An unconventional News Portal.

‘ಅಪ್ಪ v/s ಮಗ’: ಉತ್ತರ ಪ್ರದೇಶದ ‘ಯಾದವೀ ಕಲಹ’ಕ್ಕೆ ಸಿನಿಮೀಯ ಟ್ವಿಸ್ಟ್

‘ಅಪ್ಪ v/s ಮಗ’: ಉತ್ತರ ಪ್ರದೇಶದ ‘ಯಾದವೀ ಕಲಹ’ಕ್ಕೆ ಸಿನಿಮೀಯ ಟ್ವಿಸ್ಟ್

ದೇಶದ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿದ್ದ ‘ಸಮಾಜವಾದಿ ಕೌಟುಂಬಿಕ ಸಂಘರ್ಷ’ ಸಿನಿಮೀಯ ತಿರುವುದು ತೆಗೆದುಕೊಂಡಿದೆ.

ಶುಕ್ರವಾರ ರಾತ್ರಿ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್, ಸ್ವಂತ ಮಗ ಹಾಗೂ ರಾಜ್ಯದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಸಹೋದರ ಸಂಬಂಧಿ ರಾಮ್ ಗೋಪಾಲ್ ಯಾದವ್ರನ್ನು ಪಕ್ಷದಿಂದ ಆರು ವರ್ಷಗಳ ಅವಧಿಗೆ ಉಚ್ಛಾಟಿಸಿದ್ದಾರೆ. ರಾಜ್ಯದಲ್ಲಿ ಚುನಾವಣೆಗೆ 6 ತಿಂಗಳಿಗೂ ಕಡಿಮೆ ಅವಧಿ ಇದೆ ಎನ್ನುವಾಗ ಆಡಳಿತರೂಢ ಸಮಾಜವಾದಿ ಪಕ್ಷ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ.

ಗುರುವಾರ ಮುಖ್ಯಮಂತ್ರಿ ಅಖಿಲೇಶ್ ಯಾದವ್ 400 ಸಂಖ್ಯಾಬಲದ ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಗೆ 235 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದರು. ಇದು ಅವರ ವೈಯಕ್ತಿಕ ಪಟ್ಟಿಯಾಗಿತ್ತು. ಅದರ ಹಿಂದಿನ ದಿನ ಅಂದರೆ ಬುಧವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್, ಪಕ್ಷದ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದರು. ಅಖಿಲೇಶ್ ಅನುಪಸ್ಥಿತಿಯಲ್ಲಿ ಶಿವಪಾಲ್ ಮತ್ತು ಮುಲಾಯಂ ಬಿಡುಗಡೆ ಮಾಡಿದ ಈ 176 ಅಭ್ಯರ್ಥಿಗಳ ಪಟ್ಟಿಯಲ್ಲಿ ಅಖಿಲೇಶ್ ಬೆಂಬಲಿಗ ಮಂತ್ರಿಗಳು ಮತ್ತು ಸುಮಾರು 50 ಹಾಲಿ ಶಾಸಕರ ಹೆಸರೇ ಇರಲಿಲ್ಲ. ಮತ್ತು ಶಿವಪಾಲ್ ಯಾದವ್ ಸೇರಿ ಅಖಿಲೇಶ್ ತಮ್ಮ ಸಂಪುಟದಿಂದ ಕಿತ್ತು ಹಾಕಿದ್ದ ಎಲ್ಲಾ 10 ಸಚಿವರ ಹೆಸರೂ ಪಟ್ಟಿಯಲ್ಲಿತ್ತು. ಇದರ ಜತೆಗೆ ಮಗನನ್ನು ಮುಖ್ಯಮಂತ್ರಿ ಅಭ್ಯರ್ಥಿಯಲ್ಲ ಎಂದೂ ಮುಲಾಯಂ ಹೇಳಿದ್ದರು. ಇದಕ್ಕೆ ಅಖಿಲೇಶ್ ಅಭ್ಯರ್ಥಿಗಳ ಪಟ್ಟಿ ಸಡ್ಡು ಹೊಡೆದಿತ್ತು.

ಹೀಗೆ ಪಕ್ಷದೊಳಗೆ ಎರಡೆರಡು ಅಭ್ಯರ್ಥಿಗಳ ಪಟ್ಟಿ ಗೊಂದಲ ಸೃಷ್ಟಿಸಿತ್ತು. ಇದರ ಮಧ್ಯೆ ಅಖಿಲೇಶ್ ಬೆನ್ನಿಗೆನಿಂತಿರುವ ಚಿಕ್ಕಪ್ಪ ರಾಮ್ ಗೋಪಾಲ್ ಯಾದವ್ ಮತ್ತೊಬ್ಬ ಚಿಕ್ಕಪ್ಪ ಶಿವಪಾಲ್ ಯಾದವ್ ಉದ್ದೇಶಿಸಿ, “ಪಕ್ಷದೊಳಗೆ ಕೆಲವು ಶಕ್ತಿಗಳು ಅಖಿಲೇಶ್ ಯಾದವ್ ಮುಖ್ಯಮಂತ್ರಿ ಗಾದಿಗೆ ಅಡ್ಡಗಾಲಾಗುತ್ತಿದ್ದಾರೆ,” ಎಂದು ಹೇಳಿಕೆ ನೀಡಿದ್ದರು. ಇದು ಕೌಟುಂಬಿಕ ಜಗಳವನ್ನು ಸ್ಪಷ್ಟಪಡಿಸಿತ್ತು.

ಗೊಂದಲ ನಿವಾರಣೆ ಉಚ್ಛಾಟನೆಯಲ್ಲಿ ಅಂತ್ಯ:

ಎರಡೆರಡು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿ ಪಕ್ಷದಲ್ಲಿ ಗೊಂದಲ ನಿರ್ಮಾಣವಾಗಿತ್ತು. ಇದರಿಂದ ಕೋಪಗೊಂಡಿದ್ದ ಮುಲಾಯಂ ಗುರುವಾರ ರಾತ್ರಿ ಅಖಿಲೇಶ್ ಕಟ್ಟಾ ಬೆಂಬಲಿಗರಿಬ್ಬರಿಗೆ ಪಕ್ಷದಿಂದ ಗೇಟ್ ಪಾಸ್ ನೀಡಿ ಕಟು ಸಂದೇಶ ರವಾನಿಸಿದ್ದರು. ಶುಕ್ರವಾರ ಬೆಳಗಾಗುತ್ತಲೇ ಚುರುಕಿನಿಂದ ಎದ್ದಿದ್ದ ಅಖಿಲೇಶ್, ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿ, ಮುಲಾಯಂರನ್ನು ಭೇಟಿಯಾಗಿದ್ದರು. ಈ ವೇಳೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ತಮ್ಮ ಅಸಮಧಾನ ಹೊರ ಹಾಕಿದ್ದರು. ಅಲ್ಲಿಂದ ಪಕ್ಷದ ವಲಯದಲ್ಲಿ ದೊಡ್ಡ ಮಟ್ಟಕ್ಕೆ ಮಿಂಚಿನ ಬೆಳವಣಿಗೆಗಳು ಆರಂಭವಾಗಿದ್ದವು.

ಸಂಜೆಯ ವೇಳೆ ಅಶಿಸ್ತಿನ  ಕಾರಣ ಮುಂದಿಟ್ಟು ರಾಮ್ ಗೋಪಾಲ್ ಯಾದವ್ ಮತ್ತು ಅಖಿಲೇಶ್ ಯಾದವ್ ಇಬ್ಬರನ್ನೂ ಮುಲಾಯಂ ಪಕ್ಷದಿಂದ ಹೊರ ಹಾಕಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ಘೋಷಿಸಿದ ಮುಲಾಯಂ, “ನಾನು ಈ ಪಕ್ಷ ಕಟ್ಟಲು ತುಂಬಾ ಕಷ್ಟ ಪಟ್ಟಿದ್ದೇನೆ. ಇದರಲ್ಲಿ ಅವರ ಪಾತ್ರ ಏನು? ನಾನು ಕಷ್ಟಪಟ್ಟು ದುಡಿದ ಫಲವನ್ನು ಅವರು ತಿನ್ನಬೇಕಾ?,” ಎಂದು ಪ್ರಶ್ನಿಸಿದ್ದಾರೆ. ನಂತರ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಎಸ್ಪಿ ನಾಯಕ, “ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ರಾಮ್ ಗೋಪಾಲ್ ಯಾದವ್ ಮತ್ತು ಅಖಿಲೇಶ್ ಯಾದವ್ ಇಬ್ಬರನ್ನೂ ಪಕ್ಷದಿಂದ ಕಿತ್ತು ಹಾಕಿದ್ದೇವೆ. ನಮ್ಮ ಪಾಲಿಗೆ ಪಕ್ಷ ತುಂಬಾ ಮುಖ್ಯವಾದುದು; ನಮ್ಮ ಪರಮೋಚ್ಛ ಉದ್ದೇಶ ಏನಿದ್ದರೂ ಪಕ್ಷವನ್ನು ಉಳಿಸಿಕೊಳ್ಳುವುದು,” ಎಂದಿದ್ದಾರೆ.

ಉಚ್ಛಾಟನೆಯ ಬೆನ್ನಿಗೆ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ತಾನು ನಿರ್ಧರಿಸುವುದಾಗಿ ಮುಲಾಯಂ ಸಿಂಗ್ ಹೇಳಿದ್ದಾರೆ.

ಅತ್ತ ಮುಲಾಯಂ ಶೋಕಾಸ್ ನೋಟಿಸ್ ನೀಡಿದ್ದರೆ, ಅಖಿಲೇಶ್ ಪರವಾಗಿ ಬ್ಯಾಟ್ ಬೀಸುತ್ತಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಜನವರಿ 1 ರಂದು ಪಕ್ಷದ ಪದಾಧಿಕಾರಿಗಳ ಸಭೆ ಕರೆದಿದ್ದಾರೆ. ಇದರಲ್ಲಿ ನಿಜವಾಗಿಯೂ ಪದಾಧಿಕಾರಿಗಳು ಭಾಗವಹಿಸುತ್ತಾರೋ, ಗೊತ್ತಿಲ್ಲ.

ಸಿನಿಮಾ ಕ್ಲೈಮ್ಯಾಕ್ಸ್ ಇನ್ನೂ ಮುಗಿದಿಲ್ಲ:

ಎಡದಿಂದ, ಅಖಿಲೇಶ್ ಯಾದವ್, ಶಿವಪಾಲ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್

ಎಡದಿಂದ, ಅಖಿಲೇಶ್ ಯಾದವ್, ಶಿವಪಾಲ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್

ಕೌಟುಂಬಿಕ ರಾಜಕಾರಣಕ್ಕೆ ಜನಪ್ರಿಯವಾಗಿರುವ ಸಮಾಜವಾದಿ ಪಕ್ಷಕ್ಕೆ ಕಳೆದ ಕೆಲವು ತಿಂಗಳ ಹಿಂದೆ, ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ವಾಪಸ್ ಬಂದಿದ್ದರು. ಅಲ್ಲಿಂದ ಯಾದವ್ ಕುಟುಂಬದಲ್ಲಿ ನಿಧಾನವಾಗಿ ಸಂಘರ್ಷ ಆರಂಭವಾಗಿತ್ತು. ಮುಖ್ಯವಾಗಿ ಮುಲಾಯಂ ಸಿಂಗ್ ತಮ್ಮ ಹಾಗೂ ಸಮಾಜವಾದಿ ರಾಜ್ಯಾಧ್ಯಕ್ಷ ಶಿವಪಾಲ್ ಸಿಂಗ್ ಯಾದವ್ ಹಾಗೂ ಅಖಿಲೇಶ್ ನಡುವೆ ಹಲವು ಭಿನ್ನಾಭಿಪ್ರಾಯಗಳು ಎದ್ದಿದ್ದವು. ಈ ವೇಳೆಯಲ್ಲಿ ಅಖಿಲೇಶ್ ಯಾದವ್ರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಅವರ ಸ್ಥಾನಕ್ಕೆ ಶಿವಪಾಲ್ ಯಾದವ್ರನ್ನು ಮುಲಾಯಂ ನೇಮಿಸಿದ್ದರು. ಇದಕ್ಕೆ ಸೊಪ್ಪು ಹಾಕದ ಅಖಿಲೇಶ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿದಿರಲಿಲ್ಲ. ಬದಲಿಗೆ ತೋಳೇರಿಸಿ ಶಿವಪಾಲ್ ಯಾದವ್ರನ್ನು ಸಂಪುಟದಿಂದ ಕಿತ್ತು ಹಾಕಿ ತಂದೆಗೇ ಎಚ್ಚರಿಕೆ ನೀಡಿದ್ದರು. ಇದಕ್ಕೆ ಬದಲಿಯಾಗಿ ಮುಲಾಯಂ ಸಿಂಗ್ ಅಖಿಲೇಶ್ ಬೆಂಬಲಿಗರನ್ನು ಪಕ್ಷದಿಂದ ಹೊರಗಟ್ಟಿದ್ದರು.

ಇದೆಲ್ಲಾ ಆಗಿ ಕೊನೆಗೆ ಪಕ್ಷ ಹೋಳಾಗುವ ಹಂತ ತಲುಪಿತ್ತು. ಒಂದು ಹಂತದಲ್ಲಿ ಪಕ್ಷದ ಬೆಳ್ಳಿ ಹಬ್ಬಕ್ಕೆ ಗೈರಾಗಿ ‘ರಥ ಯಾತ್ರೆ’ ಹೊರಟ ಅಖಿಲೇಶ್, ‘ಹೊಸ ಪಕ್ಷ ಘೋಷಣೆ ಮಾಡುತ್ತಾರೆ. ಎಲ್ಲಾ ತಯಾರಿಗಳೂ ಮುಗಿದಿವೆ,’ ಎಂದೂ ಸುದ್ದಿಯಾಗಿತ್ತು. ಆದರೆ ನಿಧಾನವಾಗಿ ಅಪ್ಪ, ಚಿಕ್ಕಪ್ಪ ಮತ್ತು ಮಗ ಮೂರು ಜನ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಎಲ್ಲ ಸರಿ ಹೋಯಿತು ಎನ್ನುವ ಭಾವನೆ ಹುಟ್ಟು ಹಾಕಿದ್ದರು. ಆದರೆ ತೋರಿಕೆಯ ಒಗ್ಗಟ್ಟು ಹೆಚ್ಚು ಕಾಲ ಬಾಳಲಿಲ್ಲ. ಇದೀಗ ಕೌಟುಂಬಿಕ ಜಗಳ ಬೀದಿಗೆ ಬಂದು ನಿರ್ಣಾಯಕ ತಿರುವಿನಲ್ಲಿ ನಿಂತಿದೆ. ಇದರ ಮುಂದುವರಿದ ಭಾಗ ಏನಿರಬಹುದು. ಸದ್ಯಕ್ಕೆ ಊಹಿಸುವುದು ಕಷ್ಟ.

ಈಗಾಗಲೇ ಹೇಗಾದರೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂದು ರಣತಂತ್ರ ಹೆಣೆದು ಬಿಜೆಪಿ ಚುನಾವಣಾ ಪ್ರಚಾರಕ್ಕೆ ಭರ್ಜರಿಯಾಗಿ ಚಾಲನೆ ನೀಡಿದೆ. ಕಾಂಗ್ರೆಸ್ ಚುನಾವಣಾ ರಣತಂತ್ರಕಾರ ಪ್ರಶಾಂತ್ ಕಿಶೋರ್ ಗರಡಿಯಲ್ಲಿ ಅಧಿಕಾರದ ಕನಸು ಕಾಣುತ್ತಿದೆ. ಇನ್ನು ಮಾಯಾವತಿಯ ಬಹುಜನ ಸಮಾಜವಾದಿ ಪಕ್ಷ ಮಾತ್ರ ತಣ್ಣಗೆ ಒಂದು ಹಂತದ ಪ್ರಚಾರ ಮುಗಿಸಿದೆ. ರಾಜ್ಯದಲ್ಲಿ ಬಹುಶಃ ಅಧಿಕಾರಕ್ಕೇರುವ ಎಲ್ಲಾ ಸಾಧ್ಯತೆಗಳಿರುವ ಮಾಯಾವತಿ ರ್ಯಾಲಿಗಳಿಗೆ ಲಕ್ಷ ಲಕ್ಷ ಜನ ಹರಿದು ಬರುತ್ತಿದ್ದಾರೆ.

ಈ ಚತುಷ್ಕೋನ ಸ್ಪರ್ಧೆಯಲ್ಲಿ ಎಸ್ಪಿ ತನ್ನ ಅಸ್ತಿತ್ವ ತೋರಿಸಬೇಕಾಗಿದೆ. ಆಢಳಿತರೂಢ ಪಕ್ಷವಾಗಿ ಅದರ ಮೇಲಿನ ನಿರೀಕ್ಷೆಯೂ ಹೆಚ್ಚಾಗಿದೆ. ಆದರೆ ಎಲ್ಲವೂ ಯಾದವ್ ಕುಟುಂಬಸ್ಥರ ಮೇಲೆ ನಿಂತಿದೆ. ಈ ದಾಯಾದಿ ಕಲಹದ ಲಾಭ ಯಾರಿಗಾಗುತ್ತೋ ಗೊತ್ತಿಲ್ಲ; ಹೀಗಿದ್ದೂ ಚತುಷ್ಕೋನ ಸ್ಪರ್ಧೆಗೆ ಇದು ಹೊಸ ದಿಕ್ಕು ನೀಡಲಿರುವುದು ಮಾತ್ರ ಸತ್ಯ.

 

ENTER YOUR E-MAIL

Name
Email *
February 2017
M T W T F S S
« Jan    
 12345
6789101112
13141516171819
20212223242526
2728  

Top