An unconventional News Portal.

ಥೇಮ್ಸ್ ದಂಡೆಯ ನಗರದಲ್ಲಿ ರಾಜಕೀಯ ಪಲ್ಲಟ: ಬಸ್ ಡ್ರೈವರ್ ಮಗ ಈಗ ಮೇಯರ್!

ಥೇಮ್ಸ್ ದಂಡೆಯ ನಗರದಲ್ಲಿ ರಾಜಕೀಯ ಪಲ್ಲಟ: ಬಸ್ ಡ್ರೈವರ್ ಮಗ ಈಗ ಮೇಯರ್!

ಜಗತ್ತಿನ ಅತೀ ದೊಡ್ಡ ಬಜೆಟ್ ಹೊಂದಿರುವ ನಗರ ಲಂಡನ್’ನ ನೂತನ ಮೇಯರ್ ಆಗಿ ಪಾಕಿಸ್ತಾನ ಮೂಲದ ಸಾದಿಕ್ ಖಾನ್ ಅಧಿಕಾರ ವಹಿಸಿಕೊಂಡಿದ್ದಾರೆ.

ಒಟ್ಟು 1700 ಕೋಟಿ ಬಜೆಟ್ ಹೊಂಡಿರುವ ಲಂಡನ್ ನಗರಾಡಳಿತದ ಚುಕ್ಕಾಣಿಯನ್ನು ಬಸ್ ಡ್ರೈವರ್ ಮಗ, ಭಿನ್ನ ಹಿನ್ನೆಲೆಯಿಂದ ಬಂದಿರುವ ಖಾನ್ ಹಿಡಿದಿರುವುದು ಜಾಗತಿಕ ರಾಜಕೀಯ ವಿಸ್ಮಯಗಳಲ್ಲಿ ಒಂದು ಎಂದು ವಿಶ್ಲೇಷಿಸಲಾಗುತ್ತಿದೆ.

“ತನ್ನ ರಾಜಕೀಯ ಬೆಳವಣಿಗಾಗಿ, ಎಲ್ಲಾ ರೀತಿಯ ರಾಜಕೀಯ ತಂತ್ರಗಾರಿಗಳನ್ನು ಹೆಣೆದ ಆರೋಪವೂ ಸಾದಿಕ್ ಖಾನ್ ಮೇಲಿದೆ. ಮುಂದಿನ ಕೆಲವು ದಿನಗಳಲ್ಲಿ ಅವರ ಆಡಳಿತದ ಸ್ವರೂಪ ಜನರಿಗೆ ಅರ್ಥವಾಗಲಿದೆ,” ಎಂದು ಯುಕೆ ಮೂಲದ ‘ಟೆಲಿಗ್ರಾಫ್’ ವರದಿ ಮಾಡಿದೆ.

ಲಂಡನ್ ಮೇಯರ್ ಗಾದಿಗಾಗಿ ನಡೆದ ಚುನಾವಣೆ ಸಮಯದಲ್ಲಿ ಖಾನ್ ವಿರುದ್ಧ ಸೆಣಸಿದ ಕನ್ಸರ್ವೇಟಿವ್ ಪಕ್ಷ, ‘ಧಾರ್ಮಿಕ ಮತಾಂಧರಿಗೆ ನೆರವು ನೀಡಿದ’ ಗಂಭೀರ ಆರೋಪವನ್ನು ಮಾಡಿತ್ತು. ಇದನ್ನು ಸಕಾರಾತ್ಮವಾಗಿಯೇ ಸ್ವೀಕರಿಸಿದ ಖಾನ್, ಧಾರ್ಮಿಕ ಸಾಮರಸ್ಯದ ಘೋಷಣೆಯ ಮೂಲಕವೇ ಜನಾಭಿಪ್ರಾಯವನ್ನು ಪಡೆದುಕೊಂಡಿದ್ದರು.

“ಧಾರ್ಮಿಕ ಮೂಲಭೂತವಾದವನ್ನು ಖಂಡಿಸುವ ಭರಾಟೆಯಲ್ಲಿ ಒಂದು ಸಮುದಾಯವನ್ನು ಮೂಲೆಗೆ ತಳ್ಳಿದರೆ, ಅವರಿಗೆ ಬೇರೆ ದಾರಿ ಇಲ್ಲದೆ ಭಯೋತ್ಪಾದನೆಗೆ ಇಳಿಯುತ್ತಾರೆ. ಈ ಸಮಯದಲ್ಲಿ ಅವರಿಗೆ ಸಹಾಯ ಮಾಡುವ ಮೂಲಕ ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ,” ಎಂದು ಖಾನ್ ಬಹಿರಂಗವಾಗಿಯೇ ಘೋಷಿಸಿದ್ದರು. ಇದು ಚುನಾವಣೆಯಲ್ಲಿ ಭಾರಿ ಜನಪ್ರಿಯತೆ ಗಳಿಸಲು ಸಹಾಯ ಮಾಡಿತ್ತು. ಹಿಂದಿನ  ಎಲ್ಲಾ ಮೇಯರ್ಗಳಿಗಿಂತ ಅತೀ ಹೆಚ್ಚು ಮತ ಗಳಿಸುವ ಮೂಲಕ ಲಂಡನ್ ನಗರದ ಮೊದಲ ಮುಸ್ಲಿಂ ಮೇಯರ್ ಎಂಬ ಹೆಗ್ಗಳಿಕೆ ಖಾನ್ ಪಾತ್ರವಾಗಿದ್ದಾರೆ.

ಭಾರತದ ಹಿನ್ನೆಲೆ: 

london-mayor-sadiq-khan-2ಸಾದಿಕ್ ಖಾನ್ ಅಜ್ಜ ಭಾರತ ಮೂಲದವರು. ಸ್ವಾತಂತ್ರ್ಯ ಸಮಯದಲ್ಲಿ ನಡೆದ ಗಲಭೆಗಳಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದ ಕುಟುಂಬಗಳ ಪೈಕಿ ಇವರದ್ದೂ ಒಂದು. ಅಲ್ಲಿಂದ ಸಾದಿಕ್ ತಂದೆ, ಅಮಾನುಲ್ಲಾ ಖಾನ್ ಲಂಡನ್ ನಗರಕ್ಕೆ ವಲಸೆ ಹೋದರು. ಲಂಡನ್ ನಗರದಲ್ಲಿ 25 ವರ್ಷಗಳ ಕಾಲ ಅವರು ಬಸ್ ಡ್ರೈವರ್ ಆಗಿ ಕೆಲಸ ನಿರ್ವಹಿಸಿದ್ದರು. ಒಟ್ಟು 7 ಮಕ್ಕಳ ಕುಟುಂಬದಲ್ಲಿ ಸಾದಿಕ್ ಚಿಕ್ಕವರು. ಸಾದಿಕ್ ಕಾನೂನು ಪದವಿ ಓದಿ, ಮಾನವ ಹಕ್ಕುಗಳ ಪರವಾಗಿ ವಕಾಲತ್ತು ವಹಿಸುವ ಮೂಲಕ ಗಮನ ಸೆಳೆದವರು.

ಮುಂದೆ, ಲೇಬರ್ ಪಾರ್ಟಿ ಸೇರಿದ ಅವರು, ಟೆಲಿಕಾಂ ಹಾಗೂ ಸಾರಿಕೆ ಇಲಾಖೆಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವವನ್ನೂ ಹೊಂದಿದ್ದಾರೆ. ಇದೀಗ ಲೇಬರ್ ಪಾರ್ಟಿಯಿಂದ ಲಂಡನ್ ಮೇಯರ್ ಆಗಿ ಅಧಿಕಾರ ವಹಿಸಿಕೊಳ್ಳಲಿರುವ ಅವರು ಪಾಶ್ಚಿಮಾತ್ಯ ದೇಶಗಳ ಪ್ರಮುಖ ನಗರವೊಂದರಲ್ಲಿ ಉನ್ನತ ಸ್ಥಾನಕ್ಕೇರುತ್ತಿರುವ ಮುಸ್ಲಿಂ ನಾಯಕ ಎಂಬ ಕಾರಣಕ್ಕೆ ಸದ್ದು ಮಾಡುತ್ತಿದ್ದಾರೆ.

“ಬರಹಗಾರರೂ ಆಗಿರುವ ಖಾನ್, ಲಂಡನ್ ಮೂಲಕ ವಿಶ್ವದಲ್ಲಿ ಹೆಚ್ಚುತ್ತಿರುವ ಮುಸ್ಲಿಂ ಧರ್ಮದ ವಿರುದ್ಧದ ಅಸಹನೆಗೆ ಉತ್ತರವಾಗಿ ನಿಲ್ಲಲಿದ್ದಾರೆ,” ಎಂದು ಲೇಬರ್ ಪಕ್ಷದ ಪ್ರಕಟಣೆ ತಿಳಿಸಿದೆ.

 

Top