An unconventional News Portal.

ಸೇನೆಗಾಗಿ ಖರ್ಚು ಮಾಡುತ್ತಿರುವ ದೇಶಗಳ ಪೈಕಿ ಭಾರತ ಟಾಪ್ 15!

ಸೇನೆಗಾಗಿ ಖರ್ಚು ಮಾಡುತ್ತಿರುವ ದೇಶಗಳ ಪೈಕಿ ಭಾರತ ಟಾಪ್ 15!

ಜಗತ್ತಿನಾದ್ಯಂತ ಸೇನೆಗಾಗಿ ಖರ್ಚು ಮಾಡುತ್ತಿರುವ ದೇಶಗಳ ಪೈಕಿ ಭಾರತ ಟಾಪ್ 15ನೇ ಸ್ಥಾನಕ್ಕೇರಿದೆ.

‘ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್’ (SIPRI) ಬಿಡುಗಡೆ ಮಾಡಿರುವ ವಾರ್ಷಿಕ ವರದಿ ಪ್ರಕಾರ, ಜಗತ್ತಿನಾದ್ಯಂತ ಸೇನೆಗಾಗಿ ಅತೀ ಹೆಚ್ಚಿನ ಹಣವನ್ನು ವಿನಿಯೋಗಿಸುತ್ತಿರುವ ಮೊದಲ 15 ದೇಶಗಳ ಪೈಕಿ ಭಾರತದ ಪಾಲೇ ಶೇ. 3.1ರಷ್ಟಿದೆ.

ಏಷಿಯಾ ಮತ್ತು ಆಸ್ಟ್ರೇಲಿಯಾ ಭೂಭಾಗದಲ್ಲಿ ಸೇನೆಗಾಗಿ ಮಾಡುತ್ತಿರುವ ಖರ್ಚಿನ ಪ್ರಮಾಣ 2015ರ ನಂತರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ, ಶೇ. 5.4ರಷ್ಟು ಹೆಚ್ಚಳ ಕಂಡು ಬಂದಿದೆ. 2015- 16ನೇ ಸಾಲಿನಲ್ಲಿ ಈ ಖಂಡಗಳ ದೇಶಗಳು 43.6 ಸಾವಿರ ಕೋಟಿ ಮಿಲಿಟರಿಗಾಗಿ ಎತ್ತಿಟ್ಟಿವೆ. ಇದರಲ್ಲಿ ಚೀನಾ ಒಂದರ ಪಾಲೇ 20.15 ಸಾವಿರ ಕೋಟಿ ರೂಪಾಯಿ. ಭಾರತಕ್ಕೆ ಹೋಲಿಸಿದರೆ ನಾಲ್ಕು ಪಟ್ಟು ಅಧಿಕ ಹಣವನ್ನು ಪಕ್ಕದ ಚೀನಾ ತನ್ನ ಸೇನೆಗಾಗಿ ವಿನಿಯೋಗಿಸುತ್ತಿದೆ.

“ಭಾರತ 5.13 ಸಾವಿರ ಕೋಟಿಯನ್ನು ಒಂದು ವರ್ಷಕ್ಕೆ ಸೇನೆಯ ಮೇಲೆ ಖರ್ಚು ಮಾಡುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 8 ರಷ್ಟು ಹೆಚ್ಚಳವಾಗಿದೆ,” ಎಂದು ಎಸ್ಐಪಿಆರ್ ಸಂಸ್ಥೆ ಹೇಳಿದೆ.

ಇದೇ ವೇಳೆ, ಅಮೆರಿಕಾ ಮೂಲದ ಐಎಚ್ಎಸ್ ಇಂಕ್., ಸಂಸ್ಥೆಯ ಅಧ್ಯಯನ ಪ್ರಕಾರ ಜಗತ್ತಿನಲ್ಲಿ ಸೇನೆಯ ಮೇಲೆ ಖರ್ಚು ಮಾಡುತ್ತಿರುವ ದೇಶಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. 2016-17ರ ಕೇಂದ್ರ ಬಜೆಟ್ನಲ್ಲಿ ಸೇನೆಗೆ ಮೀಸಲಿಡುತ್ತಿದ್ದ ಹಣದಲ್ಲಿ ಶೇ. 13.1ರಷ್ಟು ಹೆಚ್ಚಳವಾಗಿದೆ.

ಸದ್ಯ ಭಾರತದಲ್ಲಿ ಮಿಲಿಟರಿ ಉಪಕರಣಗಳನ್ನು ಸ್ಥಳೀಯವಾಗಿ ಜೋಡಿಸುವ ಕೆಲಸ ನಡೆಯುತ್ತಿದೆ. ಆದರೆ, ಅದರ ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ಖರ್ಚಿನ ಪ್ರಮಾಣವೂ ಹೆಚ್ಚಿದೆ ಎಂದು ವರದಿ ಹೇಳುತ್ತಿದೆ. 2014ರಲ್ಲಿ ಪ್ರಧಾನಿ ಮೋದಿ ಘೋಷಿಸಿದ ‘ಮೇಕ್ ಇನ್ ಇಂಡಿಯಾ’ ಯೋಜನೆ ಇನ್ನೂ ಅನುಷ್ಠಾನ ಹಂತದಲ್ಲಿದೆ.

ಸೇನೆಗೆ ಹಣವನ್ನು ವಿನಿಯೋಗಿಸುತ್ತಿರುವ ದೇಶಗಳ ಸಾಲಿನಲ್ಲಿ ಅಮೆರಿಕಾ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದೆ. ಕಳೆದ ಸಾಲುಗಳಿಗೆ ಹೋಲಿಸಿದರೆ, ತನ್ನ ಬಜೆಟ್ನಲ್ಲಿ ಅಮೆರಿಕಾ ಸೇನೆಯ ಖರ್ಚನ್ನು ಕಡಿಮೆ ಮಾಡಿದೆಯಾದರೂ, 2016-17ರಲ್ಲಿ ಒಟ್ಟು 59, 600 ಕೋಟಿ ರೂಪಾಯಿ ಎತ್ತಿಟ್ಟಿದೆ. ಸೌದಿ ಅರೇಬಿಯಾ ಸರಕಾರ 8, 700 ಕೋಟಿ ರೂಪಾಯಿ ಹಣವನ್ನು ಸೇನೆಗೆ ಮೀಸಲಿಡುವ ಮೂಲಕ ಈ ಬಾರಿ ದಾಖಲೆಯ ಹಣವನ್ನು ರಕ್ಷಣಾ ಕ್ಷೇತ್ರಕ್ಕೆ ವಿನಿಯೋಗಿಸಲಿದೆ.

2014ರ ಸುಮಾರಿಗೆ ಪೆಟ್ರೋಲಿಯುಂ ಉತ್ಪನ್ನಗಳ ಮೇಲಿನ ಬೆಲೆ ಹೆಚ್ಚಳದಿಂದಾಗಿ, ಇಂಧನ ಉತ್ಪಾದನಾ ದೇಶಗಳ ಆದಾಯದಲ್ಲಿಯೂ ಹೆಚ್ಚಳವಾಗಿತ್ತು. ಆದರೆ, ಸದ್ಯ ಜಗತ್ತಿನಾದ್ಯಂತ ಕಚ್ಚಾ ತೈಲ ಬೆಲೆಗಳು ಇಳಿಮುಖವಾಗಿರುವುದು ಮುಂದಿನ ದಿನಗಳಲ್ಲಿ ರಕ್ಷಣಾ ಕ್ಷೇತ್ರಕ್ಕೆ ವಿನಿಯೋಗಿಸುತ್ತಿರುವ ಹಣದಲ್ಲಿ ಕಡಿತ ಸಾಧ್ಯತೆಗಳನ್ನು ಮುಂದುಮಾಡಿದೆ.

 

 

Top