An unconventional News Portal.

ವಿಜಯ್ ಮಲ್ಯ: ಸೂಕ್ತ ಪ್ರಮಾಣ ಪತ್ರವಿಲ್ಲದೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿ!

ವಿಜಯ್ ಮಲ್ಯ: ಸೂಕ್ತ ಪ್ರಮಾಣ ಪತ್ರವಿಲ್ಲದೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿ!

ಬೆಂಗಳೂರು ಮೂಲದ ಉದ್ಯಮಿ ವಿಜಯ್ ಮಲ್ಯ ಪಾಸ್ಪೋರ್ಟ್ ರದ್ಧುಗೊಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಈ ಸಂಬಂಧ ಭಾನುವಾರ ಟ್ವೀಟ್ ಮಾಡಿರುವ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್, “ಮಲ್ಯ ಕಡೆಯಿಂದ ಬಂದ ಪ್ರತಿಕ್ರಿಯೆ, ಅವರ ಮೇಲಿರುವ ಜಾಮೀನು ರಹಿತ ವಾರೆಂಟ್ ಹಾಗೂ ಜಾರಿ ನಿರ್ದೇಶನಾಲಯದ ಮಾಹಿತಿ ಇಟ್ಟುಕೊಂಡು ಕಾನೂನಿನ ಅಡಿಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ,” ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಈ ಮೂಲಕ, ಸದ್ಯ ಲಂಡನ್ ಹೊರವಲಯದಲ್ಲಿ ನೆಲೆಸಿದ್ದಾರೆ ಎಂದು ನಂಬಿರುವ ವಿಜಯ್ ಮಲ್ಯ ವಿರುದ್ಧ ಕಾನೂನಿನ ಕುಣಿಕೆ ಇನ್ನಷ್ಟು ಬಿಗಿಯಾದಂತಾಗಿದೆ.

ಈಗಾಗಲೇ ಬ್ರಿಟನ್ ಸರಕಾರದ ಜತೆ ಮಲ್ಯ ಗಡೀಪಾರಿಗೆ ಮಾತುಗಳು ಶುರುವಾಗಿವೆ. ಜಾರಿ ನಿರ್ದೇಶನಾಲಯ ಮುಂಬೈ ನ್ಯಾಯಾಲಯ ನೀಡಿದ್ದ ಜಾಮೀನು ರಹಿತ ವಾರೆಂಟ್ ಇಟ್ಟುಕೊಂಡು ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿತ್ತು. ರಾಜ್ಯ ಸಭಾ ಸದಸ್ಯರೂ ಆಗಿರುವ ಮಲ್ಯ ಅವರ ಪಾಸ್ಪೋರ್ಟ್ ರದ್ಧುಗೊಳಿಸುವಂತೆ ಕೋರಿತ್ತು. ಕಳೆದ ವಾರ ಸಚಿವಾಲ, ಮಲ್ಯ ಪಾಸ್ಪೋರ್ಟ್ಗೆ ತಾತ್ಕಾಲಿಕ ತಡೆ ನೀಡಿ, ಸಮನ್ಸ್ ಜಾರಿ ಮಾಡಿತ್ತು.

ಇನ್ನೊಂದೆಡೆ, ಜಾರಿ ನಿರ್ದೇಶನಾಲಯ ಸಿಬಿಐ ಮೂಲಕ ಮಲ್ಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಸಿದ್ಧತೆ ಮಾಡಿಕೊಂಡಿದೆ.

ಭಾರತದ ಹಲವು ಬ್ಯಾಂಕ್ಗಳಲ್ಲಿ ಸುಮಾರು 9 ಸಾವಿರ ಕೋಟಿ ಸಾಲ ಮಾಡಿದ್ದ ಮಲ್ಯ ವಿರುದ್ಧ ಎಸ್ಬಿಐ ನೇತೃತ್ವದಲ್ಲಿ ಬ್ಯಾಂಕುಗಳ ಒಕ್ಕೂಟ ನ್ಯಾಯಾಲಯದ ಮೆಟ್ಟಿಲೇರಿದ್ದವು. ಈ ಸಂಬಂಧ ಬೆಳವಣಿಗೆಗಳು ಶುರುವಾಗುತ್ತಿದ್ದಂತೆ ಮಲ್ಯ ದೇಶ ಬಿಟ್ಟು ಪರಾರಿಯಾಗಿದ್ದರು.

ಇದೀಗ ಅವರನ್ನು ಮರಳಿ ದೇಶಕ್ಕೆ ಕರೆತರುವ ಪ್ರಕ್ರಿಯಗಳು ಶುರುವಾಗಿವೆ. ಈ ನಿಟ್ಟಿನಲ್ಲಿ ಭಾನುವಾರ ಪಾಸ್ಪೋರ್ಟ್ ರದ್ಧುಗೊಳಿಸಲಾಗಿದೆ.

Top