An unconventional News Portal.

ಖಾಕಿ, ಕಾವಿ ನಡುವೆ ಸಂಘರ್ಷ: ಪೊಲೀಸ್ ವರಿಷ್ಠಾಧಿಕಾರಿಗೇ ಗುಂಡಿಕ್ಕಿದ ‘ಸತ್ಯಾಗ್ರಹಿ’ಗಳು!

ಖಾಕಿ, ಕಾವಿ ನಡುವೆ ಸಂಘರ್ಷ: ಪೊಲೀಸ್ ವರಿಷ್ಠಾಧಿಕಾರಿಗೇ ಗುಂಡಿಕ್ಕಿದ ‘ಸತ್ಯಾಗ್ರಹಿ’ಗಳು!

ಕಾನೂನು ಬಾಹಿರವಾಗಿ ವಾಸಿಸುತ್ತಿದ್ದ ಜನರನ್ನು ಒಕ್ಕಲೆಬ್ಬಿಸಲು ಹೋದ ಸಮಯದಲ್ಲಿ ನಡೆದ ಘರ್ಷಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಇಬ್ಬರು ಪೊಲೀಸರು ಹಾಗೂ 12 ಜನ ಪ್ರತಿಭಟನಾಕಾರರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಅಲಹಾಬಾದ್ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಇಲ್ಲಿನ ಜವಹರ್ ಬಾಗ್ ಏರಿಯಾದ ಉದ್ಯಾನವನದಲ್ಲಿ ವಾಸುತ್ತಿದ್ದ ಜನರನ್ನು ಒಕ್ಕಲೆಬ್ಬಿಸಲು ಪೊಲೀಸರ ತುಕಡಿಯೊಂದು ತೆರಳಿತ್ತು. ಕಾನೂನು ಬಾಹಿರವಾಗಿ ಠಿಕಾಣಿ ಹೂಡಿದ್ದ ‘ಆಝಾದ್ ಭಾರತ್ ವೈದಿಕ್ ವೈಚಾರಿಕ್ ಕ್ರಾಂತಿ ಸತ್ಯಾಗ್ರಹ’ ಹೆಸರಿನ ಧಾರ್ಮಿಕ ಗುಂಪಿನ ಸದಸ್ಯರು ಹಾಗೂ ಪೊಲೀಸರ ನಡುವೆ ಘರ್ಷಣೆ ವಿಕೋಪಕ್ಕೆ ತಿರುಗಿತು.

ಘಟನೆ ಕುರಿತು ಸುದ್ದಿಸಂಸ್ಥೆ ಎಎನ್ಐಗೆ ಪ್ರತಿಕ್ರಿಯೆ ನೀಡಿದ ಹಿರಿಯ ಪೊಲೀಸ್ ಅಧಿಕಾರಿ ದಲ್ಜೀತ್ ಸಿಂಗ್, “ಇಬ್ಬರು ಪೊಲೀಸರು ಹಾಗೂ 12 ಮಂದಿ ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ಪೊಲೀಸರ ಮೇಲೆ ದಾಳಿ ನಡೆಸಿದವರನ್ನು ಗುರುತಿಸಲಾಗಿದೆ. ಸದ್ಯದಲ್ಲಿಯೇ ಬಂಧಿಸಲಾಗುವುದು,” ಎಂದರು. ಸದ್ಯ ಧಾರ್ಮಿಕ ಗುಂಪಿನ ಪ್ರಮುಖರು ತಲೆ ಮರೆಸಿಕೊಂಡಿದ್ದಾರೆ.

ಪ್ರತಿಭಟನೆ ಆರಂಭವಾಗುತ್ತಿದ್ದಂತೆ ಕಲ್ಲುಗಳನ್ನು ತೂರಲಾಯಿತು. ಜತೆಗೆ, ಬಂದೂಕಿನಿಂದ ಪೊಲೀಸರ ಮೇಲೆ ಗುಂಡು ಹಾರಿಸಲಾಯಿತು. ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಪೊಲೀಸರೂ ಗುಂಡು ಹಾರಿಸಿದರು ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ.

“ಸ್ಥಳದಲ್ಲಿ ನಾಡ ಬಂದೂಕುಗಳು, ಪಿಸ್ತೂಲ್ ಹಾಗೂ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ,” ಎಂದು ಪೊಲೀಸರು ಹೇಳಿದ್ದಾರೆ. ಗ್ರೆನೇಡ್ಗಳೂ ಸಿಕ್ಕಿವೆ ಎಂದು ಕೆಲವು ವರದಿಗಳು ಹೇಳುತ್ತಿವೆ.

ಸ್ಥಳದಲ್ಲೀಗ ಬಿಗುವಿನ ವಾತಾವರಣ ಇದೆ. ಹೆಚ್ಚಿನ ಪೊಲೀಸ್ ಪಡೆಗಳನ್ನು ಕರೆಸಿಕೊಳ್ಳಲಾಗಿದೆ.

ಏನಿದರ ಹಿನ್ನೆಲೆ: 

ಸತ್ಯಾಗ್ರಹಿಗಳು ಎಂದು ಹೇಳಿಕೊಂಡ ಧಾರ್ಮಿಕ ಗುಂಪು ಸುಮಾರು 260 ಎಕರೆ ಪ್ರದೇಶದ ಉದ್ಯಾನವನದಲ್ಲಿ ವಾಸಿಸಲು ಶುರುಮಾಡಿತ್ತು. 3 ಸಾವಿರಕ್ಕೂ ಹೆಚ್ಚಿನ ಸಂಖ್ಯೆಲ್ಲಿದ್ದ ಭಕ್ತರು ಇಲ್ಲಿ ಠಿಕಾಣಿ ಹೂಡಿದ್ದರು. ಇದನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ, ಉದ್ಯಾನವನವನ್ನು ತೆರವುಗೊಳಿಸುವಂತೆ ಆದೇಶ ನೀಡಿತ್ತು.

ಈ ಹಿನ್ನೆಲೆಯಲ್ಲಿ ಗುರುವಾರ ಸಂಜೆ ವೇಳೆಗೆ ಸ್ಥಳಕ್ಕೆ ಪೊಲೀಸರು ತೆರಳಿದ ಸಮಯದಲ್ಲಿ ಧಾರ್ಮಿಕ ಗುಂಪಿನ ಅನುಯಾಯಿಗಳು ಕಲ್ಲುಗಳನ್ನು ತೂರಲು ಶುರು ಮಾಡಿದ್ದರು. ಜತೆಗೆ ನಾಡ ಬಂದೂಕಿನಿಂದ ಗುಂಡು ಹಾರಿಸಿದ್ದರು.

ಘಟನೆ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತನಿಖೆಗೆ ಆದೇಶಿಸಿದ್ದಾರೆ.

Top