An unconventional News Portal.

ತಿರುಗಿ ಬಿದ್ದ FDA ಅಭ್ಯರ್ಥಿಗಳು: ಕೆಪಿಎಸ್ಸಿ ಕರ್ಮಕಾಂಡದ ವಿರುದ್ಧ ಸೋಮವಾರ ‘ಚಲೋ’!

ತಿರುಗಿ ಬಿದ್ದ FDA ಅಭ್ಯರ್ಥಿಗಳು: ಕೆಪಿಎಸ್ಸಿ ಕರ್ಮಕಾಂಡದ ವಿರುದ್ಧ ಸೋಮವಾರ ‘ಚಲೋ’!

kpsc-1ಕೆಪಿಎಸ್ಸಿ ದುರಾಡಳಿತ, ಆಯ್ಕೆ ಪ್ರಕ್ರಿಯೆಯಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರ, ಅರ್ಹ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯ, ಪ್ರತಿ ಸಾರಿಯೂ ಕಮರಿ ಹೋಗುತ್ತಿರುವ ಕನಸುಗಳ ಒಟ್ಟು ಮೊತ್ತ ಎಂಬಂತೆ ಮತ್ತೊಮ್ಮೆ ಕೆಪಿಎಸ್ಸಿ ವಿರುದ್ಧ ಹೋರಾಟಕ್ಕೆ ಭೂಮಿಕೆ ಸಜ್ಜಾಗುತ್ತಿದೆ. ಈ ಬಾರಿ ಅಖಾಡಕ್ಕೆ ಇಳಿಯುವ ತಯಾರಿಯಲ್ಲಿ ಇರುವವರು FDA ಹಾಗೂ SDA ಅಭ್ಯರ್ಥಿಗಳು.

‘ಕೆಪಿಎಸ್ಸಿ ಚಲೋ’ ಹೆಸರಿನಲ್ಲಿ ಅಂತರ್ಜಾಲದಲ್ಲಿ ಸಕ್ರಿಯವಾಗಿರುವ ಕೆಪಿಎಸ್ಸಿ ಅಭ್ಯರ್ಥಿಗಳು ಹೋರಾಟವೊಂದನ್ನು ರೂಪಿಸಲು ಮುಂದಾಗಿದ್ದಾರೆ. ಈಗಾಗಲೇ ಇದರ ಸಂಬಂಧ ಪೋಸ್ಟರ್ಗಳು ವ್ಯಾಪಕವಾಗಿ ಪ್ರಚಾರ ಪಡೆದುಕೊಳ್ಳುತ್ತಿವೆ. ಇದು ಸೋಮವಾರ ಮಧ್ಯಾಹ್ನ 2.15ಕ್ಕೆ ‘ಕೆಪಿಎಸ್ಸಿ ಚಲೋ’ದಲ್ಲಿ ವಾಟ್ಸಾಪ್, ಫೇಸ್ ಬುಕ್ ಬಿಟ್ಟು ಬಂದು ಭಾಗವಹಿಸಿ ಎಂದು ಮನವಿ ಮಾಡಿಕೊಳ್ಳಾಗುತ್ತಿದೆ. ಸೋಮವಾರದ ಪ್ರತಿಭಟನೆ ಹಿನ್ನೆಲೆಯಲ್ಲಿ ನಡೆಯಲಿರುವ ಮುಂದಿನ ಬೆಳವಣಿಗಗಳು ಎಸ್ಡಿಎ ಆಯ್ಕೆ ಪ್ರಕ್ರಿಯೆಯ ಭವಿಷ್ಯವನ್ನು ತೀರ್ಮಾನಿಸಲಿದೆ.

ಏನಿದು ಬೆಳವಣಿಗೆ?:

2015 ಅಕ್ಟೋಬರ್ ಮೊದಲ ವಾರದಲ್ಲಿ ಕೆಪಿಎಸ್ಸಿ ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಕಯರ ಸುಮಾರು 2435 ಹುದ್ದೆಗಳಿಗೆ ಪರೀಕ್ಷೆಗಳನ್ನು ನಡೆಸಿತ್ತು. ರಾಜ್ಯಾದ್ಯಂತ ಸುಮಾರು 4 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. ಇದಾಗಿ ಎಂಟು ತಿಂಗಳ ನಂತರ ಶುಕ್ರವಾರ ಕೆಪಿಎಸ್ಸಿ ಪ್ರಥಮ ದರ್ಜೆ ಸಹಾಯಕರ ಅರ್ಹತೆ ಪಟ್ಟಿಯನ್ನು ಬಿಡುಗಡೆ  ಮಾಡಿದೆ. ಇದನ್ನು ನೋಡಿದ ಪರೀಕ್ಷಾರ್ಥಿಗಳು ಒಂದು ಕ್ಷಣ ದಂಗಾಗಿದ್ದಾರೆ. “ಸಾಮಾನ್ಯ ವರ್ಗ ಹಾಗೂ ಮೀಸಲಾತಿ ಪಟ್ಟಿಯಲ್ಲಿದ್ದ ವರ್ಗಗಳ ‘ಕಟ್ ಆಫ್’ ಅಂಕಗಳನ್ನು ನೋಡುತ್ತಿದ್ದರೆ ಅನುಮಾನ ಮೂಡುತ್ತಿದೆ,” ಎಂಬುದು ಅಭ್ಯರ್ಥಿಗಳ ಆರೋಪ. ಈ ಕುರಿತು ಶನಿವಾರ ‘ಸಮಾಚಾರ’ ಅಭ್ಯರ್ಥಿಯೊಬ್ಬರು ಈ ಕುರಿತು ಬರೆದಿದ್ದ ಲೇಖನವೊಂದನ್ನು ಪ್ರಕಟಿಸಿತ್ತು.

ಆರೋಪಿ ಶಿವಕುಮಾರ್

ಆರೋಪಿ ಶಿವಕುಮಾರ್

ಇದೇ ವೇಳೆಗೆ ಸರಿಯಾಗಿ ಪಿಯುಸಿ ಕೆಮಿಸ್ಟ್ರಿ ಪಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಮೂಲಗಳಿಂದ ಎಂದು ಹೇಳಲಾದ ಮಾಹಿತಿಯೊಂದು ಹೊರ ಬಿದ್ದಿದೆ. ಎಫ್ಡಿಎ ಪ್ರಶ್ನೆ ಪತ್ರಿಕೆಗಳನ್ನು ಆರೋಪಿ ಶಿವಕುಮಾರ್ ಮತ್ತು ತಂಡ ಸೋರಿಕೆ ಮಾಡಿತ್ತು ಎಂದು ಒಪ್ಪಿಕೊಂಡಿದೆ ಎಂದು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಹೀಗಾಗಿ, ಒಂದು ಕಡೆ ಅರ್ಹರಿಗೆ ಅನ್ಯಾಯವಾಗಿದೆ ಎಂದು ನೊಂದಿದ್ದ ಅಭ್ಯರ್ಥಿಗಳಲ್ಲಿ, ಪ್ರಶ್ನೆ ಪತ್ರಿಕೆಯ ಸೋರಿಕೆ ವಿಚಾರವೂ ಸೇರಿಕೊಂಡು ಆಕ್ರೋಶ ಬುಗಿಲೇಳುವಂತೆ ಮಾಡಿದೆ.

ಸಾಧ್ಯತೆಗಳೇನಿವೆ?:

ಆದರೆ, ತಾಂತ್ರಿಕವಾಗಿ ಸಿಐಡಿ ತನ್ನ ತನಿಖೆಯನ್ನು ಪಿಯುಸಿ ಕೆಮಿಸ್ಟ್ರಿ ಪಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಮಾತ್ರವೇ ಸೀಮಿತಗೊಳಿಸಬೇಕಿದೆ. ಒಂದು ವೇಳೆ, “ತನಿಖೆ ಸಮಯದಲ್ಲಿ ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಮಾಹಿತಿ ಸಿಕ್ಕರೂ ತನಿಖೆ ನಡೆಸಲು ಬರುವುದಿಲ್ಲ. ಸರಕಾರದ ಗಮನಕ್ಕೆ ತರಬಹುದಷ್ಟೆ,” ಎನ್ನುತ್ತವೆ ಸಿಐಡಿ ಮೂಲಗಳು.

ಈ ಹಿನ್ನೆಲೆಯಲ್ಲಿ ‘ಕೆಪಿಎಸ್ಸಿ ಚಲೋ’ ಎಫ್ಡಿಎ ಪರೀಕ್ಷೆ ಹಾಗೂ ಆಯ್ಕೆ ಸುತ್ತಿನ ಬಗ್ಗೆಯೂ ತನಿಖೆಗೆ ಒತ್ತಾಯಿಸುವುದಷ್ಟೆ ಉಳಿದಿರುವ ದಾರಿ. ಅದಕ್ಕಿಂತಲೂ ಮುಂಚೆ, ಇಷ್ಟೆಲ್ಲಾ ಅದ್ವಾನಗಳಿಗೆ ಕಾರಣವಾಗುತ್ತಿರುವ ಕೆಪಿಎಸ್ಸಿಯಿಂದ ಕಳಂಕಿತರನ್ನು ಹೊರಹಾಕುವುದು ಹಾಗೂ ಸರಕಾರದ ಸೇವೆಗೆ ಯುವ ಜನತೆಯನ್ನು ಆಯ್ಕೆ ಮಾಡುವ ಪವಿತ್ರ ಕೆಲಸವನ್ನು ಮಾಡಬೇಕಿರುವ ಕೆಪಿಎಸ್ಸಿಗೆ ಕಾಯಕಲ್ಪ ನೀಡುವ ಕೆಲಸ ಆಗಬೇಕಿದೆ.

“ಎಫ್ಡಿಎ ಆಯ್ಕೆ ಪಟ್ಟಿ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದೇವೆ. ಬಿಜೆಪಿಯ ಸುರೇಶ್ ಕುಮಾರ್ ಜತೆ ಮಾತುಕತೆ ನಡೆಸಲಾಗಿದೆ. ಅವರು ಕೇರಳ ಪ್ರವಾಸದಿಂದ ವಾಪಾಸಾದ ನಂತರ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ. ಮುಂದಿನ ಹೋರಾಟವನ್ನು ರೂಪಿಸುತ್ತಿದ್ದೇವೆ,” ಎಂದು ‘ಕೆಪಿಎಸ್ಸಿ ಚಲೋ’ ಆಯೋಜಕರೊಬ್ಬರು ‘ಸಮಾಚಾರ’ಕ್ಕೆ ತಿಳಿಸಿದರು.

Top