An unconventional News Portal.

ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಮುಸ್ಲಿಂ ಆರೋಪಿಗಳಿಗೆ ಮುಕ್ತಿ

ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಮುಸ್ಲಿಂ ಆರೋಪಿಗಳಿಗೆ ಮುಕ್ತಿ

2006ರ ಮಾಲೆಂಗಾವ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಸೋಮವಾರ ಖುಲಾಸೆಗೊಳಿಸಲಾಗಿದೆ.

ಮುಂಬೈನ ವಿಶೇಷ ನ್ಯಾಯಾಲಯದ ನ್ಯಾ. ವಿ. ವಿ. ಪಾಟೀಲ್ ಅವರ ಏಕಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದೆ. ಎಲ್ಲಾ 9 ಮುಸ್ಲಿಂ ಆರೋಪಿಗಳನ್ನೂ ಆರೋಪ ಮುಕ್ತರನ್ನಾಗಿ ಮಾಡಿದ್ದು, ಅವರ ಪೈಕಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. 6 ಮಂದಿ ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು. ಇಬ್ಬರು ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದಾರೆ.

ಸಲ್ಮಾನ್ ಫಾರ್ಸಿ, ಶಬೀರ್ ಅಹ್ಮದ್, ನೂರುಲ್‍ಹುದಾ ದೋಹ, ರಾಯಿಸ್ ಅಹಮದ್, ಮೊಹಮ್ಮದ್ ಅಲಿ, ಆಸಿಫ್ ಖಾನ್, ಜಾವೇದ್ ಶೇಖ್, ಫರೂಖಿ ಅನ್ಸಾರಿ ಮತ್ತು ಅಬ್ರಾರ್ ಅಹ್ಮದ್ ಅವರು ಆರೋಪದಿಂದ ಮುಕ್ತರಾಗಿರುವ ಆರೋಪಿಗಳು.

ಕಾಯ್ದಿರಿಸಿದ್ದ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ವಿ. ವಿ. ಪಾಟೀಲ್ ದೋಷಾರೋಪ ಪಟ್ಟಿಯಲ್ಲಿ ಆರೋಪಿಗಳ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳು ಲಭ್ಯವಿಲ್ಲ. ಹೀಗಾಗಿ ಇವರನ್ನು ಬಂಧಮುಕ್ತಗೊಳಿಸಲಾಗುವುದು ಎಂದು ಪ್ರಕಟಿಸಿದರು.

ಪ್ರಕರಣದ ತನಿಖೆ ನಡೆಸಿದ್ದ ಎನ್‍ಐಎ ಮಾಲೆಂಗಾವ್ ಸ್ಫೋಟದಲ್ಲಿ ಇವರು ಭಾಗಿಯಾಗಿರುವುದಕ್ಕೆ ಸಾಕ್ಷಿಗಳು ಸಿಕ್ಕಿಲ್ಲ. ಕೇವಲ ಸಂದೇಹದ ಮೇಲೆ ಬಂಧಿಸಲಾಗಿತ್ತೇ ವಿನಃ ಸ್ಫೋಟದಲ್ಲಿ ನೇರ ಕೈವಾಡ ಇರುವುದು ತನಿಖೆಯಿಂದ ಕಂಡು ಬಂದಿಲ್ಲ ಎಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

2015ರ ಮಾರ್ಚ್ ತಿಂಗಳಲ್ಲಿ ಸಂಭವಿಸಿದ ಸ್ಪೋಟದಲ್ಲಿ 37 ಜನ ಮೃತಪಟ್ಟಿದ್ದರು. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆರೋಪಿಗಳ ಪೈಕಿ ಶಬ್ಬೀರ್ 2015ರಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಪ್ರಕರಣ ಗಂಭೀರವಾಗಿದ್ದರಿಂದ ಮೊದಲು ಭಯೋತ್ಪಾದನಾ ನಿಗ್ರಹದಳ(ಎಟಿಎಸ್) ಕೈಗೆತ್ತಿಕೊಂಡಿತ್ತು. ನಂತರ ಕೇಂದ್ರ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಸಿಬಿಐ ಮತ್ತು ಎನ್‍ಐಎ ಜಂಟಿಯಾಗಿ ತನಿಖೆ ನಡೆಸಿದ್ದವು.

ಸಿಮಿ ಸಂಘಟನೆ ಪಾಕ್ ಮೂಲದ ಲಷ್ಕರ್ ಎ ತೊಯ್ಬಾ ಸಂಘಟನೆಯ ನೆರವಿನ ಮೂಲಕ ಸ್ಫೋಟ ಕೃತ್ಯಗಳನ್ನು ಎಸಗಿತ್ತು ಎಂದು ತನಿಖಾ ದಳ ಆರಂಭದಲ್ಲಿಯೇ ಹೇಳಿತ್ತು.ನಂತರ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ಮತ್ತು ಎಟಿಎಸ್ ಜಂಟಿಯಾಗಿ ತನಿಖೆ ನಡೆಸಿದ್ದವು. ಸದರಿ ಆರೋಪಿಗಳಿಗೆ ತಪ್ಪನ್ನು ಒಪ್ಪಿಕೊಳ್ಳುವಂತೆ ದೈಹಿಕ ಹಿಂಸೆ ನೀಡಲಾಗಿತ್ತು ಎಂಬುದು ಬಹಿರಂಗವಾಗಿತ್ತು. 

ಪ್ರಕರಣ ಸಂಬಂಧ ಕಳೆದ ವಾರವಷ್ಟೇ ರಾಷ್ಟ್ರೀಯ ತನಿಖಾ ದಳ, 2006ರ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಈ 9 ಮಂದಿ ಮುಸ್ಲಿಂ ಯುವಕರು ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಳಿಲ್ಲ ಎಂದು ಮುಂಬೈ ಕೋರ್ಟ್ ಗೆ ತಿಳಿಸಿತ್ತು.

ಕೇಸರಿ ಭಯೋತ್ಪಾದನೆ: 

ಮಲೆಂಗಾವ್ ಮತ್ತು ಸಂಜೋತ ಎಕ್ಸ್‍ಪ್ರೆಸ್ ರೈಲಿನಲ್ಲಿ ಸಂಭವಿಸಿದ ಬಾಂಬ್ ಸ್ಫೊಟದಲ್ಲಿ ಕೇಸರಿ ಭಯೋತ್ಪಾದನೆ ಕೈವಾಡವಿದೆ ಎಂದು ಶಂಕಿಸಲಾಗಿತ್ತು. ಇದರಲ್ಲಿ ಸಾದ್ವಿಕ್, ಪ್ರಜ್ಞಾ ಸಿಂಗ್, ಸೇನಾಧಿಕಾರಿ ಕರ್ನಲ್ ಪುರೋಹಿತ್, ಸ್ವಾಮಿ ಅಸೀಮಾನಂದ ಕೈವಾಡವಿದೆ ಎಂದು ಆರೋಪ ಹೊರಿಸಲಾಗಿದೆ. ಇದೇ ಪ್ರಕರಣದಲ್ಲಿ ಅಭಿನವ್ ಭಾರತದ ಮುಖಂಡ ಸುನೀಲ್ ಜೋಷಿ ಕೂಡ ಭಾಗಿಯಾಗಿದ್ದರು ಎನ್ನಲಾಗಿತ್ತು. ಈ ಪ್ರಕರಣದ ತನಿಖೆ ನಡೆಯುತ್ತಿದ್ದಾಗಲೇ ಸುನೀಲ್ ಜೋಷಿ ಸಂದೇಹಾಸ್ಪದವಾಗಿ ಕೊಲೆಗೀಡಾಗಿದ್ದರು.

Top