An unconventional News Portal.

ಜನರ ತೆರಿಗೆಗೆ ಭಾರವಾದ ‘ಮಹದಾಯಿ’ ಕಾನೂನು ಸಮರ: ನ್ಯಾಯಾಧಿಕರಣ ಯಾರಿಗೆ ವರ?

ಜನರ ತೆರಿಗೆಗೆ ಭಾರವಾದ ‘ಮಹದಾಯಿ’ ಕಾನೂನು ಸಮರ: ನ್ಯಾಯಾಧಿಕರಣ ಯಾರಿಗೆ ವರ?

ಮಹದಾಯಿ ವಿವಾದ ರಾಜ್ಯದಲ್ಲಿ ಬೆಂಕಿಯುಗುಳಿ ಸದ್ಯಕ್ಕೆ ತಣ್ಣಗಾಗಿದೆ.

ಬೂದಿ ಮುಚ್ಚಿದ ಕೆಂಡವಾಗಿರುವ ಈ ವಿವಾದ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ಯಾವಾಗ ಕಿಡಿ ಹಚ್ಚುತ್ತೋ ಗೊತ್ತಿಲ್ಲ. ಆದರೆ ಈ ವಿವಾದದಿಂದ ಮಾತ್ರ ರಾಜಕೀಯ ಸಂಪರ್ಕ ಇರುವ ಒಂದಷ್ಟು ವಕೀಲರು ಜೇಬು ತುಂಬಿಸಿಕೊಂಡಿದ್ದಾರೆ. ಹೀಗೆ ಹಲವು ವಕೀಲರ ಪಾಲಿಗೆ ಮಹದಾಯಿ ನದಿ ಅಕ್ಷರಶಃ ಹಣದ ಗಣಿಯಾಗಿ ಬದಲಾಗಿದೆ ಎಂಬುದನ್ನು ಕೆಳಗಿನ ಮಾಹಿತಿ ನಿರೂಪಿಸುತ್ತಿದೆ.

ಕೋರ್ಟಿನಲ್ಲಿ ವಾದ ಮಾಡಲು, ಕಾನ್ಫೆರೆನ್ಸ್ (ಕನ್ಸಲ್ಟೇಷನ್, ಮೀಟಿಂಗ್ ಇತ್ಯಾದಿ), ಸಹಾಯಕರಿಗೆ, ಫಸ್ಟ್ ಕ್ಲಾಸ್ ವಿಮಾನದಲ್ಲಿ ಸಂಚರಿಸಲು, ಫೈವ್ ಸ್ಟಾರ್ ಹೊಟೇಲುಗಳಲ್ಲಿ ಉಳಿದುಕೊಳ್ಳಲೆಂದು ಕರ್ನಾಟಕದ ಜನರ ಹಣ ನೀರಿನಂತೆ ಖರ್ಚಾಗುತ್ತಿದೆ. ಇದರಿಂದ ನಮ್ಮ ನೆಲಕ್ಕೆ ನೀರು ಬರುತ್ತೋ ಬಿಡುತ್ತೋ, ಕಾನೂನು ಹೋರಾಟಕ್ಕೆ ಮಾತ್ರ ತಿಜೋರಿಯಿಂದ ಹಣವಂತೂ ಹರಿದು ಹೋಗುತ್ತಿದೆ.

ಮಹದಾಯಿ ವಿವಾದಕ್ಕೆ ಸಂಧಿಸಿದಂತೆ ಕರ್ನಾಟಕದ ಪರವಾಗಿ ನ್ಯಾಯಾಧಿಕರಣದಲ್ಲಿ ವಾದ ಹೂಡಲು ಹಲವಾರು ವಕೀಲರು ಮತ್ತು ಜಲ ತಜ್ಞರಿದ್ದಾರೆ. ಈ ವಕೀಲರ ತಂಡವನ್ನು ಮುನ್ನಡೆಸುತ್ತಿರುವವರು ಫಾಲಿ ಸ್ಯಾಮ್ ನಾರಿಮನ್. ಒಂದು ಅಪಿಯರೆನ್ಸಿಗೆ 4.5 ಲಕ್ಷ; ಒಂದು ಗಂಟೆ ವಾದಿಸಲು ಇವರಿಗೆ 1 ಲಕ್ಷ ಹಣ ನೀಡಬೇಕು.  ನಾರಿಮನ್ ದೇಶದ ಪ್ರಖ್ಯಾತ ಸಂವಿಧಾನ ತಜ್ಞರು ಮತ್ತು ನದಿ ನೀರಿನ ಹಂಚಿಕೆಯ ವಿವಾದಗಳಲ್ಲಿ ದೇಶದಲ್ಲಿರುವ ಕೆಲವೇ ಕೆಲವು ಪ್ರಮುಖರಲ್ಲಿ ಒಬ್ಬರು. ಸದ್ಯ ಅವರು 50 ಗಂಟೆಗಳ ಕಾನ್ಫೆರೆನ್ಸ್ ಮುಗಿಸಿದ್ದಾರೆ. ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಂತರ ಅರ್ಜಿ ಸಲ್ಲಿಸಲು ಇವರಿಗೆ ನೀಡಿರುವ ಹಣವೇ 70,20,000 ರೂಪಾಯಿ. ಈವರೆಗೆ ಒಟ್ಟು ಐದು ವಿಚಾರಣೆಗಳು ಈ ಪ್ರಕರಣದಲ್ಲಿ ನಡೆದಿವೆ.

ಜತೆಗೆ, ಈ ವಿವಾದ ಕಿಡಿ ಹೊತ್ತಿಸಿರುವ ಮಧ್ಯಂತರ ಅರ್ಜಿ ಸಲ್ಲಿಸಲು ರಾಜ್ಯ ಸರಕಾರ ತೆತ್ತಿರುವ ಹಣವೇ 5 ಕೋಟಿ.

ನಮ್ಮ ರಾಜ್ಯದ ಪರವಾಗಿ ವಾದ ಮಂಡಿಸುತ್ತಿರುವ ವಕೀಲರ ಹೆಸರುಗಳು ಹೀಗಿವೆ,

 1. ಫಾಲಿ ಎಸ್ ನಾರಿಮನ್
 2. ಮೋಹನ್ ಕಾತರಕಿ
 3. ಕಾಶಿ ವಿಶ್ವೇಶ್ವರ್
 4. ಎಂ. ಬಿ. ಝಿರಾಲಿ
 5. ಎಸ್.ಎಸ್.ಜವಳಿ
 6. ದಿವಾನ್
 7. ಅಡ್ವೊಕೇಟ್ ಜನರಲ್ (ಸದ್ಯ ಮಧುಸೂದನ್ ಆರ್ ನಾಯಕ್)
 8. ಅನಿತಾ ಶೆಣೈ
 9. ನಿಶಾಂತ್ ಪಾಟಿಲ್

ತಂಡದಲ್ಲಿ ಇರುವವರಲ್ಲದೇ, ನ್ಯಾಯಾಧಿಕರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾವತಿ ಮಾಡಿದ ಹಣದ ವಿವರಗಳು ಈ ಕೆಳಗಿನಂತಿವೆ (ರೂಪಾಯಿಗಳಲ್ಲಿ),

 1. ಎಸ್. ವಿಜಯ ಶಂಕರ್ – 6,10,000
 2. ರವಿವರ್ಮ ಕುಮಾರ್ – 30,75,000
 3. ಮಧುಸೂದನ್ ಆರ್ ನಾಯಕ್ (ಹಾಲಿ ಎಜಿ) – 10,00,000
 4. ಫಾಲಿ ಎಸ್ ನಾರಿಮನ್ – 2,60,30,000
 5. ಎಸ್. ಎಸ್. ಜವಳಿ – 1,14,52,900
 6. ಮೋಹನ್ ಕಾತರಕಿ – 2,41,58,828
 7. ಬ್ರಿಜೇಶ್ ಕಾಳಪ್ಪ – 67,99,534
 8. ಎಸ್. ಸಿ. ಶರ್ಮ – 41,05,000
 9. ಅನಿತಾ ಶೆಣೈ – 1,04,37,085
 10. ನಿಶಾಂತ್ ಪಾಟಿಲ್ – 82,75,437
 11. ಎಂ. ಬಿ. ಝಿರಾಲಿ – 80,49,499
 12. ಕಾಶಿ ವಿಶ್ವೇಶ್ವರ್ – 27,47,426
 13. ಕ್ಲರ್ಕ್ ಗಳಿಗೆ – 26,03,000

ಕೊನೆಯಲ್ಲಿರುವ ಕ್ಲರ್ಕ್ ಗಳಿಗೆ ಪಾವತಿಸಲಾಗಿರುವ ಹಣವನ್ನು, ನಾರಿಮನ್ ಅವರಿಗೇ ಪಾವತಿಸಲಾಗಿದೆ. ಅವರು ಯಾರಿಗೆ ಹಣ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಪಟ್ಟಿಯಲ್ಲಿ ಕ್ರಮ ಸಂಖ್ಯೆ 8ರಲ್ಲಿರುವ ಎಸ್. ಸಿ. ಶರ್ಮ ನಾರಿಮನ್ ಅವರಿಗೆ ಜೂನಿಯರ್ ಆಗಿದ್ದು 40 ಲಕ್ಷ ಫೀಸ್ ಇಸಿದುಕೊಂಡಿದ್ದಾರೆ. ಕ್ರಮ ಸಂಖ್ಯೆ 10 ರಲ್ಲಿರುವ ನಿಶಾಂತ್ ಪಾಟೀಲ್ ಕರ್ನಾಟಕ ಹೈ ಕೋರ್ಟ್ ನ್ಯಾಯಮೂರ್ತಿಗಳಾದ ಎನ್. ಕೆ. ಪಾಟೀಲ್ ಪುತ್ರರಾಗಿದ್ದಾರೆ. ವಕೀಲರಾಗಿ 26 ಜೂನ್ 2009ರಲ್ಲಿ ನೋಂದಾವಣಿ ಮಾಡಿಕೊಂಡಿದ್ದ ಅವರು, ಅದಾಗಿ ಕೇವಲ ಎರಡೇ ವರ್ಷಗಳಲ್ಲಿ ಅಂದರೆ 2011ರಲ್ಲಿ ಮಹದಾಯಿ ಕಾನೂನು ತಜ್ಞರ ತಂಡ ಸೇರ್ಪಡೆಯಾಗಿದ್ದಾರೆ. ಅವರು ಈವರೆಗೆ ತೆಗದುಕೊಂಡಿರುವ ಹಣ 80 ಲಕ್ಷ ರೂಪಾಯಿಗಳು.

ಕೆಲವೇ ಕೆಲವರನ್ನು ಹೊರತುಪಡಿಸಿ ಉಳಿದವರೆಲ್ಲಾ ರಾಜಕಾರಣಿಗಳ ಜೊತೆಗೆ ಸಂಪರ್ಕ ಹೊಂದಿದವರೇ ಆಗಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಒಬ್ಬರಂತೂ ಕಾಂಗ್ರೆಸ್ ಪಕ್ಷಕ್ಕೇ ಸೇರಿದವರಾಗಿದ್ದು, ಕಾನೂನು ಸಲಹೆಗಾರರೂ ಆಗಿರುವ ಬ್ರಿಜೇಶ್ ಕಾಳಪ್ಪ 67 ಲಕ್ಷ ಪಡೆದುಕೊಂಡಿದ್ದಾರೆ.

ವಕೀಲರ ತಂಡದಲ್ಲಿರುವ ಹೆಚ್ಚಿನವರು (ನಾರಿಮನ್ ಮೇಲೆ ಗೌರವ ಇಟ್ಟುಕೊಂಡು) ಹೇಳುವುದಾದರೆ ತಜ್ಞರ ತಂಡ ಸೇರಲು ಲಾಬಿ ನಡೆಸಿದ್ದಾರೆ ಎಂದು ಆರೋಪಿಸುತ್ತವೆ ಮೂಲಗಳು. ಕೆಲವರಂತೂ ವರ್ಷಾನುಗಟ್ಟಲೆ ಕರ್ನಾಟಕದ ವಕೀಲರಾಗಿರುವ ಮಾಹಿತಿ ಸಿಎಂ ಕಚೇರಿ ಮೂಲಗಳಿಂದ ತಿಳಿದು ಬಂದಿದೆ. ಎಸ್. ಎಸ್. ಜವಳಿ ಎಂಬ ವಕೀಲರು ಕಳೆದ 45 ವರ್ಷಗಳಿಂದ ಕಾವೇರಿ ವಿವಾದದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.

ಕನ್ನಡಿಗರು ಎಂದು ಕರೆಸಿಕೊಳ್ಳುವ ಹಲವಾರು ವಕೀಲರು ನದಿ ನೀರಿನ ಹಂಚಿಕೆ ಪ್ರಕರಣದಲ್ಲಿ ಭರ್ಜರಿ ಶುಲ್ಕವನ್ನು ವಸೂಲು ಮಾಡಿದ್ದರೆ, ಪಕ್ಕದ ತಮಿಳುನಾಡಿನಲ್ಲಿ ಅವರ ರಾಜ್ಯಕ್ಕಾಗಿ ವಕೀಲರು ಉಚಿತ ಸೇವೆ ನೀಡುತ್ತಿದ್ದಾರೆ ಎಂಬುದನ್ನು ಗಮನಿಸಬೇಕಿದೆ. ಒಂದಿಬ್ಬರು ವಕೀಲರನ್ನು ಹೊರತುಪಡಿಸಿ ಉಳಿದವರೆಲ್ಲಾ ಸರಕಾರದ ಹಣ ಪೋಲು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ.

ಈವರೆಗೆ ಕರ್ನಾಟಕ ನೀರಿನ ವಿವಾದ ಮತ್ತು ಗಡಿ ವಿವಾದಕ್ಕೆ ಸಂಬಂಧಿಸಿದಂತೆ 150 ಕೋಟಿಗೂ ಹೆಚ್ಚು ಹಣ ನ್ಯಾಯಾಲಯಗಳಿಗಾಗಿಯೇ ಸುರಿದಿದೆ. ವಿಪರ್ಯಾಸವೆಂದರೆ ಹೆಚ್ಚಿನ ಪ್ರಕರಣಗಳಲ್ಲಿ ಕರ್ನಾಟಕ ಕೇಸು ಗೆಲ್ಲುವಲ್ಲಿ ವಿಫಲವಾಗಿದೆ.

ತನಿಖೆಗೆ ಆದೇಶ:

ಇದರ ನಡುವೆಯೇ ಭಾನುವಾರ ಮಾಧ್ಯಮಗಳ ಜತೆ ಮಾತನಾಡಿರುವ ಗೃಹ ಸಚಿವ ಜಿ. ಪರಮೇಶ್ವರ್, “ನರಗುಂದಲ್ಲಿ ರೈತರ ಮೇಲೆ ನಡೆದ ಪೊಲೀಸ್ ಲಾಠಿ ಚಾರ್ಜ್ ಕುರಿತು ಹಿರಿಯ ಅಧಿಕಾರಿ ಕಮಲ್ ಪಂಥ್ ಅವರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ. ವಾರದೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುಗುವುದು,” ಎಂದು ಭರವಸೆ ನೀಡಿದ್ದಾರೆ.

ಉತ್ತರ ಕರ್ನಾಟಕದ ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಮಹಿಳೆಯರು, ಮಕ್ಕಳೆನ್ನದೆ ಟಿವಿ ಕ್ಯಾಮೆರಾಗಳ ಮುಂದೆಯೇ ಅಮಾನುಷವಾಗಿ ಲಾಠಿ ಬೀಸಿದ್ದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.

Leave a comment

Top