An unconventional News Portal.

ಕೊಡಗಿನ ಕಾಫಿತೋಟಗಳ ‘ಲೈನ್ ಮನೆ’ ಅಂತರಂಗ ಬಿಚ್ಚಿಟ್ಟ ಸ್ಥಳೀಯ ಪತ್ರಿಕೆಯ ಜಾಹೀರಾತು!

ಕೊಡಗಿನ ಕಾಫಿತೋಟಗಳ ‘ಲೈನ್ ಮನೆ’ ಅಂತರಂಗ ಬಿಚ್ಚಿಟ್ಟ ಸ್ಥಳೀಯ ಪತ್ರಿಕೆಯ ಜಾಹೀರಾತು!

ದಿಡ್ಡಳ್ಳಿ ಆದಿವಾಸಿಗಳ ಸಮಸ್ಯೆಗಳಿಗೆ ಪರಿಹಾರ ಸಿಗುವ ಮುನ್ನವೇ ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿನ ‘ಲೈನ್ ಮನೆ’ ಜೀತಕ್ಕೆ ತಾಜಾ ಉದಾಹರಣೆಯೊಂದು ಸಿಕ್ಕಿದೆ.

ವಿರಾಜಪೇಟೆಯ ಚೆಂಬೆಬೆಳ್ಳೂರಿನ ತೋಟವೊಂದರಿಂದ ದಂಪತಿ ಮತ್ತು ವಿದ್ಯಾಭ್ಯಾಸ ಮಾಡುತ್ತಿದ್ದ ನಾಲ್ವರು ಮಕ್ಕಳು ಕಾಣೆಯಾಗಿದ್ದಾರೆ ಎಂಬ ಜಾಹೀರಾತೊಂದು ಸ್ಥಳೀಯ ಪತ್ರಿಕೆ ‘ಶಕ್ತಿ’ಯಲ್ಲಿ, ಬುಧವಾರ ಭಾವಚಿತ್ರ ಸಹಿತ ಪ್ರಕಟವಾಗಿದೆ. ಈ ಜಾಹೀರಾತನ್ನು ಖಾಸಗಿ ತೋಟದ ಮಾಲೀಕ ಎಂ. ಡಿ. ಅಪ್ಪಯ್ಯ ಎಂಬುವವರು ನೀಡಿದ್ದಾರೆ.

‘ಬೋಜ ಮತ್ತು ಶಾಂತಿ ಎಂಬುವವರು ಕಳೆದ ಒಂದೂವರೆ ತಿಂಗಳ ಹಿಂದೆ ಶಾಲೆಗೆ ಹೋಗುವ 4 ಮಕ್ಕಳ ಸಹಿತ ಚೆಂಬೆಬೆಳ್ಳುರಿನ ತೋಟದಿಂದ ಕಾಣೆಯಾಗಿದ್ದಾರೆ. ಈ ಕುರಿತು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇವರ ಬಗ್ಗೆ ಸುಳಿವು ಸಿಕ್ಕಿದವರು ಕೂಡಲೇ ಕೆಳಕಂಡ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ’ ಎಂದು ದೂರವಾಣಿ ಸಂಖ್ಯೆಗಳ ಸಹಿತ ಜಾಹೀರಾತಿನಲ್ಲಿ ಹೇಳಲಾಗಿದೆ.

ಕೂಲಿಯಾಳುಗಳು ನಾಪತ್ತೆಯಾದ ಕುರಿತು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತು.

ಕೂಲಿಯಾಳುಗಳು ನಾಪತ್ತೆಯಾದ ಕುರಿತು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತು.

ಹಾಗೆ ನೋಡಿದರೆ, ಇದು ಕೊಗಡು ಜಿಲ್ಲೆಯ ಕಾಫಿ ತೋಟಗಳ ಮಾಲೀಕರಿಂದ ಪ್ರಕಟಿಸಲಾಗುತ್ತಿರುವ ಮೊದಲ ಜಾಹೀರಾತೇನಲ್ಲ. “ತಿಂಗಳಿಗೆ 2- 3 ಇಂತಹ ಜಾಹೀರಾತುಗಳು ನಮ್ಮಲ್ಲಿ ಪ್ರಕಟವಾಗುತ್ತವೆ. ಇದು ನಮ್ಮ ಭಾಗದಲ್ಲಿ ಸಾಮಾನ್ಯ,” ಎಂದು ಶಕ್ತಿ ಪತ್ರಿಕೆಯ ಸಿಬ್ಬಂದಿಯೊಬ್ಬರು ‘ಸಮಾಚಾರ’ಕ್ಕೆ ತಿಳಿಸಿದರು.

ಏನಿದರ ಅಂತರಂಗ?:

ಇಂಗ್ಲಿಷ್ ಲೇಖಕ ಅಲೆಕ್ಸ್ ಹೆಲಿ ‘ರೂಟ್ಸ್’ ಎಂಬ ಕಾದಂಬರಿಯೊಂದನ್ನು ಪ್ರಕಟಿಸಿದ್ದಾರೆ. ಈ ಕಾದಂಬರಿಯಲ್ಲಿ ಅಮೆರಿಕಾದ ಕಪ್ಪು ಜನರ ಜೀತಗಾರಿಕೆಯ ಬಗೆಯನ್ನು ಕಟ್ಟಿಕೊಡಲಾಗಿದೆ. ಜತೆಗೆ, ಅವರ ಮಾರಾಟ ಮತ್ತು ಮರು ಮಾರಾಟದ ಭೀಕರ ಎನ್ನಿಸುವ ಚಿತ್ರಣವೂ ಇಲ್ಲಿದೆ. ಹೆಚ್ಚು ಕಡಿಮೆ ಇದನ್ನೇ ಹೋಲುವ ಚಿತ್ರಣವೊಂದು ಕೊಡಗಿನ ಕಾಫಿ ಮತ್ತು ಟೀ ಪ್ಲಾಂಟೇಷನ್ಗಳಲ್ಲಿದೆ. ಇಲ್ಲಿನ ವಿಸ್ತಾರವಾದ ಹಸಿರು ಪರಿಸರಗಳ ನಡುವೆ ಇರುವ ತೋಟಗಳಲ್ಲಿ ಮಾಲೀಕರ ಮನೆಗಳ ಮಗ್ಗಲಿಗೆ ‘ಲೈನ್ ಮನೆ’ಗಳು ಎಂದು ಕರೆಯುವ ಕಾರ್ಮಿಕರಿಗಾಗಿಯೇ ಕಟ್ಟಲಾದ ಸಣ್ಣ ಮನೆಗಳಿರುತ್ತವೆ.

“ಲೈನ್ ಮನೆಗಳ ಬದುಕನ್ನು ವಿವರಿಸುವುದು ಕಷ್ಟ. ಎಷ್ಟೋ ಕುಟುಂಬಗಳು ತಲೆತಲಾಂತರಗಳಿಂದ ಲೈನ್ ಮನೆಗಳಲ್ಲಿ ಬದುಕು ಸವೆಸಿಕೊಂಡು ಬಂದಿದ್ದಾರೆ. ಅವರಿಗೆ ಹೊರಗಿನ ಪ್ರಪಂಚದ ಅರಿವೂ ಇರುವುದಿಲ್ಲ. ಇದೊಂದು ರೀತಿಯಲ್ಲಿ ಆಧುನಿಕ ಜೀತ,” ಎನ್ನುತ್ತಾರೆ ಕೊಡಗು ಮೂಲದ ಸಾಮಾಜಿಕ ಕಾರ್ಯಕರ್ತೆಯೊಬ್ಬರು.

“ಕಾಫಿ ತೋಟಗಳ ಕೆಲಸಗಾರರಾಗಿ ಬಂದವರು ಲೈನ್ ಮನೆಗಳಲ್ಲಿಯೇ ತಲೆಮಾರುಗಳನ್ನು ಕಳೆದವರೂ ಇದ್ದಾರೆ. ಇಲ್ಲವೇ, ಒಂದು ತೋಟದ ಲೈನ್ ಮನೆಯಿಂದ ಇನ್ನೊಂದು ತೋಟದ ಲೈನ್ ಮನೆಗೆ ವರ್ಗಾವಣೆಗೊಂಡವರೂ ಇದ್ದಾರೆ. ಹಾಗೆ, ಒಬ್ಬ ಮಾಲೀಕನಿಂದ ಇನ್ನೊಬ್ಬ ಮಾಲೀಕನ ಸುಪರ್ದಿಗೆ ಹೋಗುವ ಮುನ್ನ ಅವರ ಸಾಲದ ಹೊಣೆಗಾರಿಕೆಯನ್ನು ಹೊಸ ಮಾಲೀಕರು ಹೊತ್ತುಕೊಳ್ಳುತ್ತಾರೆ,” ಎನ್ನುತ್ತಾರೆ ಅವರು.

“ಅತ್ಯಂತ ಕನಿಷ್ಟ ಕೂಲಿಯನ್ನು ಕಾರ್ಮಿಕರಿಗೆ ನೀಡಲಾಗುತ್ತದೆ. ಹೀಗಾಗಿ, ಅವರ ಸಾಲ ಯಾವತ್ತೂ ತೀರುವುದಿಲ್ಲ. ಜತೆಗೆ, ಮದುವೆ, ಆರೋಗ್ಯದ ಸಮಸ್ಯೆಗಳು ಬಂದಾಗ ಹೊಸ ಸಾಲ ಸೇರ್ಪಡೆಯಾಗುತ್ತದೆ. ಇದರಿಂದ ಕಾರ್ಮಿಕರು ಜೀವನ ಪೂರ್ತಿ ಸಾಲಗಾರರಾಗಿಯೇ ಇರುತ್ತಾರೆ. ಕೆಲವೊಮ್ಮೆ ಅವರು ಇದರಿಂದ ಹೊರಬರಲು ತಪ್ಪಿಸಿಕೊಂಡು ಹೋಗುತ್ತಾರೆ. ಅಂತಹ ಸಮಯದಲ್ಲಿ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡಲಾಗುತ್ತದೆ. ಇದು ಕೊಗಡಿನ ಅಂತರಂಗ,” ಎಂದು ಇತ್ತೀಚಿಗೆ ದಿಡ್ಡಳ್ಳಿ ಆದಿವಾಸಿಗಳ ಪರವಾಗಿ ಹೋರಾಟ ನಡೆಸಿದ ಅವರು ಮಾಹಿತಿ ನೀಡುತ್ತಾರೆ. ಜತೆಗೆ, ತಮ್ಮ ಹೆಸರನ್ನು ಪ್ರಕಟಿಸುವ ಮೂಲಕ ತೋಟದ ಮಾಲೀಕರಿಂದ ಸಮಸ್ಯೆಯಾಗಬಹುದು ಎಂಬ ಆತಂಕವನ್ನೂ ಅವರು ‘ಸಮಾಚಾರ’ದ ಜತೆ ತೋಡಿಕೊಂಡರು.

ಕುಡಿದೇ ಸಾಯುತ್ತಾರೆ:

ಸದ್ಯ ‘ಶಕ್ತಿ’ ಪತ್ರಿಕೆಯಲ್ಲಿ ಬಂದ ಜಾಹೀರಾತಿನ ಜಾಡನ್ನು ಅರಸಿ ಹೊರಟರೆ ಭಿನ್ನ ಆಯಾಮಗಳು ತೆರೆದುಕೊಳ್ಳುತ್ತವೆ. ಜಾಹೀರಾತು ನೀಡಿದ ಎಂ. ಡಿ. ಅಪ್ಪಯ್ಯ, “ನೋಡಿ ಇವರೇ, ಇದು ನಮ್ಮಲ್ಲಿ ನಡೆದುಕೊಂಡು ಬಂದ ಸಂಪ್ರದಾಯ. ಈಗ ಕಾಣೆಯಾಗಿರುವ ಬೋಜ 3 ವರ್ಷಗಳ ಹಿಂದೆ ನಮ್ಮಲ್ಲಿ ಕೆಲಸಕ್ಕೆ ಬಂದಿದ್ದ. ಅವನ ಮೇಲೆ 53 ಸಾವಿರ ಸಾಲವಿತ್ತು. ಅದನ್ನು ನಾನೇ ಕಟ್ಟಿ ದಂಪತಿಯನ್ನು ಕರೆದುಕೊಂಡು ಬಂದಿದ್ದೆ. ಅವನಿಗೆ 60 ರೂಪಾಯಿ ದಿನಗೂಲಿ ನೀಡುತ್ತಿದ್ದೆ. 8 ಸಾವಿರದಷ್ಟು ಸಾಲ ಮರುಪಾವತಿ ಆಗಿತ್ತು. ಹೀಗಿರುವಾಗಲೇ ಅವನು ತಪ್ಪಿಸಿಕೊಂಡಿದ್ದಾನೆ. ಹೀಗಾಗಿ ಜಾಹೀರಾತು ನೀಡಿದೆ,” ಎಂದವರು ಮಾಹಿತಿ ನೀಡುತ್ತಾರೆ.

ಬೋಜ ಮತ್ತು ಆತನ ಸಂಸಾರ ಅಪ್ಪಯ್ಯ ಅವರ ತೋಟದಿಂದ ತಪ್ಪಿಸಿಕೊಳ್ಳುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಎರಡು ಬಾರಿ ತಪ್ಪಿಸಿಕೊಂಡಾಗ ಅಪ್ಪಯ್ಯ ಅವರೇ ಸ್ನೇಹಿತರ ಸಹಾಯದಿಂದ ವಾಪಾಸ್ ಕರೆತಂದಿದ್ದರು. ಆದರೆ, ಈ ಬಾರಿ ಹುಡುಕಲು ಸಾಧ್ಯವಾಗದ ಕಾರಣ ಪತ್ರಿಕೆಯಲ್ಲಿ ಭಾವಚಿತ್ರ ಸಹಿತ ಜಾಹೀರಾತು ಪ್ರಕಟಿಸಲಾಗಿದೆ ಎಂಬ ಮಾಹಿತಿಯನ್ನು ಅವರು ನೀಡುತ್ತಾರೆ.

“ಇವರ ದೊಡ್ಡ ಸಮಸ್ಯೆ ಎಂದರೆ ಕುಡಿತ. ನಮ್ಮಲ್ಲಿ ಪ್ರತಿ ವಾರಕ್ಕೊಮ್ಮೆ ಕೂಲಿ ಬಟಾವಡೆ ಮಾಡುತ್ತೇವೆ. ಅದರಲ್ಲಿ ಕುಡಿತಕ್ಕೆ ಹೆಚ್ಚು ಹಣವನ್ನು ಅವರು ಸುರಿಯುತ್ತಾರೆ. ಅವರು (ಕೂಲಿಗಳು) ಕುಡಿದು ಕುಡಿದೇ ಸಾಯುತ್ತಾರೆ. ಸ್ಥಳೀಯ ದಿನಸಿ ಅಂಗಡಿಯಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡಲಾಗುತ್ತದೆ. ನಾವು ಅಬಕಾರಿಯವರಿಗೆ, ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ,” ಎನ್ನುತ್ತಾರೆ ಅಪ್ಪಯ್ಯ.

ದೂರು ದಾಖಲಾಗಿಲ್ಲ:

ಇನ್ನು, ದಾಖಲಾದ ದೂರಿನ ಕುರಿತು ಮಾಹಿತಿಗಾಗಿ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ಕರೆ ಮಾಡಿದರೆ ಅಚ್ಚರಿಯ ಪ್ರತಿಕ್ರಿಯೆ ಲಭ್ಯವಾಯಿತು. “ನಮ್ಮಲ್ಲಿ ಅಂತಹ ಯಾವ ದೂರು ದಾಖಲಾಗಿಲ್ಲ,” ಎಂದು ದೂರವಾಣಿಯಲ್ಲಿ ಮಾತಿಗೆ ಸಿಕ್ಕ ಮುಖ್ಯಪೇದೆ ದೇವಯ್ಯ ಹೇಳುತ್ತಾರೆ. ಈ ವಿಚಾರವನ್ನು ಮಾಲೀಕ ಅಪ್ಪಯ್ಯ ಮುಂದಿಟ್ಟರೆ, “ನಮ್ಮ ಮನೆ ಇರುವುದು ವಿರಾಜಪೇಟೆಯ ನಗರದಲ್ಲಿ. ದೂರು ನೀಡಲು ನಗರ ಠಾಣೆಗೆ ಹೋದರೆ ಇನ್ಸ್ಪೆಕ್ಟರ್ ನನ್ನ ಮೇಲೆಯೇ ಅಟ್ರಾಸಿಟಿ ಕೇಸು ಹಾಕುವುದಾಗಿ ಬೆದರಿಕೆ ಹಾಕಿದರು. ಅವರ ವಿರುದ್ಧ ದೂರು ನೀಡಿದ್ದೇನೆ. ನಂತರ ಗ್ರಾಮಾಂತರ ಠಾಣೆಗೆ ಹೋಗಿ ದೂರು ನೀಡಿ ಬಂದಿದ್ದೇನೆ. ಅವರು ಕನ್ಫೂಸ್ ಆಗಿದ್ದಾರೆ ಅನ್ನಿಸುತ್ತದೆ,” ಎನ್ನುತ್ತಾರೆ.

ಜತೆಗೆ, ಕಾಫಿ ತೋಟದ ಮಾಲೀಕರಿಗೆ ಸಂಕಷ್ಟಗಳಿವೆ, ಕೇಳಲು ಯಾವ ಸಂಘವೂ ಇಲ್ಲ ಎಂದು ಅವರು ಅಳಲು ತೋಡಿಕೊಳ್ಳುತ್ತಾರೆ.

ಜಾಹೀರಾತು ಪ್ರಕಟಿಸಿದ ‘ಶಕ್ತಿ’ ಪತ್ರಿಕೆಯ ಸಿಬ್ಬಂದಿ, “ನಮಗೆ ಏಜೆನ್ಸಿ ಮೂಲಕ ಜಾಹೀರಾತು ಬಂದಿತ್ತು. ಅವರು ದೂರಿನ ಪ್ರತಿ ನಮ್ಮ ಬಳಿ ಇದೆ ಎಂದು ಹೇಳುತ್ತಿದ್ದಾರೆ,” ಎಂದು ಪ್ರತಿಕ್ರಿಯೆ ನೀಡುತ್ತಾರೆ.

ಒಟ್ಟಾರೆ, ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಗೊಂಡ ಜಾಹೀರಾತು ಕೊಡಗಿನ ಕಾಫಿ ತೋಟಗಳ ಮರೆಯಲ್ಲಿ ನಡೆಯುತ್ತಿರುವ ಕಾರ್ಮಿಕ ಮತ್ತು ಮಾಲೀಕರ ನಡುವಿನ ಸಂಘರ್ಷಗಳಿಗೆ ಸಾಕ್ಷಿ ಹೇಳುತ್ತಿದೆ.

Leave a comment

Top