An unconventional News Portal.

‘ಪ್ರಥಮ ಚುಂಬನ…’: ತಾನೇ ತೋಡಿದ ಖೆಡ್ಡಾಕ್ಕೆ ಎಡವಿ ಬಿದ್ದ ಸುದ್ದಿ ವಾಹಿನಿ!

‘ಪ್ರಥಮ ಚುಂಬನ…’: ತಾನೇ ತೋಡಿದ ಖೆಡ್ಡಾಕ್ಕೆ ಎಡವಿ ಬಿದ್ದ ಸುದ್ದಿ ವಾಹಿನಿ!

ಕಿಕ್ಕಿರಿದು ತುಂಬಿರುವ ಭಾರತದ ಸುದ್ದಿ ವಾಹಿನಿಗಳ ಮಾರುಕಟ್ಟೆಗೆ ಹೊಸತಾಗಿ ಲಗ್ಗೆ ಇಡುವುದು ಸುಲಭದ ಮಾತಲ್ಲ. ಬೇರೂರಿರುವ ಚಾನಲ್‌ಗಳ ನಡುವೆ ಹೊಸ ಚಾನಲ್‌ ‘ಲಾಂಚ್‌’ ಮಾಡಿ, ಅದಕ್ಕೊಂದು ‘ಬ್ರಾಂಡ್‌ ನೇಮ್’ ತಂದುಕೊಟ್ಟು, ಜನ ನೋಡುವಂತೆ ಮಾಡಿ, ಟಿಆರ್‌ಪಿ ಗಳಿಸುವುದು ಸಾಹಸದ ಕೆಲಸ. ಇಂತಹದೊಂದು ಸಾಹಸಕ್ಕೆ ಅಣಿಯಾದ ಕೇರಳದ ಹೊಸ ಸುದ್ದಿ ವಾಹಿನಿಯೊಂದು ತನ್ನ ಮೊದಲ ಸ್ಟೋರಿಯ ಕಾರಣಕ್ಕೆ ನ್ಯಾಯಾಂಗ ತನಿಖೆಯನ್ನು ಮೈಮೇಲೆ ಎಳೆದುಕೊಂಡಿದೆ. ಆರಂಭಗೊಂಡ 24 ಗಂಟೆಗಳ ಒಳಗೆ ಕ್ಷಮಾಪಣೆ ಕೋರಿದೆ. ಈ ಮೂಲಕ ಭಾರತದ ಸುದ್ದಿ ವಾಹಿನಿಗಳ ಮೇಲಿರುವ ಮಾರುಕಟ್ಟೆಯ ಒತ್ತಡ ಮತ್ತು ಪತ್ರಿಕೋದ್ಯಮದ ನೈತಿಕ ಚೌಕಟ್ಟುಗಳ ಬಿರುಕುಗಳು ಮತ್ತೊಮ್ಮೆ ಅನಾವರಣಗೊಂಡಂತಾಗಿದೆ.

ನಡೆದಿದ್ದೇನು?:

ಕೇರಳದಲ್ಲಿ ಹಲವು ಸುದ್ದಿ ವಾಹಿನಿಗಳು ಕಾರ್ಯ ನಿರ್ವಹಿಸುತ್ತಿವೆ. ಇದರ ನಡುವೆ ಕೆಲವು ದಿನಗಳ ಹಿಂದೆ ‘ಮಂಗಳಂ ನ್ಯೂಸ್’ ಎಂಬ ಹೊಸ ವಾಹಿನಿಯೊಂದು ಸದ್ದು ಮಾಡಿತು. ಇದರ ‘ಲಾಂಚಿಂಗ್‌’ಗೆ ಮುನ್ನ ಪತ್ರಿಕೆಗಳಲ್ಲಿ ‘ಶಾಕಿಂಗ್‌’ ಆಗಿರುವ ಸ್ಟೋರಿಯೊಂದನ್ನು ನೀಡುತ್ತೇವೆ ಎಂದು ಜಾಹೀರಾತನ್ನು ನೀಡಿತ್ತು. ಸಹಜವಾಗಿಯೇ ಎಲ್ಲರ ಕುತೂಹಲ ಕಣ್ಣು ಹೊಸ ವಾಹಿನಿ ಕಡೆಗೆ ನೆಟ್ಟಿತ್ತು.

ವಾಹಿನಿ ತನ್ನ ಮೊದಲ ದಿನವೇ ರಾಜ್ಯದ ಎಡರಂಗ ಸರಕಾರದಲ್ಲಿ ಸಚಿವರಾಗಿರುವ ಕಾಂಗ್ರೆಸ್ ಪಕ್ಷದ ನಾಯಕ, ಸಾರಿಗೆ ಸಚಿವ ಎ. ಕೆ. ಸಸೀಂದ್ರನ್‌ ಅವರ ಮಹಿಳೆಯೊಂದಿಗಿನ ಉದ್ರೇಕಕಾರಿ ದೂರವಾಣಿ ಸಂಭಾಷಣೆಯನ್ನು ಭಿತ್ತರಿಸಿತು. ‘ಆ ಮಹಿಳೆ ಸಚಿವರ ಬಳಿ ಸಹಾಯ ಕೋರಿ ಹೋಗಿದ್ದರು’ ಎಂದು ವಾಹಿನಿ ಹೇಳಿಕೊಂಡಿತ್ತು. ಸುದ್ದಿ ಭಿತ್ತರವಾಗುತ್ತಿದ್ದಂತೆ ಕೊಂಚ ಮಾನ ಮರ್ಯಾದೆಗಳನ್ನು, ನೈತಿಕತೆಯನ್ನು ಉಳಿಸಿಕೊಂಡಿರುವ ಕೇರಳ ರಾಜಕಾರಣದಲ್ಲಿ ಸಂಚಲನ ಮೂಡಿತು. ಸುದ್ದಿ ಭಿತ್ತರವಾದ ಕೆಲವೇ ಗಂಟೆಗಳಲ್ಲಿ ನೈತಿಕತೆಯ ಆಧಾರದ ಮೇಲೆ ಸಸೀಂದ್ರನ್ ರಾಜೀನಾಮೆ ನೀಡಿದರು.  ಪಿಣರಾಯಿ ವಿಜಯನ್ ಸರಕಾರ ಪ್ರಕರಣದ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿತು.

ಉಲ್ಟಾ ಹೊಡೆದ ಚಾನಲ್:

ಸರಕಾರ ಯಾವಾಗ ನ್ಯಾಯಾಂಗ ತನಿಖೆಗೆ ಆದೇಶ ನೀಡಿತೋ, ವಾಹಿನಿಯ ವರಸೆ ಬದಲಾಯಿತು. ಅದು ಭಿತ್ತರಿಸಿದ ಸುದ್ದಿಯಲ್ಲಿ ಕೆಲಸ ಲೋಪಗಳಿದ್ದವು. ಸಚಿವರ ಧ್ವನಿಯನ್ನು ಜನರಿಗೆ ಕೇಳಿದ್ದ ವಾಹಿನಿ, ಮಹಿಳೆಯ ಧ್ವನಿಯನ್ನು ‘ಮ್ಯೂಟ್’ ಮಾಡಿತ್ತು. ಇದು ಆಕೆಯ ಖಾಸಗೀತನದ ರಕ್ಷಣೆ ಎಂದು ವಾಹಿನಿ ಹೇಳಿತ್ತಾದರೂ, ಅಸಲಿಗೆ ವಿಚಾರ ಬೇರೆಯದ್ದೇ ಆಗಿತ್ತು.

“ನಾವು ಸಚಿವರ ಸಂಬಂಧಪಟ್ಟ ಸ್ಟೋರಿಗೆ ಸಂಬಂಧಿಸಿದಂತೆ ಕೆಲವೊಂದು ತಪ್ಪುಗಳನ್ನು ಮಾಡಿದ್ದೇವೆ,” ಎಂದು ಮಂಗಳಂ ನ್ಯೂಸ್ ಸಿಇಓ ಪ್ರಕಟಣೆಯೊಂದನ್ನು ನೀಡಿದರು. ವರದಿಯೊಂದು ‘ಸ್ಟಿಂಗ್ ಆಪರೇಷನ್’ (ರಹಸ್ಯ ಕಾರ್ಯಾಚರಣೆ)ಯಾಗಿತ್ತು ಎಂದು ಒಪ್ಪಿಕೊಂಡಿತು. “ಸಚಿವರ ಮೇಲೆ ರಹಸ್ಯ ಕಾರ್ಯಾಚರಣೆ ನಡೆಸಲು ಎಂಟು ಜನ ಹಿರಿಯ ಪತ್ರಕರ್ತರ ಸಂಪಾದಕೀಯ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಅದರಲ್ಲಿ ನಮ್ಮ ಮಹಿಳಾ ಪತ್ರಕರ್ತೆಯೊಬ್ಬರು ಸ್ವಯಂಪ್ರೇರಕರಾಗಿ ಮುಂದೆ ಬಂದಿದ್ದರು. ಅವರನ್ನು ಸಚಿವರ ಬಳಿ ಕಳುಹಿಸಲಾಗಿತ್ತು. ಈ ತಪ್ಪನ್ನು ವಾಹಿನಿ ಪುನರಾವರ್ತನೆ ಮಾಡುವುದಿಲ್ಲ,” ಎಂದು ಕುಮಾರ್‌ ಪ್ರಕಟಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಇದು ನ್ಯಾಯಾಂಗ ತನಿಖೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ಹೊರಬಂದ ಹೇಳಿಕೆ ಎಂಬ ಟೀಕೆಗಳೀಗ ವ್ಯಕ್ತವಾಗುತ್ತಿವೆ.

ತಪ್ಪೊಪ್ಪಿಗೆ ಆಚೆಗೆ: 

ಸದ್ಯ ವಾಹಿನಿ ತನ್ನಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡಿದೆ. ಆದರೆ ವ್ಯಕ್ತಿಯೊಬ್ಬರ ತೇಜೋವಧೆ ಮಾಡುವಂತಹ ವರದಿಯನ್ನು ಭಿತ್ತರಿಸುವ ಮುನ್ನ ಅದು ನೀಡಿದ ‘ಹೈಪ್’ ಗಮನ ಸೆಳೆಯುವಂತಿದೆ. ‘ಈ ಸುದ್ದಿಯನ್ನು ಭಿತ್ತರಿಸುವ ಮುನ್ನ ನಿಮ್ಮ ಮಕ್ಕಳನ್ನು ಟಿವಿ ಸೆಟ್‌ನಿಂದ ದೂರ ಇಡಿ. ಇದು ರಾಜ್ಯದ ಸಚಿವರೊಬ್ಬರು ತಮ್ಮ ಕಚೇರಿಯನ್ನು ದುರ್ಬಳಿಕೆ ಮಾಡಿಕೊಂಡ ಪ್ರಕರಣ’ ಅಂತೆಲ್ಲಾ ಹೇಳಿಕೊಂಡಿತ್ತು.

mangalam-1

ಆದರೆ ಸುದ್ದಿ ಭಿತ್ತರವಾಗುತ್ತಿದ್ದಂತೆ ಸಚಿವರ ಧ್ವನಿ ಮಾತ್ರವೇ ವೀಕ್ಷಕರಿಗೆ ಕೇಳಿಸಲಾಗಿತ್ತು. ಜತೆಗೆ, ಸುದ್ದಿಯ ಆಳಕ್ಕಿಂತ ಜಾಸ್ತಿ ಅದಕ್ಕೆ ನೀಡಿದ್ದ ‘ಹೈಪ್‌’ ಬಗ್ಗೆ ಅನೇಕ ಹಿರಿಯ ಪತ್ರಕರ್ತರು ಮತ್ತು ಮಾಧ್ಯಮ ವಿಶ್ಲೇಷಕರು ಅನುಮಾನ ವ್ಯಕ್ತಪಡಿಸಿದ್ದರು. “ಮಂಗಳಂ ವಾಹಿನಿ ಮಲೆಯಾಳಂ ಪತ್ರಿಕೋದ್ಯಮದ ದುರಂತ,” ಎಂದು ಮಾತೃಭೂಮಿ ವಾರಪತ್ರಿಕೆಯ ಮನಿಲಾ ಸಿ ಮೋಹನ್‌ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಮಲೆಯಾಳಂ ಪತ್ರಿಕೋದ್ಯಮವನ್ನು ಸುದ್ದಿಯಿಂದ, ಅಶ್ಲೀಲ ಸುದ್ದಿಗೆ ಬದಲಾಯಿಸಲಾಯಿತು ಎಂದವರು ಮರುಕ ವ್ಯಕ್ತಪಡಿಸಿದ್ದಾರೆ.

“ಸುದ್ದಿ ವಾಹಿನಿ ಎಂದರೆ ಟಿಆರ್‌ಪಿ (ಟಿಲಿವಿಜನ್ ರೇಟಿಂಗ್ ಪಾಯಿಂಟ್) ಅಷ್ಟೆ. ಒಂದು ಟಿಆರ್‌ಪಿ ಬಂದರೆ 2 ಸಾವಿರ ಜಾಹೀರಾತು ದರ ನಿಗದಿಯಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿಯೇ ಎಲ್ಲರೂ ಟಿಆರ್‌ಪಿಗಾಗಿ ಕೆಲಸ ಮಾಡಬೇಕಾಗುತ್ತದೆ. ಅದರಲ್ಲೂ ಮಾರುಕಟ್ಟೆ ಕಿಕ್ಕಿರಿದು ತುಂಬಿರುವಾಗ ಹೊಸ ವಾಹಿನಿಗಳು ಜನರ ಗಮನ ಸೆಳೆಯಲು ಎಲ್ಲಾ ಗಿಮಿಕ್‌ಗಳನ್ನೂ ಮಾಡಬೇಕಾಗುತ್ತದೆ. ಹಳೆಯ ವಾಹಿನಿಗಳು ಗಿಮಿಕ್‌ಗಳನ್ನು ಮುಂದುವರಿಸಬೇಕಾಗುತ್ತದೆ. ಮಂಗಳಂ ನ್ಯೂಸ್ ವಿಚಾರದಲ್ಲಿ ನಡೆದಿರುವುದು ಕೂಡ ಇದೆ,” ಎನ್ನುತ್ತಾರೆ ಕರ್ನಾಟಕದ ಸುದ್ದಿವಾಹಿನಿಯೊಂದರ ವರದಿಗಾರರು.

ಸದ್ಯ ‘ಮಂಗಳಂ ನ್ಯೂಸ್’ ತನ್ನ ಮೊದಲ ಹೆಜ್ಜೆಯಲ್ಲಿಯೇ ಎಡವಿ ಬೀಳುವ ಮೂಲಕ ಟಿವಿ ಪತ್ರಿಕೋದ್ಯಮಕ್ಕೆ ನೈತಿಕ ಚೌಕಟ್ಟುಗಳನ್ನು ಮೀರಿದರೆ ಏನಾಗುತ್ತದೆ ಎಂಬ ಪಾಠ ಹೇಳಿದೆ.

 

Leave a comment

Top