An unconventional News Portal.

ಗೋಹತ್ಯೆ ನಿಷೇಧ ಓಕೆ; ಮಾಂಸ ತಿನ್ನೋಕೆ ತಡೆ ಏಕೆ?: ಬಾಂಬೆ ಹೈಕೋರ್ಟ್ ಆದೇಶ

ಗೋಹತ್ಯೆ ನಿಷೇಧ ಓಕೆ; ಮಾಂಸ ತಿನ್ನೋಕೆ ತಡೆ ಏಕೆ?: ಬಾಂಬೆ ಹೈಕೋರ್ಟ್ ಆದೇಶ

ಮಹಾರಾಷ್ಟ್ರ ಸರ್ಕಾರದ ಗೋಹತ್ಯೆ ನಿಷೇಧ ಕಾನೂನನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದೆ.

ಆದರೆ, ಹೊರಗಿನಿಂದ ಗೋಮಾಂಸ ಖರೀದಿಸಿ  ಸಂಗ್ರಹಿಸಿಡುವುದನ್ನು ಕಾನೂನಿನ ಪರಿಧಿಯಿಂದ ಹೊರಗಿಡುವಂತೆ ಸೂಚಿಸಿ ಶುಕ್ರವಾರ ಮಹತ್ವದ ಆದೇಶ ಹೊರಡಿಸಿದೆ.

ಮಹಾರಾಷ್ಟ್ರದಲ್ಲಿ ಹೇರಲಾಗಿರುವ ಗೋಮಾಂಸ ಮೇಲಿನ ನಿಷೇಧಕ್ಕಿರುವ ಸಾಂವಿಧಾನಿಕ ಸಿಂಧುತ್ವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವಾರು ಅರ್ಜಿಗಳ ವಿಚಾರಣೆಯನ್ನು ನಡೆಸಿದ್ದ ಬಾಂಬೆ ಹೈಕೋರ್ಟ್ ಈ ತೀರ್ಮಾನವನ್ನು ಪ್ರಕಟಿಸಿದೆ. ವಿಭಾಗೀಯ ಪೀಠವು ಈ ವರ್ಷ ಜನವರಿಯಲ್ಲಿ ತನ್ನ ತೀರ್ಪನ್ನು ಕಾದಿರಿಸಿತ್ತು. ಅಂತಿಮವಾಗಿ ಶುಕ್ರವಾರ ತೀರ್ಪನ್ನು ಪ್ರಕಟಿಸಿದೆ.

ಗೋಮಾಂಸ ಖರೀದಿಯನ್ನು(ಸಂಗ್ರಹ) ಅಪರಾಧದ ಪರಿಧಿಯಿಂದ ಹೊರಗಿಟ್ಟ ಕೋರ್ಟ್ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಬಾಂಬೆ ಹೈಕೋರ್ಟ್ ನ ವಿಭಾಗೀಯ ಪೀಠ, ಗೋಮಾಂಸ ಖರೀದಿಸುವುದನ್ನು ಅಪರಾಧೀಕರಣಗೊಳಿಸಿರುವುದು ಅಸಾಂವಿಧಾನಿಕ ಎಂದು ಹೇಳಿದೆ.

ಮಹಾರಾಷ್ಟ್ರ ಸರಕಾರ 2015 ರ ಮಾರ್ಚ್ ನಲ್ಲಿ ಗೋಹತ್ಯೆ, ಗೋಮಾಂಸ ನಿಷೇಧ ಕಾನೂನನ್ನು ಜಾರಿಗೊಳಿಸಿತ್ತು. ಕಾನೂನು ಉಲ್ಲಂಘನೆ ಮಾಡಿದವರಿಗೆ 10 ಸಾವಿರ ರೂಪಾಯಿ ದಂಡ ಹಾಗೂ 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಕಾನೂನಿನ ಸೆಕ್ಷನ್ 5 ಡಿ ಪ್ರಕಾರ ಮಹಾರಾಷ್ಟ್ರದಲ್ಲಿ ಗೋಹತ್ಯೆ ಮಾಡದೆ ಹೊರಗಿನಿಂದ ಗೋಮಾಂಸ ಖರೀದಿಸುವುದೂ ಸಹ ಅಪರಾಧವಾಗಿತ್ತು. ಈ ಅಪರಾಧ ಎಸಗಿದವರಿಗೆ 2 ,000 ರೂ ದಂಡ ಹಾಗೂ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಬಹುದಿತ್ತು.

beef-meat-ban

ಗೋಹತ್ಯೆ ನಿಷೇಧ ಕಾನೂನಿನ ಸೆಕ್ಷನ್ 5 ಡಿ (ಗೋಮಾಂಸ ಖರೀದಿಯ ಅಪರಾಧೀಕರಣವನ್ನು)ಯನ್ನು ವಿರೋಧಿಸಿ ಹಲವು ಅರ್ಜಿಗಳು ಕೋರ್ಟ್ ಗೆ ಸಲ್ಲಿಕೆಯಾಗಿದ್ದವು. ಆದರೆ ಗೋಹತ್ಯೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾದರೆ ಗೋಮಾಂಸ ನಿಷೇಧವನ್ನೂ ಹೇರಬೇಕೆಂದು ಮಹಾರಾಷ್ಟ್ರ ಸರಕಾರ ವಾದ ಮಂಡಿಸಿತ್ತು.

ಬಾಂಬೆ ಹೈಕೋರ್ಟ್ ಈ ವಿಷಯದಲ್ಲಿ ಇಂದು ಪ್ರಕಟಿಸಿರುವ ತೀರ್ಪಿನ ಪ್ರಕಾರ ಮಹಾರಾಷ್ಟ್ರದಲ್ಲಿ ಗೋಮಾಂಸ ಮೇಲಿನ ನಿಷೇಧವು ಮುಂದುವರಿಯುತ್ತದೆ. ದನ ಮತ್ತು ಎಮ್ಮೆ ಮಾಂಸ ಮಾರಾಟ ಮೇಲಿನ ನಿಷೇಧ ಮುಂದುವರಿಯುವುದಾದರೂ ಮಹಾರಾಷ್ಟ್ರದ ಹೊರಗಿನಿಂದ ದನದ ಮತ್ತು ಎಮ್ಮೆಯ ಮಾಂಸವನ್ನು ತಂದಿರಿಸಿಕೊಂಡಲ್ಲಿ ಅದು ಕ್ರಿಮಿನಲ್ ಅಪರಾಧ ಆಗುವುದಿಲ್ಲ.

2015ರಲ್ಲಿ ರಾಷ್ಟ್ರಪತಿಗಳು ಮಹಾರಾಷ್ಟ್ರ ಪಶು ಸಂರಕ್ಷಣೆ (ತಿದ್ದುಪಡಿ) ಕಾಯಿದೆಗೆ ಅಂಕಿತ ಹಾಕಿದ್ದರು. 1976ರ ಮೂಲ ಕಾಯಿದೆಯು ರಾಜ್ಯದಲ್ಲಿ ಗೋಹತ್ಯೆಯನ್ನು ನಿಷೇಧಿಸಿತ್ತು. ತಿದ್ದುಪಡಿ ಮಾಡಲಾದ ಕಾಯಿದೆಯು ಗೋಹತ್ಯೆ ಮಾತ್ರವಲ್ಲದೆ ಎಮ್ಮೆ, ಕೋಣಗಳ ಹತ್ಯೆಯನ್ನು ಕೂಡ ನಿಷೇಧಿಸಿತ್ತು; ಜತೆಗೆ ಖಾದ್ಯದ ಉದ್ದೇಶಕ್ಕಾಗಿ ಈ ಮಾಂಸವನ್ನು ಶೇಖರಿಸುವುದು ಮತ್ತು ಬಳಸುವುದನ್ನು ಕೂಡ ನಿಷೇಧಿಸಿತ್ತು.

ಈ ತಿದ್ದುಪಡಿ ಕಾಯಿದೆಯ ಪ್ರಕಾರ ಗೋ ಹತ್ಯೆಗೆ ಐದು ವರ್ಷ ಜೈಲು ಮತ್ತು 10,000 ರೂ.ಗಳ ದಂಡವನ್ನು ಹೇರಬಹುದಾಗಿದೆ. ಎಮ್ಮೆ ಮತ್ತು ಕೋಣ ಮಾಂಸ ಹೊಂದಿರುವ ಅಪರಾಧಕ್ಕೆ ಒಂದು ವರ್ಷ ಜೈಲು ಮತ್ತು 2,000 ರೂ. ದಂಡ ಹೇರಬಹುದಾಗಿದೆ.

Top