An unconventional News Portal.

32 ವರ್ಷಗಳ ಹಿಂದಿನ ಕಹಿನೆನಪು ಮರುಕಳಿಸಿದಾಗ; ಕುಸಿದ ಕಟ್ಟಡಗಳು, ಪ್ರಾಣತೆತ್ತ ಮಕ್ಕಳು

32 ವರ್ಷಗಳ ಹಿಂದಿನ ಕಹಿನೆನಪು ಮರುಕಳಿಸಿದಾಗ; ಕುಸಿದ ಕಟ್ಟಡಗಳು, ಪ್ರಾಣತೆತ್ತ ಮಕ್ಕಳು

ಅಲ್ಲೀಗ ಎಲ್ಲಿ ನೋಡಿದರೂ ಕುಸಿದು ಬಿದ್ದ ಕಟ್ಟಡಗಳು, ಸಾಲು ಸಾಲು ಹೆಣಗಳು…ಹೆಚ್ಚು ಕಡಿಮೆ 32 ವರ್ಷಗಳ ಹಿಂದಿನ ಕಹಿ ನೆನಪನ್ನು ಮರುಕಳಿಸಿದ ದೃಶ್ಯಾವಳಿಗಳು…

ಇದು ಮೆಕ್ಸಿಕೋದಲ್ಲಿ ಕೆಲವೇ ಹೊತ್ತಿನ ಮುಂಚೆ ದಾಖಲಾದ ಪ್ರಬಲ ಭೂಕಂಪನದ ಪರಿಣಾಮಗಳು. ಈವರೆಗೆ ಸುಮಾರು 149 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ.

ಸ್ಥಳೀಯ ಕಾಲಮಾನ ಮಂಗಳವಾರ ಶಾಲೆಗೆ ತೆರಳಿದ್ದ ಮಕ್ಕಳನ್ನೂ ಕೂಡ ಪ್ರಕೃತಿಯ ವಿಕೋಪ ಸುಮ್ಮನೆ ಬಿಡಲಿಲ್ಲ. ಈವರೆಗೆ ಸುಮಾರು 22 ಮಕ್ಕಳು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

ಇವತ್ತಿಗೆ ಸರಿಯಾಗಿ 32 ವರ್ಷಗಳ ಹಿಂದೆ ಮೆಕ್ಸಿಕೋ ಇಂತಹದ್ದೇ ಪ್ರಬಲ ಕಂಪನಕ್ಕೆ ಸಾಕ್ಷಿಯಾಗಿತ್ತು. ಆ ಸಮಯದಲ್ಲಿ 10 ಸಾವಿರ ಜನ ಸಾವನ್ನಪ್ಪಿದ್ದರು. ಇದು ಜಗತ್ತಿನಲ್ಲಿ ನಡೆದ ಅತ್ಯಂತ ಪ್ರಬಲ ಭೂಕಂಪನಗಳಲ್ಲಿ ಒಂದು ಎಂದು ಇತಿಹಾಸದಲ್ಲಿ ದಾಖಲಾಗಿತ್ತು.

ಕೆಲವು ತಿಂಗಳುಗಳ ಹಿಂದೆಯೂ ಕೂಡ ಮೆಕ್ಸಿಕೋದ ರಾಜಧಾನಿ ಸಮೀಪ ರಿಕ್ಟರ್ ಮಾಪನದಲ್ಲಿ 8.1ರಷ್ಟು ಪ್ರಬಲ ಕಂಪನ ದಾಖಲಾಗಿತ್ತು. ಈ ಸಮಯದಲ್ಲಿ ಸುಮಾರು 90 ಜನ ಸಾವನ್ನಪ್ಪಿದ್ದರು. ಈ ಪ್ರದೇಶದಲ್ಲಿ ಭೂಕಂಪನ ಸಾಮಾನ್ಯ ಎನ್ನಿಸಿಕೊಂಡಿದೆ.

32 ವರ್ಷಗಳ ಭೂಕಂಪನದ ನೆನಪಿನಲ್ಲಿ ಸರಕಾರ ಪ್ರಕೃತಿ ವಿಕೋಪವನ್ನು ಎದುರಿಸಲು ಸಾರ್ವಜನಿಕರನ್ನು ಸಜ್ಜುಗೊಳುಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಸಮಯದಲ್ಲಿಯೇ ಅಲ್ಲಿನ ಕಾಲಮಾನ ಮಂಗಳವಾರ 7.1ರಷ್ಟು ಪ್ರಬಲ ಕಂಪನ ದಾಖಲಾಗಿದೆ.

ಈ ಬಾರಿ ಮೆಕ್ಸಿಕೋದ ರಾಜಧಾನಿಯಿಂದ ಸುಮಾರು 120 ಕಿ. ಮೀ ದೂರದ ಪ್ಯೂಬ್ಲ ನಗರದಲ್ಲಿ ಕಂಪನದ ಕೇಂದ್ರಬಿಂದುವಿತ್ತು ಎಂದು ತಜ್ಞರು ತಿಳಿಸಿದ್ದಾರೆ.

ಪರಿಣಾಮ; ಬಹುಮಹಡಿ ಕಟ್ಟಡಗಳು, ಸೂಪರ್‌ ಮಾರ್ಕೆಟ್‌ ಹಾಗೂ ಕಾರ್ಖಾನೆಗಳು ನೆಲಕ್ಕೆ ಉರುಳಿವೆ. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಿದೆ. ಅವುಗಳ ಅಡಿಯಲ್ಲಿ ಜನರು ಸಿಲುಕಿರುವ ಶಂಕೆಯನ್ನು ಶೋಧ ಕಾರ್ಯಾಚರಣೆ ನಿರತ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಸಾವಿರಾರು ಜನ ಸೂರು ಕಳೆದುಕೊಂಡಿದ್ದಾರೆ. ತಮ್ಮವರಿಗಾಗಿ ಹಾಗೂ ಆಹಾರಕ್ಕಾಗಿ ಮೊರೆ ಇಡುತ್ತಿರುವ ದೃಶ್ಯಗಳನ್ನು ಸ್ಥಳೀಯ ಟಿವಿ ವಾಹಿನಿಗಳು ಭಿತ್ತರಿಸುತ್ತಿವೆ. ಪ್ರಬಲ ಭೂಕಂಪನದ ಹಿನ್ನೆಲೆಯಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿಲಾಗಿದೆ.

ಮಂಗಳವಾರ ಕೂಡ ಭೂಕಂಪನಕ್ಕೂ ಕೆಲವು ಕ್ಷಣಗಳ ಮುಂಚೆ ಎಚ್ಚರಿಕೆಯ ಸಂದೇಶವನ್ನು ನೀಡಲಾಗಿತ್ತು. ಆದರೆ ಇದು ಸರಕಾರದ ವತಿಯಿಂದ ನಡೆಯುತ್ತಿರುವ ಪ್ರಾಯೋಗಿಕ ಪರೀಕ್ಷೆ ಎಂದು ಹೆಚ್ಚಿನವರು ಭಾವಿಸಿದರು ಎಂದು ಸ್ಥಳೀಯ ವರದಿಗಾರರು ಹೇಳಿದ್ದಾರೆ. ಹೀಗಾಗಿ ಹೆಚ್ಚಿನ ಜನ ಮನೆಯಿಂದ ಹೊರಬರಲಿಲ್ಲ ಎಂದೂ ವರದಿಗಳು ಹೇಳುತ್ತಿವೆ.

ಜಗತ್ತಿನಲ್ಲಿ ಅತಿ ಹೆಚ್ಚು ಜನ ವಾಸಿಸುವ ನಗರ ಮೆಕ್ಸಿಕೋ. ಇಲ್ಲಿ ಸುಮಾರು 2 ಕೋಟಿ ಜನ ವಾಸ ಮಾಡುತ್ತಿದ್ದಾರೆ. 1985ರಲ್ಲಿ ಇಲ್ಲಿ ನಡೆದ ಪ್ರಬಲ ಭೂಕಂಪನದ ನೆನಪಿಗಾಗಿ ಸ್ಥಳೀಯ ಸರಕಾರ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಈ ಸಮಯದಲ್ಲಿಯೇ ದಾಖಲಾದ ಕಂಪನ ಜನರನ್ನು ಬೀದಿಗೆ ತಳ್ಳಿದೆ. ಭೀಕರ ಸನ್ನಿವೇಶವನ್ನು ಸೃಷ್ಟಿಸಿದೆ. ಶಾಲೆಗಳಿಗೆ ರಜೆಯನ್ನು ಹಾಗೂ ಎಲ್ಲಾ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಉಚಿತ ಎಂದು ಘೋಷಿಸಲಾಗಿದೆ.

 

 

ಕಳೆದ ಹಲವು ವರ್ಷಗಳಲ್ಲಿ ಜಗತ್ತಿನ ನಾನಾ ಭೂಭಾಗಳು ಪ್ರಬಲ ಭೂಕಂಪನಗಳಿಗೆ ಸಾಕ್ಷಿಯಾಗಿವೆ. ಕಂಪನದ ಸಾಧ್ಯತೆಯನ್ನು ಮುಂಚಿತವಾಗಿ ತಿಳಿಸುವ ತಂತ್ರಜ್ಞಾನ ಬೆಳೆದ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆಗಳನ್ನು ಕಡಿಮೆ ಮಾಡಲು ಸಾಧ್ಯವಾಗಿದೆಯೇ ಹೊರತು, ಸಂಪೂರ್ಣವಾಗಿ ಪ್ರಕೃತಿ ವಿಕೋಪದ ಪರಿಣಾಮಗಳಿಂದ ಮುಕ್ತವಾಗುವುದು ಸಾಧ್ಯವಾಗಿಲ್ಲ.

ಚಿತ್ರ: ಇಂಡಿಯಾ ಟುಡೆ.

 

Top