An unconventional News Portal.

ಅಂಗನವಾಡಿ ಕಾರ್ಯಕರ್ತೆಯರ ಪಾಲಿಗೆ ಇವರು ಬಂಗಾರಪೇಟೆಯ ‘ವರಲಕ್ಷ್ಮಿ’!

ಅಂಗನವಾಡಿ ಕಾರ್ಯಕರ್ತೆಯರ ಪಾಲಿಗೆ ಇವರು ಬಂಗಾರಪೇಟೆಯ ‘ವರಲಕ್ಷ್ಮಿ’!

ಬೆಂಗಳೂರಿನ ಹೃದಯ ಭಾಗ ಕಳೆದ ಎರಡು ದಿನಗಳಿಂದ ಮಾನವೀಯ ಹಕ್ಕಿನ ಬೇಡಿಕೆಯನ್ನು ಮುಂದಿಟ್ಟುಕೊಂಡು ಕುಳಿತಿರುವ ಸಾವಿರಾರು ಮಹಿಳೆಯರ ಘೋಷಣೆಗಳಿಗೆ ಸಾಕ್ಷಿಯಾಗುತ್ತಿದೆ.

ರಾಜ್ಯದ ನಾನಾ ಕಡೆಗಳಿಂದ ಆಗಮಿಸಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ‘ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್’ (ಸಿಐಟಿಯು) ನೇತೃತ್ವದಲ್ಲಿ ‘ಹಗಲು- ರಾತ್ರಿ’ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ. ಬಜೆಟ್ ಮೇಲಿನ ಅಧಿವೇಶನ ನಡೆಯುವ ವೇಳೆಯಲ್ಲಿಯೇ ಹೀಗೊಂದು ಪರಿಸ್ಥಿತಿ ಎದುರಾಗಿದೆ. ಸರಕಾರ ಲಿಖಿತ ರೂಪದಲ್ಲಿ ತನ್ನ ಇಚ್ಚಾಶಕ್ತಿಯ ಪ್ರದರ್ಶನ ಮಾಡಬೇಕಾದ ಅನಿವಾರ್ಯತೆಗೆ ಬಿದ್ದಿದೆ. ರಾಜ್ಯದ ಹಳ್ಳಿಗಳಲ್ಲಿ ಗರ್ಭಿಣಿ ಮಹಿಳೆಯರನ್ನು ಗುರುತಿಸುವ, ಸರಕಾರದ ಯೋಜನೆಗಳನ್ನು ಜಾರಿಗೆ ತರುವ ಕೆಲಸ ಮಾಡುತ್ತಿರುವ ಈ ನೌಕರರು ತಿಂಗಳ ಸಂಬಳವನ್ನು 10 ಸಾವಿರ ಮಾಡಿ ಎನ್ನುತ್ತಿದ್ದಾರೆ.

ಸಮಾಜದ ಕೆಳ ವರ್ಗದಿಂದ ಬಂದು, ಆಸರೆಗಾಗಿ ಸ್ಥಳೀಯ ಮಟ್ಟದಲ್ಲಿ ಸೇವೆಗೆ ಇಳಿದ ಸಾವಿರಾರು ಮಹಿಳೆಯರನ್ನು ಒಂದು ಸೂರಿನ ಅಡಿಯಲ್ಲಿ ತರುವ ಪ್ರಯತ್ನ ಶುರುವಾಗಿ ವರ್ಷಗಳೇ ಕಳೆದಿವೆ. ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಇದು ಮೂರನೇ ಸಾರಿ. ಈ ಹಿಂದೆ ‘ಹಗಲು ರಾತ್ರಿ ಪ್ರತಿಭಟನೆ ನಡೆಸಿ ತಮ್ಮೂರಿಗೆ ಇವರ ಎರಡು ಬಾರಿ ವಾಪಾಸಾಗಿದ್ದರು. ಈ ಬಾರಿ ಅಧಿವೇಶನವೂ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪಟ್ಟು ಹಿಡಿದು ಕುಳಿತಿರುವುದು ಸಹಜವಾಗಿಯೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.

ಸಚಿವೆ ಉಮಾಶ್ರೀ ಮುಂದೆ ಬೇಡಿಕೆ ಮಂಡಿಸುತ್ತಿರುವ ವರಲಕ್ಷ್ಮಿ.

ಸಚಿವೆ ಉಮಾಶ್ರೀ ಮುಂದೆ ಬೇಡಿಕೆ ಮಂಡಿಸುತ್ತಿರುವ ವರಲಕ್ಷ್ಮಿ.

ಶ್ರಮಿಕ ಶಕ್ತಿಯ ಪ್ರದರ್ಶನ ರಾಜ್ಯದ ರಾಜಧಾನಿಯಲ್ಲಾಗುತ್ತಿದ್ದರೆ, ಈ ಬೆಳವಣಿಗೆಗಳ ಹಿಂದಿರುವವರ ಪೈಕಿ ವರಲಕ್ಷ್ಮಿ ಪ್ರಮುಖರು. ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಹಾಗೂ ಅದರ ಕಾರ್ಮಿಕ ಸಂಘಟನೆ ಸಿಐಟಿಯುನ ರಾಜ್ಯಾದ್ಯಕ್ಷೆ. ಇಂದು ರಾಜಧಾನಿಯ ಹೃದಯಭಾಗದಲ್ಲಿ ಸಾವಿರಾರು ಮಹಿಳೆಯರನ್ನು ಕರೆತಂದು, ಅವರ ಬೇಡಿಕೆಗಳನ್ನು ಸರಕಾರ ಮುಂದೆ ಮಂಡಿಸುತ್ತಿರುವ ವರಲಕ್ಷ್ಮಿ ಮೂಲತಃ ಕಮ್ಯುನಿಸ್ಟ್ ರಾಜಕೀಯದಲ್ಲಿ ತನ್ನದೇ ಆದ ಇತಿಹಾಸವನ್ನು ಹೊಂದಿರುವ ಕೋಲಾರ ಜಿಲ್ಲೆಯವರು. ಅಲ್ಲಿನ ಬಂಗಾರಪೇಟೆ ತಾಲೂಕು ವರಲಕ್ಷ್ಮಿ ಅವರ ಹುಟ್ಟೂರು. ಸದ್ಯ ಬೆಂಗಳೂರಿನ ಕುಂಬಳಗೋಡಿನಲ್ಲಿ ತಮ್ಮ ತಂದೆ ತಾಯಿ ಜತೆ ವಾಸವಿದ್ದಾರೆ.

ಗಾರ್ಮೆಂಟ್ ಫ್ಯಾಕ್ಟರಿಯಿಂದ ಡಿಸ್‌ಮಿಸ್‌:

1994ರಲ್ಲಿ ಎಲ್ಲಾ ಗ್ರಾಮೀಣ ಹಿನ್ನೆಲೆಯ ಸಾಮಾನ್ಯ ಮಹಿಳೆಯಂತೆಯೇ ಅವರೂ ಕೂಡ ಬೆಂಗಳೂರಿನ ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದರಲ್ಲಿ ವರಲಕ್ಷ್ಮಿ ಕೆಲಸ ಅರಸಿ ಬಂದಿದ್ದರು. ಅಲ್ಲಿ ನಡೆಯುತ್ತಿದ್ದ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಾಕ್ಷಿಯಾಗಿದ್ದರು. ನಿಧಾನವಾಗಿ ಅವರು ಫ್ಯಾಕ್ಟರಿ ಒಳಗಿನ ಪರಿಸ್ಥಿತಿಯನ್ನು ನಿಭಾಯಿಸುವ, ಪ್ರಶ್ನಿಸುವ ಹಂತಕ್ಕೇರಿದರು. ಈ ಸಮಯದಲ್ಲಿ ಅವರು ಸಂಪರ್ಕಕ್ಕೆ ಬಂದಿದ್ದು ಸಿಐಟಿಯು ಸಂಘಟನೆಗೆ. ನಂತರ ಸಿಐಟಿಯು ನೆರವಿನೊಂದಿದೆ ಟ್ರೇಡ್‌ ಯೂನಿಯನ್‌ಗೆ ಆಯ್ಕೆ ಆದರು. ಈ ಸಮಯದಲ್ಲಿ ಫ್ಯಾಕ್ಟರಿ ಅವರನ್ನು ಕೆಲಸದಿಂದ ಕಿತ್ತು ಹಾಕಿತು.

ಹೀಗೆ ತಮ್ಮ ವೃತ್ತಿ ಬದುಕನ್ನು ತೊರೆದು ಪೂರ್ಣಾವಧಿ ಹೋರಾಟವನ್ನೇ ವೃತ್ತಿಯಾಗಿಸಿಕೊಂಡವ ಹಲವರಲ್ಲಿ ವರಲಕ್ಷ್ಮಿ ಕೂಡ ಒಬ್ಬರಾದರು. “ಇವತ್ತು ಅವರಿಗೆ ತಿಂಗಳಿಗೆ 6 ಸಾವಿರ ರೂಪಾಯಿ ರಾಯಧನ ನೀಡಲಾಗುತ್ತಿದೆ. ಅಷ್ಟರಲ್ಲಿಯೇ ಅವರು ಅತ್ಯಂತ ಸರಳವಾದ ಬದುಕು ಬದುಕುತ್ತಿದ್ದಾರೆ,” ಎನ್ನುತ್ತಾರೆ ಅವರ ಸಹೋದ್ಯೋಗಿ ಶೃತಿ.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿರ ಸಂಘಟನೆ ಆರಂಭದ ದಿನಗಳಲ್ಲಿ ಪ್ರತಿ ಹಳ್ಳಿಗಳಿಗೂ ಹೋಗಿ ಸಂಘಟನೆ ಕಟ್ಟಲಾಗಿತ್ತು. “ಈ ಸಮಯದಲ್ಲಿ ವರಲಕ್ಷ್ಮಿ ಹಳ್ಳಿಗಳಲ್ಲೇ ಊಟ ತಿಂಡಿ ಮಾಡಿಕೊಂಡು ಇದ್ದು ಬಿಡುತ್ತಿದ್ದರು. ಜನ ಅವರನ್ನು ಬೇಗ ಹಚ್ಚಿಕೊಳ್ಳುತ್ತಾರೆ. ತಾಯಿ ಹೃದಯದವರು,” ಎಂಬುದು ಸಂಘಟನೆಯಲ್ಲಿ ವರಲಕ್ಷ್ಮಿ ಅವರನ್ನು ಕಂಡವರು ಹೇಳುವ ಮಾತುಗಳು.

“ಕಮ್ಯುನಿಸ್ಟ್ ಚಳವಳಿ ಸಮೂಹ ನಾಯತ್ವದ ಮೇಲೆ ನಂಬಿಕೆ ಇಡುತ್ತದೆ. ಸಿಐಟಿಯು ಅಡಿಯಲ್ಲಿ ರಾಜ್ಯಾದ್ಯಂತ ಹಲವು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಸಂಘಟಿಸಿಕೊಂಡು ಬರಲಾಗುತ್ತಿದೆ. ರಾಜ್ಯದ ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಸಂಘಟನೆ ಬಲಿಷ್ಠವಾಗಿದೆ. ಸಾಕಷ್ಟು ಜನ ಪೂರ್ಣಾವಧಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ವರಲಕ್ಷ್ಮಿ ಸಂಘಟನೆ ವಿಚಾರದಲ್ಲಿ ಮಹತ್ವ ಪಾತ್ರವಹಿಸಿದ್ದಾರೆ. ಇದು ಅವರನ್ನೂ ಒಳಗೊಂಡ ಎಲ್ಲರ ನಿಸ್ವಾರ್ಥ ಪರಿಶ್ರಮದ ಫಲ,” ಎನ್ನುತ್ತಾರೆ ಸಿಪಿಎಂನ ರಾಜ್ಯ ಸಮಿತಿ ಸದಸ್ಯರೊಬ್ಬರು.

ಸದ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪ್ರತಿಭಟನೆ ಮುಂದುವರಿಸಿದ್ದಾರೆ. ಮೂರನೇ ರಾತ್ರಿಯನ್ನು ಪ್ರೀಡಂ ಪಾರ್ಕಿನಲ್ಲಿಯೇ ಕಳೆಯಲು ತೀರ್ಮಾನಿಸಿದ್ದಾರೆ. ಈ ಸಮಯದಲ್ಲಿ ವರಲಕ್ಷ್ಮಿ ಮತ್ತಿತರ ನಾಯಕಿರು ತಮ್ಮದೇ ಅನುಭವಗಳ ಆಧಾರದಲ್ಲಿ ಜನರ ಕೂಗಿಗೆ ದನಿಯಾಗುತ್ತುಇದ್ದಾರೆ.

ಈ ವರದಿಗಾಗಿ ವರಲಕ್ಷ್ಮಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ, ಹೋರಾಟದ ಒತ್ತಡದಿಂದ ಸಾಧ್ಯವಾಗಲಿಲ್ಲ.

Leave a comment

Top