An unconventional News Portal.

ಮಲೆನಾಡಿನ ಹಿಂದೂ ಸಂಘಟನೆಗಳಿಗೆ ‘ಖಾಂಡ್ಯ’ ಮುಳುಗು ನೀರು: ಪ್ರವೀಣನನ್ನು ಅರೆಸ್ಟ್ ಮಾಡ್ತಾರಾ ಅಣ್ಣಾಮಲೈ?

ಮಲೆನಾಡಿನ ಹಿಂದೂ ಸಂಘಟನೆಗಳಿಗೆ ‘ಖಾಂಡ್ಯ’ ಮುಳುಗು ನೀರು: ಪ್ರವೀಣನನ್ನು ಅರೆಸ್ಟ್ ಮಾಡ್ತಾರಾ ಅಣ್ಣಾಮಲೈ?

ಬೇರೆ ದಾರಿ ಕಾಣದೆ ‘ಗೋ ರಕ್ಷಣೆ’ಗೆ ಹೊರಟವರು ಕೊಟ್ಟಿಗೆಯನ್ನೇ ರದ್ದು ಮಾಡಿ ಕುಳಿತಿದ್ದಾರೆ.

ಮಲೆನಾಡು ಭಾಗದಲ್ಲಿ ಒಂದು ಕಾಲದಲ್ಲಿ ಹಿಂದುತ್ವದ ಬೀಜಕ್ಕೆ ಕಸಿ ಮಾಡಿ, ನೀರು ಎರೆದು, ಬೆಳೆಸಿ, ರಾಜಕೀಯದ ಫಸಲನ್ನು ನೀಡಿದ್ದು ಚಿಕ್ಕಮಗಳೂರಿನ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸಮಿತಿಗಳನ್ನು ವಿಸರ್ಜನೆ ಮಾಡಲಾಗಿದೆ. ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದ ನಂತರ ಶುರುವಾದ ಬೆಳವಣಿಗೆಗಳ ಪರಿಣಾಮ ಇದು.

ಕೆಲವು ದಿನಗಳ ಹಿಂದೆ ಅಮರನಾಥ ಯಾತ್ರೆ ಮುಗಿಸಿಕೊಂಡು ಬರುತ್ತಿದ್ದಂತೆ, ಭಜರಂಗದಳದ ದಕ್ಷಿಣ ಪ್ರಾಂಥ್ಯ ಸಂಚಾಲಕ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ನಡೆದ ಬೈಟೆಕ್ನಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಕುರಿತು ಪತ್ರಿಕಾ ಪ್ರಕಟಣೆಯೂ ಹೊರಬಿದ್ದಿದೆ. ಈ ಸುದ್ದಿಯ ಹಿನ್ನೆಲೆಯಲ್ಲಿ ಇನ್ನಷ್ಟು ಆಳಕ್ಕಿಳಿದರೆ ಮಲೆನಾಡು ಭಾಗದಲ್ಲಿ ಹಿಂದೂ ಪರ ಸಂಘಟನೆಗಳಲ್ಲಿ ಎದ್ದಿರುವ ಬಿರುಗಾಳಿ ಹಾಗೂ ನೈತಿಕ ತಳಮಳಗಳ ಚಿತ್ರಣವೊಂದು ಲಭ್ಯವಾಗುತ್ತದೆ.

ಖಾಂಡ್ಯ ಪರಿಣಾಮ:

ಪ್ರವೀಣ್ ಖಾಂಡ್ಯ ಒಂದು ಕಾಲಕ್ಕೆ ಚಿಕ್ಕಮಗಳೂರಿನಲ್ಲಿ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾತ. ಕಳೆದ ಜೂನ್ ತಿಂಗಳ ಕೊನೆಯ ವಾರದವರೆಗೂ ಪ್ರವೀಣ್ ಖಾಂಡ್ಯ ಮತ್ತು ಚಿಕ್ಕಮಗಳೂರಿನ ಹಿಂದೂ ಸಂಘಟನೆಗಳ ಕಾರ್ಯಚಟುವಟಿಕೆಗಳು ನಿರಾತಂಕವಾಗಿ ನಡೆದುಕೊಂಡು ಬರುತ್ತಿದ್ದವು. ಆದರೆ, ಬೆಟ್ಟಿಂಗ್ ದಂಧೆಯಲ್ಲಿ ಪಾಲ್ಗೊಂಡ ಆರೋಪಗಳನ್ನು ಹೊತ್ತಿರುವ ತೇಜಸ್ ಗೌಡ ಎಂಬ ಸ್ಥಳೀಯ ಯುವಕನ ಅಪಹರಣ ಪ್ರಕರಣ ಸುದ್ದಿಕೇಂದ್ರಕ್ಕೆ ಬಂದಿತು.

ಈ ಪ್ರಕರಣದಲ್ಲಿ ಅಂದು ಡಿವೈಎಸ್ಪಿ ಆಗಿದ್ದ ಕಲ್ಲಪ್ಪ ಹಂಡಿಭಾಗ್ ಅವರ ಹೆಸರು ಕೇಳಿ ಬಂದಿತ್ತು. ಅವತ್ತು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಂತೋಷ್, ಕಲ್ಲಪ್ಪ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಾಗುವಂತೆ ನೋಡಿಕೊಂಡಿದ್ದರು. ಕೊನೆಗೆ, ಒತ್ತಡಕ್ಕೆ ಒಳಗಾದ ಕಲ್ಲಪ್ಪ ಆತ್ಮಹತ್ಯೆ ಮಾಡಿಕೊಂಡರು.

ಡಿವೈಎಸ್ಪಿ ಮಟ್ಟದ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ವಿಚಾರ ಭಾರಿ ಸದ್ದು ಮಾಡಿತು. ಈ ಸಮಯದಲ್ಲಿ ಅಪಹರಣ ಹಾಗೂ ಕಲ್ಲಪ್ಪ ಆತ್ಮಹತ್ಯೆ ಹಿನ್ನೆಲೆಯಲ್ಲಿ ಪ್ರತ್ಯೇಕ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ವಹಿಸಲಾಯಿತು. ತನಿಖೆ ಆರಂಭಿಸಿದ ಸಿಐಡಿ, ಮೃತ ಕಲ್ಲಪ್ಪ ಅವರನ್ನು ಆರೋಪ ಮುಕ್ತರನ್ನಾಗಿಸಿ ವರದಿ ನೀಡಿತು. ತೇಜಸ್ ಗೌಡ ಅಪಹರಣ ಪ್ರಕರಣದಲ್ಲಿ ಸರಣಿ ಬಂಧನಗಳು ಶುರುವಾದವು. ಸದ್ಯ ಪ್ರಕರಣದ ಪ್ರಮುಖ ಆರೋಪಿಗಳ ಬಂಧನ ಪ್ರಕ್ರಿಯೆ ಮುಗಿದಿದೆ. ಆದರೆ, ಪ್ರವೀಣ್ ಖಾಂಡ್ಯ ಮಾತ್ರ ಬಂಧನದ ಬಲೆಗೆ ಇನ್ನೂ ಬಿದ್ದಿಲ್ಲ.

“ಬಂಧನಕ್ಕಿಂತಲೂ, ನನ್ನನ್ನು ಯಾವಾಗ ಪೊಲೀಸರು ಬಂಧಿಸಬಹುದು ಎಂಬ ಆಲೋಚನೆಯೇ ದೊಡ್ಡ ಶಿಕ್ಷೆ,” ಎನ್ನುತ್ತಾರೆ ಚಿಕ್ಕಮಗಳೂರು ಜಿಲ್ಲೆಯ ಎಸ್ಪಿಯಾಗಿ ಅಧಿಕಾರವಹಿಸಿಕೊಂಡಿರುವ ಅಣ್ಣಾಮಲೈ. ಇದರ ನಡುವೆಯೇ, ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕಗಳನ್ನು ವಿಸರ್ಜನೆ ಮಾಡಲಾಗಿದೆ.

ಅಂತರಾಳದ ಏನು?: 

“ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆಯುವಂತಾಗಿ ನಮ್ಮ ಪರಿಸ್ಥಿತಿ,” ಎನ್ನುತ್ತಾರೆ ಚಿಕ್ಕಮಗಳೂರಿನ ಹಿಂದೂ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಒಬ್ಬರು. ‘ಸಮಾಚಾರ’ದ ಜತೆ ಅನಾಮಿಕರಾಗಿಯೇ ಮಾತಿಗಿಳಿದ ಅವರು, “ಪ್ರವೀಣ್ ಖಾಂಡ್ಯನ ಮೇಲೆ ಆರೋಪಗಳು ಬರುತ್ತಿದ್ದಂತೆ ಸಂಘಟನೆಯಿಂದ ಉಚ್ಚಾಟನೆ ಮಾಡಿದ್ದೆವು. ಆದರೆ, ಮಾಧ್ಯಮಗಳು ಆತನನ್ನು ಭಜರಂಗದಳ, ವಿಶ್ವಹಿಂದೂ ಪರಿಷತ್ ಸದಸ್ಯ ಎಂದೇ ಬರೆಯುತ್ತಿದ್ದವು. ಇದರಿಂದಾಗಿ ಸಂಘಟನೆಯ ಇಮೇಜ್ ಡ್ಯಾಮೇಜ್ ಆಗಿತ್ತು. ನಮ್ಮೊಳಗೂ ಗೊಂದಲ ಹುಟ್ಟಿಕೊಂಡಿತು. ಬೇರೆ ದಾರಿ ಕಾಣದೆ ಜಿಲ್ಲಾ ಸಮಿತಿಗಳನ್ನು ವಿಸರ್ಜನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಹೊಸ ಸಮಿತಿ ರಚನೆ ಪ್ರಕ್ರಿಯೆ ನಡೆಯುತ್ತದೆ,” ಎಂದು ಅಂತರಂಗದ ಮಾಹಿತಿ ನೀಡಿದರು.

ಸದ್ಯದ ಪರಿಸ್ಥಿತಿಯಲ್ಲಿ ಚಿಕ್ಕಮಗಳೂರಿನಲ್ಲಿ ಹಿಂದೂ ಸಂಘಟನೆಗಳು ಮೊದಲಿನ ಛಾಯೆಯನ್ನು ಕಳೆದುಕೊಂಡಿವೆ. ನೈತಿಕವಾಗಿ ಭಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ಸಂಘಟನೆಗಳು ಕುಸಿದು ಹೋಗಿವೆ. “ಹಿಂದೆಲ್ಲಾ ದತ್ತಪೀಠದ ವಿಚಾರದಲ್ಲಿ ನಾವು ಕಾರ್ಯಕ್ರಮ ಮಾಡಿ ಕರೆದರೆ ಜನ ಬರುತ್ತಿದ್ದರು. ಇತ್ತೀಚೆಗೆ ಪ್ರವೀಣನ ಎಪಿಸೋಡು ಆದ ನಂತರ ಜನ ನಮಗೆ ಬೈಯಲು ಶುರು ಮಾಡಿದ್ದಾರೆ. ಎತ್ತುವಳಿ ಮಾಡುತ್ತೀವಿ ಎಂದು ಉಗಿಯುತ್ತಿದ್ದಾರೆ. ಯಾರೋ ಒಬ್ಬರು ಮಾಡಿದ ತಪ್ಪಿಗೆ ನಾವು ಹೊಣೆಯಾಗುತ್ತಿದ್ದೇವೆ,” ಎನ್ನುತ್ತಾರೆ ಭಜರಂಗದಳದ ಯುವ ನಾಯಕರೊಬ್ಬರು. ಇವರು ಪ್ರವೀಣ್ ಖಾಂಡ್ಯ ಜತೆಗೆ ಕಸಾಯಿಖಾನೆ ಮೇಲೆ ದಾಳಿಗೆ ಮುಂದಾಗಿದ್ದರು.

“ಅಂತಹ ದಾಳಿಗಳು ನಮ್ಮನ್ನು ನಾವು ಉಳಿಸಿಕೊಳ್ಳಲು, ಹೆಸರು ಮಾಡಲು ಮಾತ್ರ ಅನುಕೂಲವಾಗುತ್ತದೆ. ಇವತ್ತು ಗೋ ರಕ್ಷಣೆಗೆ ಅಂತ ಹೋದರೆ, ದುಡ್ಡಿಗಾಗಿ ಮಾಡುತ್ತಾರೆ ಎಂದು ಜನ ಅಂದುಕೊಳ್ಳುತ್ತಿದ್ದಾರೆ,” ಎಂದವರು ವಿಷಾಧ ವ್ಯಕ್ತಪಡಿಸಿದರು.

ಒಟ್ಟಾರೆ, ಒಂದು ಕಾಲದಲ್ಲಿ ಮಲೆನಾಡು ಭಾಗದಲ್ಲಿ ಹಿಂದೂ ಎಂಬ ಪದವನ್ನು ಚಲಾವಣೆಗೆ ತಂದು, ಆ ಮೂಲಕ ಬಿಜೆಪಿಗೆ ರಕ್ತ, ಮಾಂಸಗಳನ್ನು ತುಂಬಿ ಬೆಳೆಸಿದ್ದ ಸಂಘಪರಿವಾರದ ‘ಮಿಲಿಟೆಂಟ್’ ಸಂಘಟನೆಗಳು ಇವತ್ತು ವಿಸರ್ಜನೆಗೊಂಡಿವೆ. ಹೊಸ ಅವತಾರದ ಹುಡುಕಾಟದಲ್ಲಿ ಇವೆ. ಅವುಗಳ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿದ್ದಾರೆ. ಜನರ ದೃಷ್ಟಿಯಲ್ಲಿ ನೈತಿಕತೆಗಳು ಕುಸಿದಿವೆ.

ಇವೆಲ್ಲವುಗಳ ನಡುವೆಯೇ, ಪ್ರವೀಣ್ ಖಾಂಡ್ಯ ಹೈ ಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಿಕೊಂಡಿದ್ದಾನೆ. “ಆತನ ಸೋದರಿಯೊಬ್ಬರು ವಕೀಲರಾಗಿದ್ದಾರೆ. ನಮ್ಮ ಹಕ್ಕಿಗಾಗಿ ಹೋರಾಡುತ್ತೀವಿ ಎನ್ನುತ್ತಿದ್ದಾರೆ. ಒಂದು ವೇಳೆ ಹೈ ಕೋರ್ಟ್ನಲ್ಲಿ ಜಾಮೀನು ಸಿಗದಿದ್ದರೆ, ಆತ ಪೊಲೀಸರಿಗೆ ಶರಣಾಗಬೇಕಾಗುತ್ತದೆ,” ಎನ್ನುತ್ತಾರೆ ಸಿಐಡಿ ಅಧಿಕಾರಿಯೊಬ್ಬರು. ಪ್ರವೀಣ್ ಖಾಂಡ್ಯ ಬಂಧನ ಯಾವಾಗ ಎಂಬುದನ್ನು ಕಾದು ನೋಡಬೇಕಿದೆ. “ಬಂಧನ… ಸದ್ಯದಲ್ಲಿಯೇ ನಡೆಯುತ್ತದೆ,” ಎನ್ನುತ್ತಿದ್ದಾರೆ ನೂತನ ಎಸ್ಪಿ ಅಣ್ಣಾ ಮಲೈ. ಅಷ್ಟೊತ್ತಿಗೆ ಮಲೆನಾಡು ಭಾಗದ ಹಿಂದು ಪರ ಸಂಘಟನೆಗಳ ಪರಿಸ್ಥಿತಿ ಏನಾಗಿರಲಿದೆ ಎಂಬ ಕುತೂಹಲವೂ ಇದೇ ಸಮಯದಲ್ಲಿ ಮೂಡಿದೆ.

Leave a comment

Top