An unconventional News Portal.

‘ಲೈಫ್‌ ಸೀರಿಸ್‌- 1’: ಆತ್ಮಹತ್ಯೆ ಮೀರಿದ ಬದುಕಿನ ಹೋರಾಟ; ಸೈಕಲ್ ಸಂಚಾರಿ ಗೋವಿಂದ್ ಎದುರಿಗೆ ಸಿಕ್ಕಾಗ…

‘ಲೈಫ್‌ ಸೀರಿಸ್‌- 1’: ಆತ್ಮಹತ್ಯೆ ಮೀರಿದ ಬದುಕಿನ ಹೋರಾಟ; ಸೈಕಲ್ ಸಂಚಾರಿ ಗೋವಿಂದ್ ಎದುರಿಗೆ ಸಿಕ್ಕಾಗ…

ವರ್ಷ 2017 ಕಳೆಯುತ್ತಿದೆ. ಇನ್ನು ಮೂರು ದಿನಗಳ ನಂತರ ಬರುವ ಹೊಸ ವರ್ಷಾಚರಣೆಗೆ ಸಿದ್ಧತೆಗಳು ನಡೆಯುತ್ತಿವೆ. ಕಳೆದ ವರ್ಷದ ಮೊದಲ ದಿನವೇ ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೆಸರು ರಾಷ್ಟ್ರೀಯ ಮಾಧ್ಯಮಗಳಲ್ಲಿ ರಾರಾಜಿಸುತ್ತಿತ್ತು. ಕಾರಣ, ಹಿಂದಿನ ದಿನ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಮಯದಲ್ಲಿ ಎಂ. ಜಿ. ರಸ್ತೆಯಲ್ಲಿ ನೆರೆದಿದ್ದ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ. ಅದರ ಬೆನ್ನಿಗೇ ನಗರದ ಮತ್ತೊಂದು ರಸ್ತೆಯಲ್ಲಿ ವೃತ್ತಿಪರ ಯುವತಿಯನ್ನು ಅಡ್ಡಗಟ್ಟಿದ ದೃಶ್ಯಾಗಳು ಪರದೆಯನ್ನು ಆವರಿಸಿದ್ದವು. ಅಲ್ಲಿಂದ ಹಿಡಿದು ದಾನಮ್ಮವರೆಗೆ ಹಲವು ಕಹಿ ಹಾಗೂ ಸಿಹಿ ಘಟನೆಗಳಿಗೆ ಕಳೆದ 362 ದಿನಗಳಲ್ಲಿ ಸಾಕ್ಷಿಯಾಗಿದ್ದೇವೆ. 

ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ, ‘ಸಮಾಚಾರ’ ತನ್ನ ಓದುಗರಿಗಾಗಿ ಜೀವಂತಿಕೆಯಿಂದ ಕೂಡಿದ ಬದುಕುಗಳ ಕುರಿತು ‘ವಿಶೇಷ ಸರಣಿ’ಯೊಂದನ್ನು ಪರಿಚಯಿಸುತ್ತಿದೆ. ತಮ್ಮ ದೈಹಿಕ ನ್ಯೂನತೆಯನ್ನು ಮೆಟ್ಟಿನಿಂತು, ದಿನನಿತ್ಯ ಸುಂದರ ಹೋರಾಟಗಳನ್ನು ಮಾಡಿಕೊಂಡು, ಜಗತ್ತಿಗೆ ಬದುಕುವ ಚೈತನ್ಯ ಹಂಚುತ್ತಿರುವ ವ್ಯಕ್ತಿಗಳ ಪರಿಚಯ ಮಾಲಿಕೆ ಇದು. ಅದಕ್ಕೆ ನಾವಿಟ್ಟ ಹೆಸರು ‘ಲೈಫ್‌’. ಅದರ ಮೊದಲ ಕಂತು ಇಲ್ಲಿದೆ. ಉಳಿದ ಕಂತುಗಳು ಮುಂದಿನ ದಿನಗಳಲ್ಲಿ ನಿಮ್ಮ ಓದಿಗೆ ಲಬ್ಯವಾಗಲಿವೆ. 

ಅಂದಹಾಗೆ, ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು. 

  • ಸಂ.

govind-cycle-2

“ನನ್ನ ಕೈಗಳಲ್ಲಿ ನ್ಯೂನತೆ ಇರಬಹುದು. ಆದರೆ, ನನ್ನ ಚೈತನ್ಯದಲ್ಲಿ ಯಾವುದೇ ನ್ಯೂನತೆ ಇಲ್ಲ. ನಾನು ಅನುಭವಿಸಿದ ಅವಮಾನ, ನೋವು ಮತ್ತು  ಸಂಕಷ್ಟಗಳನ್ನು ಮೀರಿ ನಾನಿಂದು ಬೆಳೆದಿದ್ದೇನೆ. ನನ್ನ ಶಕ್ತಿಯನ್ನು ಸಾಬೀತು ಪಡಿಸಲೆಂದೇ 1700ಕಿ.ಮೀ ದೂರದ ಈ ಸೈಕಲ್ ಪ್ರಯಾಣ ರೂಪಿಸಿದ್ದು,” ಎಂದು ಕಣ್ಣಲ್ಲಿ ಯಶಸ್ಸಿನ ಬೆಳಕನ್ನು ಇಟ್ಟುಕೊಂಡು ಮಾತನಾಡುತ್ತಿದ್ದರು ಗೋವಿಂದ್.

ಗೋವಿಂದ್ ಅವರಿಗೆ ಬಲಗೈ ಇಲ್ಲ. ಎಡಗೈ ಕೂಡ ಸಂಪೂರ್ಣವಾಗಿ ಬೆಳೆದಿಲ್ಲ. ಅವರಿಗೀಗ ಸುಮಾರು 25 ವರ್ಷ ವಯಸ್ಸು. ಪ್ರೀತಿ ತುಂಬಿದ ಕಣ್ಣುಗಳು, ಸಾಧಿಸುವ ಛಲ, ಯುವ ಜನತೆಯ ಬದುಕಲ್ಲಿ ಭರವಸೆ ಮೂಡಿಸಿ, ಅವರಲ್ಲಿರುವ ಶಕ್ತಿ ಸಾಮರ್ಥ್ಯಗಳನ್ನು ಅವರಿಗೆ ಪರಿಚಯಿಸಬೇಕೆಂಬ ಬಯಕೆ. ಇವೆಲ್ಲವುಗಳ ಒಟ್ಟು ರೂಪವೇ ಗೋವಿಂದ್- ಇದು ಅವರ ವ್ಯಕ್ತಿ ಪರಿಚಯ.

ಉದಯಪುರದಿಂದ ಬೆಂಗಳೂರಿಗೆ 1700 ಕಿ.ಮೀ ದೂರದ ಸೈಕಲ್ ಸವಾರಿ ಪೂರ್ಣಗೊಳಿಸಿದ್ದಾರೆ. ಈ ದೂರವನ್ನು ಕೇವಲ 17 ದಿನಗಳಲ್ಲಿ ಕ್ರಮಿಸಿರುವ ಅವರಲ್ಲಿ ಯಾವ ದಣಿವಿನ ಗುರುತೂ ಇಲ್ಲ. ಇನ್ನೂ ತಮ್ಮ ಸೈಕಲ್ ಸವಾರಿಯನ್ನು ಮುಂದುವರೆಸುವ ಹುಮ್ಮಸ್ಸು ಮತ್ತು ಶಕ್ತಿ ಇದೆ ಎಂದು ಹೇಳುತ್ತಾರೆ. ತಮ್ಮ ಬಾಲ್ಯ, ಬದುಕು, ಸೈಕಲ್ ಪ್ರಯಾಣ ಉದ್ದೇಶ ಮತ್ತು ಅವರು ಕಂಡುಕೊಂಡ ಜೀವನವನ್ನು ‘ಸಮಾಚಾರ’ದೊಂದಿಗೆ ಹಂಚಿಕೊಂಡಿದ್ದು ಹೀಗೆ;

“ಯಾವ ಸರಕಾರಿ ಶಾಲೆಯೂ ನನಗೆ ಪ್ರವೇಶ ಕೊಡಲಿಲ್ಲ . ಆದರೆ, ಹೇಗೋ ಒಂದು ಖಾಸಗಿ ಶಾಲೆಯಲ್ಲಿ ನನಗೆ ಪ್ರವೇಶ ದೊರೆಯಿತು. ಅಲ್ಲಿಂದ ನಾನು ಏನಾದರೂ ಸಾಧಿಸಬೇಕು. ನನ್ನನ್ನು ಹಂಗಿಸುವ ಜನರಿಗೆ ಉತ್ತರ ನೀಡಬೇಕು ಎನಿಸಿತು. ಇದೇ ಛಲದಲ್ಲಿ ನಾನು ಓದು ಮತ್ತು ಬರವಣಿಗೆಯನ್ನು ಕಲಿತೆ. ನನ್ನ ಉತ್ತರ ಪತ್ರಿಕೆಗಳನ್ನು ನಾನೇ ಬರೆಯುವುದನ್ನು ರೂಢಿಸಿಕೊಂಡೆ. ಬಿ. ಎ.ಬಿ. ಕಾಂ ಮತ್ತು ಎಂ.ಕಾಂ. ಮುಗಿಸಿಕೊಂಡೆ. ಇವತ್ತು 1700 ಕಿ.ಮೀ ದೂರವನ್ನು ಸೈಕಲ್‌ ಪ್ರಯಾಣವನ್ನು ಯಶಸ್ವಿಯಾಗಿ ಮಾಡಿದ್ದೇನೆ,” ಎಂದರು ಗೋವಿಂದ್.

ಗೋವಿಂದ್ ಜನಿಸಿದ್ದು ರಾಜಸ್ತಾನದ ಉದಯಪುರದಲ್ಲಿ. ಇವರ ಪೂರ್ಣ ಹೆಸರು ಗೋವಿಂದ್  ಧರ್ವಾತ್. ತಂದೆ ಹೆಸರು ನಾರಾಯಣ್ ಲಾಲ್; ತಾಯಿ ಕಾಶಿ. ಹುಟ್ಟಿನಿಂದಲೇ ಅವರು ದೈಹಿಕವಾಗಿ ನ್ಯೂನತೆಯನ್ನು ಬೆನ್ನಿಗೆ ಕಟ್ಟಿಕೊಂಡವರು. ತಮ್ಮ ಒಂದು ಕೈಯಿಲ್ಲದೇ, ಮತ್ತೊಂದು ಕೈ ಸರಿಯಾಗಿ ಬೆಳೆಯದೇ ಸಮಸ್ಯೆಯನ್ನು ಅನುಭವಿಸಿದವರು. ಇದೇ ಕಾರಣಕ್ಕೆ ಅವರಿಗೆ ಶಾಲೆಗಳು ಪ್ರವೇಶ ಕೊಡಲಿಲ್ಲ. ಇದು ಗೋವಿಂದ್ ಅವರನ್ನು ತುಂಬ ಜಿಗುಪ್ಸೆಗೆ ತಳ್ಳಿತ್ತು. ಜನರು ಅವರನ್ನು ನೋಡುವ ನೋಟ ಮನಸ್ಸಿಗೆ ಘಾಸಿ ಮಾಡಿತ್ತು. ಇವೆಲ್ಲವುಗಳಿಂದ ನೊಂದ ಗೋವಿಂದ್ ಆತ್ಮಹತ್ಯೆಗೂ ಪ್ರಯತ್ನಸಿದ್ದು ಉಂಟು.

ಆದರೆ ಬುದುಕಿನ ನಶೆ ಅವರನ್ನು ಬದುಕಿಸಿಕೊಂಡಿದೆ. ಸಾವು ಸಮಸ್ಯೆಗಳಿಗೆ ಉತ್ತರವಲ್ಲ ಎಂದು ಕಂಡುಕೊಂಡು ಅಲ್ಲಿಂದ ಆತ್ಮಹತ್ಯೆ ಆಲೋಚನೆ ಕೈಬಿಟ್ಟು ಜೀವನದ ಸಾರ್ಥಕತೆಯನ್ನು ಸಾಭೀತುಪಡಿಸುವ ಹಠಕ್ಕೆ ಬಿದ್ದರು. ಈ ಸಂದರ್ಭದಲ್ಲಿ ತಂದೆ-ತಾಯಿ ಗೋವಿಂದ್ ಅವರಿಗೆ ಬೆನ್ನೆಲುಬಾಗಿ ನಿಂತರು ಕೂಡ. ಅದು ಹೆತ್ತವರು ತೋರಿಸಿದ ಪ್ರೀತಿ ಮತ್ತು ವಿಸ್ವಾಸ. ಅಲ್ಲಿಂದ ಗೋವಿಂದ್ ಬದುಕಿನ ಬೇರೆಯದೇ ಟ್ರ್ಯಾಕ್‌ನಲ್ಲಿ ಜೀವನ ಆರಂಭಿಸಿದರು. ಬದುಕುವುದಕ್ಕಿಂತ ಅವರು ಜೀವಿಸುವುದಕ್ಕೆ ಆರಂಭಿಸಿದರು. ಅವರ ಬದುಕಿನ ಈ ಕಾಮನ ಬಿಲ್ಲುಗಳಿಗೆ ರಂಗು ತುಂಬಿದ್ದು ‘ಶಿಕ್ಷಾಂತರ ಆಂದೋಲನ್’.

ಗೋವಿಂದ್ 15 ವರ್ಷಗಳ ಹಿಂದೆ ಒಂದು ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದಾಗ, ಅಲ್ಲಿ ಶಿಕ್ಷಾಂತರ ಆಂದೋಲನ್ ಸಂಪರ್ಕಕ್ಕೆ ಬರುತ್ತಾರೆ. ಶಿಕ್ಷಾಂತರ ಆಂದೋಲನ್ ಸರ್ಕಾರೇತರ ಸಂಸ್ಥೆ. “ಕಂಪ್ಯೂಟರ್ ಕಲಿತೆ. ಡಿಪ್ಲೋಮಾ ಇನ್ ಕಂಪ್ಯೂಟರ್ ಮಾಡಿದೆ. ಈ ಸಂಸ್ಥೆ 28 ವರ್ಷಗಳಿಂದ ಕೆಲಸ ಮಾಡುತ್ತಿದೆ. ಪರ್ಯಾಯ ಶಿಕ್ಷಣ, ಯುವಜನತೆಗೆ ಅಗತ್ಯವಾಗಿ ಬೇಕಾದ ಕೌಶಲ್ಯಗಳನ್ನು ಇಲ್ಲಿ ಕಲಿಸಲಾಗುತ್ತದೆ. ಯುವಜನತೆ ಸ್ವಾವಲಂಭಿಯಾಗಿ ಬದುಕುವಂತೆ ಮಾಡುತ್ತದೆ. ಡಾನ್ಸ್ ಮಾಡುವುದು, ಕತೆ ಹೇಳುವುದು ಮತ್ತು ಅಡುಗೆ ಮಾಡುವುದು ಇತ್ಯಾದಿ ಸೃಜನಶೀಲ ಚಟುವಟಿಕೆಗಳನ್ನು ಇಲ್ಲಿ ಕಲಿಸುತ್ತಾರೆ,” ಎಂದು ತಮ್ಮ ಬದುಕನ್ನು ಬದಲಿಸಿದ ‘ಶಿಕ್ಷಾಂತರ ಆಂದೋಲನ’ವನ್ನು ನೆನಪಿಸಿಕೊಳ್ಳುತ್ತಾರೆ ಗೋವಿಂದ್.

ಶಿಕ್ಷಾಂತರ ಅಂದೋಲನ್‌ದಲ್ಲಿ ತನ್ನ ಕಸನುಗಳಿಗೆ ರೆಕ್ಕೆ ಪುಕ್ಕ ಕಟ್ಟಿಕೊಂಡು ಬೆಳೆದ ಗೋವಿಂದ, ಇತ್ತೀಚೆಗೆ ‘ಬಿಂದಾಸ್ ಕಮ್ಯೂನಿಟಿ ಮೀಡಿಯಾ ಅಕಾಡಮಿ’ ಆರಂಭಿಸಿದ್ದಾರೆ. ಇದು ಯುವಜನತೆ ಜೊತೆ ಕೆಲಸ ಮಾಡುತ್ತ, ಅವರಲ್ಲಿ ಜಾಗೃತಿ ಮೂಡಿಸುತ್ತಿದೆ.

ಫಿಲ್ಮ ಮೇಕರ್ ಕೂಡ ಆಗಿರುವ ಗೋವಿಂದ, ತಮ್ಮ ಮಾತೃಭಾಷೆಯಾದ ಮೇವಾಡಿಯಲ್ಲಿ ಡಾಕ್ಯೂಮೆಂಟರಿ ಫಿಲ್ಮ ತಯಾರಿಸಿದ್ದಾರೆ. ಜಲ ಸಂಸ್ಕರಣಾ ಯೋಜನೆಗಳಲ್ಲಿಯೂ ಕೆಲಸ ಮಾಡಿದ್ದಾರೆ. ಫಿಲ್ಮ ಮೇಕಿಂಗ್ ಮತ್ತು ಅಡ್ವಾನ್ಸ್ ಫಿಲ್ಮ ಮೇಕಿಂಗ್ ತರಗತಿಗಳನ್ನು ನಡೆಸುತ್ತಾರೆ. ತಮ್ಮಲ್ಲಿರುವ ಕೌಶಲ್ಯಗಳನ್ನು ಯುವ ಜನರಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ.

ಅವರ ಸೈಕಲ್ ಪ್ರಯಾಣ ಆರಂಭಗೊಂಡ ಮೊದಲ 9 ದಿನಗಳಲ್ಲಿ ಉದಯಪುರ-ಕೇರವಾರ-ಅಹ್ಮದಾಬಾದ್-ಆನಂದ್-ವಡೋದರಾ-ಬರುಚ್-ಕಮ್ರೇಜ್-ವಾಪಿಮನೋರ್-ಬೊರಿವಾಳಿ ಮಾರ್ಗವಾಗಿ ಮುಂಬೈ ತಲುಪಿದರು. ಅಲ್ಲಿ ಟ್ರಾಫಿಕ್ ಸಮಸ್ಯೆ ಅನುಭವಿಸಿದ್ದರು. ಮುಂಬೈ ದಾಟಿ ಬರುವುದು ಅವರಿಗೆ ಸವಾಲಾಗಿತ್ತು. “ಇಲ್ಲಿಯವರೆಗೆ ನಾನು 9 ದಿನಗಳ ಪ್ರಯಾಣವನ್ನು ಪೂರ್ಣಗೊಳಿಸಿದ್ದೆ. ಮತ್ತು, ಪ್ರಸ್ತುತ ನಾನು ಮುಂಬೈನಲ್ಲಿದ್ದೇನೆ ಮತ್ತು ಮುಂಬಯಿ-ಪುಣೆ-ಸತಾರಾ-ಕೊಲ್ಹಾಪುರ್-ಬೆಳಗಾವಿ-ಹುಬ್ಬಳ್ಳಿ-ಬೆಂಗಳೂರು ಮಾರ್ಗವಾಗಿ ನನ್ನ ಪ್ರಯಾಣದ ಎರಡನೇ ಹಂತವನ್ನು ಪ್ರಾರಂಭಿಸುತ್ತೇನೆ,” ಎಂದು ತಮ್ಮ ಫೇಸ್ಬುಕ್‌ನಲ್ಲಿ ಅವರು ಹಂಚಿಕೊಂಡಿದ್ದರು.

ಅಲ್ಲಿಂದ ಗೋವಿಂದ್, ಹುಬ್ಬಳ್ಳಿ, ತುಮಕೂರಿನ ಸಿಗ್ನಾ, ಕೊನೆಗೆ ಡಿ.22 ರಂದು ಬೆಂಗಳೂರು ತಲುಪಿದ್ದಾರೆ. ಪ್ರಯಾಣದ ಮದ್ಯ ಬೇಕಾಗಬಹುದು ಎಂದು ಇಟ್ಟುಕೊಂಡ 24 ಗ್ಲೂಕೋಸ್ ಪಾಕೆಟ್‌ಗಳಲ್ಲಿ ಕೇವಲ ಒಂದನ್ನು ಮಾತ್ರ ಬಳಸಿಕೊಂಡಿದ್ದಾರೆ. “ಈ ಪ್ರಯಾಣದಲ್ಲಿ ಬೆಂಬಲ ಸಿಕ್ಕಿದೆ. ಕರ್ನಾಟಕದವರ ವಿಶೇಷ ಪ್ರೀತಿಗೆ ನಾನು ಸೋತು ಹೋಗಿದ್ದೇನೆ. ಇಲ್ಲಿನ ಜನ ಸಹಾಯ ಮನೋಭಾವವುಳ್ಳವರು. ಅವರ ಭಾಷೆ ನನಗೆ ತಿಳಿಯದೇ ಇದ್ದರೂ, ಅವರ ಭಾವನೆಗಳು ನನಗೆ ಅರ್ಥವಾಗುತ್ತಿದ್ದವು,” ಎನ್ನುತ್ತಾರೆ ಗೋವಿಂದ್.

ಇದು ದೈಹಿಕ ನ್ಯೂನತೆಯನ್ನು ಮೀರಿ ಬದುಕುವ ಮತ್ತು ಅದಕ್ಕೊಂದು ಉದ್ದೇಶವನ್ನೂ ನೀಡುವ ವ್ಯಕ್ತಿತ್ವವೊಂದರ ಚಿತ್ರಣ. ಮುಂದಿನ ಭಾಗದಲ್ಲಿ, ಚಿಕ್ಕವಯಸ್ಸಿನಲ್ಲಿಯೇ ಬಾಂಬ್ ಸ್ಫೋಟದಿಂದ ಎರಡೂ ಕೈಗಳನ್ನು ಬಾಗಶಃ ಕಳೆದುಕೊಂಡರೂ, ಬೆಂಗಳೂರಿನಲ್ಲಿ ಹೊಸ ಬದುಕು ಕಟ್ಟಿಕೊಂಡ ಇನ್ನೊಂದು ಅಪರೂಪದ ಜೀವಿಯ ಬದುಕಿನ ಹೋರಾಟದ ಕತೆ ನಿಮಗಾಗಿ ಕಾದಿದೆ.

ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ..

 

Leave a comment

Top