An unconventional News Portal.

‘ಕೆಪಿಎಸ್ಸಿ’ [KPSC] ಗೆ ಶಾಮ್ ಭಟ್ ಅಧ್ಯಕ್ಷ: ರೋಗಗ್ರಸ್ಥ ಆಯೋಗಕ್ಕೆ ಮೂವರ ಮದ್ದೇ ಭೀಕರ!

‘ಕೆಪಿಎಸ್ಸಿ’ [KPSC] ಗೆ ಶಾಮ್ ಭಟ್ ಅಧ್ಯಕ್ಷ: ರೋಗಗ್ರಸ್ಥ ಆಯೋಗಕ್ಕೆ ಮೂವರ ಮದ್ದೇ ಭೀಕರ!

ಒಂದು ಕಾಲದಲ್ಲಿ ಕರ್ನಾಟಕದ ಮನೆ ಮನೆಗಳಿಂದ ಉದ್ಯೋಗ ಸೃಷ್ಟಿಸಿ, ಬಿಸಿ ರಕ್ತದ ಯುವಕ- ಯುವತಿಯರನ್ನು ಬಡಿದೆಬ್ಬಿಸಿಕೊಂಡು ಕರೆತಂದು ಸರಕಾರದ ಸೇವೆಗೆ ಸೇರಿಸಿಕೊಂಡ ‘ಆಯೋಗ’ದಲ್ಲಿ ಇನ್ನು ಮುಂದೆ ಶಿಕ್ಷಣ ವ್ಯವಸ್ಥೆ- ಪರೀಕ್ಷಾ ಮಾದರಿಯೊಂದು ಜಾರಿಗೆ ಬರಲಿದೆ.

ಕೆಪಿಎಸ್ಸಿ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, “ಕೆಪಿಎಸ್ಸಿಯಲ್ಲಿ ಈವರೆಗೂ ಒಂದು ಶಿಸ್ತು ಎಂಬುದೇ ಬಂದಿಲ್ಲ. ಯಾವಾಗ ಪರೀಕ್ಷೆಗಳು ನಡೆಯುತ್ತವೆ, ಯಾವಾಗ ನಡೆಯುವುದಿಲ್ಲ, ಫಲಿತಾಂಶದ ಪ್ರಕಟಣೆ ಯಾವಾಗ, ಹೀಗೆ ಹಲವು ಸಂಗತಿಗಳಿಗೆ ಇಲ್ಲಿ ವೇಳಾಪಟ್ಟಿಯೇ ಇಲ್ಲ. ಹೀಗಾಗಿ ಶಿಕ್ಷಣ ವ್ಯವಸ್ಥೆಯ ಮಾದರಿಯಲ್ಲಿಯೇ ಕೆಪಿಎಸ್ಸಿ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿದ್ದೇವೆ. ಇದಕ್ಕಾಗಿ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಸದ್ಯದಲ್ಲಿಯೇ ಅದರ ಕುರಿತು ಮಾತುಕತೆ ನಡೆಸಲಿದ್ದೇವೆ,” ಎಂದು ತಿಳಿದುಬಂದಿದೆ.

ಬದಲಾವಣೆಯ ಕನಸು:

ಹೀಗೊಂದು ಸಾಧ್ಯತೆಯ ಕುರಿತು ಈ ಹಿಂದೆಯೇ ಮಾತುಗಳು ಕೇಳಿ ಬಂದಿದ್ದವು. ಅದರ ಜತೆಗೆ, ಒಟ್ಟಾರೆ ಶಿಕ್ಷಣ ವ್ಯವಸ್ಥೆಯೂ ಬದಲಾಗಬೇಕು ಎಂಬ ಬೇಡಿಕೆ ನಾನಾ ರೂಪಗಳಲ್ಲಿ ಕೇಳಿ ಬರುತ್ತಲೇ ಇದೆ. ಶಿಕ್ಷಣ ಇಲಾಖೆಯ ಭಾಗವಾಗಿರುವ, ಪಿಯುಸಿ ಮಂಡಳಿ ನಡೆಸುವ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ; ದೊಡ್ಡ ಹಗರಣವೇ ಆಗಿತ್ತು. ಅದರ ತನಿಖೆಯನ್ನು ಇನ್ನೂ ಸಿಐಡಿ ನಡೆಸುತ್ತಲೇ ಇದೆ. ಈ ಪ್ರಕರಣದ ತನಿಖಾ ವೇಳೆಯಲ್ಲಿಯೇ, ಕರ್ನಾಟಕ ಲೋಕ ಸೇವಾ ಆಯೋಗ ನಡೆಸಿದ್ದ ಎಫ್ಡಿಎ (FDA) ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಮಾಹಿತಿ ಹರಿದಾಡಿತ್ತು. ಕೊನೆಗದು ಪ್ರತಿಭಟನೆ, ಕೆಪಿಎಸ್ಸಿಗೆ ಮನವಿ ನೀಡುವ ಮೂಲಕ ತಣ್ಣಗಾಗಿ ಹೋಗಿತ್ತು. ನಂತರದ ಬೆಳವಣಿಗೆಯಲ್ಲಿ ‘ಕೆಪಿಎಸ್ಸಿ ಬಚಾವೋ’ ಎಂಬ ಆಂದೋಲನವನ್ನು ರಾಜ್ಯದ ಅತೀ ಹೆಚ್ಚು ಜನ ವೀಕ್ಷಿಸುತ್ತಿರುವ ಸುದ್ದಿ ವಾಹಿನಿ ‘ಟಿವಿ9’ ಆರಂಭಿಸಿತ್ತು. ‘ಸಮಾಚಾರ’ ಕೂಡ ಒಂದಷ್ಟು ವಿಶೇಷ ವರದಿಗಳನ್ನು ಪ್ರಕಟಿಸಿತ್ತು.

ಆ ನಂತರ ಕೆಪಿಎಸ್ಸಿ ಕಾರ್ಯದರ್ಶಿ ಮೀನಾ ವರ್ಗಾವಣೆಯಾಗಿ, ಆ ಜಾಗಕ್ಕೆ ಹಿಂದೆ ‘ಸರ್ವ ಶಿಕ್ಷಣ ಇಲಾಖೆ’ ಯೋಜನಾ ನಿರ್ದೇಶಕರಾಗಿದ್ದ, ಬಿಹಾರ ಮೂಲದ ಐಎಎಸ್ ಅಧಿಕಾರಿ ಸುಬೋದ್ ಯಾದವ್ ಅವರನ್ನು ತಂದು ಕೂರಿಸಲಾಗಿತ್ತು.

ಇಂತಹ ಸಮಯದಲ್ಲಿಯೇ ಕೆಪಿಎಸ್ಸಿ ಪರೀಕ್ಷೆಗಳನ್ನೂ ಶಿಕ್ಷಣ ಇಲಾಖೆ ಮಾದರಿಯಲ್ಲಿಯೇ ನಡೆಸಿ, ಫಲಿತಾಂಶ, ಹುದ್ದೆ ಭರ್ತಿ ಪ್ರಕ್ರಿಯೆಗಳನ್ನು ತರುವ ಆಲೋಚನೆ ಶುರುವಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ಬೆಳವಣಿಗೆ:

ಇದರ ಜತೆಗೆ, ಕೆಪಿಎಸ್ಸಿ ಪಾಲಿಗೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ.  ‘ಕರ್ನಾಟಕ ಲೋಕಸೇವಾ ಆಯೋಗ’ಕ್ಕೆ ಅಧ್ಯಕ್ಷರಾಗಿ, ನಿವೃತ್ತಿ ಅಂಚಿನಲ್ಲಿರುವ ಹಿರಿಯ ಐಎಎಸ್ ಅಧಿಕಾರಿ ಶಾಮ್ ಭಟ್ ನೇಮಕವನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ ಎಂಬ ಸುದ್ದಿ ಶನಿವಾರ ಸಂಜೆ ವೇಳೆಗೆ ಹೊರ ಬಿದ್ದಿದೆ. ಹಾಗೆ ನೋಡಿದರೆ, ಶಾಮ್ ಭಟ್ ಹೆಸರು ಸದರಿ ಹುದ್ದೆಗೆ ಕೇಳಿ ಬರುತ್ತಿದ್ದಂತೆ ಸಾರ್ವಜನಿಕ, ರಾಜಕೀಯ ವಿರೋಧ ಶುರುವಾಗಿತ್ತು. ಅದಕ್ಕೆ ಅವರ ‘ಟ್ರ್ಯಾಕ್ ರೆಕಾರ್ಡ್’ ಕೂಡ ಕಾರಣವಾಗಿತ್ತು. ಹೀಗಾಗಿಯೇ, ಅವರನ್ನು ಸರಕಾರ ಇತ್ತೀಚೆಗಷ್ಟೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಆಯುಕ್ತರ ಹುದ್ದೆಯಿಂದ ಬಿಡುಗಡೆಗೊಳಿಸಿತ್ತು. ಈ ಸಮಯದಲ್ಲಿ, ‘ದಿ ಹಿಂದೂ’ ಪತ್ರಿಕೆ ‘Sham Bhatt out, Khatri new BDA commissioner’ ಎಂಬ ತಲೆ ಬರಹದಲ್ಲಿ ವರದಿ ಪ್ರಕಟಿಸಿತ್ತು.

ಹೀಗಿರುವಾಗ, ಶಾಮ್ ಭಟ್ ಅವರ ಹೆಸರನ್ನು ರಾಜ್ಯಪಾಲರು ಅಂಗೀಕರಿಸುವುದು ಕಷ್ಟ ಎಂದೇ ಭಾವಿಸಲಾಗಿತ್ತು. ರಾಜಭವನದಿಂದ ಲೋಕಾಯುಕ್ತ ಸಂಸ್ಥೆಯಲ್ಲಿ ಶಾಮ್ ಭಟ್ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ಮಾಹಿತಿ ಕೋರಲಾಗಿತ್ತು. ಇದೂ ಕೂಡ ಸುದ್ದಿಯಾಗಿತ್ತು.

ಇದಾದ ನಂತರ, ಶಾಮ್ ಭಟ್ ಅವರ ನೇಮಕಾತಿ ಅಂಗೀಕಾರವನ್ನು ರಾಜ್ಯಪಾಲರು ಮಾಡದಂತೆ ತಡೆಯುವ ಪ್ರಯತ್ನವಾಗಿ ಬಿಜೆಪಿಯಲ್ಲಿಯೂ ಗುರುತಿಸಿಕೊಂಡಿರುವ ಬೆಂಗಳೂರು ಮೂಲದ, ಹಿರಿಯ ವಕೀಲ ಎಸ್. ನಟರಾಜ ಶರ್ಮಾ ಅರ್ಜಿಯೊಂದನ್ನು ಸಲ್ಲಿಸಿದ್ದರು. ಈ ಕುರಿತು ಇಂಗ್ಲಿಷ್ ಪತ್ರಿಕೆಗಳು ಸುದ್ದಿ ಮಾಡಿದ್ದವು.

ಇದರ ನಡುವೆಯೇ ಶಾಮ್ ಭಟ್ ಅವರ ನೇಮಕಾತಿಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.  ಒಂದಷ್ಟು ಜನ ಸಾಮಾಜಿಕ ಜಾಲತಾಣದಲ್ಲಿ ಭಟ್ಟರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

sham-bhat-fb-greetings

ಸಾಮಾಜಿಕ ಜಾಲತಾಣದಲ್ಲಿ ಇವರು ಸುದ್ದಿಯಾಗಿದ್ದು ಇದು ಮೊದಲೇನೂ ಅಲ್ಲ. 2015ರಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸುತ್ತಿದ್ದಾಗ ನಿದ್ದೆ ಮಾಡುತ್ತಿರುವ ಕಾರಣಕ್ಕೆ; ಭಟ್ ಸುದ್ದಿಯಾಗಿದ್ದರು.

kpsc-sham-bhat-at-cm-meet

ಅಂತವರಿಗೆ ಸಿದ್ದರಾಮಯ್ಯ ಕೆಪಿಎಸ್ಸಿ ಅಧ್ಯಕ್ಷ ಸ್ಥಾನವನ್ನು ಅವರ ವೃತ್ತಿ ಜೀವನದ ಕೊನೆಯ ದಿನಗಳಲ್ಲಿ ನೀಡಿದ್ದಾರೆ. ಅದಕ್ಕೆ ರಾಜ್ಯಪಾಲರೂ ಒಪ್ಪಿಗೆ ಸೂಚಿಸಿದ್ದಾರೆ. ಮೂರೂ ಹಿರಿಯರು ಸೇರಿ ತೆಗೆದುಕೊಂಡಿರುವ ಈ ಆಡಳಿತಾತ್ಮಕ ನಡೆ ಮುಂದಿನ ದಿನಗಳಲ್ಲಿ ಕೆಪಿಎಸ್ಸಿಯೊಳಗೆ ಎಂತಹ ಪರಿಣಾಮ ಬೀರಬಹುದು ಎಂಬುದನ್ನು ಕಾದು ನೋಡಬೇಕಿದೆ.

‘ರೋಗಕ್ಕಿಂತ ಮದ್ದು ಭೀಕರವಾಗಬಾರದು’ ಎಂಬುದು ಜನರ ಹಾರೈಕೆ ಅಷ್ಟೆ.

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top