An unconventional News Portal.

‘ಅಶೋಕ್ ಖೇಣಿ ಡೋಂಟ್ ವರಿ’: ನೈಸ್ ಕರ್ಮಕಾಂಡದ ವರದಿಗೆ ತಿಪ್ಪೆ ಸಾರಿಸಿದ ಸರಕಾರ!

‘ಅಶೋಕ್ ಖೇಣಿ ಡೋಂಟ್ ವರಿ’: ನೈಸ್ ಕರ್ಮಕಾಂಡದ ವರದಿಗೆ ತಿಪ್ಪೆ ಸಾರಿಸಿದ ಸರಕಾರ!

ನೈಸ್ (ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್) ಹಾಗೂ ನೀಸ್ (ನಂದಿ ಎಕನಾಮಿಕ್ ಕಾರಿಡಾರ್ ಎಂಟರ್ ಪ್ರೈಸಸ್) ಸಂಸ್ಥೆಗಳ ಅಕ್ರಮಗಳ ಕುರಿತು ಕಾನೂನು ಸಚಿವ ಟಿ. ಬಿ. ಜಯಚಂದ್ರ ನೇತೃತ್ವದ ಸದನ ಸಮಿತಿ ಶುಕ್ರವಾರ ಬೆಳಗಾವಿ ಅಧಿವೇಶನದಲ್ಲಿ ವರದಿ ಸಲ್ಲಿಸಿತು.

ಸುಮಾರು 400 ಪುಟಗಳ ವರದಿಯಲ್ಲಿ ಅಶೋಕ್ ಖೇಣಿ ಮಾಲೀಕತ್ವದ ಸಂಸ್ಥೆಗಳು ರಸ್ತೆ ನಿರ್ಮಾಣದ ಹೆಸರಿನಲ್ಲಿ ನಡೆಸಿದ ಅಕ್ರಮಗಳನ್ನು ವಿಸ್ತೃತವಾಗಿ ಪಟ್ಟಿ ಮಾಡಲಾಗಿದೆ. ಸೆ. 4, 2014ರಂದು ಸಮಿತಿ ರಚನೆಗೊಂಡಿತ್ತು. ವರದಿಗಾಗಿ ಸಮಿತಿಯು ಒಟ್ಟು 27 ಸಭೆಗಳನ್ನು ನಡೆಸಿತ್ತು.

ಕಂಪನಿಗಳಿಂದ ಕ್ರಿಯಾ ಒಪ್ಪಂದದ ಉಲ್ಲಂಘನೆಗೆ ಸಂಬಂಧಿಸಿದಂತೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಿದೆ. ಮತ್ತು, ಖಾಸಗಿ ಪಾಲುದಾರರ ವೈಫಲ್ಯತೆ, ಸರ್ಕಾರದ ವೈಫಲ್ಯತೆಯನ್ನು ನಿಗದಿಪಡಿಸಿಲು ಯೋಜನೆಯ ಆರ್ಥಿಕ ಮೌಲ್ಯಮಾಪನವನ್ನು ಮಾಡಬೇಕಿದೆ. ಕ್ರಿಯಾ ಒಪ್ಪಂದದ 22 ಅನುಚ್ಛೇಧಗಳ ಪೈಕಿ 16 ಅನುಚ್ಛೇಧಗಳು ಉಲ್ಲಂಘನೆಯಾಗಿವೆ. ಈ ಉಲ್ಲಂಘನೆಯಲ್ಲಿ ಸರ್ಕಾರ ಅಥವಾ ಖಾಸಗಿ ಪಾಲುದಾರರ ಪಾತ್ರವನ್ನು ನಿರ್ಧರಿಸಬೇಕಿದೆ. ಆದ್ಧರಿಂದ ಉನ್ನತ ಸ್ತರದ ಸಂಸ್ಥೆಗಳಿಂದ ಅಮೂಲಾಗ್ರ ತನಿಖೆ ಜಾರಿಗೊಳಿಸಲು ಸಮಿತಿ ಶಿಫಾರಸ್ಸು ಮಾಡಿದೆ.


ವರದಿ ಮಂಡಿಸಿದ ಬಳಿಕ ಕಾನೂನು ಸಚಿವ ಟಿ ಬಿ ಜಯಚಂದ್ರ ವಿಧಾನಸಭೆಯಲ್ಲಿ ಮಾತನಾಡಿ, “ವರದಿಯನ್ನು ಪಕ್ಷಾತೀತವಾಗಿ ತಯಾರಿಸಿದ್ದೇವೆ,” ಎಂದರು. ನಂತರ ಚರ್ಚೆಗೆ ಅವಕಾಶ ಮಾಡಿಕೊಡಲಾಯಿತು.

ವರದಿ ಮೇಲೆ ಮಾತನಾಡಿದ ಬಿಜೆಪಿಯ ಆರ್. ಅಶೋಕ್ ಹೇಳಿಕೆ, “ನೈಸ್ ಯೋಜನೆಯಲ್ಲಿ ಭ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ರಾಜ್ಯಕಂಡ ಅತಿದೊಡ್ಡ ಭ್ರಷ್ಟಾಚಾರ ನೈಸ್ ಹಗರಣ. ಕಾನೂನು ರೀತಿಯಲ್ಲಿ ಹೇಗೆ ಮೋಸ ಮಾಡಬೇಕು ಅನ್ನೋದನ್ನ ನೈಸ್ನಿಂ ಸಂಸ್ಥೆಯಿಂದ ಕಲಿಯಬೇಕು. ನೈಸ್ ಸಂಸ್ಥೆಗೆ ಎಕರೆ 10 ರುಪಾಯಿಯಂತೆ ಕೊಡ್ತೀವಿ. ಏಕೆಂದರೆ ನೈಸ್ ನಮ್ಮ ನೆಂಟನಲ್ಲವೇ ಎಂದು ವ್ಯಂಗ್ಯವಾಡಿದರು. ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಡಿ. ಕೆ. ಶಿವಕುಮಾರ್, “ನಿಮ್ಮ ಸರ್ಕಾರ ಇತ್ತಲ್ಲ. ಆಗ ನೀವು ಏನು ಮಾಡಿದ್ದು? ನೀವು ಕೂಡ ಈ ಹಗರಣದ ಭಾಗ,” ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, “ಈಗ ನಿಮ್ಮ ಸರ್ಕಾರ ಇದೆಯಲ್ಲ ಕ್ರಮ ಕೈಗೊಳ್ಳಿ,” ಎಂದರು.

ಸಮಿತಿ ಸದಸ್ಯ, ಜೆಡಿಎಸ್ ಸದಸ್ಯ ಶಿವಲಿಂಗೇಗೌಡ, “ಸುಮಾರು ನಾಲ್ಕೂವರೆ ಸಾವಿರ ಕೋಟಿ ರೂಪಾಯಿಗಳನ್ನು ನೈಸ್ ಸಂಸ್ಥೆಯ ಮುಖ್ಯಸ್ಥ (ಅಶೋಕ್ ಖೇಣಿ) ಲೂಟಿ ಹೊಡೆದಿದ್ದಾನೆ. ನೈಸ್ ರಸ್ತೆಗೆ ಭೂಮಿ ಕೊಟ್ಟಿರುವ ರೈತರ ಗೋಳು ಕೇಳದಂತಾಗಿದೆ. ಅವರು ಬೀದಿಗೆ ಬಿದ್ದಿದ್ದಾರೆ. ಒಂದು ದಿನಕ್ಕೆ ಕನಿಷ್ಠ ಒಂದು ಕೋಟಿ ಇಪ್ಪತ್ತು ಲಕ್ಷ ರೂ.ಪಾಯಿಗಷ್ಟು ಟೋಲ್ ಕಲೆಕ್ಟ್ ಮಾಡ್ತಿದ್ದಾನೆ. ಸರ್ಕಾರ ಏನೂ ಮಾಡ್ತಿದೆ? ನೀವೆ ಆತ್ಮವಿಮರ್ಶೆ ಮಾಡಿಕೊಳ್ಳಿ,” ಎಂದರು.

ಸದನ ಸಮಿತಿ ವರದಿ ಮೇಲೆ ಜೆಡಿಎಸ್ ಶಾಸಕ ಚೆಲುವರಾಯಸ್ವಾಮಿ ಮಾತನಾಡಿ, “ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಸಂಸ್ಥೆಯ ಮಾಲೀಕ (ಅಶೋಕ್ ಖೇಣಿ)ಯನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿ,” ಎಂದರು.

ಬಿಜೆಪಿ ಸದಸ್ಯ ಎಸ್ ಆರ್ ವಿಶ್ವನಾಥ, “ಒಂದೇ ಒಂದು ನಯಾಪೈಸೆ ಹಾಕದೆ ಕೋಟ್ಯಂತರ ರೂಪಾಯಿ ಲೂಟಿ ಹೊಡೆದಿದ್ದಾನೆ,” ಎಂದರು. ಶಾಸಕ ಸಿ. ಟಿ. ರವಿ, “ನಾವು ಚಾರ್ಲ್ಸ್ ಶೋಭರಾಜ್ ಅತಿದೊಡ್ಡ ವಂಚಕ ಅಂದ್ಕೊಂಡಿದ್ವಿ. ಇವ್ನು ಅವನಿಗಿಂತ ದೊಡ್ಡ ವಂಚಕ. ಅವನ ಬ್ರೇನ್ ಮ್ಯಾಫಿಂಗ್ ಮಾಡಬೇಕು ಅಂತಾನೂ ಸಮಿತಿ ಶಿಫಾರಸ್ಸಿನಲ್ಲಿ ಸೇರಿಸಿ. ತನಿಖೆಯನ್ನು ಸಿಬಿಐಗೆ ವಹಿಸಿ,” ಎಂದರು.

ಇಷ್ಟೆಲ್ಲಾ ಬಿಸಿಬಿಸಿ ಮಾತುಕತೆ ಮುಗಿದ ನಂತರ ಸರಕಾರದ ಪರವಾಗಿ ಮಾತನಾಡಿದ ಸಚಿವ ಆರ್.ವಿ. ದೇಶಪಾಂಡೆ, “ವರದಿಯನ್ನ ಸರ್ಕಾರ ಕೂಲಂಕುಷವಾಗಿ ಪರಿಶೀಲಿಸಿ, ಸೂಕ್ತ ಕಾನೂನು ಕ್ರಮಕೈಗೊಳ್ಳುತ್ತದೆ,” ಎಂದರು. ಅಲ್ಲಿಗೆ ಸಂಸದೀಯ ಸಮಿತಿ ನೀಡಿದ ವರದಿ ಮೇಲಿನ ಚರ್ಚೆ ಮುಗಿಯಿತು.


ವರದಿಯ ಹೈಲೈಟ್ಸ್: 

ನೈಸ್ ರಸ್ತೆ. (ಸಾಂದರ್ಭಿಕ ಚಿತ್ರ).

ನೈಸ್ ರಸ್ತೆ. (ಸಾಂದರ್ಭಿಕ ಚಿತ್ರ).

• ಬಿ.ಎಂ.ಐ.ಸಿ. ಯೋಜನೆ ಪ್ರಾರಂಭವಾಗಿ 19 ವರ್ಷಗಳಾದರೂ ಸಹ ಬೆಂಗಳೂರು ಹಾಗೂ ಬೆಂಗಳೂರು ನಗರ ಸಮುಚ್ಛಯ ವ್ಯಾಪ್ತಿಯನ್ನು ಹೊರತುಪಡಿಸಿ ಯಾವುದೇ ಪ್ರಗತಿಯನ್ನು ಸಾಧಿಸಿಲ್ಲ.

• ಮೈಸೂರಿಗೆ ಅಂತರ ರಾಷ್ಟ್ರೀಯ ಮಟ್ಟದ ವೇಗದ ಹೆದ್ದಾರಿಯನ್ನು ಕಲ್ಪಿಸುವ ಹಾಗೂ ನಗರ ಸಮುಚ್ಛಯಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದ ಧ್ಯೆಯೋದ್ದೇಶ ಸಾಕಾರವಾಗಿಲ್ಲ.

• ಮೇಲ್ನೋಟಕ್ಕೆ ಈ ಯೋಜನೆಯು ಮೂಲಭೂತ ಸೌಕರ್ಯ ಯೋಜನೆಯ ಸ್ವರೂಪವನ್ನು ಕಳೆದುಕೊಂಡಿದೆ.

• ಈ ಯೋಜನೆಯ ಭೂಮಿ ನಿರ್ವಹಣೆ ವಿವಾದಾತ್ಮಕವಾಗಿದೆ. ಸೆಕ್ಷನ್ ‘ಎ’ ಭಾಗದಲ್ಲಿ 605 ಎಕರೆಗಳ ಜಮೀನನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಯೋಜನೆಯ ಅನುಷ್ಠಾನದಲ್ಲಾಗಿರುವ ಅತೀವ ವಿಳಂಬದಿಂದಾಗಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದಾಗಿ ಯೋಜನಾ ವ್ಯಾಪ್ತಿಯ ಭೂಮಾಲೀಕರು ಸಂಕಷ್ಟದಲ್ಲಿದ್ದಾರೆ.

• ಯೋಜನೆಯ ಭೌತಿಕ ಪ್ರಗತಿ, ಜಮೀನಿನ ವಾಸ್ತವಿಕ ಅವಶ್ಯಕತೆ ಇತ್ಯಾದಿಗಳನ್ನು ಜಂಟಿ ಮೋಜಣಿ ಮೂಲಕ ಇತ್ಯರ್ತಗೊಳಿಸಲಾಗಿದ್ದು, ಸಮಿತಿಯು ಸುಮಾರು 10,000 ಎಕರೆ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಹೊರತುಪಡಿಸಲು ಸರಕಾರಕ್ಕೆ ಶಿಫಾರಸ್ಸು.

• ಸೆಕ್ಷನ್ ‘ಎ’ ಭಾಗದ ಟೋಲ್ ರಸ್ತೆಯನ್ನು ಕ್ರಿಯಾ ಒಪ್ಪಂದ ಹಾಗೂ ತಾಂತ್ರಿಕ ಮಾನದಂಡಗಳ ಅನುಗುಣವಾಗಿ ನಿರ್ವಹಿಸಿರುವುದಿಲ್ಲ. ಕಾಂಕ್ರೀಟ್ ರಸ್ತೆಯ ಬದಲಾಗಿ ಡಾಂಬರು ರಸ್ತೆಯನ್ನು ನಿರ್ಮಿಸಿ ಟೋಲ್ ದರವನ್ನು ಸಂಗ್ರಹಿಸಲಾಗುತ್ತಿದೆ.

• ನೈಸೆಲ್/ನೀಸೆಲ್ ಸಂಸ್ಥೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರವು 2012 ರವರೆಗೆ ತಾಂತ್ರಿಕ ಮಾನದಂಡವನ್ನು ಸಡಿಲಗೊಳಿಸಿತ್ತು. ಈ ಸೌಲಭ್ಯವನ್ನು ದುರ್ಬಳಕೆ ಮಾಡಿ ಟೋಲ್ ದರವನ್ನು ಈದುವರೆಗೂ ಸಂಗ್ರಹಿಸಲಾಗುತ್ತಿದೆ. ಸಮಿತಿಯು ಜಾರಿಗೊಳಿಸಿರುವ ವಾಹನ ಗಣತಿಯ ಆಧಾರದ ಮೇಲೆ 2008 ರಿಂದ ಈವರೆವಿಗೂ ಸುಮಾರು 1350 ಕೋಟಿ ರೂ.ಗಳನ್ನು ಅನಧಿಕೃತವಾಗಿ ವಿಧಿಸಲಾಗಿದೆ. ಈ ಮೊತ್ತವನ್ನು ವಸೂಲಾತಿ ಮಾಡಬೇಕು.

• ಯೋಜನೆಯ ಅನುಷ್ಠಾನದ ವಿವಿಧ ಸ್ತರಗಳಲ್ಲಿ ಕ್ರಿಯಾ ಒಪ್ಪಂದಕ್ಕೆ ಪೂರಕವಾಗಿ ಹಲವಾರು ಒಪ್ಪಂದಗಳನ್ನು ಜಾರಿಗೊಳಿಸಲಾಗಿದೆ. ಈ ಪೈಕಿ 09.08.2002 ರ ತ್ರಿಪಕ್ಷೀಯ ಒಪ್ಪಂದ ಪ್ರಮುಖವಾಗಿದ್ದು. ಈ ಒಪ್ಪಂದದ ಮುಖಾಂತರ ಇಂಟರ್ ಛೇಂಜ್ ವ್ಯಾಪ್ತಿಯ ಜಮೀನನ್ನು ಮಾರಾಟ ಮಾಡುವ ಸೌಲಭ್ಯವನ್ನು ಅನಧಿಕೃತವಾಗಿ ಸೇರ್ಪಡೆ ಮಾಡಲಾಗಿದೆ. ಕ್ರಿಯಾ ಒಪ್ಪಂದದ ಅನುಗುಣವಾಗಿ ನೈಸೆಲ್/ನೀಸೆಲ್ ಸಂಸ್ಥೆಗೆ ಟೋಲ್ ಸಂಗ್ರಹಣೆ ಹಾಗೂ ನಗರ ಸಮುಚ್ಛಯಗಳಲ್ಲಿ ಅಭಿವೃದ್ಧಿಪಡಿಸಲಾದ ನಿವೇಶನಗಳ ಮಾರಾಟದ ಮೂಲಕ ಬರುವ ಆದಾಯ ಇವೆರಡೇ ಅಧಿಕೃತವಾಗಿರುತ್ತದೆ. ಈ ಅನಧಿಕೃತ ತ್ರಿಪಕ್ಷೀಯ ಒಪ್ಪಂದದ ಆಧಾರದಮೇಲೆ ನೈಸೆಲ್/ನೀಸೆಲ್ ಸಂಸ್ಥೆ 4956 ಕೋಟಿ ರೂ.ಗಳ ವಹಿವಾಟನ್ನು ಜಂಟಿ ಅಭಿವೃದ್ಧಿ, ಅಡಮಾನ ಹಾಗೂ ಮಾರಾಟದ ಮುಖಾಂತರ ಜಾರಿಗೊಳಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

• ಯೋಜನಾ ಅನಷ್ಠಾನದ 19 ವರ್ಷಗಳ ನಂತರವೂ ಕ್ಲಡಸ್ಟಲ್ ಮ್ಯಾಪುಗಳನ್ನು ಸಲ್ಲಿಸದೇ ಕೇವಲ ಥೀಮ್ ಅಪ್ರೂವಲ್ ಆಧಾರದ ಮೇಲೆ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದರಿಂದಾಗಿ, ಅವಶ್ಯಕತೆ, ಬಳಕೆ ಹಾಗೂ ಹೆಚ್ಚುವರಿ ಜಮೀನಿನ ಬಗ್ಗೆ ನೈಸೆಲ್/ನೀಸೆಲ್ ಸಂಸ್ಥೆ ನಿರ್ಧಿಷ್ಟ ವಿವರಗಳನ್ನು ಈವರೆಗೂ ಸರಕಾರಕ್ಕೆ ನೀಡಿಲ್ಲ.

• ಖಾಸಗಿ ಪಾಲುದಾರರು ಕ್ರಿಯಾ ಒಪ್ಪಂದದ ಗೌಪ್ಯತೆಯ ಷರತ್ತಿನಡಿ ಯೋಜನಾ ಅನುಷ್ಠಾನಕ್ಕೆ ಅತ್ಯವಶ್ಯಕವಾದ ದಾಖಲಾತಿಗಳನ್ನು ನೀಡಲು ನಿರಾಕರಿಸಿರುವುದು ಖಂಡನೀಯ. ಸರ್ಕಾರ ಆರ್ಥಿಕ ಸಂಸ್ಥೆಗಳಿಗೆ ಕಂಫರ್ಟ್ ಲೆಟರ್‍ಗಳನ್ನು ನೀಡಿದ್ದಾಗ್ಯೂ ಸಹ ಯೋಜನೆಯ ವೆಚ್ಚ, ಬಂಡವಾಳ ಹೂಡಿಕೆ ಬಾಧ್ಯತೆ ಇತ್ಯಾದಿ ವಿವರಗಳನ್ನೊಳಗೊಂಡ ಬ್ಯಾಲೆನ್ಸ್ ಶೀಟ್‍ಗಳನ್ನು ಈವರೆಗೂ ಅಧಿಕೃತವಾಗಿ ಸರ್ಕಾರಕ್ಕೆ ಸಲ್ಲಿಸಿರುವುದಿಲ್ಲ.

ಅಶೋಕ್ ಖೇಣಿ.

ಅಶೋಕ್ ಖೇಣಿ.

• ಕ್ರಿಯಾ ಒಪ್ಪಂದದ ಅನುಗುಣವಾಗಿ ಖಾಸಗಿ ಪಾಲುದಾರರಿಗೆ ಹಲವಾರು ರಿಯಾಯಿತಿ/ವಿನಾಯಿತಿಗಳನ್ನು ನೀಡಿದ್ದು, ನೋಂದಣಿ ಹಾಗೂ ಮುದ್ರಾಂಕ ಶುಲ್ಕವನ್ನು 5688 ಎಕರೆಗೆ ಬದಲಾಗಿ 14337 ಎಕರೆಗಳಿಗೆ ನೀಡಲಾಗಿದೆ. ಇದಲ್ಲದೆ, ಖಾಸಗಿ ಪಾಲುದಾರರು ತಮ್ಮ ಸುಪರ್ದಿಯಲ್ಲಿರುವ ಜಮೀನಿನಲ್ಲಿ ಅನಧಿಕೃತ ಗಣಿಗಾರಿಕೆಯನ್ನು ಉತ್ತೇಜಿಸಿದ್ದು, ಸರಕಾರಕ್ಕೆ ಸ್ವೀಕೃತವಾಗಬೇಕಾಗಿರುವ ರಾಜಧನ ಸುಮಾರು 250 ಕೋಟಿ ರೂ.ಗಳಷ್ಟಿದೆ.

• ಖಾಸಗಿ ಪಾಲುದಾರರು ನ್ಯಾಯಾಲಯಗಳ ಮುಂದೆ ಆಶ್ವಾಸನೆ ನೀಡಿರುವ ಮಟ್ಟದಲ್ಲಿ ಹೂಡಿಕೆಯನ್ನು ನಿರ್ವಹಿಸಿರುವುದಿಲ್ಲ. ನ್ಯಾಯಾಲಯಗಳ ಮುಂದೆ ಪ್ರಮಾಣೀಕರಿಸಿರುವ ಅಥವಾ ನ್ಯಾಯಾಲಯಗಳು ನೀಡಿರುವ ತೀರ್ಪಿನ ಅನುಗುಣವಾಗಿ ಯೋಜನಾ ಅನುಷ್ಠಾನವನ್ನು ಮಾಡದೇ ಇರುವ ಉದ್ದೇಶದಿಂದ ಯೋಜನೆಯ ಅನುಷ್ಠಾನದ ಸ್ತರಗಳನ್ನೇ ಪರಿಷ್ಕರಿಸಿರುತ್ತಾರೆ. ಇದರಿಂದಾಗಿ ಸೆಕ್ಷನ್ ‘ಎ’ ವ್ಯಾಪ್ತಿಯ ಕಾಮಗಾರಿಗಳನ್ನು ಸಹೋದರ ಸಂಸ್ಥೆಯಾದ ನೀಸೆಲ್‍ಗೆ ಒದಗಿಸಲಾಗಿದೆ. ಅನುಷ್ಠಾನದ ವೈಫಲ್ಯತೆಯ ಜವಾಬ್ದಾರಿಗಳನ್ನೂ ಸಹ ಸಂಬಂಧಿತ ಸ್ತರಕ್ಕೆ ಮಿತಿಗೊಳಿಸಿರುವುದು ದುರುದ್ದೇಶಪೂರ್ವಕವಾಗಿದೆ.

• ಮೂಲ ಸಂಸ್ಥೆಯಾದ ನೈಸೆಲ್ ನಗರ ಸಮುಚ್ಛಯ ಹಾಗೂ ವೇಗದ ಹೆದ್ದಾರಿಗೆ ಸಂಬಂಧಿಸಿದಂತೆ ಈವರೆವಿಗೂ ಯಾವುದೇ ಪ್ರಗತಿಯನ್ನು ಸಾಧಿಸಿರುವುದಿಲ್ಲ.

• ಬಿ.ಎಂ.ಐಸಿ. ಯೋಜನಾ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಮುಖವಾಗಿ 100 ಪ್ರಕರಣಗಳು ವಿವಿಧ ಸ್ತರದ ನ್ಯಾಯಾಲಯಗಳಲ್ಲಿ ಬಾಕಿ ಇದೆ. ಅವಕಾಶವಿರುವ ಪ್ರಸಂಗಗಳಲ್ಲೂ ಸಹ ಸಮಯೋಚಿತವಾಗಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸುವಲ್ಲಿ ಆಗಿರುವ ವೈಫಲ್ಯತೆ ಕಾನೂನು ಸಂದಿಗ್ಧತೆಯನ್ನು ಸೃಷ್ಟಿಸಿದೆ.

• ಕ್ರಿಯಾ ಒಪ್ಪಂದದಲ್ಲಿ ಪ್ರತಿಪಾದಿಸಿರುವ ವಿವಾದ ಇತ್ಯರ್ಥದ ಸ್ತರಗಳನ್ನು ನಿರ್ಲಕ್ಷಿಸಿ ನೈಸೆಲ್/ನೀಸೆಲ್ ಸಂಸ್ಥೆ ನ್ಯಾಯಾಲಯಗಳ ಮುಂದೆ ಪ್ರಕರಣ/ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿರುವುದು ಖೇದಕರ.

• ಸೂಕ್ಷ್ಮಕರವಾಗಿ ವಿಶ್ಲೇಷಿಸಿದರೆ ಅನುದ್ಧೇಶಿತ ಲಾಭ ಅಥವಾ ಆದಾಯ ಅಥವಾ ಸ್ವೀಕೃತಿ ಉದ್ದೇಶಿತ ಆದಾಯಕ್ಕಿಂತ ಹೆಚ್ಚಾಗಿದೆ ಎಂಬ ಅಭಿಪ್ರಾಯ ಮೇಲ್ನೋಟಕ್ಕೆ ವ್ಯಕ್ತವಾಗುತ್ತದೆ.

• ಈ ಹಿನ್ನೆಲೆಯಲ್ಲಿ ಮೊದಲ ಹಂತದ ಯೋಜನೆಯ ಆರ್ಥಿಕ ಮೌಲ್ಯಮಾಪನ ತನ್ನ ಸಿಂಧುತ್ವವನ್ನು ಕಳೆದುಕೊಂಡಿದೆ. ಏಕೆಂದರೆ, ಹೂಡಿಕೆಯ ಮೇಲಿನ ಪ್ರತಿಫಲ ಅನುದೇಶಿತ ಲಾಭಗಳನ್ನು ಪರಿಗಣಿಸಿದರೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಇದಲ್ಲದೆ, 605 ಎಕರೆಗಳ ವಿಸ್ತೀರ್ಣದ ಜಮೀನು ಹೆಚ್ಚುವರಿಯಾಗಿ ಅವರ ಸುಪರ್ದಿಯಲ್ಲಿರುವುದು ಸ್ಪಷ್ಟವಾಗಿದೆ.

• ಖಾಸಗಿ ಪಾಲುದಾರರು ಬೆಂಗಳೂರು ವ್ಯಾಪ್ತಿಯನ್ನು ಹೊರತುಪಡಿಸಿ ಯಾವುದೇ ಪ್ರಗತಿಯನ್ನು ಸಾಧಿಸದೇ 4956 ಕೊಟಿ ರೂ.ಗಳ ವಹಿವಾಟುಗಳನ್ನು ಮಾಡಿರುವುದನ್ನು ನೋಡಿದರೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿರುವುದಿಲ್ಲ.

 

Leave a comment

Top