An unconventional News Portal.

ಕೊಹಿನೂರ್ ಶಾಪಕ್ಕೆ ‘ಉತ್ತಮ ಸಮಾಜ’ ಬಲಿ: ಟಿವಿ9 ರಲ್ಲಿ ಘೋರ ಚರ್ಚೆ!

ಕೊಹಿನೂರ್ ಶಾಪಕ್ಕೆ ‘ಉತ್ತಮ ಸಮಾಜ’ ಬಲಿ: ಟಿವಿ9 ರಲ್ಲಿ ಘೋರ ಚರ್ಚೆ!

“ಇದು ಎಲ್ಲಾ ರಾಜ್ಯಗಳಿಗೂ ಹೋಗಿ ಬಂದಿದೆ. ಇಲ್ಲಿಂದ ಅಲ್ಲಿಗೆ ಹೋಗಿದೆ, ಅಲ್ಲಿಂದ ಇಲ್ಲಿಗೆ ಹೋಗಿದೆ. ಮುಸ್ಲಿಂ ರಾಷ್ಟ್ರಗಳಿಗೂ ಹೋಗಿದೆ. ಮುಸ್ಲಿಂ ರಾಜರು ಸೌಮ್ಯವಾಗಿರೋಲ್ಲ. ಎಲ್ಲರೂ ಅಂತಲ್ಲ. ಆದರೆ ಬಹುತೇಕರು ಸೌಮ್ಯವಾಗಿರೋಲ್ಲ. ಅದು ಮಾನಸಿಕ ಸ್ಥಿತಿ. ನಮ್ಮದು ಚಿಕ್ಕದಾಯ್ತು. ಇನ್ನೂ ದೊಡ್ಡದು ಮಾಡ್ಕೋಬೇಕು ಅಂತ ಮಾನಸಿಕ ಸ್ಥಿತಿ…”

kd-3ಮೇಲಿನ ಮಾತುಗಳಲ್ಲಿ ನಿಮಗೇನಾದರೂ ಅರ್ಥವಾಯ್ತಾ? ನಮಗೂ ಆಗಲಿಲ್ಲ. ಗುರುವಾರ ಬೆಳಗ್ಗೆ ಬೆಳಗ್ಗೆ ರಾಜ್ಯದ ನಂ1 ಸುದ್ದಿ ವಾಹಿನಿ ‘ಟಿವಿ9’ರಲ್ಲಿ ನಡೆಯುತ್ತಿದ್ದ ಚರ್ಚೆಯ ತುಣುಕು ಇದು. ಹೀಗೆ ತಲೆಬುಡ ಇಲ್ಲದ ವಾದ ಮಂಡನೆ ಮಾಡುತ್ತಿದ್ದವರು ಗವಿಗಂಗಾದರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ. ಸೋಮಸುಂದರ್ ದೀಕ್ಷಿತ್.

ವಿಷಯ ಏನಪ್ಪ ಅಂದ್ರೆ, ಕೇಂದ್ರ ಸರಕಾರ ಕೊಹಿನೂರು ಡೈಮಂಡ್ ವಿಚಾರದಲ್ಲಿ ಹೊಸ  ಆಯಾಮವೊಂದನ್ನು ಕೆಲವು ದಿನಗಳ ಹಿಂದೆ ತೇಲಿ ಬಿಟ್ಟಿದೆ. ಹೀಗಾಗಿ, ದೇಶದ ಮಾಧ್ಯಮಗಳಲ್ಲಿ ಕೋಹಿನೂರ್ ವಜ್ರದ ಕುರಿತು ಚರ್ಚೆ ನಡೆದಿದೆ. ಇದನ್ನೇ ಮೂಲವಾಗಿಟ್ಟುಕೊಂಡು ಇಂದು ಟಿವಿ 9 ಪ್ಯಾನಲ್ ಚರ್ಚೆ ನಡೆಸಿತು.

ವಿಷಯ: ಕೊಹಿನೂರ್ ವಜ್ರದಕ್ಕಿದೆ ಘೋರ ಶಾಪ. ಅದರೂ ಬ್ರಿಟನ್ ರಾಣಿಗೆ ಏಕೆ ತಟ್ಟಲಿಲ್ಲ?. ಈ ಶಾಪಕ್ಕೆ ಪುರಾವೆ ಎಂದು ವಾಹಿನಿ ಮುಂದಿಟ್ಟಿದ್ದು 1306ರ ಒಂದು ಸಂಸ್ಕೃತ ಗ್ರಂಥ. ಆದರೆ ಗ್ರಂಥದ ಹೆಸರು ಮಾತ್ರ ಎಲ್ಲಿಯೂ ಪ್ರಸ್ತಾಪವಾಗಲಿಲ್ಲ. ಇನ್ನು ಈ ಅಪರೂಪದ ಹರಳು ಶಾಪ ನೀಡುತ್ತೆ ಅಂತ ವಾಹಿನಿ ನಂಬಲು ಕಾರಣ, ಕೊಹಿನೂರು ಹೋದ ನಂತರ ಬ್ರಿಟನ್ ಕುಸಿತ ಶುರುವಾಯಿತು ಎಂಬ ಕಾರಣಕ್ಕೆ. ಬ್ರಿಟನ್ ಪ್ರಧಾನಿಯಾಗಿದ್ದ, ಮಾರ್ಗರೇಟ್ ಥ್ಯಾಚರ್ ಏನಾದರೂ ಬದುಕಿದ್ದರೆ, ರೇನಿಯಸ್ ಸ್ಟ್ರೀಟ್ ಎಲ್ಲಿದೆ ಎಂದು ಹುಡುಕಿಕೊಂಡು ಬರುತ್ತಿದ್ದರೇನೋ? ಭಾರತದಲ್ಲಿ ಸಿಪಾಯಿ ದಂಗೆ ಏಳಲೂ ಕೊಹಿನೂರು ವಜ್ರದ ಶಾಪವೇ ಕಾರಣ ಎಂದು ಟಿವಿ 9 ಹೇಳಿತು.  ಕೊನೆಯಲ್ಲಿ,ಇದನ್ನು ನಮ್ಮವರು ನಂಬುವುದಿಲ್ಲ; ಆದರೆ ಬ್ರಿಟನ್ನಲ್ಲಿ ಜನ ನಂಬುತ್ತಾರೆ ಎಂದು ‘ನಿರೀಕ್ಷಣಾ ಜಾಮೀನ’ನ್ನೂ ಸಲ್ಲಿಸಿತು ವಾಹಿನಿ.

ಇಷ್ಟೆಲ್ಲ ತೋರಿಸಿದ ಮೇಲೆ ಶುರುವಾಗಿದ್ದು ಪ್ಯಾನಲ್ ಚರ್ಚೆ. ದೀಕ್ಷಿತರ ಜತೆಗೆ, ಹವಳಗಳ ಮೌಲ್ಯಮಾಪಕ ಎಂದು ಗುರುತಿಸಿಕೊಂಡಿರುವ ಜಗದೀಶ್ ಬಂಡಾರಿ ಎಂಬುವವರು, ಸಂಸ್ಕೃತ ಪಂಡಿತರೂ, ‘ಶಾಸ್ತ್ರಗಳನ್ನೂ ವೈಜ್ಞಾನಿಕವಾಗಿ ಚಿಂತಿಸುವವರು’ (ಆ್ಯಂಕರ್ ಹೇಳಿದ್ದು) ಡಾ. ವಿದ್ವಾನ್ ಪಂಡಿತಾರಾದ್ಯ ಅವರ ಮುಂದೆ ಇದೇ ಅನುಮಾನಗಳನ್ನು ವಾಹಿನಿ ಮುಂದಿಟ್ಟಿತು. ಇದ್ದಿದರಲ್ಲಿ ಪಂಡಿತಾರಾದ್ಯರು, ‘ಬ್ರಿಟನ್ ರಾಣಿಗೆ ಶಾಪ ಇತ್ತು ಅನ್ನೋದಕ್ಕಿಂತ, ವಜ್ರದ ಮೌಲ್ಯ ಎಲ್ಲರನ್ನೂ ಆಕರ್ಷಿಸುತ್ತಿತ್ತು ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದರು. ಜತೆಗೆ, ಪಂಚೇಂದ್ರಿಯ ನಿಗ್ರಹಗಳ ಬಗ್ಗೆ ಜನರಿಗೆ ಬೋಧನೆ ನೀಡುಲು ಇದೇ ಸಮಯವನ್ನು ಬಳಸಿಕೊಂಡರು.

kd-4ಇಡೀ ಒಂದು ಗಂಟೆ ಚರ್ಚೆ ನೋಡಿದರೂ, ಕೊನೆಗೂ ಬ್ರಿಟನ್ ರಾಣಿಗೆ ಯಾಕೆ ಕೊಹಿನೂರ್ ವಜ್ರದ ಶಾಪ ತಟ್ಟಲಿಲ್ಲ? ಎಂಬುದು ಮಾತ್ರ ಗೊತ್ತೇ ಆಗಲಿಲ್ಲ. ಆಮೇಲೆ ಗೊತ್ತಾಗಿದ್ದು ಏನು ಎಂದರೆ, ”ಟಿಆರ್ಪಿ ಬೀಳುತ್ತಿದೆ; ಅದೇ ಹೊತ್ತಿಗೆ ಕೊಹಿನೂರ್ ಸುತ್ತಲೂ ಏನೋ ಒಂದು ಚರ್ಚೆ ಶುರುವಾಗಿದೆ. ಈ ಸಮಯದಲ್ಲಿ ‘ಶಾಪ- ಸಾಮ್ರಾಜ್ಯ ಪತನ- ಬ್ರಿಟನ್ ರಾಣಿ- ರಕ್ತ ಕಾರಿ ಸತ್ತರು, ಅಂತೆಲ್ಲಾ ಹೇಳಿದರೆ, ಜನ ನೋಡುತ್ತಾರೆ ಎಂದು ‘ಎಕನಾಮಿಕ್ಸ್ ಟೈಮ್ಸ್’ ಓದುವ ಹಿರಿಯ ಪತ್ರಕರ್ತರೊಬ್ಬರು ಸಜಸ್ಟ್ ಮಾಡಿದ್ದಾರೆ,” ಎಂಬುದು. ಇದು ‘ಉತ್ತಮ ಸಮಾಜಕ್ಕಾಗಿ’ ಎಂಬ ಟ್ಯಾಗ್ ಲೈನ್ ಹಾಕಿಕೊಳ್ಳುವ ವಾಹಿನಿಯ ಕತೆ.

ಸುದ್ದಿಗಳ ವಿಚಾರ ಬಂದಾಗ, ವೃತ್ತಿಪರತೆಗೆ ಕೊಂಚ ಹತ್ತಿರದಲ್ಲಿರುವಂತೆ ಕಾಣುವ ಟಿವಿ 9, ನ್ಯೂಸ್ ಡೆವಲಪ್ಮೆಂಟ್ ಇಲ್ಲದ ದಿನಗಳಲ್ಲಿ ಈ ಮಟ್ಟಕ್ಕೆ ಕುಸಿಯುವುದು ಇದೇ ಮೊದಲೇನೂ ಅಲ್ಲ. ಅದಕ್ಕೆ ‘ಐಡಿಯಾ’ಗಳ ಕೊರತೆ ಕಾರಣವಾ? ಇಲ್ಲ ದಶಕಗಳ ಹಿಂದಿನ ‘ಆಜ್ ತಕ್’ ಹ್ಯಾಂಗೋವರ್ ಕಾರಣವಾ? ಗೊತ್ತಿಲ್ಲ.

‘ಆಜ್ ತಕ್’ ಬದಲಾಗಿದೆ; ಅದನ್ನು ಅನುಸರಿಸುತ್ತಿದ್ದವರು ಬದಲಾಗಿಲ್ಲ’ ಎಂದು ರಾಷ್ಟ್ರೀಯ ಪತ್ರಕರ್ತರು ಮಾತಾನಾಡಿಕೊಳ್ಳುವುದಕ್ಕೆ ಕಾರಣಗಳು ಇಲ್ಲ ಅಂತೇನಿಲ್ಲ…

Leave a comment

Top