An unconventional News Portal.

ವೇಳಾಪಟ್ಟಿ ಸಹಿತ ಅಧಿಸೂಚನೆ: ಏನಿದು ಕೆಪಿಎಸ್ಸಿ ಒಳಗಿನ ಹೊಸ ಬೆಳವಣಿಗೆ?

ವೇಳಾಪಟ್ಟಿ ಸಹಿತ ಅಧಿಸೂಚನೆ: ಏನಿದು ಕೆಪಿಎಸ್ಸಿ ಒಳಗಿನ ಹೊಸ ಬೆಳವಣಿಗೆ?

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಧಿಸೂಚನೆ ಜೊತೆಗೆ ಪರೀಕ್ಷೆಯ ದಿನಾಂಕವನ್ನೂ ಘೋಷಿಸಲಾಗಿದೆ.

159 ಹುದ್ದೆಗಳ ಭರ್ತಿಗೆ ಕೆಪಿಎಸ್ಸಿ ಹೊರಡಿಸಿರುವ ಇತ್ತೀಚಿನ ಅಧಿಸೂಚನೆಯಲ್ಲಿ ಪರೀಕ್ಷಾ ದಿನಾಂಕವೂ ನಮೂದಿಲಾಗಿದೆ. ಈ ಮೂಲಕ ಅಭ್ಯರ್ಥಿಗಳಿಗೆ ಮೊದಲ ಹಂತದ ಪಾರದರ್ಶಕತೆ ಕಾಣಿಸಿದೆ. ಅಧಿಸೂಚನೆ ನಂತರ ಪರೀಕ್ಷೆ ದಿನಾಂಕಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುವುದು ತಪ್ಪಿದೆ.

ಈ ಹಿಂದೆ ಶಿಕ್ಷಣ ವ್ಯವಸ್ಥೆಯ ಮಾದರಿಯಲ್ಲಿಯೇ ಕೆಪಿಎಸ್ಸಿ ಪರೀಕ್ಷೆಗಳನ್ನು ನಡೆಸಲು ಆಯೋಗ ತೀರ್ಮಾನಿಸಿದೆ ಎಂಬುದನ್ನು ‘ಸಮಾಚಾರ’ ವರದಿ ಮಾಡಿತ್ತು. ಇದೀಗ ಕೆಪಿಎಸ್ಸಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸುವ ಅಧಿಸೂಚನೆಯ ಮೂಲಕ ನಿಜವಾಗಿದೆ.

ಕೆಪಿಎಸ್ಸಿ ಹೊಸ ಅಧಿಸೂಚನೆಯಲ್ಲಿ ಏನಿದೆ?

ಕೆಪಿಎಸ್‌ಸಿ ಗ್ರೂಪ್‌ ‘ಎ’, ‘ಬಿ’ ತಾಂತ್ರಿಕ/ತಾಂತ್ರಿಕೇತರ ಹಾಗೂ ಗ್ರೂಪ್‌ ‘ಸಿ’ ತಾಂತ್ರಿಕ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಅಭ್ಯರ್ಥಿಗಳಿಂದ ಆಹ್ವಾನಿಸಿದೆ. ಈ ಕುರಿತು ಬುಧವಾರ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದೆ.

ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪೊಲೀಸ್‌, ಕೈಮಗ್ಗ ಸಹಿತ ಒಂಬತ್ತು ಇಲಾಖೆ ಹಾಗೂ ಕೆಎಚ್‌ಬಿ, ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಸೇರಿದ ಒಟ್ಟು 159 ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕ ಹಾಗೂ ಆಯ್ಕೆ ವಿಧಾನದಲ್ಲಿ ಹುದ್ದೆಗಳನ್ನು ತುಂಬಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಪರೀಕ್ಷಾ ದಿನಾಂಕವನ್ನು ಒಳಗೊಂಡ ಕೆಪಿಎಸ್ಸಿ ಅಧಿಸೂಚನೆ

ಪರೀಕ್ಷಾ ದಿನಾಂಕವನ್ನು ಒಳಗೊಂಡ ಕೆಪಿಎಸ್ಸಿ ಅಧಿಸೂಚನೆ

ಮೀನುಗಾರಿಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರು – 53, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪ್ರಾಂಶುಪಾಲರು – 20, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ – 9, ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿಯಲ್ಲಿ 25 ಎಂಜಿನಿಯರ್‌ ಹುದ್ದೆಗಳು ಮುಖ್ಯವಾಗಿ ಖಾಲಿ ಇದೆ. ಇವುಗಳಲ್ಲಿ 55 ಹುದ್ದೆಗಳು ಹೈದರಾಬಾದ್‌ ಕರ್ನಾಟಕಕ್ಕೆ ಮೀಸಲಾಗಿದೆ.

ಅರ್ಜಿ ಸಲ್ಲಿಕೆಗೆ ಸೆ.22 ಕೊನೆಯ ದಿನ

ಬುಧವಾರದಿಂದಲೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 22 (ರಾತ್ರಿ 11.45) ಗಡುವು ವಿಧಿಸಲಾಗಿದೆ. ಆಯೋಗ ತಿಳಿಸಿರುವ ವಿವರಗಳೊಂದಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗಿದೆ. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಹುದ್ದೆಗೆ ಅರ್ಜಿ ಸಲ್ಲಿಸುವುದಿದ್ದಲ್ಲಿ ಪ್ರತ್ಯೇಕ ಅರ್ಜಿಗಳನ್ನು ನಿಗದಿತ ಶುಲ್ಕದೊಂದಿಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳನ್ನು ಕೆಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ ಲಿಂಕ್ http://kpsc.kar.nic.in/NOTIFICATION%20dt.24-08-2016.pdf ನಿಂದ ಪಡೆಯಬಹುದಾಗಿದೆ.

ದ್ವಿತೀಯ ದರ್ಜೆ ಸಹಾಯಕರ ಅಂತಿಮ ಆಯ್ಕೆ ಪಟ್ಟಿ ಪ್ರಕಟ

ಇನ್ನು ಕರ್ನಾಟಕ ಲೋಕಸೇವಾ ಆಯೋಗವು 1,551 ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಗೆ ಸಂಬಂಧಿಸಿದ ಅಂತಿಮ ಆಯ್ಕೆ ಪಟ್ಟಿಯನ್ನು ಬುಧವಾರ ಪ್ರಕಟಿಸಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಭರ್ತಿಗೆ ಆಯೋಗ ಕಳೆದ ಜೂನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದ್ದು ಇದೀಗ ನೇಮಕ ಪ್ರಕ್ರಿಯೆಯನ್ನು ಅಂತಿಮಗೊಳಿಸಿ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಆಯೋಗದ ವೆಬ್‌ಸೈಟ್‌ನಲ್ಲಿ ಪಟ್ಟಿ ಲಭ್ಯವಿದೆ. ಆಯೋಗವು ಶೀಘ್ರದಲ್ಲೇ ಸರ್ಕಾರಕ್ಕೆ ಆಯ್ಕೆಪಟ್ಟಿಯನ್ನು ಕಳುಹಿಸಿಕೊಡಲಿದೆ. ಆ ನಂತರ ಸಂಬಂಧಪಟ್ಟ ಇಲಾಖೆ ಅಭ್ಯರ್ಥಿಗಳಿಗೆ ನೇಮಕ ಆದೇಶವನ್ನು ಕಳುಹಿಸಿಕೊಡಲಿವೆ.

ಪರಿಷ್ಕೃತ ಕೀ ಉತ್ತರ

ಕೆಪಿಎಸ್ಸಿ ಈ ಹಿಂದೆ ನಡೆಸಿದ ತಾಂತ್ರಿಕೇತರ ಸ್ವರ್ಧಾತ್ಮಕ ಪರೀಕ್ಷೆಗಳ ಪರಿಷ್ಕೃತ ಕೀ ಉತ್ತರಗಳನ್ನೂ ಇದೇ ವೇಳೆ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಹಿಂದೆ ಪ್ರಕಟಿಸಿದ್ದ ಕೀ ಉತ್ತರಗಳಿಗೆ ಅಭ್ಯರ್ಥಿಗಳಿಂದ ಆಕ್ಷೇಪಣೆಗಳು ವ್ಯಕ್ತವಾಗಿತ್ತು. ನಂತರ ಆಕ್ಷೇಪಗಳನ್ನು ವಿಷಯ ತಜ್ಞರಿಗೆ ಕಳುಹಿಸಿಕೊಟ್ಟು, ಅವರ ಸಲಹೆಯಂತೆ ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ ಎಂದು ಆಯೋಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗೆಜೆಟೆಡ್ ಪ್ರೊಬೇಷನಸ್ಸ್ ಹುದ್ದೆಗಳ ನೇಮಕಾತಿ ಅನುಪಾತ ಹೆಚ್ಚಳ

ಗೆಜೆಟೆಡ್‌ ಪ್ರೊಬೇಷನಸ್ಸ್ ಹುದ್ದೆಗಳ ನೇಮಕಾತಿಗೆ ನಡೆಸುವ ಸಂದರ್ಶನಕ್ಕೆ ಅಭ್ಯರ್ಥಿಗಳ ಆಯ್ಕೆ ಅನುಪಾತವನ್ನು 1:3ಯಿಂದ 1:5ಕ್ಕೆ ಹೆಚ್ಚಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ವಿರೋಧ ವ್ಯಕ್ತಪಡಿಸಿದೆ ಎಂದು ಪ್ರಜಾವಾಣಿ ವರದಿ ಪ್ರಕಟಿಸಿದೆ. ಈ ಕುರಿತು ಶುಕ್ರವಾರ ಪ್ರಜಾವಾಣಿಯಲ್ಲಿ ಸಂಪಾದಕೀಯ ಬರೆದಿದೆ.

Top