An unconventional News Portal.

ದಲಿತ ಮಹಿಳೆಗೆ ‘ದೌರ್ಜನ್ಯ ಭಾಗ್ಯ’: ಚದುರಂಗ ಆಟದಲ್ಲಿ ಕುತೂಹಲ ಮೂಡಿಸಿರುವ ಕುಮಾರಸ್ವಾಮಿ ನಡೆಗಳು!

ದಲಿತ ಮಹಿಳೆಗೆ ‘ದೌರ್ಜನ್ಯ ಭಾಗ್ಯ’: ಚದುರಂಗ ಆಟದಲ್ಲಿ ಕುತೂಹಲ ಮೂಡಿಸಿರುವ ಕುಮಾರಸ್ವಾಮಿ ನಡೆಗಳು!

ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಲು ಭಿನ್ನ ವಿಚಾರಗಳನ್ನು ಆಯ್ಕೆ ಮಾಡಿಕೊಳ್ಳುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳವಾರ ವಿಧಾನ ಸೌಧದಲ್ಲಿಯೇ ದಲಿತ ಮಹಿಳೆಯೊಬ್ಬರನ್ನು ಕರೆತರುವ ಮೂಲಕ ಹೊಸ ಮಾದರಿಯ ಚದುರಂಗದಾಟಕ್ಕೆ ಸಾಕ್ಷಿಯಾದರು.

ಮುಖ್ಯಮಂತ್ರಿ ‘ಜನತಾ ದರ್ಶನ’ಕ್ಕೆಂದು ಬಂದ ಬೆಂಗಳೂರು ಮೂಲದ ದಲಿತ ಮಹಿಳೆಯೊಬ್ಬರ ಮೇಲೆ ಪೊಲೀಸರಿಂದ ದೌರ್ಜನ್ಯ ನಡೆದಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.  ವಿಜಯನಗರ ಪೈಪ್ ಲೈನ್ ರಸ್ತೆಯಲ್ಲಿರುವ ಸುನೀತಾ ಎಂಬುವವರು, ಮೇ. 17ರಂದು ಮುಖ್ಯಮಂತ್ರಿ ಜತೆ ಅಳಲು ತೋಡಿಕೊಳ್ಳಲು ಬಂದಾಗ ಪೊಲೀಸರು ಹಲ್ಲೆ ನಡೆಸಿ, ಮಡಿವಾಳದಲ್ಲಿರುವ ಮಹಿಳಾ ನಿಲಯಕ್ಕೆ ತೆಗೆದುಕೊಂಡು ಹೋಗಿ ಒಂದು ದಿನ ಇರಿಸಿದ್ದರು ಎಂದು ಮಾಹಿತಿ ನೀಡಿದರು. ಪಕ್ಕದಲ್ಲಿ ನೊಂದ ಮಹಿಳೆ ಸುನೀತ ಕೂಡ ಹಾಜರಿದ್ದು ತಮ್ಮ ಮೇಲೆ ನಡೆದ ಪೊಲೀಸರ ದೌರ್ಜನ್ಯವನ್ನು ಮಾಧ್ಯಮಗಳ ಮುಂದೆ ಕಣ್ಣೀರಿಡುತ್ತಲೇ ವಿವರಿಸಿದರು.

ಸಾಮಾನ್ಯ ಜನರನ್ನು ಸೆಳೆಯುವಂತಹ ವಿಚಾರಗಳನ್ನು ಇಟ್ಟುಕೊಂಡು ಆಡಳಿತ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುವ ಹೊಸ ಸಾಧ್ಯತೆಗಳನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅನ್ವೇಷಣೆ ಮಾಡುತ್ತಲೇ ಬರುತ್ತಿದ್ದಾರೆ. ಜನರ ಗಮನವನ್ನು ಸೆಳೆಯಲು ಕುಮಾರಸ್ವಾಮಿ ಬಳಸುತ್ತಿರುವ ಈ ತಂತ್ರಗಾರಿಕೆ ಕುರಿತು ಈಗ ರಾಜಕೀಯ ವಲಯದಲ್ಲಿ ಚರ್ಚೆಗಳು ಹುಟ್ಟಿಕೊಂಡಿವೆ.

kumarswamy-siddi-yaddy

ಮುಖ್ಯಮಂತ್ರಿ ಕೈಲಿದ್ದ ದುಬಾರಿ ವಾಚಿನ ಫೊಟೋಗಳ ಸಮೇತ ಕೆಲವು ತಿಂಗಳುಗಳ ಹಿಂದೆ ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ಮುಗಿ ಬಿದ್ದಿದ್ದರು. ವಾಚಿನ ಪ್ರಕರಣ ರಾಷ್ಟ್ರಾದ್ಯಂತ ಪ್ರಚಾರ ಪಡೆದುಕೊಳ್ಳುವಂತೆ ನೋಡಿಕೊಂಡಿದ್ದರು. ವಿಧಾನಸಭೆ ಅಧಿವೇಶನದಲ್ಲಿಯೂ ಅದು ಚರ್ಚೆಗೆ ಗ್ರಾಸವಾಗಿತ್ತು. ನಂತರ ಸಿದ್ದರಾಮಯ್ಯ ಸದರಿ ವಾಚನ್ನು ವಿಧಾನಸೌಧದ ಗ್ಯಾಲರಿಯಲ್ಲಿ ಸಂಗ್ರಹಕ್ಕೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದರಾದರೂ, ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರು ದಾಖಲಾಯಿತು.

ಹೀಗೆ, “ಸಾಮಾನ್ಯ ಜನರಿಗೆ ಅರ್ಥವಾಗುವಂತಹ ವಿಚಾರಗಳನ್ನು ಕುಮಾರಸ್ವಾಮಿ ತಮ್ಮ ಬತ್ತಳಿಕೆಯಲ್ಲಿ ಇಟ್ಟುಕೊಂಡು ಸರಕಾರದ ವಿರುದ್ಧ ಗುಡುಗುತ್ತಿರುವುದು ಹೊಸ ಮಾದರಿಯ ರಾಜಕೀಯ ತಂತ್ರಗಾರಿಕೆ. ಹಿಂದೆ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ, ವಿಶೇಷವಾಗಿ ಮೋದಿ ಮತ್ತು ಅಮಿತ್ ಶಾ ಜೋಡಿ ಇಂತಹದ್ದೇ ಸಾಮಾನ್ಯ ವಿಚಾರಗಳನ್ನು ತೂರಿ ಬಿಡುತ್ತಿದ್ದರು. ಈಗ ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷ ಮೋದಿ ವಿರುದ್ಧ ಹೀಗೊಂದು ತಂತ್ರಗಾರಿಕೆ ಬಳಸಿಕೊಳ್ಳುತ್ತಿದೆ. ಅದಕ್ಕೆ ಇತ್ತೀಚಿನ ಉದಾಹರಣೆ ಪ್ರಧಾನಿ ಅಂಕಪಟ್ಟಿ ವಿಚಾರ,” ಎನ್ನುತ್ತಾರೆ ಹಿರಿಯ ರಾಜಕೀಯ ವರದಿಗಾರರೊಬ್ಬರು.

“ಕುಮಾರಸ್ವಾಮಿ ಅವರಿಗೆ ಹೀಗೊಂದು ರಾಜಕೀಯ ತಂತ್ರಗಾರಿಕೆಯ ದೊಡ್ಡ ಹಿನ್ನೆಲೆಯೇ ಇದೆ. ಅವರು ಅನಾಯಾಸವಾಗಿ ಮುಖ್ಯಮಂತ್ರಿ ಆದವರು. ಗ್ರಾಮ ವಾಸ್ತವ್ಯ ಎಂಬ ಸುಲಭದಲ್ಲಿ ಪ್ರಚಾರ ಸಿಗುವಂತಹ ಕಾರ್ಯಕ್ರಮವನ್ನು ಅವರು ಮುಖ್ಯಮಂತ್ರಿ ಆಗಿದ್ದಾಗ ನಡೆಸಿಕೊಟ್ಟಿದ್ದವರು. ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ವಿರುದ್ಧ ಅವರು ಬಳಸುತ್ತಿರುವ ದಾಳಿಗಳು ಅದೇ ಮಾದರಿಯ ಪ್ರಚಾರವನ್ನು ಪಡೆದುಕೊಳ್ಳುತ್ತಿವೆ. ಅದಕ್ಕೆ ಅವರು ತೆಗೆದುಕೊಳ್ಳುತ್ತಿರುವ ಸಾಮಾನ್ಯ ಅನ್ನಿಸುವ ಸಂಗತಿಗಳೇ ಕಾರಣ,” ಎಂದವರು ವಿಶ್ಲೇಷಿಸುತ್ತಾರೆ.

ಸುನೀತಾ ಪ್ರಕರಣದಲ್ಲಿ ಪೊಲೀಸರಿಂದ ನಡೆದ ದೌರ್ಜನ್ಯಕ್ಕೆ ದಲಿತ ಮಹಿಳೆ, ಜನತಾ ದರ್ಶನದ ‘ಟಚ್’ ನೀಡಿದ್ದಾರೆ ಕುಮಾರಸ್ವಾಮಿ. ಮಂಗಳವಾರ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗಲೇ ಕರೆ ಮಾಡಿದ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ, ಅಳಲು ತೋಡಿಕೊಳ್ಳುತ್ತಿದ್ದ ಸುನೀತಾ ಅವರಿಗೆ ನೆರವು ನೀಡುವುದಾಗಿ ತಿಳಿಸಿದರು. ಇದೂ ಕೂಡ ಮಾಧ್ಯಮಗಳಲ್ಲಿ ಪ್ರಚಾರ ಪಡೆದುಕೊಳ್ಳುವಂತೆ ನೋಡಿಕೊಂಡರು.

ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ಸುತ್ತಾಟ ಮುಗಿಸಿ ಬಂದು ಸಮಜಾಯಿಷಿ ನೀಡಿದರಾದರೂ, ರಾಜ್ಯದ ಜನರಿಗೆ ಸುನೀತಾ ಕಣ್ಣೀರು ಹಾಗೂ ಕುಮಾರಸ್ವಾಮಿ ಆರೋಪಗಳು ಹೆಚ್ಚು ಪ್ರಭಾವಶಾಲಿಯಾಗಿ ಕಂಡಿದ್ದು ಸಹಜವಾಗಿಯೇ ಇತ್ತು.

ಇದಕ್ಕೆ ಹೋಲಿಸಿದರೆ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಪ್ರತಿ ದಿನವೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬರುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ನಿಂದಿಸಿದ್ದಾರೆ. ಆದರೆ, ಅವರ ಪ್ರತಿರೋಧಕ್ಕಿಂತಲೂ ಕುಮಾರಸ್ವಾಮಿ ನಡೆಸುತ್ತಿರುವ ರಾಜಕೀಯ ದಾಳಿಗಳು ಹೆಚ್ಚು ಪರಿಣಾಮಕಾರಿಯಾಗಿ ಕಾಣಿಸುತ್ತಿವೆ. ರಾಜಕೀಯ ಎಂಬ ಚದುರಂಗದಾಟದಲ್ಲಿ ಪ್ರತಿ ನಡೆಯೂ ಪರಿಣಾಮ ಬೀರುತ್ತವೆ ಎಂಬುದನ್ನು ಹಿರಿಯ ಜೀವ ದೇವೇಗೌಡರು ಮಗನಿಗೆ ಅರ್ಥ ಮಾಡಿಸಿದಂತಿದೆ.

 

Leave a comment

Top