An unconventional News Portal.

ಚರ್ಚೆಯೊಂದರ ಮರುಪ್ರಸಾರ ಮತ್ತು ಸುವರ್ಣ ವಾಹಿನಿಯ ‘ರೇಟಿಂಗ್’ ಅನಿವಾರ್ಯತೆಗಳು!

ಚರ್ಚೆಯೊಂದರ ಮರುಪ್ರಸಾರ ಮತ್ತು ಸುವರ್ಣ ವಾಹಿನಿಯ ‘ರೇಟಿಂಗ್’ ಅನಿವಾರ್ಯತೆಗಳು!

‘ಆಜಾದಿ ವರ್ಸಸ್ ಸ್ವಾತಂತ್ರ್ಯ’ ನೆಪದಲ್ಲಿ ಸುವರ್ಣ ಸುದ್ದಿ ವಾಹಿನಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಗರಿಗೆದರಿರುವ ಸಮಯದಲ್ಲಿಯೇ, ಸಂಸ್ಥೆಯಿಂದ ಮಾನವ ಸಂಪನ್ಮೂಲ ಅಧಿಕಾರಿ ಹೊರಬೀಳುವ ಮಾಹಿತಿ ಲಭ್ಯವಾಗಿದೆ.

ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ, ಅದರಲ್ಲೂ ವಿಶೇಷವಾಗಿ ಪೇಸ್ಬುಕ್ನಲ್ಲಿ ಸುವರ್ಣ ಸುದ್ದಿ ವಾಹಿನಿ ನಡೆಸಿಕೊಟ್ಟ ಚರ್ಚೆಯ ಸುತ್ತ ವಾದ ವಿವಾದಗಳು ಆರಂಭವಾಗಿವೆ. ಪರಿಣಾಮ; ವಾಹಿನಿ, ಚರ್ಚೆಯನ್ನು ಯಾವುದೇ ಕತ್ತರಿ ಪ್ರಯೋಗಿಸದೆ ಮರು ಪ್ರಸಾರ ಮಾಡುವುದಾಗಿ ತಿಳಿಸಿದೆ. ಈ ಮೂಲಕ ಸಾಮಾಜಿಕ ಜಾಲತಾಣವೊಂದು ಮೊದಲ ಬಾರಿಗೆ ಮುಖ್ಯವಾಹಿನಿಯ ಮಾಧ್ಯಮವೊಂದರ ಮೇಲೆ ಒತ್ತಡ ಹೇರುವ ಸಾಧ್ಯತೆಗಳಿಗೆ ಉದಾಹರಣೆಯೊಂದು ಲಭ್ಯವಾಗಿದೆ. ಹೀಗಿರುವಾಗಲೇ, ‘ಏಷಿಯಾನೆಟ್’ ಸಂಸ್ಥೆಯ ಬೆಂಗಳೂರು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ, ಸುಭಯಾ ಬಸು ಸಂಸ್ಥೆಯಿಂದ ಹೊರ ಬೀಳಲಿದ್ದಾರೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ಹಾಗೆ ನೋಡಿದರೆ, ಈ ಬೆಳವಣಿಗೆಗೂ, ‘ಆಜಾದಿ ವರ್ಸಸ್ ಸ್ವಾತಂತ್ರ್ಯ’ ಚರ್ಚೆಗೂ ನೇರ ಸಂಬಂಧ ಇರುವಂತೆ ಕಾಣಿಸುತ್ತಿಲ್ಲ. ಬದಲಿಗೆ, ಸಂಸ್ಥೆಯೊಳಗೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹಗ್ಗ ಜಗ್ಗಾಟದ ಮುಂದುವರಿದ ಭಾಗದಂತೆ ಇದು ಕಾಣಿಸುತ್ತಿದೆ.

ಏನಿದು ಅಂತರಂಗ?:

ಉದ್ಯಮಿ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಾಲೀಕತ್ವದ ಸುವರ್ಣ ವಾಹಿನಿ, ಏಷಿಯಾನೆಟ್ ಸಂಸ್ಥೆಯ ವತಿಯಿಂದ ಮೂಡಿ ಬರುತ್ತಿರುವ ಸುದ್ದಿ ವಾಹಿನಿ. ಕನ್ನಡದಲ್ಲಿ ಎರಡು ಮತ್ತು ಮೂರನೇ ಸ್ಥಾನಗಳ ನಡುವೆ ತೂಗೂಯ್ಯಾಲೆ ಆಟವನ್ನು ಅದರ ಹುಟ್ಟಿನ ದಿನಗಳಿಂದಲೂ ಸಂಸ್ಥೆ ಆಡಿಕೊಂಡು ಬರುತ್ತಿದೆ. ಆರಕ್ಕೂ ಏರದ; ಮೂರಕ್ಕೂ ಇಳಿಯದ ಪರಿಸ್ಥಿತಿ ಅದರದ್ದು. ಹೀಗಿರುವಾಗಲೇ, ಇತ್ತೀಚೆಗೆ ‘ವಿಶ್ವವಾಣಿ’ ಪತ್ರಿಕೆಯಲ್ಲಿ ಸಹಾಯಕ ಸಂಪಾದಕ ಸ್ಥಾನದಲ್ಲಿದ್ದ ಅಜಿತ್ ಹನುಮಕ್ಕನವರ್ ಅವರನ್ನು ಸುವರ್ಣ ಮತ್ತೆ ಕರೆಸಿಕೊಂಡಿತು. ತನ್ನ ಸುದ್ದಿ ಹಾಗೂ ಕಾರ್ಯಕ್ರಮ ವಿಭಾಗದ ಮುಖ್ಯಸ್ಥನ ಸ್ಥಾನದ ಹೊಣೆಯನ್ನು ನೀಡಿತು. ಅಜಿತ್ ಮರಳಿ ಸುವರ್ಣಕ್ಕೆ ಕಾಲಿಡುತ್ತಿದ್ದಂತೆ, ತಮ್ಮನ್ನು ತಾವು ರೀ- ಲಾಂಚ್ ಮಾಡಿಕೊಳ್ಳುವ ಮಾದರಿಯಲ್ಲಿ ‘ಆಜಾದಿ ವರ್ಸಸ್ ಸ್ವಾತಂತ್ರ್ಯ’ ಎಂಬ ಚರ್ಚೆಯನ್ನು ನಡೆಸಲು ಮುಂದಾದರು. ಅದೇ ಕೊನೆಗೆ ವಿವಾದಕ್ಕೆ ಕಾರಣವಾಗಿದ್ದು ಇದೀಗ ಎಲ್ಲರ ಮುಂದಿದೆ.

“ನಾನು ವಿಶ್ವವಾಣಿ ಬಿಟ್ಟ ನಂತರ ಒಮ್ಮೆ ಧಾರವಾಡದಿಂದ ಮರಳಿ ಬೆಂಗಳೂರಿಗೆ ಬರುವ ಸಮಯದಲ್ಲಿ ರೈಲಿನಲ್ಲಿ ಸಿಕ್ಕವರು ನೂರು ಶ್ರೀಧರ್ ಮತ್ತು ಸಿರಿಮನೆ ನಾಗರಾಜ್. ಅವರನ್ನು ಮೊದಲು ಪರಿಚಯ ಮಾಡಿಕೊಂಡಿದ್ದು ಅಲ್ಲಿಯೇ. ನಂಬರ್ ತೆಗೆದುಕೊಂಡಿದ್ದೆ. ಹೀಗೊಂದು ಚರ್ಚಾ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದಾಗ ಇಬ್ಬರೂ ನೆನಪಾದರು. ಸಿರಿಮನೆ ಕೊಂಚ ಸಾಫ್ಟ್ ಅನ್ನಿಸಿದ್ದರಿಂದ ನೂರ್ ಅವರನ್ನು ಚರ್ಚೆಗೆ ಕರೆದೆವು,” ಎನ್ನುತ್ತಾರೆ ಅಜಿತ್.

ಆದರೆ, ಚರ್ಚೆಯಲ್ಲಿ ಪಾಲ್ಗೊಂಡಿದ್ದ ನೂರ್ ಈಗಾಗಲೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅವರ ಮೊಟ್ಟಮೊದಲ ಟಿವಿ ಪ್ಯಾನಲ್ ಚರ್ಚೆಯನ್ನು, ”ಉಪಯುಕ್ತವಾಗಿರುವ ಕೆಟ್ಟ ಅನುಭವ,” ಎಂದು ಬಣ್ಣಿಸಿದ್ದಾರೆ. ಚರ್ಚೆಯಲ್ಲಿ ಪಾಲ್ಗೊಂಡಿದ್ದ ಪತ್ರಕರ್ತೆ, ‘ಮಾಧ್ಯಮ ನೆಟ್’ ಸಂಪಾದಕಿ, ಚೇತನಾ ತೀರ್ಥಹಳ್ಳಿ ಕೂಡ, “ರೆಕಾರ್ಡ್ ಮಾಡಲಾದ ಚರ್ಚೆಯು ಪ್ರಸಾರಗೊಳ್ಳುವಾಗ ಪೂರ್ವಯೋಜಿತ ಸಂಚಿನಂತೆ ಕಾಣಿಸಿತು,” ಎಂದಿದ್ದಾರೆ.

ಈ ಎಲ್ಲಾ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ಕಿಡಿ ಹೊತ್ತಿಸುತ್ತಿದ್ದಂತೆ ಸುವರ್ಣ ವಾಹಿನಿ, ಕಾರ್ಯಕ್ರಮವನ್ನು (ಅನ್ ಎಡಿಟೆಡ್) ಮರು ಪ್ರಸಾರ ಮಾಡುವುದಾಗಿ ಹೇಳಿದೆ. “ಇಡೀ ಕಾರ್ಯಕ್ರಮ ಒಟ್ಟು 1 ಗಂಟೆ 30 ನಿಮಿಷಕ್ಕೂ ಹೆಚ್ಚಿದೆ. ಅದರೊಳಗಿದ್ದ ಗದ್ದಲವನ್ನು ಕಟ್ ಮಾಡಿ, ಈಗ 66 ನಿಮಿಷಕ್ಕೆ ತರಲಾಗಿದೆ. ಅದೇ ಅನ್ ಎಡಿಟೆಡ್ ವರ್ಶನ್,” ಎಂದು ವಾಹಿನಿಯ ಮೂಲಗಳು ‘ಸಮಾಚಾರ’ಕ್ಕೆ ತಿಳಿಸಿವೆ.

ವೈಯಕ್ತಿಕ ನೆಲೆಗೆ: 

ಟಿವಿ ಪ್ಯಾನಲ್ ಚರ್ಚೆಗಳು; ಚರ್ಚೆಯ ಹೊರತಾಗಿ ಅಭಿಪ್ರಾಯ ರೂಪಿಸುವ ವೇದಿಕೆಗಳಾಗಿ ಬದಲಾಗಿರುವ ಈ ದಿನಗಳಲ್ಲಿ ಅಜಿತ್ ಹನುಮಕ್ಕನವರ್ ನಡೆಸಿಕೊಟ್ಟ ಚರ್ಚೆ ಕಾರ್ಯಕ್ರಮ ಸದ್ದು ಮಾಡುತ್ತಿದೆ. ಇಲ್ಲಿಯೂ, ಇಡೀ ಚರ್ಚಾ ಕಾರ್ಯಕ್ರಮ ಒಂದು ಅಭಿಪ್ರಾಯಕ್ಕೆ ಸೀಮಿತವಾಗಿತ್ತು ಎಂಬ ಟೀಕೆಗಳು ಕೇಳಿಬರುತ್ತಿವೆ. ಅದಕ್ಕಿಂತ ಹೆಚ್ಚಾಗಿ, ಬಹುಶಃ ಇದೇ ಮೊದಲ ಬಾರಿಗೆ ಪತ್ರಕರ್ತರೊಬ್ಬನನ್ನು ಬಲಪಂಥೀಯ (ಚಡ್ಡಿ) ಎಂದು ಬ್ರಾಂಡ್ ಮಾಡಲಾಗುತ್ತಿದೆ. “ಹಿಂದೊಮ್ಮೆ ಭಜರಂಗದಳದಂತಹ ಮಿಲಿಟೆಂಟ್ ಹಿಂದೂ ಪರ ಸಂಘಟನೆಯ ಕಾರ್ಯಕರ್ತರಾಗಿದ್ದವರೇ, ಇವತ್ತು ಪತ್ರಿಕೆಯ ಸಂಪಾದಕರಾಗಿದ್ದಾರೆ. ಹೀಗಿದ್ದೂ, ಅಂತವರ ಬಗ್ಗೆ ಕೇಳಿಬಾರದ ಆರೋಪಗಳು ಅಜಿತ್ ಬಗ್ಗೆ ಕೇಳಿಬರುತ್ತಿರುವುದು ಗಮನಾರ್ಹ ಬೆಳವಣಿಗೆ,” ಎನ್ನುತ್ತಾರೆ ಹಿರಿಯ ಪತ್ರಕರ್ತರೊಬ್ಬರು. ಇದರ ಜತೆಗೆ, ಇಡೀ ಸುವರ್ಣ ವಾಹಿನಿಯನ್ನೇ ಬಲಪಂಥೀಯರ ‘ಮುಖವಾಣಿ’ ಎಂಬಂತೆ ಬಿಂಬಿಸಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಚಿತ್ರ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಚಿತ್ರ.

ಇವುಗಳ ಜತೆಗೆ, ಚರ್ಚೆಯಲ್ಲಿ ಪಾಲ್ಗೊಂಡಿದ್ದವರ ಬಗ್ಗೆ ಕೀಳುಮಟ್ಟದಲ್ಲಿ ಆರೋಪಗಳನ್ನು ಮಾಡಲಾಗುತ್ತಿದೆ. ಇದು ಅಸಹ್ಯ ಹುಟ್ಟಿಸುವ ರೀತಿಯಲ್ಲಿ ವೈಯಕ್ತಿಕ ಮಟ್ಟಕ್ಕೆ ಇಳಿದಿದೆ. ಇದು ಟಿವಿ ವಾಹಿನಿಯೊಂದರ ಚರ್ಚೆ ಕಾರ್ಯಕ್ರಮ ಸಾಮಾಜಿಕವಾಗಿ ಮೂಡಿಸಿರುವ ಪರಿಣಾಮಗಳು.

ಹಾಗೆ ನೋಡಿದರೆ, ‘ಏಷಿಯಾನೆಟ್’ ಸಂಸ್ಥೆಯ ಸಂಪಾದಕೀಯ ನಿರ್ದೇಶಕರಾಗಿರುವವರು ಸುಗತ ಶ್ರೀನಿವಾಸರಾಜು. ಒಂದಷ್ಟು ಕಾಲ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿದ್ದ ಸುಗತ, ಹಿಂದೆ ‘ವಿಜಯ ಕರ್ನಾಟಕ’ ಪತ್ರಿಕೆಯ ಸಂಪಾದಕರಾಗಿದ್ದವರು. ಅವರು ರಾಜೀವ್ ಚಂದ್ರಶೇಖರ್ ಮಾಲೀಕತ್ವದ ಮಾಧ್ಯಮ ಸಂಸ್ಥೆಯ ಸಂಪಾದಕೀಯ ನಿರ್ದೇಶಕರಾಗಿ ಬಂದ ನಂತರ ಸುವರ್ಣ ಸುದ್ದಿ ವಾಹಿನಿ ಹಾಗೂ ‘ಕನ್ನಡ ಪ್ರಭ’ದ ಚಹರೆಯೇ ಬದಲಾಗಿತ್ತು.

ಸೈದ್ಧಾಂತಿಕ ಸಂಘರ್ಷ:

ಜ್ಯುಪಿಟರ್ ಕ್ಯಾಪಿಟಲ್ ಸಮೂಹ ಸಂಸ್ಥೆಗಳ ಎಚ್ಆರ್ ಸುಭಯ ಬಸು.

ಜ್ಯುಪಿಟರ್ ಕ್ಯಾಪಿಟಲ್ ಸಮೂಹ ಸಂಸ್ಥೆಗಳ ಎಚ್ಆರ್ ಸುಭಯಾ ಬಸು.

ಹೊರಗಿನ ಚಹರೆ ಬದಲಾಗುತ್ತಿದ್ದ ಸಮಯದಲ್ಲಿಯೇ, ಸುವರ್ಣದೊಳಗೆ ಆಂತರಿಕ ಸಂಘರ್ಷಗಳು ಶುರುವಾಗಿದ್ದವು. ಕೊನೆಗೆ, ಅವತ್ತಿಗೆ ಸುವರ್ಣ ವಾಹಿನಿಯ ಸಂಪಾದಕೀಯ ವಿಭಾಗವನ್ನು ಕೆವಿಎನ್ ಸ್ವಾಮಿ ಕೈಗಿಟ್ಟ ಸುಗತ, ‘ಕನ್ನಡ ಪ್ರಭ’ದತ್ತ ತಮ್ಮ ಗಮನವನ್ನು ಹರಿಸಿದ್ದರು. ಸ್ವಾಮಿ ಕೈಗೆ ವಾಹಿನಿ ಕೊಟ್ಟರೂ, ರೇಟಿಂಗ್ ವಿಚಾರದಲ್ಲಿ ‘ಸುವರ್ಣ’ದ ದೆಸೆ ಬದಲಾಗಿರಲಿಲ್ಲ. ಬದಲಿಗೆ, ಸಂಸ್ಥೆಯೊಳಗೆ ಆಲೋಚನೆಗೆ ಹೊಂದದವರಿಗೆ ‘ಸಂಬಳ ಕಡಿತ’ದ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು. ಈ ಸಮಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದವರು, ಅಲ್ಲಿನ ಮಾನವ ಸಂಪನ್ಮೂಲ ವಿಭಾಗದ ಬಸು. ಅವರೇ ಈಗ ಸಂಸ್ಥೆಯಿಂದ ಹೊರ ಬಿದ್ದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಬಸು ಅವರನ್ನು ಸಂಪರ್ಕಿಸಲು ‘ಸಮಾಚಾರ’ ಪ್ರಯತ್ನಿಸಿತಾದರೂ, ಕರೆಯನ್ನು ಸ್ವೀಕರಿಸಲಿಲ್ಲ.

ಇದೇ ಸಮಯದಲ್ಲಿ, ಅತ್ತ ‘ವಿಶ್ವವಾಣಿ’ಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಲಾಗದ ಸ್ಥಿತಿಯಲ್ಲಿದ್ದ ಅಜಿತ್ ಅವರನ್ನು ತಂದು ‘ಮುಖ್ಯಸ್ಥ’ನ ಹುದ್ದೆಯನ್ನು ನೀಡಲಾಯಿತು. ಅವರು ‘ಆಜಾದಿ ವರ್ಸಸ್ ಸ್ವಾತಂತ್ರ್ಯ’ದ ಹೆಸರಿನಲ್ಲಿ ಚರ್ಚೆಯನ್ನು ನಡೆಸುವ ಮೂಲಕ ಸುವರ್ಣ ವಾಹಿನಿಗೆ ಹೊಸ ಮುಖವಾಡ ತೊಡಿಸುವ ಪ್ರಯತ್ನ ನಡೆಸಿದರು. ವಿಶೇಷ ಏನೆಂದರೆ, ಈ ಚರ್ಚಾ ಕಾರ್ಯಕ್ರಮಕ್ಕೆ ಪ್ರಚಾರದ ಸಹಯೋಗ ನೀಡಿದ್ದು ‘ಕನ್ನಡ ಪ್ರಭ’ ಎಂಬುದನ್ನೂ ಈ ಸಮಯದಲ್ಲಿ ಗಮನಿಸಬೇಕಿದೆ.

ಇವೆಲ್ಲವುಗಳ ಆಚೆಗೆ, ಇಂತಹ ಚರ್ಚಾ ಕಾರ್ಯಕ್ರಮದಿಂದ ವಾಹಿನಿಯ ‘ರೇಟಿಂಗ್’ ಏರುತ್ತಾ? ಇಲ್ಲವಾ? ಎಂಬುದರ ಮೇಲೆ ಮುಂದಿನ ದಿನಗಳ ಸುವರ್ಣ ಸಂಪಾದಕೀಯ ನಿಲುವುಗಳು ತೀರ್ಮಾನವಾಗಲಿವೆ. ಅದರ ಮುಂದೆ, ಎಡ- ಬಲದ ಚರ್ಚೆಗಳು, ಸಾಮಾಜಿಕ ಪರಿಣಾಮಗಳು, ಫೇಸ್ಬುಕ್ ಚರ್ಚೆಗಳು ನಗಣ್ಯವಾಗುತ್ತವೆ. ಆದರೆ, ಮುಂದಿನ ದಿನಗಳಲ್ಲಿ ಮುಖ್ಯವಾಹಿನಿ ಮಾಧ್ಯಮಗಳ ಮೇಲೆ ಸಾಮಾಜಿಕ ಜಾಲತಾಣಗಳು ಬೀರುವ ಪರಿಣಾಮ ಎಂಥದ್ದು ಎಂಬ ಪಾಠವೊಂದು ಈ ಮೂಲಕ ಸಿಕ್ಕಂತಾಗಿದೆ.

Leave a comment

Top