An unconventional News Portal.

‘ಕಳಸಾ-ಬಂಡೂರಿ’: ಕಿಚ್ಚು ಹೊತ್ತಿಸಿದ ಮಹದಾಯಿ ‘ಮಧ್ಯಂತರ’ ತೀರ್ಪು; ಏನಿದು ವಿವಾದ?

‘ಕಳಸಾ-ಬಂಡೂರಿ’: ಕಿಚ್ಚು ಹೊತ್ತಿಸಿದ ಮಹದಾಯಿ ‘ಮಧ್ಯಂತರ’ ತೀರ್ಪು; ಏನಿದು ವಿವಾದ?

ಮಹದಾಯಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ತೀರ್ಪು ಬುಧವಾರ ಪ್ರಕಟಗೊಂಡಿದ್ದು ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿದೆ. ಮಹದಾಯಿ ನ್ಯಾಯಾಧಿಕರಣದಲ್ಲಿ ಕರ್ನಾಟಕದ ಅರ್ಜಿ ತಿರಸ್ಕೃತವಾಗುತ್ತಿದ್ದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಪ್ರತಿಭಟನೆಗಳು ಹುಟ್ಟಿಕೊಂಡಿವೆ.

ಕರ್ನಾಟಕದ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡಿದ ನ್ಯಾ. ಜೆ. ಎಂ. ಪಾಂಚಾಲ್ ಅಧ್ಯಕ್ಷತೆಯ ನ್ಯಾಯಾಧಿಕರಣ 7.65 ಟಿಎಂಸಿ ಅಡಿ ಕುಡಿಯುವ ನೀರು ಬಳಕೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ನ್ಯಾಯಾಧಿಕರಣದ ಈ ತೀರ್ಪಿನಿಂದ ಕರ್ನಾಟಕಕ್ಕೆ ಮಧ್ಯಂತರ ಹಿನ್ನಡೆಯುಂಟಾಗಿದೆ.

ಈ ತೀರ್ಪು ಹೊರ ಬೀಳುತ್ತಿದ್ದಂತೆ, ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಹೇಳಿ ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಹುಬ್ಬಳ್ಳಿ, ನರಗುಂದ, ಬೆಟಗೇರಿ ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಕನ್ನಡಪರ ಸಂಘಟನೆಗಳು ಹಾಗೂ ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ಶಿವಕುಮಾರ್ ಉದಾಸಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸಂಸದರ ಕಚೇರಿಗಳು ಹಾಗೂ ವಿವಿಧ ಸರ್ಕಾರಿ ಕಚೇರಿಗಳಿಗೆ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿದ್ದಾರೆ.

ತೀರ್ಪು ಬೆನ್ನಲ್ಲೇ ಹಲವು ಪ್ರದೇಶಗಳಲ್ಲಿ ಅಘೋಷಿತ ಬಂದ್ ಜಾರಿಯಾಗಿದ್ದು ಪ್ರತಿಭಟನಾಕಾರರು ಮೋದಿ ಮತ್ತು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ನ್ಯಾಯಾಧಿಕರಣದ ತೀರ್ಪು ಖಂಡಿಸಿ ಗುರುವಾರ ಉತ್ತರಕರ್ನಾಟಕ ಬಂದ್ ಗೆ ‘ಕಳಸಾ ಬಂಡೂರಿ ಹೋರಾಟ ಸಮಿತಿ’ ಕರೆ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್, ರಾಜ್ಯದ ಹಿತ ಕಾಪಾಡಲು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇನ್ನು “ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಬೇಕು,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಸಂಬಂಧ ಮುಂದಿನ ವಾರ ಸರ್ವಪಕ್ಷ ಸಭೆ ಕರೆಯಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಸದ್ಯಕ್ಕೆ ರಾಜ್ಯಾದ್ಯಂತ ಹತ್ತಿಕೊಂಡಿರುವ ನೀರು ಸಂಬಂಧಿತ  ಪ್ರತಿಭಟನೆ ಸದ್ಯಕ್ಕೆ ಆರುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಕಳಸಾ ಬಂಡೂರಿ ನಾಲಾ ಯೋಜನೆಯ ಬಗೆಗಿನ ಮಾಹಿತಿಯನ್ನು ‘ಸಮಾಚಾರ’ ಸಂಕ್ಷಿಪ್ತವಾಗಿ ನಿಮ್ಮ ಮುಂದಿಡುತ್ತಿದೆ.


ಕಳಸಾ-ಬಂಡೂರಿ ನಾಲಾ ಯೋಜನೆ ಎಂದರೇನು?

ಮಹದಾಯಿ ನದಿ ಕರ್ನಾಟಕದ ಪಶ್ಚಿಮ ಘಟ್ಟಗಳ ಉತ್ತರ ತುದಿಯಲ್ಲಿರುವ ಬೆಳಗಾವಿಯ ಖಾನಾಪುರ ತಾಲೂಕಿನಲ್ಲಿ ಹುಟ್ಟುತ್ತದೆ. ರಾಜ್ಯದಲ್ಲಿ 29 ಕಿಲೋಮೀಟರ್, ನಂತರ ಮಹಾರಾಷ್ಟ್ರದಲ್ಲಿ 3 ಹಾಗೂ ಗೋವಾದಲ್ಲಿ 82 ಕಿ.ಮೀ. ದೂರ ಹರಿದು ಇದು ಅರಬೀ ಸಮುದ್ರವನ್ನು ಸೇರುತ್ತದೆ. ಈ ಮಹದಾಯಿ ನದಿಗೆ ಖಾನಾಪುರ ತಾಲೂಕಿನ ಅರಣ್ಯ ಪ್ರಾಂತದಲ್ಲೇ ಸೇರ್ಪಡೆಯಾಗುವ ಮೂವತ್ತಕ್ಕೂ ಹೆಚ್ಚು ನದಿಗಳಲ್ಲಿ ಕಳಸಾ ಹೊಳೆ ಮತ್ತು ಬಂಡೂರಿಯೂ ಸೇರಿದೆ.

ಕಳಸಾ ಬಂಡೂರಿ ನಕ್ಷೆ (ಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್)

ಕಳಸಾ ಬಂಡೂರಿ ನಕ್ಷೆ (ಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್)

ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಗದಗ ಮತ್ತು ಧಾರವಾಡ ಹೀಗೆ ನಾಲ್ಕು ಜಿಲ್ಲೆಗಳ 9 ತಾಲೂಕುಗಳಿಗೆ ನೀರಾವರಿ ಮತ್ತು ಕುಡಿಯುವ ನೀರಿನ ಕೊರತೆ ನೀಗಿಸಲು ಮಲಪ್ರಭಾ ಅಣೆಕಟ್ಟಿನಿಂದ ನೀರು ಸಾಲದಾದಾಗ; ಮಹದಾಯಿ ನದಿಯಿಂದ ಕರ್ನಾಟಕದ ಪಾಲಿನ ನೀರನ್ನು ಮಲಪ್ರಭಾ ಅಣೆಕಟ್ಟಿಗೆ ತಿರುಗಿಸಿ ಕೊರತೆ ತುಂಬಿಕೊಳ್ಳುವ ಯೋಜನೆ ರೂಪಿಸಲಾಗಿತ್ತು. ಮಹದಾಯಿ ನದಿಯಲ್ಲಿ ಹರಿಯುವ ಒಟ್ಟು ಸರಾಸರಿ 200 ಟಿಎಂಸಿ ಅಡಿ ನೀರಿನಲ್ಲಿ ಕರ್ನಾಟಕದಿಂದ ಸರಾಸರಿ 45 ಟಿಎಂಸಿ ಅಡಿ ನೀರು ಸೇರ್ಪಡೆಯಾಗುತ್ತದೆ. ಇದರಲ್ಲಿ 36.5 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳುವ ಪ್ರಸ್ತಾಪವನ್ನು ಕರ್ನಾಟಕ ಮುಂದಿಟ್ಟಿತು. ಇದರಲ್ಲಿ 7.56 ಟಿಎಂಸಿ ಅಡಿಯ ಕಳಸಾ-ಬಂಡೂರಿ ಕುಡಿವ ನೀರಿನ ಯೋಜನೆಗಳೂ ಸೇರಿದ್ದವು.

ಯೋಜನೆಯಲ್ಲಿ ಬದಲಾವಣೆ

ಆದರೆ ಇದಕ್ಕೆ ಕಾರಣಗಳನ್ನು (ಅದೇ ಒಂದು ದೊಡ್ಡ ಅಧ್ಯಾಯ!) ನೀಡಿ ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿದಾಗ ಯೋಜನೆಯನ್ನು ಬದಲಿಸಲಾಯಿತು. ಎರಡೂ ರಾಜ್ಯ ಸರ್ಕಾರಗಳ ನಡುವೆ ಹಲವಾರು ಸುತ್ತಿನ ಮಾತುಕತೆಯ ನಂತರ, ಮಹದಾಯಿ ಸಮಗ್ರ ಯೋಜನೆಗೆ ಬದಲಾಗಿ, ಅದರ ಈ ಉಪನದಿಗಳಿಂದ ಸದ್ಯಕ್ಕೆ ಕೇವಲ ಕುಡಿವ ನೀರು ಪೂರೈಕೆಯ ಉದ್ದೇಶಕ್ಕೆಂದು ಒಟ್ಟು 7.56 ಟಿಎಂಸಿ ಅಡಿ ನೀರನ್ನು ಸಣ್ಣಸಣ್ಣ ಅಣೆಕಟ್ಟುಗಳು ಮತ್ತು ಕೂಡುನಾಲೆಗಳ ಮೂಲಕ ಮಲಪ್ರಭೆಗೆ ಹರಿಸುವ ಯೋಜನೆಯನ್ನು ರೂಪಿಸಲಾಯಿತು. ಇದಕ್ಕಾಗಿ ಮಹದಾಯಿಯ ಉಪನದಿಗಳಾದ ಕಳಸಾ ಹೊಳೆ ಮತ್ತು ಬಂಡೂರಿಯ ನೀರನ್ನು ನಾಲೆಗಳ ಮಲಪ್ರಭಾ ಅಣೆಕಟ್ಟಿಗೆ ತಂದು ಸೇರುಸುವಂತೆ ಯೋಜನೆ ಸಿದ್ಧಪಡಿಸಲಾಯಿತು. ಇದೇ ‘ಕಳಸಾ ಬಂಡೂರಿ ನಾಲಾ ಯೋಜನೆ’.

ಆದರೆ ಅದನ್ನೂ ಗೋವಾ ಆಕ್ಷೇಪಿಸಿ ಮಹದಾಯಿ ನ್ಯಾಯಾಧಿಕರಣ ರಚನೆಗೆ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದಾಗ 2010ರಲ್ಲಿ ನ್ಯಾಯಾಧಿಕರಣ ರಚಿಸಲಾಯಿತು.

ಮಧ್ಯಂತರ ತೀರ್ಪಿಗೆ ಅರ್ಜಿ ಸಲ್ಲಿಸಲು ‘ಬೇಡಿಕೆ, ಬಂದ್,ಹೋರಾಟ’

ಹೀಗಿರುವಾಗಲೇ 2015ರಲ್ಲಿ ಉತ್ತರ ಕರ್ನಾಟಕವನ್ನು ಮಹಾ ಬರಗಾಲ ಆವರಿಸಿಕೊಂಡಿತು. ನೀರಿಗೆ ಹಾಹಾಕಾರವೆದ್ದಿತು. ಕುಡಿಯಲೂ ನೀರಿಲ್ಲದ ಪರಿಸ್ಥಿತಿ ಸೃಷ್ಟಿಯಾದಾಗ 2015, ಜುಲೈ 16. ನರಗುಂದದಲ್ಲಿ ಪ್ರತಿಭಟನೆಯ ಕಿಡಿ ಹತ್ತಿಕೊಂಡಿತು. ಹುಬ್ಬಳ್ಳಿಯನ್ನು ಚಳವಳಿ ಕೇಂದ್ರವಾಗಿಟ್ಟುಕೊಂಡು ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ ಜಿಲ್ಲೆಗಳ ಒಂಬತ್ತು ತಾಲೂಕುಗಳ ಉದ್ದಗಲಕ್ಕೂ ಚಳವಳಿಯ ಕಾವು ಹರಡಿಕೊಂಡಿತು. ಬೇಕೇಬೇಕು, ನೀರು ಬೇಕು! ಕಳಸಾ-ಬಂಡೂರಿ ಯೋಜನೆ ಜಾರಿಯಾಗಲೇ ಬೇಕು! ಘೋಷಣೇ ಎಲ್ಲೆಡೆ ಕೇಳಿಬರತೊಡಗಿತು.

ಇದಕ್ಕೂ ಮೊದಲು ಅಂತಿಮ ತೀರ್ಪು ಹೊರ ಬೀಳುವ ಮುನ್ನವೇ ‘ಜೆಡಿಎಸ್-ಬಿಜೆಪಿ’ ಸಂಮಿಶ್ರ ಸರ್ಕಾರವಿದ್ದಾಗ ಕಳಸಾ ನದಿಯಿಂದ ಮಲಪ್ರಭೆಗೆ ನೀರು ಹರಿಸುವ ಉದ್ದೇಶಿತ ಯೋಜನೆಯ ನಾಲೆ ನಿರ್ಮಾಣ ಕೆಲಸ ಕೈಗೆತ್ತಿಕೊಂಡು ಜನತೆಯ ಮುಂಗೈಗೆ ತುಪ್ಪ ಸವರುವ ಕೆಲಸ ನಡೆಯಿರು. ಇದರ ಭಾಗವಾಗಿ ಸುಮಾರು 198 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಯಿತು. ಇದಕ್ಕೆ ಗೋವಾ ತಡೆಯಾಜ್ಞೆ ಕೋರಲು ನ್ಯಾಯಾಧಿಕರಣದ ಮೊರೆ ಹೋದಾಗ, ‘ನ್ಯಾಯ ಮಂಡಳಿಯ ತೀರ್ಪು ಬರುವವರೆಗೆ ಮಹದಾಯಿ ಕೊಳ್ಳದಿಂದ ನೀರನ್ನು ಹರಿಸುವುದಿಲ್ಲವೆಂದು’ ಸರಕಾರ ಮುಚ್ಚಳಿಕೆ ಬರೆದುಕೊಟ್ಟಿದ್ದರಿಂದ ನ್ಯಾಯಾಧಿಕರಣ ತಡೆಯಾಜ್ಞೆ ನೀಡಲಿಲ್ಲ. ಬದಲಿಗೆ, ಈಗಾಗಲೇ ನಿರ್ಮಾಣವಾಗಿರುವ ಕಾಲುವೆ ಮೂಲಕ ಮಳೆಗಾಲದಲ್ಲಿ ನೈಸರ್ಗಿಕವಾಗಿಯೇ ನೀರು ಮಲಪ್ರಭೆಯ ಕಡೆಗೆ ಹರಿಯದಂತೆ ಎರಡೂ ನದಿಗಳ ನಡುವಿನ ದಿಬ್ಬದ ಗುಂಟ ಇಟ್ಟಿಗೆ-ಸಿಮೆಂಟ್ ತಡೆಗೋಡೆ ನಿರ್ಮಿಸಲು ಆದೇಶ ನೀಡಿತು. ಅದರಂತೆ ಮೇ 2014ರಲ್ಲಿ ತಡೆಗೋಡೆ ರಚಿಸಲಾಗಿದೆ.

ಮಲಪ್ರಭಾ ನದಿಗೆ ನವಿಲು ತೀರ್ಥದಲ್ಲಿ ಕಟ್ಟಲಾಗಿರುವ ಅಣೆಕಟ್ಟು

ಮಲಪ್ರಭಾ ನದಿಗೆ ನವಿಲು ತೀರ್ಥದಲ್ಲಿ ಕಟ್ಟಲಾಗಿರುವ ಅಣೆಕಟ್ಟು

ಮಹದಾಯಿ ತಿರುವು ಯೋಜನೆ ನಡೆದು ಬಂದ ದಾರಿ

ಉತ್ತರ ಕರ್ನಾಟಕದ ಮಲಪ್ರಭಾ ನದಿಗೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ನವಿಲುತೀರ್ಥ ಎಂಬಲ್ಲಿ 1972ರಲ್ಲಿ ಅಣೆಕಟ್ಟು ಕಟ್ಟಲಾಯಿತು. 5.27 ಲಕ್ಷ ಎಕರೆ ಜಮೀನಿಗೆ ನೀರುಣಿಸುವ ಉದ್ದೇಶ ಹೊಂದಿದ್ದ ಈ ಅಣೆಕಟ್ಟೆಯ ನೀರಿನ ಸಂಗ್ರಹ ಸಾಮಥ್ರ್ಯ 37 ಟಿಎಂಸಿ ಅಡಿ ಇದ್ದರೂ, ಈವರೆಗೆ ಮೂರು ಅಥವಾ ನಾಲ್ಕು ಸಲ ಬಿಟ್ಟರೆ ಎಂದೂ ಪೂರ್ಣ ಭರ್ತಿ ಆಗಿದ್ದೇ ಇಲ್ಲ. ಕೃಷಿ ಚಟುವಟಿಕೆ ಮತ್ತು ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಕುಡಿವ ನೀರನ್ನೂ ಒದಗಿಸಬೇಕೆಂದು ಯೋಜಿಸಲಾಗಿದ್ದ ನವಿಲುತೀರ್ಥ ಅಣೆಕಟ್ಟಿಗೆ ತನ್ನ ಉದ್ದೇಶವನ್ನು ಪೂರ್ತಿ ಈಡೇರಿಸಲಾಗಲಿಲ್ಲ.

ಅಣೆಕಟ್ಟು ಕಟ್ಟಿದಾಗಲೇ 37 ಟಿಎಂಸಿ ಅಡಿ ಪೂರ್ತಿ ಸಂಗ್ರಹವಾಗದೇ, ನೀರಿನ ಕೊರತೆ ಉಂಟಾಗುವುದು ಎಂಬ ನಿರೀಕ್ಷೆ ಇತ್ತು. ಹೀಗಾಗಿ ಅಣೆಕಟ್ಟೆಗೆ ಬೇರೆ ಮೂಲಗಳಿಂದಲೂ ನೀರು ಪೂರಣ ಮಾಡುವ ಯೋಚನೆ ಆಗಲೇ ಶುರುವಾಗಿತ್ತು.


 • 1976ರಲ್ಲೇ ಗುಳೇದಗುಡ್ಡದ ಶಾಸಕ ಬಿ. ಎಂ. ಹೊರಕೇರಿಯವರಿಂದ ವಿಧಾನಸಭೆಯಲ್ಲಿ ಮಹದಾಯಿ ತಿರುವು ಯೋಜನೆ ಪ್ರಸ್ತಾಪ.
 • 1980 ಜುಲೈ 21ರಂದು ಭೀಕರ ಬರಗಾಲದಿಂದ ಸಿಡಿದೆದ್ದ ನರಗುಂದಲ್ಲಿ ಭಾರೀ ಹೋರಾಟ
 • 1989ರಲ್ಲಿ ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿ ಮತ್ತು ಗೋವಾ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ರಾಣೆ ನಡುವೆ ನಡೆದ ‘ಮಹದಾಯಿ ತಿರುವು ಯೋಜನೆ’ ಒಪ್ಪಂದ. ಮಹದಾಯಿಯಿಂದ 45 ಟಿಎಂಸಿ ಅಡಿ ನೀರನ್ನು ತಿರುಗಿಸಿ ಮಲಪ್ರಭಾ ನದಿಗೆ ಹರಿಸುವುದು, ಅದಕ್ಕೆ ಪ್ರತಿಯಾಗಿ ಉತ್ಪತ್ತಿ ಮಾಡಲಾಗುವ ವಿದ್ಯುತ್ತನ್ನು ಗೋವೆಗೆ ನೀಡುವುದು ಒಪ್ಪಂದದ ತಿರುಳು. ಕೊನೆಗೆ ಬೊಮ್ಮಾಯಿ ಸರ್ಕಾರ ಬಿದ್ದು ಹೋಗಿ ಒಪ್ಪಂದ ಮೂಲೆ ಗುಂಪು.
 • 1993ರಿಂದ ಕರ್ನಾಟಕ, ಗೋವಾ ಮತ್ತು ಕೇಂದ್ರ ಸರ್ಕಾರಗಳ ನಡುವೆ ಪತ್ರವ್ಯವಹಾರ, ಸರಣಿ ಸಂಧಾನ ಸಭೆ.
 • 1996 ಎರಡೂ ರಾಜ್ಯಗಳ ನೀರಾವರಿ ಮಂತ್ರಿಗಳ ನಡುವೆ ಏರ್ಪಟ್ಟ ಒಪ್ಪಂದ.
 • 1997ರಲ್ಲಿ ಒಪ್ಪಂದ ಮುರಿದ ಗೋವಾ ಸರ್ಕಾರ, ಒಪ್ಪಂದ ಆಗೇ ಇಲ್ಲ ಎಂದ ನೆರೆಯ ರಾಜ್ಯ!
 • 2000ನೇ ಇಸವಿ ಹೊತ್ತಿಗೆ ಪೂರ್ಣ ಪಾಲಿನ ಹಕ್ಕೊತ್ತಾಯವನ್ನು ತಾತ್ಕಾಲಿಕವಾಗಿ ಮುಂದೂಡಿ, ತಕ್ಷಣಕ್ಕೆ ಕುಡಿವ ನೀರಿಗಾಗಿ ಮಹದಾಯಿಯ ಉಪನದಿಗಳಾದ ಕಳಸಾ, ಬಂಡೂರಿ ಮತ್ತು ಇತರ ಹಳ್ಳಗಳಿಂದ ಒಟ್ಟು 7.56 ಟಿಎಂಸಿ ಅಡಿ ನೀರನ್ನು ಮಾತ್ರವೇ ಮಲಪ್ರಭೆಗೆ ಹರಿಸುವ ಪರಿಷ್ಕೃತ ಯೋಜನೆಯನ್ನು ಗೋವಾ ಮುಂದಿಟ್ಟ ಕರ್ನಾಟಕ. ಇದ್ಕೂ ಗೋವಾದಿಂದ ಆಕ್ಷೇಪ.
 • 2002ರಲ್ಲಿ ಕರ್ನಾಟಕ ಸರಕಾರದಿಂದ ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಮಹದಾಯಿ ಕಣಿವೆಯಿಂದ ಕುಡಿವ ನೀರಿಗಾಗಿ 7.56 ಟಿಎಂಸಿ ಅಡಿ ನೀರನ್ನು ಮಲಪ್ರಭೆಗೆ ಹರಿಸಲು ಒಪ್ಪಿಗೆ ನೀಡಲು ಮನವಿ. “ಕುಡಿವ ನೀರಿಗೆ ಅತ್ಯುನ್ನತ ಆದ್ಯತೆ ನೀಡಬೇಕು” ಎಂದ 1996ರ ಸುಪ್ರಿಂ ಕೋರ್ಟ್ ತೀರ್ಪಿನನ್ವಯ ಸಚಿವಾಲಯದಿಂದ 30-4-2002ರಂದು ಮಲಪ್ರಭೆಗೆ 7.56 ಟಿಎಂಸಿ ಅಡಿ ನೀರು ಹರಿಸಲು ತಾತ್ವಿಕ ಒಪ್ಪಿಗೆ.
 • 2002 ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ತಾತ್ವಿಕ ಒಪ್ಪಿಗೆಗೆ ಮತ್ತೆ ಗೋವಾ ಸರ್ಕಾರದಿಂದ ಸಲ್ಲಿಕೆಯಾದ ಆಕ್ಷೇಪ. ಗೋವ ವಿರೋಧಕ್ಕೆ ಮನ್ನಣೆ ನೀಡಿ ಕೇಂದ್ರ ಸರ್ಕಾರದಿಂದ 19-9-2002ರಂದು ಆ ತಾತ್ವಿಕ ಒಪ್ಪಿಗೆಗೆ ತಡೆಯಾಜ್ಞೆ.
 • 2006ರಲ್ಲಿ 198 ಕೋಟಿ ವೆಚ್ಚದಲ್ಲಿ ಕಳಸಾ ನಾಲಾ ಕಾಮಗಾರಿ ಕೈಗೆತ್ತಿಕೊಂಡ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರ.
 • 2006ರಲ್ಲಿ ಮಹದಾಯಿ ಜಲವಿವಾದ ಪರಿಹಾರಕ್ಕಾಗಿ ನ್ಯಾಯಾಧಿಕರಣ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಬೇಕೆಂದು ಗೋವಾ ಸರ್ಕಾರದಿಂದ ಸುಪ್ರೀಂ ಕೋರ್ಟಿಗೆ ಅರ್ಜಿ
 • 16-11-2010ರಲ್ಲಿ ನ್ಯಾಯಾಧಿಕರಣ ರಚನೆ.
 • 2014ರಲ್ಲಿ ಕಳಸಾ ನಾಲೆಯಲ್ಲಿ ಮಳೆಗಾಲ ಸಹಜ ನೀರು ಮಲಪ್ರಭೆಗೆ ಹರಿಯದಂತೆ ತಡೆಗೋಡೆ ನಿರ್ಮಾಣ.
 • 2015 ರಲ್ಲಿ ಮತ್ತೆ ಕಾಣಿಸಿಕೊಂಡ ಬರಗಾಲ, ಜುಲೈ 16 ರಿಂದ ಯೋಜನೆ ಜಾರಿಗೆ ಬೃಹತ್ ಪ್ರತಿಭಟನೆ, ಬಂದ್.
 • 2015ರಲ್ಲಿ ಕಳಸಾ-ಬಂಡೂರಿ ಪಕ್ಷಾತೀತ ಹೋರಾಟ ವೇದಿಕೆಯಿಂದ ವರ್ಷ ಪೂರ್ತಿ ಹೋರಾಟಕ್ಕೆ ಎಲ್ಲೆಡೆಯಿಂದ ಬೆಂಬಲ. ಹುಬ್ಬಳ್ಳಿಗೆ ದೌಡಾಯಿಸಿ ಚಳವಳಿಯಲ್ಲಿ ಪಾಲ್ಗೊಂಡ ಬೆಂಗಳೂರು ಕೇಂದ್ರಿತ ಸಂಘಟನೆಗಳು, ಸಿನಿಮಾ ಕಲಾವಿದರು-ತಂತ್ರಜ್ಞರು.
 • 2015, ಸೆಪ್ಟೆಂಬರ್ 26ರಂದು ಇಡೀ ಕರ್ನಾಟಕ ಬಂದ್ ಯಶಸ್ವಿ
 • 2015, ನವೆಂಬರ್ 11 ರಂದು ಜನತೆಯ ತೀವ್ರ ಹೋರಾಟದ ಕಾವಿಗೆ ಕರಗಿದ ರಾಜ್ಯ ಸರ್ಕಾರದಿಂದ ಮಹದಾಯಿ ನ್ಯಾಯಾಧಿಕರಣಕ್ಕೆ ಮಧ್ಯಂತರ ಅರ್ಜಿ ಸಲ್ಲಿಕೆ.
 • 2016, ಜುಲೈ 27 ರಂದು ಕರ್ನಾಟಕ ಸರಕಾರದ ಮಧ್ಯಂತರ ಅರ್ಜಿ ತಿರಸ್ಕರಿಸಿದ ನ್ಯಾಯಾಧಿಕರಣ.

ಸದ್ಯ ಮಧ್ಯಂತರ ಅರ್ಜಿ ತಿರಸ್ಕೃತವಾಗಿರುವುದರಿಂದ, ಮತ್ತು ಇದೊಂದು ಅಂತರ ರಾಜ್ಯ ಜಲ ವಿವಾದವಾಗಿರುವುದರಿಂದ ಇದನ್ನು ನಿವಾರಿಸುವ ಹೊಣೆ ಕೇಂದ್ರ ಸರಕಾರದ್ದಾಗಿದೆ. ಹೀಗಾಗಿ ಕೇಂದ್ರ ಸರಕಾರ ಈಗ ಮಧ್ಯಪ್ರವೇಶ ಮಾಡಬೇಕು ಎಂಬ ಕೂಗು ಪ್ರತಿಭಟನಾಕಾರರಿಂದ ಕೇಳಿ ಬಂದಿದೆ.

ಸಮಾನತೆಗಾಗಿ ಜನಾಂದೋಲನದ ‘ಕಳಸಾ-ಬಂಡೂರಿ ಅಧ್ಯಯನ ಸಮಿತಿ’ಯ ಪರವಾಗಿ ಸಿರಿಮನೆ ನಾಗರಾಜ್ ವರದಿ ಆಧರಿಸಿ ತಯಾರಿಸಿದ ಸಂಕ್ಪಿಪ್ತ ‘ನ್ಯೂಸ್ ಸ್ಟೋರಿ’

Leave a comment

Top