An unconventional News Portal.

ಮರಳಿ ಬಂತು ಸಂಭ್ರಮದ ಉಗಾದಿ: ಲೋಕಾಯುಕ್ತ ‘ಸಮಾಧಿ’ಗೆ ಇಂದು ವರ್ಷದ ತಿಥಿ!

ಮರಳಿ ಬಂತು ಸಂಭ್ರಮದ ಉಗಾದಿ: ಲೋಕಾಯುಕ್ತ ‘ಸಮಾಧಿ’ಗೆ ಇಂದು ವರ್ಷದ ತಿಥಿ!

ಲೋಕಾಯುಕ್ತ ಪೊಲೀಸ್ ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ಪ್ರಕರಣಗಳನ್ನು ನೂತನವಾಗಿ ರಚನೆಗೊಂಡಿರುವ ‘ಭ್ರಷ್ಟಾಚಾರ ನಿಗ್ರಹ ದಳ’ (ಎಸಿಬಿ)ಕ್ಕೆ ವರ್ಗಾವಣೆ ಮಾಡದಂತೆ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ನೀಡಿದೆ. ಈ ಮೂಲಕ, ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದ ಸುಮಾರು 600 ಪ್ರಕರಣಗಳು ‘ಎಸಿಬಿ’ಗೆ ವರ್ಗಾವಣೆಯೂ ಆಗುವಂತಿಲ್ಲ; ಇತ್ತ ಸರಕಾರ ಲೋಕಾಯುಕ್ತ ಪೊಲೀಸರಿಗೆ ನೀಡಿದ್ದ ಠಾಣಾಧಿಕಾರವನ್ನು ಕಸಿದುಕೊಂಡಿರುವುದರಿಂದ ‘ಭ್ರಷ್ಟ’ರನ್ನು ಮುಟ್ಟುವಂತಿಲ್ಲ; ಎಂಬಂತಾಗಿದೆ ಪರಿಸ್ಥಿತಿ.

ವಕೀಲ ಚಿದಾನಂದ ಅರಸ್ ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿದ್ದ ಹೈಕೋರ್ಟ್ ಗುರುವಾರ ವಿಚಾರಣೆ ನಡೆಸಿ ಮಧ್ಯಂತರ ಆದೇಶ ಹೊರಡಿಸಿದೆ. ಚಿದಾನಂದ ಅರಸ್, ಲೋಕಾಯುಕ್ತ ಪೊಲೀಸರು ನಡೆಸುತ್ತಿರುವ ಪ್ರಕರಣಗಳನ್ನು ‘ಎಸಿಬಿ’ ವರ್ಗಾವಣೆ ಮಾಡದಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಮುಂದಿನ ಆದೇಶದವರೆಗೆ ‘ಎಸಿಬಿ’ಗೆ ಯಾವುದೇ ಪ್ರಕರಣಗಳನ್ನು ವರ್ಗಾವಣೆ ಮಾಡಬಾರದು ಎಂದು ನ್ಯಾಯಾಲಯ ಹೇಳಿದೆ.

ತ್ರಿಶಂಕು ಸ್ಥಿತಿ:

ಒಂದು ಕಾದಲ್ಲಿ ದೇಶದಲ್ಲಿಯೇ ಭ್ರಷ್ಟಾಚಾರ ನಿಗ್ರಹದ ವಿಚಾರದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಹೆಸರು ಮಾಡಿತ್ತು. ಇತರೆ ರಾಜ್ಯಗಳಿಗೆ ಮಾದರಿ ಎನ್ನಿಸಿಕೊಂಡಿತ್ತು. ಅದರಲ್ಲೂ ಬಳ್ಳಾರಿ ಗಣಿ ಹಗರಣದ ವಿಚಾರದಲ್ಲಿ ವರದಿ ನೀಡಿದ ಲೋಕಾಯುಕ್ತ ಸಂಸ್ಥೆ ತನ್ನ ಒಳಗಿನ ಮಿತಿಗಳ ಆಚೆಗೂ, ಭ್ರಷ್ಟರ ವಿರುದ್ಧ ಜನರಿಗಿರುವ ಆಕ್ರೋಶಕ್ಕೆ ಕಾನೂನಾತ್ಮಕ ವೇದಿಕೆ ಕಲ್ಪಿಸಿತ್ತು.

ಆದರೆ, 2013ರ ‘ಪ್ರೇಮಿಗಳ ದಿನ’ದಂದು ಲೋಕಾಯುಕ್ತರಾಗಿ ನ್ಯಾ.ಭಾಸ್ಕರ್ ರಾವ್ ಅಧಿಕಾರ ಸ್ವೀಕರಿಸಿದರು. ಅಲ್ಲಿಂದ ಆಚೆಗೆ, ಲೋಕಾಯುಕ್ತ ಸಂಸ್ಥೆ ಒಳಗೆ ಮೊದಲಿನಿಂದಲೂ ಇದ್ದ ಹುಳುಕುಗಳು; ಕೊಳೆಯತೊಡಗಿದವು. ಕೊನೆಗೆ, 2015ರ ಮೇ ತಿಂಗಳಿನಲ್ಲಿ ನ್ಯಾ. ಭಾಸ್ಕರ್ ರಾವ್ ಪುತ್ರ ಹಾಗೂ ಆತನ ಸಹಚರರು ಲೋಕಾಯುಕ್ತ ಹೆಸರನ್ನು ದುರ್ಬಳಿಕೆ ಮಾಡಿಕೊಂಡ ಪ್ರಕರಣ ಹೊರಬಿತ್ತು. ಈ ಮೂಲಕ ಮೊದಲೇ ಅಂತರಾಳದಲ್ಲಿ ನೈತಿಕವಾಗಿ ಕುಸಿಯುತ್ತಿದ್ದ ಸಂಸ್ಥೆ ಹೆಚ್ಚು ಕಡಿಮೆ ಮುಗಿದೇ ಹೋಯಿತು ಎಂಬ ಪರಿಸ್ಥಿತಿ ನಿರ್ಮಾಣವಾಯಿತು.

ತನಿಖೆ ಕಾರಣ:

ಇದರ ನಡುವೆಯೂ, ಲೋಕಾಯುಕ್ತ ಸಂಸ್ಥೆ ಭ್ರಷ್ಟರ ವಿರುದ್ಧ ದಾಳಿಗಳನ್ನು ಸಂಘಟಿಸುವ ಮೂಲಕ ತನ್ನ ಅಸ್ಥಿತ್ವವನ್ನು ಸಾಬೀತುಪಡಿಸುವ ಪ್ರಯತ್ನದಲ್ಲಿ ತೊಡಗಿತ್ತು. ಜತೆಗೆ, ಸುಮಾರು 600 ಪ್ರಕರಣಗಳನ್ನು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿಕೊಂಡು ಬರುತ್ತಿದ್ದರು. ಇದರಲ್ಲಿ ‘ವಿಐಪಿ ಪ್ರಕರಣಗಳು’ ಎಂದು ಗುರುತಿಸುವ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಕೃಷ್ಣಾ ವಿರುದ್ಧದ ಭ್ರಷ್ಟಾಚಾರ ಪ್ರಕರಣ, ಐಪಿಎಸ್ ಅಧಿಕಾರಿ ಕಪಿಲ್ ಮೋಹನ್ ಕಾಳಧನ ಪತ್ತೆ ಪ್ರಕರಣ, 195 ‘ಸಹಾಯಕ ಸಾರ್ವಜನಿಕ ಅಭಿಯೋಜಕ’ (ಎಪಿಪಿ)ರ ಅಕ್ರಮ ನೇಮಕಾತಿ ಪ್ರಕರಣ, ಮಾಜಿ ಸಚಿವ ಜನಾರ್ಧನ ರೆಡ್ಡಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ, ಸಿಎಂ ಸಿದ್ದರಾಮಯ್ಯ ವಿರುದ್ಧದ ಅಕ್ರಮ ಗಣಿ ಗುತ್ತಿಗೆ ನೀಡಿಕೆ ಪ್ರಕರಣ, ಅರ್ಕಾವತಿ ಡಿ- ನೋಟಿಫಿಕೇಶನ್ ಪ್ರಕರಣ… ಹೀಗೆ ಸಾಲು ಸಾಲು ಗಂಭೀರ ಪ್ರಕರಣಗಳನ್ನು ತ್ವರಿತ ಗತಿಯಲ್ಲಿ ಮುಗಿಸಲು ಲೋಕಾಯುಕ್ತ ಪೊಲೀಸರು ಮುಂದಾಗಿದ್ದರು. ಇದಕ್ಕಾಗಿಯೇ, ಪ್ರತಿಯೊಬ್ಬ ಅಧಿಕಾರಿಯೂ ತಲಾ 12 ಪ್ರಕರಣಗಳನ್ನು ಹಂಚಿಕೊಂಡಿದ್ದರು.

ಆದರೆ, ಸರಕಾರ ‘ಎಸಿಬಿ’ಯನ್ನು ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರ್ ಎಂದು ರಚಿಸುವ ಮೂಲಕ ಲೋಕಾಯುಕ್ತ ಪೊಲೀಸರು ನಡೆಸುತ್ತಿದ್ದ ಪ್ರಕರಣಗಳ ತನಿಖೆಯನ್ನು ಅತಂತ್ರ ಸ್ಥಿತಿಗೆ ತಂದಿಟ್ಟಿತು. ಇದರ ಜತೆಗೇ, ಕಳೆದ 15 ದಿನಗಳಲ್ಲಿ ಲೋಕಾಯುಕ್ತ ಸಂಸ್ಥೆಯ ಪೊಲೀಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸುಮಾರು 700 ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮುಂದಿನ ಭವಿಷ್ಯವೂ ಡೋಲಾಯಮಾನವಾಗಿದೆ.

ಇದೀಗ ನ್ಯಾಯಾಲಯದ ತೀರ್ಪು, ಲೋಕಾಯುಕ್ತ ಪೊಲೀಸರ ಅತಂತ್ರತೆಯನ್ನು ಹೆಚ್ಚು ಮಾಡಿದೆ. ಜತೆಗೆ, ತನಿಖೆ ಹಂತದಲ್ಲಿರುವ ಪ್ರಕರಣಗಳ ವಿಚಾರಣೆ ಕುರಿತು ಇರುವ ಗೊಂದಲವೂ ಮುಂದುವರಿದಿದೆ.

ಪುಣ್ಯ ತಿಥಿ:

ಕಳೆದ ಉಗಾದಿ ಸಮಯದಲ್ಲಿ ನ್ಯಾ. ಭಾಸ್ಕರ್ ರಾವ್ ಪುತ್ರ ಅಶ್ವಿನ್ ರಾವ್ ಹಾಗೂ ಆತನ ಸಹಚರರ ಮೇಲೆ ಗಂಭೀರ ಆರೋಪ ಕೇಳಿಬಂದಿತು. ಲೋಕಾಯುಕ್ತ ಸಂಸ್ಥೆಯ ಹೆಸರನ್ನು ದುರ್ಬಳಿಕೆ ಮಾಡಿಕೊಂಡ ವಿಚಾರ ಭಾರಿ ಸುದ್ದಿಗೆ ಒಳಗಾಗಿತ್ತು. ಈ ಮೂಲಕ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಕರ್ನಾಟಕ ಲೋಕಾಯುಕ್ತ ಸಂಸ್ಥೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿ; ಸಾರ್ವಜನಿಕರ ಪಾಲಿಗೆ ಅಸುನೀಗಿತು.

ಇದೀಗ ಮತ್ತೆ ಉಗಾದಿ ಬಂದಿದೆ; ಒಂದು ವರ್ಷ ಕಳೆದಿದೆ. ಸಿಎಂ ಸಿದ್ದರಾಮಯ್ಯ ‘ಎಸಿಬಿ’ ರಚಿಸುವ ಮೂಲಕ ಲೋಕಾಯುಕ್ತಕ್ಕೆ ಎಳ್ಳುನೀರು ಬಿಡುವ ಹುಮ್ಮಸ್ಸು ತೋರಿಸಿದ್ದಾರೆ. ಹೀಗಾಗಿ, ಈ ಬಾರಿಯ ಉಗಾದಿ, ಲೋಕಾಯುಕ್ತದ ಪಾಲಿಗೆ ವಾರ್ಷಿಕ ಪುಣ್ಯ ತಿಥಿ!

Top