು ನಮ್ಮ ಬಳ್ಳಾರಿಗೆ ಹೋಲಿಸಬಹುದು. ಒಂದು ಕಡೆ ಪರಿಸರವನ್ನು ಕಡೆಗಣಿಸಿ ನಡೆಯುತ್ತಿರುವ ಗಣಿಗಾರಿಗೆ. ಇನ್ನೊಂದು ಕಡೆ ಪರಿಸರ, ಸ್ವಂತ ಆರೋಗ್ಯ ಹಾಳಾಗುತ್ತಿದೆ ಎಂದು ಗೊತ್ತಿದ್ದರೂ ಅನಿವಾರ್ಯವಾಗಿ ಸಂಬಳಕ್ಕೆ ಕೈಚಾಚುವ ಸ್ಥಳೀಯ ಕಾರ್ಮಿಕರು. ಇವೆಲ್ಲದರ ಆಚೆಗೆ ಅಭಿವೃದ್ಧಿಯ ಓಘದಲ್ಲಿ ವಿದ್ಯುಚ್ಛಕ್ತಿಗಾಗಿ ಕಲ್ಲಿದ್ದಲ್ಲನ್ನು ಹೊರತೆಗೆಯಲೇಬೇಕಾದ ದೇಶದ ತುರ್ತು ಅಗತ್ಯ. ಇದಕ್ಕೆ ಬಲಿಯಾಗುತ್ತಿರುವುದು ಪರಿಸರ ಮತ್ತು ಕಾರ್ಮಿಕರು.

Mining smog

ಕಲ್ಲಿದ್ದಲು ಗಣಿಗಳಲ್ಲಿ ಎರಡು ರೀತಿಯ ಗಣಿಗಳಿವೆ. ಒಂದು ತೆರೆದ ಗಣಿಗಳು; ಇನ್ನೊಂದು ನೆಲದಾಳದ ಗಣಿಗಳು. ಮಾಲಿನ್ಯದ ವಿಚಾರಕ್ಕೆ ಬಂದರೆ ನೆಲದಾಳದ ಗಣಿಗಳು ಉತ್ತಮ. ಆದರೆ ಇಲ್ಲಿ ರಿಸ್ಕ್ ಜಾಸ್ತಿ. ಜೀವ ಕಳೆದುಕೊಳ್ಳುವ ಸಂಭವಗಳು ಹೆಚ್ಚು. ಸದ್ಯ ಜಾರ್ಖಂಡಿನಲ್ಲಿ ನಡೆದಿರುವಂತೆಯೇ ಗಣಿ ಕುಸಿತಗಳು ಇಲ್ಲಿ ಯಾವತ್ತೂ ನಡೆಯುತ್ತಿರುತ್ತವೆ. ನೆಲದಾಳದ ಗಣಿಗಳಲ್ಲಿ 2,000 ಅಡಿ ಆಳದಲ್ಲೂ ಕೆಲಸ ಮಾಡಬೇಕಾಗುತ್ತದೆ. ಹೀಗಿರುವಾಗ ಆಮ್ಲಜನಕದ ಪೂರೈಕೆಯಲ್ಲಾಗುವ ವ್ಯತ್ಯಯದಿಂದ ಕಾರ್ಮಿಕರು ಉಸಿರಾಟದ ಸಮಸ್ಯೆ ಎದುರಿಸಬೇಕಾಗುತ್ತದೆ. ಜತೆಗೆ ಅವಘಢಗಳಿಂದಲೂ ಜೀವ ಕಳೆದುಕೊಳ್ಳುತ್ತಿರುತ್ತಾರೆ.

ಇನ್ನು ತೆರೆದ ಗಣಿಗಳ ವಿಚಾರಕ್ಕೆ ಬಂದಾಗ ಇಲ್ಲಿ ನಡೆಯುವುದೇ ಬೇರೆ. ಕಲ್ಲಿದ್ದಲಿನ ಧೂಳು ಮತ್ತು ವಿಷಕಾರಿ ಅನಿಲಗಳು ಇಂಚಿಂಚೇ ಕಾರ್ಮಿಕರ ಜೀವ ತಿಂದು ಬಿಡುತ್ತವೆ. ತೆರೆದ ಗಣಿಗಳಲ್ಲಿ ಆಗಾಗ ಬೆಂಕಿ ಕಾಣಿಸಿಕೊಳ್ಳವುದರಿಂದ, ಬೆಂಕಿ ನಂದಿಸಲು ನೀರು ಸುರಿದರೆ ಕಾರ್ಬನ್ ಮೋನಾಕ್ಸೈಡ್ ಮತ್ತು ಹೈಡ್ರೋಜನ್ ಸಲ್ಫೈಡ್ ಎಂಬ ವಿಷಕಾರಿ ಅನಿಲಗಳು ಉತ್ಪತ್ತಿಯಾಗುತ್ತವೆ. ಈ ವಿಷಕಾರಿ ಗಾಳಿಗಳನ್ನು ಸೇವಿಸುತ್ತಲೇ ಕಾರ್ಮಿಕರು ಕೆಲಸ ಮಾಡಬೇಕಾಗುತ್ತದೆ. ಇದರಿಂದ ಶ್ವಾಸಕೋಶ ಸಮಸ್ಯೆ ಆರಂಭವಾಗಿ 10-20 ವರ್ಷ ಬೇಗವೇ ಕಾರ್ಮಿಕರು ಸಾವಿಗೀಡಾಗುತ್ತಾರೆ.

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top