An unconventional News Portal.

ಮಂಗಳನ ಮೇಲೆ ಮತ್ತೊಂದು ‘ಲ್ಯಾಂಡರ್’; ಕೆಂಪು ಗ್ರಹದ ಅಧಿಪತ್ಯಕ್ಕೆ ಹೆಚ್ಚಿದ ಪೈಪೋಟಿ!

ಮಂಗಳನ ಮೇಲೆ ಮತ್ತೊಂದು ‘ಲ್ಯಾಂಡರ್’; ಕೆಂಪು ಗ್ರಹದ ಅಧಿಪತ್ಯಕ್ಕೆ ಹೆಚ್ಚಿದ ಪೈಪೋಟಿ!

ಐತಿಹಾಸಿಕ ಸಾಧನೆಗೆ ವಿಶ್ವದ ಪ್ರಮುಖ ಎರಡು ಬಾಹ್ಯಾಕಾಶ ಸಂಸ್ಥೆಗಳು ಸಿದ್ಧವಾಗಿವೆ. ಯುರೋಪ್ ಮತ್ತು ರಷ್ಯಾದ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ಮುಂದಿನ ವಾರ ಮಂಗಳ ಗ್ರಹದ ಮೇಲೆ ತಮ್ಮ ಲ್ಯಾಂಡರ್ಗಳನ್ನು ಇಳಿಸಲಿವೆ. ಈ ಮೂಲಕ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ನಂತರ ಈ ಸಾಧನೆ ಮಾಡಿದ ಮೊದಲ ಬಾಹ್ಯಾಕಾಶ ಸಂಸ್ಥೆಗಳು ಎಂಬ ಹಿರಿಮೆಗೆ ಇವು ಪಾತ್ರವಾಗಲಿವೆ.

‘ರಾಸ್ಕಾಸ್ಮೋಸ್ ಮಿಷನ್’ ಹೆಸರಲ್ಲಿ ಅಕ್ಟೋಬರ್ 19ರ ಬುಧವಾರ ಈ ಎರಡು ಬಾಹ್ಯಾಕಾಶ ಸಂಸ್ಥೆಗಳು ಲ್ಯಾಂಡರನ್ನು ಇಳಿಸಲಿವೆ. ಒಮ್ಮೆ ಲ್ಯಾಂಡರ್ ಕೆಂಪುಗ್ರಹದ ಮೇಲೆ ಇಳಿದ ನಂತರ ತನ್ನ ಸಂಶೋಧನೆ ಆರಂಭಿಸಲಿದ್ದು, ಮಂಗಳ ಗ್ರಹದ ಮೇಲೆ ಜೀವಿಗಳಿದ್ದಿರಬಹುದಾದ ಕುರುಹುಗಳಿಗಾಗಿ ಹುಡುಕಾಡಲಿದೆ.

ಒಂದೊಮ್ಮೆ ನೌಕೆಯ ಲ್ಯಾಂಡಿಂಗ್ ಯಶಸ್ವಿಯಾದಲ್ಲಿ, ಬಾಹ್ಯಾಕಾಶ ಸಂಸ್ಥೆಗಳು ಒಂದು ನೌಕೆಯನ್ನು ಮಂಗಳನ ಸುತ್ತ ಪರಿಭ್ರಮಿಸಲು ಬಿಟ್ಟು ಒಂದನ್ನು ನೆಲದ ಮೇಲೆ ಇಡಲಿವೆ. ಈ ಮೂಲಕ ವಿಜ್ಞಾನಿಗಳಿಗೆ ಏಕಕಾಲದಲ್ಲಿ ನೆಲ ಹಾಗೂ ವಾತಾವರಣದಲ್ಲಾಗುತ್ತಿರುವ ಬದಲಾವಣೆಯನ್ನು ಗಮನಿಸಲು ಸಾಧ್ಯವಾಗಲಿದೆ.

ಹೇಗಿದೆ ಯೋಜನೆ?

ಅಕ್ಟೋಬರ್ 16ರಂದು ‘ಎಕ್ಸೊಮಾರ್ಸ್’ ಗಗನ ನೌಕೆ ಮಂಗಳ ಗ್ರಹದ ಆಕಾಶದಲ್ಲಿ ಎರಡು ಭಾಗವಾಗಲಿದೆ. ಒಂದು ‘ಟ್ರೇಸ್ ಗ್ಯಾಸ್ ಆರ್ಬಿಟರ್ (ಟಿಜಿಒ)’ ಮತ್ತೊಂದು ‘ಶಿಯಾಪ್ಯಾರೆಲ್ಲಿ ಲ್ಯಾಂಡೆರ್’.

curiosity-sky-crane

2012ರಲ್ಲಿ ಮಂಗಳ ಗ್ರಹದ ಮೇಲೆ ಅಮೆರಿಕಾ ಇಳಿಸಿದ ‘ಕ್ಯೂರಿಯಾಸಿಟಿ ರೋವರ್’ ಲ್ಯಾಂಡಿಂಗ್ನ ಗ್ರಾಫಿಕ್ ಚಿತ್ರ

ಇದರಲ್ಲಿ ಆರ್ಬಿಟರ್ ಸುಲಭವಾಗಿ ಮಂಗಳನ ಕಕ್ಷೆಯಲ್ಲಿ ನೆಲೆ ನಿಲ್ಲಲಿದೆ. ಇದು ಮಂಗಳ ಗ್ರಹದ ಸುತ್ತಾ ಸುತ್ತುತ್ತಾ ಮಾಹಿತಿಗಳನ್ನು ಕಲೆ ಹಾಕಲಿದೆ. ಆದರೆ ‘ಶಿಯಾಪ್ಯಾರೆಲ್ಲಿ ಲ್ಯಾಂಡರ್’ ನೆಲದ ಮೇಲೆ ಇಳಿಯಬೇಕಾಗಿದ್ದು ಇದಕ್ಕೆ ಮೂರು ದಿನ ತಗುಲಲಿದೆ.

ಲ್ಯಾಂಡರಿನಲ್ಲಿ ರಾಡಾರ್ ವ್ಯವಸ್ಥೆ ಇರಲಿದ್ದು, ಮಂಗಳ ಗ್ರಹದ ನೆಲದಿಂದ 7 ಕಿಲೋಮೀಟರ್ ಎತ್ತರದಲ್ಲಿರುವಾಗ ಅಂತರವನ್ನು ಅಳತೆ ಮಾಡಲಿದೆ. ನಂತರ ನೌಕೆಯು ನೆಲದತ್ತ ಪ್ರಯಾಣ ಬೆಳಸಲಿದ್ದು ಇನ್ನೇನು ತಳ ಮುಟ್ಟಲು 2 ಮೀಟರ್ ಇದೆ ಎಂದಾಗ ನೌಕೆಯಿಂದ ಲ್ಯಾಂಡರ್ ಪ್ರತ್ಯೇಕವಾಗಲಿದೆ. ನಂತರ ‘ಗಿಯರ್’ (ವೇಗವನ್ನು ನಿಯಂತ್ರಿಸುವ ವ್ಯವಸ್ಥೆ) ಸಹಾಯದಿಂದ ವೇಗ ಕಡಿತಗೊಳಿಸುವ ಕೆಲಸ ಆರಂಭವಾಗಲಿದೆ.

ಗಗನ ನೌಕೆ ನೆಲಮಟ್ಟಕ್ಕೆ ಬರುತ್ತಿದ್ದಂತೆ ಪ್ಯಾರಚ್ಯೂಟ್ಗಳು ತೆರೆದುಕೊಳ್ಳಲಿವೆ. ನಂತರ ಹೈಡ್ರೋಜನ್ ಇಂಜಿನ್ಗಳು (ಥ್ರಸ್ಟರ್) ಕಾರ್ಯಾರಂಭಮಾಡಲಿದ್ದು ಲ್ಯಾಂಡರನ್ನು ನಿಧಾನವಾಗಿ ನೆಲದ ಮೇಲೆ ಇಳಿಸಲಾಗುತ್ತದೆ.

“ಗಗನನೌಕೆ ಸ್ವಯಂಚಾಲಿತ ತಂತ್ರಜ್ಞಾನ ಹೊಂದಿದ್ದು, ನಿರ್ದೇಶನಗಳನ್ನು ನೀಡಿದರೆ ಸಾಕಾಗುತ್ತದೆ,” ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಆರ್ಬಿಟರ್ ನಿರ್ದೇಶಕ ಮೈಕೆಲ್ ಡೆನಿಸ್ ಹೇಳಿದ್ದಾರೆ.

“ಎಲ್ಲಾ ಹಂತಗಳು ಪೂರ್ವ ನಿರ್ಧಾರಿತವಾಗಿವೆ. ಶಿಯಾಪ್ಯಾರೆಲ್ಲಿಗೆ ಮಾತ್ರ ಒಂದು ಶಾಟ್ ಇದೆ ಅಷ್ಟೆ. ಎಲ್ಲೂ ಲೋಪಗಳು ನಡೆಯಲು ಸಾಧ್ಯವಿಲ್ಲ,” ಎಂದು ‘ಗಿಜ್ಮಾಡೋ ವೆಬ್ಸೈಟ್’ ವರದಿ ಮಾಡಿದೆ.

ಒಂದೊಮ್ಮೆ ಲ್ಯಾಂಡರ್ ಇಳಿಯುವ ಕೋನ ತಪ್ಪಾದಲ್ಲಿ, ವೇಗವಾಗಿ ನೆಲದ ಮೇಲೆ ಬಿದ್ದು ಸುಟ್ಟು ಹೋಗುವ ಅಪಾಯಗಳೂ ಇವೆ. ಈ ಹಿಂದೆ ರಷ್ಯಾ ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಗಳು ಏಕಾಂಗಿಯಾಗಿ ಮಂಗಳ ಗ್ರಹದ ಮೇಲೆ ಲ್ಯಾಂಡರುಗಳನ್ನು ಇಳಿಸಲು ಪ್ರಯತ್ನಿಸಿದ್ದವಾದರೂ ಇಬ್ಬರ ಪ್ರಯತ್ನಗಳು ದುರಂತ ಅಂತ್ಯ ಕಂಡಿದ್ದವು. ಅಷ್ಟಲ್ಲದೆ ಈ ರೀತಿ ಲ್ಯಾಂಡರ್ಗಳನ್ನು ಇಳಿಸುವಲ್ಲಿ ಎರಡೂ ಸಂಸ್ಥೆಗಳೂ ಒಳ್ಳೆಯ ಟ್ರ್ಯಾಕ್ ರೆಕಾರ್ಡ್ ಇಟ್ಟುಕೊಂಡಿಲ್ಲ. ಆದರೆ ಇವರಿಬ್ಬರೂ ಜತೆಯಾಗಿ ಈ ಸಾಧನೆ ಮಾಡಬಹುದು ಎಂದುಕೊಳ್ಳಲಾಗಿದೆ.

‘ಎಕ್ಸೋಮಾರ್ಸ್ ಮಿಷನ್’ನ ಮೊದಲ ಭಾಗದ ಯೋಜನೆ ಇದಾಗಿದ್ದು, 2020ರ ಅಂತ್ಯಕ್ಕೆ ಮತ್ತೆ ಎರಡೂ ಸಂಸ್ಥೆಗಳು ಜತೆಯಾಗಿ ಮಂಗಳ ಗ್ರಹದ ಮೇಲೆ ‘ಎಕ್ಸೋಮಾರ್ಸ್ ರೋವರ್’ನ್ನು ಇಳಿಸಲಿವೆ.

ಒಂದೊಮ್ಮೆ ರೋವರ್ (ನೆಲದ ಮೇಲೇ ಓಡಾಡುವ ಸಾಮರ್ಥ್ಯ ಇರುವ ರೋಬೋಟ್) ಯೋಜನೆಯೂ ಯಶಸ್ವಿಯಾದಲ್ಲಿ ಮುಂದಿನ ನಾಲ್ಕು ವರ್ಷಗಳೊಳಗೆ ಮಂಗಳ ಗ್ರಹದ ಮೇಲೆ ಎರಡು ರೋವರ್ಗಳು ಓಡಾಡಲಿವೆ. ಒಂದೊಮ್ಮೆ ಮಂಗಳ ಗ್ರಹದ ಮೇಲೆ ಜೀವಿಗಳು ಇದ್ದಿರಬಹುದಾದ ಕುರುಹುಗಳು ಪತ್ತೆಯಾಗಬೇಕಾದರೆ, ಅದನ್ನು ಇದೇ ರೋಬೋಟ್ಗಳು ಇದನ್ನು ಪತ್ತೆ ಹಚ್ಚಬೇಕಾಗಿವೆ.

ಮಂಗಳ ಗ್ರಹದ ಮೇಲೆ ವಿಜ್ಞಾನಿಗಳು ಹೆಚ್ಚಿನ ಗಮನ ಹರಿಸಿದ್ದು, ವಿಜ್ಞಾನ ಕ್ಷೇತ್ರದಲ್ಲಿ ಕೆಂಪು ಗ್ರಹದ ಸುತ್ತ ನಿರಂತರ ಬೆಳವಣಿಗೆಗಳು ನಡೆಯುತ್ತಿವೆ.

Leave a comment

Top