An unconventional News Portal.

ವಿಜಯ್‌ ಮಲ್ಯ ಭಾರತಕ್ಕೆ ಬಂದಾಕ್ಷಣ 9 ಸಾವಿರ ಕೋಟಿ ಸಾಲ ವಾಪಾಸ್ ಆಯ್ತು ಅಂತೇನಿಲ್ಲ!

ವಿಜಯ್‌ ಮಲ್ಯ ಭಾರತಕ್ಕೆ ಬಂದಾಕ್ಷಣ 9 ಸಾವಿರ ಕೋಟಿ ಸಾಲ ವಾಪಾಸ್ ಆಯ್ತು ಅಂತೇನಿಲ್ಲ!

ಬೆಂಗಳೂರು ಮೂಲದ ಉದ್ಯಮಿ ವಿಜಯ್‌ ಮಲ್ಯ ಸಾಲದ ವಿಚಾರ ಈಗ ಅಂತಾರಾಷ್ಟ್ರೀಯ ಸುದ್ದಿಕೇಂದ್ರದಲ್ಲಿರುವ ವಿಚಾರ. ಮಲ್ಯರನ್ನು ಲಂಡನ್‌ನಿಂದ ಗಡೀಪಾರು ಮಾಡಲು ಕಾನೂನು ಪ್ರಕ್ರಿಯೆ ಶುರುವಾಗಿದೆ. ಇದೊಂದು ಸುದೀರ್ಘ ಕಾನೂನು ಸಮರವಾದರೂ, ಇವತ್ತಲ್ಲ ನಾಳೆ ವಿಜಯ್‌ ಮಲ್ಯ ಭಾರತಕ್ಕೆ ಬಂದಿಳಿಯಬೇಕಿದೆ. ಒಂದು ವೇಳೆ, ಮಲ್ಯ ಭಾರತಕ್ಕೆ ಬಂದರೆ, ಅವರ ಹೆಸರಿನಲ್ಲಿರುವ ಸಾಲ ಮರುಪಾವತಿ ಆಗುತ್ತಾ? ಇದು ಸದ್ಯದ ಕುತೂಹಲಕಾರಿ ಪ್ರಶ್ನೆ.

ಲಂಡನ್ ಮೂಲದ ‘ಕ್ಯೂಝೆಡ್’ ನ್ಯೂಸ್ ಪೋರ್ಟಲ್‌ ಈ ಕುರಿತು ವರದಿಯೊಂದನ್ನು ಪ್ರಕಟಿಸಿದೆ. ಕಾನೂನು ತಜ್ಞರ ಅಭಿಪ್ರಾಯಗಳನ್ನು ಒಳಗೊಂಡಿರುವ ಈ ವರದಿ ‘ಮಲ್ಯ ಭಾರತಕ್ಕೆ ಹೋದ ಮಾತ್ರಕ್ಕೆ ಸಾಲ ಮರುಪಾವತಿ ಆದಂಗೆ ಆಗುವುದಿಲ್ಲ’ ಎಂದು ಪ್ರತಿಪಾದಿಸಿದೆ.

ಏನಿದು ವಾದ?:

ಸದ್ಯ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಶರ್ ಏರ್‌ಲೈನ್ಸ್ ಸಂಸ್ಥೆಗೆ ದೇಶದ 16 ಬ್ಯಾಂಕ್‌ಗಳು ಒಟ್ಟು 9 ಸಾವಿರ ಕೋಟಿ ಸಾಲ ನೀಡಿದ್ದೀವಿ ಎಂದು ಹೇಳಿಕೊಳ್ಳುತ್ತಿವೆ. ಮಲ್ಯಗೆ ನೀಡಿರುವ ಈ ಹಣವನ್ನು ಅವರು ಇತರೆ ಉದ್ಯಮಗಳಿಗೆ ಹಾಗೂ ವೈಯಕ್ತಿಕ ಖರ್ಚಿಗೆ ಬಳಸಿಕೊಂಡಿದ್ದಾರೆ. ಹೀಗಾಗಿ ಏರ್‌ಲೈನ್ಸ್ ಉದ್ಯಮ ನಷ್ಟವನ್ನು ಅನುಭವಿಸಿದೆ ಎಂಬುದು ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟದ ಆರೋಪ.

ಒಂದು ವೇಳೆ, ಮಲ್ಯರನ್ನು ಭಾರತಕ್ಕೆ ಕರೆತಂದರೂ ಸಾಲದ ಹಣ ವಾಪಾಸ್ ಬಂತು ಎಂದುಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ, ”ಮಲ್ಯಗೆ ನೀಡುವ ಸಾಲವನ್ನು ಅವರು ಇತರೆ ಕೆಲಸಗಳಿಗೆ ಬಳಸಿದ್ದಾರೆ ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು. ಹಾಗಾದಾಗ ಮಾತ್ರವೇ ನ್ಯಾಯಾಲಯ ಮಲ್ಯ ಅವರ ಇತರೆ ಆರ್ಥಿಕ ಮೂಲಗಳನ್ನು ಹರಾಜು ಹಾಕಿ ಸಾಲ ಮರುಪಾವತಿ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಇದೊಂದು ಅತ್ಯಂತ ಕಠಿಣ ತಾಂತ್ರಿಕ ವಿಚಾರ. ಯಾವುದೇ ಬ್ಯಾಂಕ್‌ ಆದರೂ, ತಾವು ನೀಡಿದ ಸಾಲವನ್ನು ಸಾಲಗಾರ ಇತರೆ ಕೆಲಸಗಳಿಗೆ ಬಳಸಿಕೊಂಡಿದ್ದಾರೆ ಎಂದು ನಿರೂಪಿಸುವುದು ಸುಲಭ ಅಲ್ಲ,” ಎಂದು ‘ಕ್ಯೂಝೆಡ್’ ವರದಿ ಹೇಳುತ್ತದೆ.

ನಿಜಕ್ಕೂ ಸಾಲ ಎಷ್ಟಿದೆ?:

ಸ್ವತಃ ಮಲ್ಯ ಕೂಡ ಈ 9 ಸಾವಿರ ಕೋಟಿ ಸಾಲ ಎಂಬ ಜನಪ್ರಿಯ ನುಡಿಗಟ್ಟಿನ ಬಗ್ಗೆ ತಕರಾರು ತೆಗೆದಿದ್ದಾರೆ. ಕಳೆದ ವರ್ಷ ‘ಎಫ್‌ಟಿ’ಗೆ ನೀಡಿದ ಸಂದರ್ಶನದಲ್ಲಿ, ‘9 ಸಾವಿರ ಕೋಟಿ ಎಂಬುದು ಬ್ಯಾಂಕ್‌ಗಳು ತೋರಿಸುತ್ತಿರುವ ಸಾಲದ ಪ್ರಮಾಣ’ ಎಂದಿದ್ದರು.

“2013ರ ಸುಮಾರಿಗೆ ಪಡೆದ ಒಟ್ಟು ಸಾಲದ ಪ್ರಮಾಣ 500 ಮಿಲಿಯನ್ ಪೌಂಡ್ (4143,77,92,525 ರೂ) ಇರಬಹುದು. ಆದರೆ ಅಲ್ಲಿಂದ ಇಲ್ಲೀವರೆಗೆ ಬಡ್ಡಿ, ಚಕ್ರ ಬಡ್ಡಿ ಎಲ್ಲಾ ಸೇರಿಸಿ 9 ಸಾವಿರ ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಕಾನೂನು ಹೋರಾಟ ನಡೆಸಿದರೆ ನಾನು ಅಷ್ಟು ಕಟ್ಟುವ ಅಗತ್ಯವಿರುವುದಿಲ್ಲ,” ಎಂದು ಹೇಳಿದ್ದರು.

ಈ ಸಮಯದಲ್ಲಿ ವಿಶ್ವ ಬ್ಯಾಂಕ್‌, ಕೆಟ್ಟ ಸಾಲವನ್ನು ಮರುಪಾವತಿ ಮಾಡಲು ನಿಗದಿಪಡಿಸಿರುವ ನಿಯಮಾವಳಿಗಳನ್ನು ಅವರು ಮುಂದಿಟ್ಟಿದ್ದರು. ಅದರ ಪ್ರಕಾರ ತಾವು ಮರುಪಾವತಿ ಮಾಡಬೇಕಾದ ಸಾಲದ ಪ್ರಮಾಣ 4 ಸಾವಿರ ಕೋಟಿ ಮೀರುವುದಿಲ್ಲ ಎಂದು ಹೇಳಿದ್ದರು.

 

ಈ ಮೂಲಕ ಬ್ಯಾಂಕ್‌ಗಳು ಹೇಳುತ್ತಿರುವ ಸಾಲದ ಪ್ರಮಾಣವನ್ನೇ ಮಲ್ಯ ಅಲ್ಲಗೆಳೆದಿದ್ದರು. ಜತೆಗೆ, ಮುಂದಿನ ದಿನಗಳಲ್ಲಿ ಆ ಬಗ್ಗೆ ಕಾನೂನು ಹೋರಾಟದ ಮುನ್ಸೂಚನೆಯನ್ನೂ ನೀಡಿದ್ದರು.

ಉದ್ಯೋಗಿಗಳ ಹೋರಾಟ: 

ಬ್ಯಾಂಕ್‌ಗಳ ಜತೆಯಲ್ಲಿ ಕಿಂಗ್‌ ಫಿಶರ್ ಏರ್‌ಲೈನ್ಸ್ ಉದ್ಯೋಗಿಗಳೂ ಕೂಡ ಮಲ್ಯ ಕಡೆಯಿಂದ ತಮಗೆ ಬರಬೇಕಾದ ಸಂಬಳಕ್ಕಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಆದರೆ ನಷ್ಟಗೊಂಡಿರುವ ಸಂಸ್ಥೆಯಾದ್ದರಿಂದ ಕಾನೂನಿನ ಅಡಿಯಲ್ಲಿ ಪರಿಹಾರ ಪಡೆದುಕೊಳ್ಳುವುದು ಅಷ್ಟು ಸುಲಭವೂ ಅಲ್ಲ.

ಹೇಗೇ ನೋಡಿದರೂ, ಸಾಲಗಾರ ಮಲ್ಯ ಎಲ್ಲಾ ಆಯಾಮಗಳಲ್ಲಿಯೂ ಭಾರತದ ಬ್ಯಾಂಕ್‌ಗಳಿಗೆ ಚಳ್ಳೆಹಣ್ಣು ತಿನ್ನಿಸುವ ಲೆಕ್ಕಾಚಾರದಲ್ಲಿದ್ದಾರೆ. ಗಡೀಪಾರಿನ ಕುರಿತು ಕಾನೂನು ಹೋರಾಟ ನಡೆಸಲು ಅವರು ಲಂಡನ್‌ ಮೂಲದ ದುಬಾರಿ ವಕೀಲರನ್ನೇ ನೇಮಕ ಮಾಡಿಕೊಂಡಿದ್ದಾರೆ. ಭಾರತಕ್ಕೆ ಬಂದ ಮೇಲೂ ಬ್ಯಾಂಕ್‌ಗಳ ವಿರುದ್ಧ ಕಾನೂನು ಹೋರಾಟಕ್ಕೆ ದೇಶದ ಪ್ರಸಿದ್ಧ ವಕೀಲರನ್ನು ಅವರು ನೇಮಕ ಮಾಡಿಕೊಳ್ಳಬಹುದು.

ಇವೆಲ್ಲಾ ಪ್ರಕ್ರಿಯೆ ನಡೆಯುವ ಹೊತ್ತಿಗೆ ಸಾಕಷ್ಟು ವರ್ಷಗಳೇ ಕಳೆದು ಹೋಗಿರುತ್ತದೆ. ಬಹುಶಃ ಈ ಕಾರಣಕ್ಕೇ ಇರಬೇಕು ನಮ್ಮಲ್ಲಿ ಹಣದ ವಿಚಾರ ಬಂದಾಗ, ‘ಕೊಟ್ಟೊನು ಕೋಡಂಗಿ- ಈಸ್ಕೊಂಡೋನು ಈರಭದ್ರ’ ಎಂಬ ಗಾದೆ ಮಾತು ಚಾಲ್ತಿಗೆ ಬಂದಿದೆ. ಆದರೆ ಈ ಪ್ರಕರಣದಲ್ಲಿ ಕೊಟ್ಟಿದ್ದು ಸಾರ್ವಜನಿಕರ ಹಣ. ಕೊಟ್ಟವರು ಬ್ಯಾಂಕ್‌ ಅಧಿಕಾರಿಗಳು. ವಿಜಯ್‌ ಮಲ್ಯಗೆ ಶಿಕ್ಷೆಯಾಗುವುದು ದೂರದ ಮಾತು. ಆದರೆ, ಅವರ ಅಪರಾಧಕ್ಕೆ ನೆರವು ನೀಡಿದವರಿಗೆ ಶಿಕ್ಷೆಯನ್ನು ವಿಧಿಸುವವರು ಯಾರು?

Top