An unconventional News Portal.

ವಿಜಯ್ ಮಲ್ಯ ಪ್ರಕರಣದಲ್ಲಿ ಉತ್ತರ ಇಲ್ಲದ ಪ್ರಶ್ನೆಗಳು ಹಾಗೂ ಸಾಲ ವಸೂಲಾತಿ ‘ಸರ್ಕಸ್’!

ವಿಜಯ್ ಮಲ್ಯ ಪ್ರಕರಣದಲ್ಲಿ ಉತ್ತರ ಇಲ್ಲದ ಪ್ರಶ್ನೆಗಳು ಹಾಗೂ ಸಾಲ ವಸೂಲಾತಿ ‘ಸರ್ಕಸ್’!

ಬೆಂಗಳೂರು ಮೂಲದ ಉದ್ಯಮಿ ವಿಜಯ್ ಮಲ್ಯ ಪಾಸ್ಪೋರ್ಟ್ ನಾಲ್ಕು ವಾರಗಳ ಕಾಲ ಅಮಾನತು ಮಾಡುವ ಮೂಲಕ ಶುಕ್ರವಾರ ಸಾಲ ವಸೂಲಾತಿ ವಿಚಾರದಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದೆ.

SBI ನೇತೃತ್ವದಲ್ಲಿ ಉದ್ಯಮಿ ಮಲ್ಯ ವಿರುದ್ಧ ಕಾನೂನಿನ ಹೋರಾಟಕ್ಕೆ ಇಳಿದಿರುವ ಬ್ಯಾಂಕುಗಳ ಒಕ್ಕೂಟಕ್ಕೆ ಇದು ಆರಂಭಿಕ ಜಯ ಎಂದು ಬಣ್ಣಿಸಲಾಗುತ್ತಿದೆ. ಡಿಪ್ಲೊಮ್ಯಾಟಿಕ್ ಪಾಸ್ಪೋರ್ಟ್ ಅಮಾನತು ಮಾಡಿರುವ ವಿದೇಶಾಂಗ ಇಲಾಖೆ, ಈ ಕುರಿತು ಸಮಜಾಯಿಷಿ ನೀಡಿಲು ಒಂದು ವಾರಗಳ ಗಡುವು ನೀಡಿದೆ. ಈ ಕುರಿತು ಮಲ್ಯ ನೀಡುವ ಪ್ರತಿಕ್ರಿಯೆ ಆಧಾರದ ಮೇಲೆ ಪಾಸ್ಪೋರ್ಟ್ ರದ್ಧು ಮಾಡುವ ನಿರ್ಧಾರ ಹೊರಬೀಳಲಿದೆ. ಇಷ್ಟಕ್ಕೂ, ಒಂದು ತಿಂಗಳಿನಿಂದ ನಡೆಯುತ್ತಿರುವ ಸಾಲ ವಸೂಲಾತಿ ಪ್ರಕ್ರಿಯೆಗಳು ಹಾಗೂ ಅವರ ಸುತ್ತಮುತ್ತ ನಡೆಯುತ್ತಿರುವ ವಿಚಾರಗಳಲ್ಲಿ ಯಾರಿಗೆ ಲಾಭ? ಯಾರಿಗೆ ನಷ್ಟ? ನಿಜಕ್ಕೂ ಮಲ್ಯ ಬಾಕಿ ಉಳಿಸಿಕೊಂಡಿರುವ 9 ಸಾವಿರ ಕೋಟಿ ಸಾಲ ವಾಪಾಸ್ ಬರುತ್ತಾ? ಎಂಬ ಪ್ರಶ್ನೆಗಳಿವೆ. ಈ ಕುರಿತು ಮಲ್ಯ ಪಾಸ್ಪೋರ್ಟ್ ಸುದ್ದಿಯಾಚೆಗೆ ಇರುವ ಒಳನೋಟಗಳನ್ನು ‘ಸಮಾಚಾರ’ ನೀಡುವ ಪ್ರಯತ್ನ ಮಾಡಲಿದೆ.

ಹಿನ್ನೆಲೆ:

ತಂದೆ ವಿಠಲ್ ಮಲ್ಯ ಬೆಂಗಳೂರಿನಲ್ಲಿ ಕಟ್ಟಿದ್ದ ಮದ್ಯದ ಸಾಮ್ರಾಜ್ಯವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು, ಬಹು ಕೋಟಿ ಉದ್ಯಮವನ್ನಾಗಿ ಪರಿವರ್ತನೆ ಮಾಡಿದ್ದು ವಿಜಯ ಮಲ್ಯ. ಮದ್ಯದ ಉದ್ಯಮದ ಆಚೆಗೆ, ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡು ಬಂದ ಮಲ್ಯ, ವಿದೇಶಗಳಲ್ಲೂ ಕೋಟ್ಯಾಂತರ ರೂಪಾಯಿಯ ದೊಡ್ಡ ಉದ್ಯಮವನ್ನೇ ಕಟ್ಟಿ ಬೆಳೆಸಿದವರು. ಇಂತಹ ಮಲ್ಯ ‘ಕಿಂಗ್ ಫಿಷರ್ ಏರ್ ಲೈನ್ಸ್’ ಹೆಸರಿನಲ್ಲಿ ವಿಮಾನಯಾನ ಸಂಸ್ಥೆಯನ್ನು ಹುಟ್ಟು ಹಾಕಿದಾಗ ಸಾಲ ನೀಡಲು ಬ್ಯಾಂಕ್ಗಳು ಮುಂದೆ ಬಂದವು. ಅದು ಹೆಚ್ಚು ಕಡಿಮೆ 9 ಸಾವಿರ ಕೋಟಿ ರೂಪಾಯಿಗಳ ವ್ಯವಹಾರ. ಮೂರು ವರ್ಷಗಳ ಹಿಂದೆ ‘ಕಿಂಗ್ ಫಿಶರ್ ಏರ್ಲೈನ್ಸ್’ ತನ್ನ ರೆಕ್ಕೆಗಳನ್ನು ಕಳೆದುಕೊಂಡಿತು. ನಿಧಾನವಾಗಿ ವಿಮಾನಯಾನ ಸಂಸ್ಥೆ ತನ್ನ ಹಾರಾಟವನ್ನು ನಿಲ್ಲಿಸಿತು. ಈ ಸಮಯದಲ್ಲಿ ಸಂಸ್ಥೆಯ ವ್ಯವಹಾರವನ್ನು ನಿಂತು ಹೋಯಿತು ಎಂಬುದು ಬ್ಯಾಂಕ್ಗಳಿಗೂ ಅರ್ಥವಾಯಿತು. ಕೊನೆಗೆ, ಕಳೆದ ವರ್ಷ ಮಲ್ಯ ಸಾಲ ನೀಡಿದ್ದ ಬ್ಯಾಂಕ್ಗಳಲ್ಲಿ ದಿವಾಳಿಯಾಗಿರುವುದಾಗಿ ಅಫಿಡವಿಟ್ ಸಲ್ಲಿಸಿದರು.

ಹಾಗಿದ್ದೂ, ವಿಮಾನಯಾನ ಕ್ಷೇತ್ರವೊಂದನ್ನು ಬಿಟ್ಟು, ಮಲ್ಯ ಉಳಿದ ಉದ್ಯಮಗಳನ್ನು ಮುನ್ನೆಡೆಸಿಕೊಂಡೇ ಬಂದರು. ಇದೇ ವೇಳೆ, RBI ಎಲ್ಲಾ ಬ್ಯಾಂಕ್ಗಳಿಗೆ (ಪಿಎಸ್ಯು)ಗಳಿಗೆ ತಾವು ನೀಡಿರುವ, ಚಲಾವಣೆಗೆ ಸಿಗದ ಸಾಲವನ್ನು ಪಟ್ಟಿ ಮಾಡಬೇಕು ಎಂದು ಸೂಚನೆ ನೀಡಿತು. ಹೀಗಾಗಿ, 4. 4 ಲಕ್ಷ ಕೋಟಿ ಸಾಲ ಪಡೆದು ವಾಪಾಸ್ ಕಟ್ಟದೆ ಉಳಿಸಿಕೊಂಡಿರುವ ಉದ್ಯಮಿಗಳ ದೊಡ್ಡ ಪಟ್ಟಿಯೊಂದು ಹೊರಬಿತ್ತು. ಇದರಲ್ಲಿ ಮಲ್ಯ ಪಾಲು 9 ಸಾವಿರ ಕೋಟಿ.

ಮುಂದೇನು?

ಮಲ್ಯ ವಿರುದ್ಧ ಬ್ಯಾಂಕ್ಗಳು ನ್ಯಾಯಾಲಯದ ಮೆಟ್ಟಿಲೇರಿದವು. ವಿಚಾರ ಗಂಭೀರವಾಗುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಮಲ್ಯ ಮಾ. 2 ರಂದು ದೇಶ ಬಿಟ್ಟು ಹೋದರು. ಸದ್ಯ ಲಂಡನ್ನಲ್ಲಿ ಇದ್ದಾರೆ ಎಂಬುದು ಗುಮಾನಿ. ವಿಚಾರಣೆ ಭಾಗವಾಗಿ ಇದೀಗ ಮಲ್ಯಗೆ ನೀಡಿದ್ದ ರಾಜಭಾರಿ ಪಾಸ್ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವ ನಿಟ್ಟಿನಲ್ಲಿ ಪ್ರಕ್ರಿಯೆ ಶುರುವಾಗಿದೆ. ಒಂದು ವೇಳೆ, ಮಲ್ಯ ಕಡೆಯಿಂದ ಸಕಾರಾತ್ಮ ಪ್ರತಿಕ್ರಿಯೆ ಬಾರದಿದ್ದರೆ, ಪಾಸ್ಪೋರ್ಟ್ ರದ್ಧಾಗುತ್ತದೆ.

ಹೀಗಾದರೆ, ಮಲ್ಯ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ, ಭಾರತಕ್ಕೆ ಬೇಕಾದ ಆರೋಪಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುತ್ತಾರೆ. ಅವರನ್ನು ಹಸ್ತಾಂತರಿಸುವಂತೆ ಭಾರತ ಸದರಿ ದೇಶಕ್ಕೆ ಮನವಿ ಸಲ್ಲಿಸಬಹುದು. ಆದರೆ ಇದು ಸಮಯ ಮತ್ತು ಹಣವನ್ನು ಬೇಡುವ ವ್ಯರ್ಥ ಪ್ರಕ್ರಿಯೆ ಎನ್ನುತ್ತಾರೆ ವಕೀಲ ಮಜೀದ್ ಮೆಮನ್.

ಶುಕ್ರವಾರ CNBC ಚಾನಲ್ಗೆ ಮಾತನಾಡಿದ ಅವರು, “ಮಲ್ಯ ಬಳಿ ಹಣ ಇದೆ. ಲಂಡನ್ನಲ್ಲಿ ಮಾನವ ಹಕ್ಕುಗಳ ಬಿಗಿಯಾಗಿವೆ. ಹೀಗಾಗಿ, ಭಾರತದಿಂದ ತನಗೆ ತೊಂದರೆಯಾಗುತ್ತಿದೆ ಎಂದು ದೂರು ನೀಡಿದರೆ ಅಲ್ಲಿ ಆಶ್ರಯವೂ ಸಿಗಬಹುದು. ಅದನ್ನು ಪಡೆದುಕೊಳ್ಳುವ ಶಕ್ತಿ ಹಾಗೂ ಸಾಧ್ಯತೆ ಎಲ್ಲವೂ ಮಲ್ಯಗೆ ಇದೆ,” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಉದ್ಯಮಿ ಅಂತ್ಯ:

ಆದರೆ, ಒಬ್ಬ ಉದ್ಯಮಿಯಾಗಿ ನಾನಾ ದೇಶಗಳಲ್ಲಿ ತಮ್ಮ ವ್ಯವಹಾರವನ್ನು ಮುನ್ನಡೆಸುತ್ತಿರುವ ಮಲ್ಯಗೆ ಇದು ಸಮಸ್ಯೆಯಾಗಬಲ್ಲದು ಎಂಬುದು ‘ಫಸ್ಟ್ ಪೋಸ್ಟ್’ನ ಅಂಕಣದಲ್ಲಿ ದಿನೇಶ್ ಉನ್ನಿಕೃಷ್ಣನ್ ಪ್ರತಿಪಾದಿಸುತ್ತಾರೆ. ಒಂದು ದೇಶಕ್ಕೆ ಬೇಕಾದ, ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿ ಎಂದು ಗುರುತಿಸಿಕೊಂಡರೆ, ಜಗತ್ತಿನ ಯಾವ ದೇಶದ ಬ್ಯಾಂಕ್ ಹಾಗೂ ಉದ್ಯಮಿಗಳು ಮಲ್ಯ ನಂಬುವುದು ಕಷ್ಟ ಎಂಬುದು ಅವರ ವಾದ. ಹೀಗಾದರೆ, ಮಲ್ಯ ಉದ್ಯಮಿಯಾಗಿ ಅಂತ್ಯವಾಗಬಹುದು.

ಹಣ ವಾಪಸಾತಿ ಸಾಧ್ಯತೆಗಳು:

ಈ ಸಮಯದಲ್ಲಿ ಇರುವ ಪ್ರಮುಖ ಪ್ರಶ್ನೆ, ಮಲ್ಯಗೆ ನೀಡಿದ ಸಾಲ ವಾಪಾಸ್ ಬರುತ್ತಾ? ಈಗಾಗಲೇ ಮಲ್ಯ 4 ಸಾವಿರ ಕೋಟಿ ಹಣವನ್ನು ಕೊಡಬಲ್ಲೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ ಇದನ್ನು ಬ್ಯಾಂಕ್ ಒಕ್ಕೂಟ ಒಪ್ಪುತ್ತಿಲ್ಲ ಎಂಬುದಕ್ಕಿಂತ ನಂಬುತ್ತಿಲ್ಲ. ಹೀಗಿರುವಾಗ, ಮಲ್ಯ ಈ ದೇಶದ ಸಹವಾಸವೇ ಬೇಡ ಎಂದು ತಲೆ ಮರೆಸಿಕೊಂಡರೆ 9 ಸಾವಿರ ಕೋಟಿ ಕತೆ ಏನಾಗಬಹುದು?

ಇವತ್ತಿನ ಆರ್ಥಿಕ ವ್ಯವಸ್ಥೆಯಲ್ಲಿ ಜಗತ್ತಿನ ಎಲ್ಲಾ ಬ್ಯಾಂಕ್ಗಳ ನಡುವೆ ಸಂಪರ್ಕಕೊಂಡಿಗಳು ಇವೆ. ಇದರಿಂದ ಮಲ್ಯ ಎಲ್ಲೇ ಹೋದರೂ ಹಣ ವಸೂಲಿ ಮಾಡುವುದು ಕಷ್ಟವೇನಲ್ಲ ಎಂಬ ಅಭಿಪ್ರಾಯವನ್ನು ಹಿರಿಯ ವಕೀಲ ಸೋಲಿ ಸರಾಬ್ಜಿ ವ್ಯಕ್ತಪಡಿಸುತ್ತಾರೆ. ಆದರೆ ವಕೀಲ ಮೆಮನ್ ಹೇಳಿದ ಹಾಗೆ, ಇದೊಂದು ಸಮಯ ಹಾಗೂ ಹಣವನ್ನು ಬೇಡುವ ಪ್ರಕ್ರಿಯೆ.

ಇವೆಲ್ಲದರ ಆಚೆಗೆ, ವರ್ಷದ ಹಿಂದೆಯೇ ದಿವಾಳಿಯಾದೆ ಎಂದು ಘೋಷಿಸಿದ್ದ ಮಲ್ಯ ದೇಶ ಬಿಟ್ಟು ಹೋಗುವವರೆಗೂ ಸಾಲ ವಸೂಲಿಗೆ ಕಾದಿದ್ದು ಯಾಕೆ? ಆತ ಇಂತಹದೊಂದು ನಡೆ ಇಡಬಹುದು ಎಂದು ನಿರೀಕ್ಷೆ ಸಂಬಂಧಪಟ್ಟವರಿಗೆ ಇರಲಿಲ್ಲವಾ? ಇವರಿಗೆ ನಿಜಕ್ಕೂ ಸಾಲ ವಸೂಲು ಮಾಡಬೇಕು ಎಂಬ ಇಚ್ಚಾಶಕ್ತಿ ಇದೆಯಾ? ಇವು ಉತ್ತರ ಸಿಗದೇ ಉಳಿಯುವ ಪ್ರಶ್ನೆಗಳು.

 

Top